top of page

ಮರೆಯಲಾಗದ ಮಹಾನುಭಾವರು-೧೩೪

************* ಕನ್ನಡದ ಕಣ್ವ ಬಿ. ಎಂ. ಶ್ರೀ. ***** ಕನ್ನಡವನ್ನು ಬೆಳೆಸಲು ಶ್ರಮಿಸಿದ ಮೂವರು "ಶ್ರೀ " ಗಳಲ್ಲಿ ಆದ್ಯರು ಬಿ. ಎಂ. ಶ್ರೀ.; ಉಳಿದಿಬ್ಬರು ತೀ ನಂ ಶ್ರೀ ಮತ್ತು ಎಂ. ಆರ್. ಶ್ರೀ. ಅಲ್ಲದೇ ಕನ್ನಡದಲ್ಲಿ ಭಾವಗೀತೆಗಳ ಪರಂಪರೆ ಆರಂಭಿಸಿದವರು ಬಿ. ಎಂ. ಶ್ರೀಕಂಠಯ್ಯನವರು. ಇಂಗ್ಲೀಷ್ ಗೀತೆಗಳನ್ನು ಕನ್ನಡಕ್ಕೆ ತಂದರೂ ಅವು ಕನ್ನಡದ್ದೇ ಸ್ವತಂತ್ರ ರಚನೆಗಳು ಎನ್ನುವಂತಹ ಸಹಜತೆಯನ್ನು ತಂದವರು. ಅದಕ್ಕೆ ಒಂದು ಉದಾಹರಣೆ " ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು ......" ಎಂಬ ಗೀತೆ. ( lead kindly...). ಅವಳ ತೊಡಿಗೆ ಇವಳಿಗಿಟ್ಟು , ಇವಳ ತೊಡಿಗೆ ಅವಳಿಗಿಟ್ಟು ನೋಡಿದವರು. ಅಲ್ಲಿಂದ ನವೋದಯ ಕಾವ್ಯದ ದೀರ್ಘ ಅವಧಿಯಲ್ಲಿ ಅಸಂಖ್ಯಾತ ಕವಿಗಳು ಭಾವಗೀತೆಗಳ ಅದ್ಭುತ ಪರಂಪರೆಯನ್ನು ಬೆಳೆಸಿದರು. ೧೮೮೪ ರ ಜನೆವರಿ ೩ ರಂದು ಬೆಳ್ಳೂರಲ್ಲಿ ಜನಿಸಿದ ಬಿಎಂಶ್ರೀ ಯವರು ಮೈಸೂರಿನ ವಿದ್ವತ್ಪರಂಪರೆ ಬೆಳೆಯಲು ಹಾದಿ ಮಾಡಿಕೊಟ್ಟರು. ಕುವೆಂಪು, ತೀನಂಶ್ರೀ, ರಾಜರತ್ನಂ, ಎಸ್. ವಿ. ರಂಗಣ್ಣ ಮಾದಲಾದವರೆಲ್ಲ ಅವರ ಪ್ರೇರಣೆ ಪಡೆದವರು. ಇಂಗ್ಲಿಷ ಮತ್ತು ಕನ್ನಡ ಎರಡೂ ಭಾಷೆಗಳ ಮೇಲೆ ಅಸಾಧಾರಣ ಪ್ರಭುತ್ವವಿದ್ದ ಅವರು ಮೈಸೂರು ಮಹಾರಾಜರಿಂದಲೂ ಗೌರವ ಪಡೆದರು. ರಾಜಸೇವಾಸಕ್ತ ಎಂಬ ಬಿರುದು ಅವರಿಗಿತ್ತಿದ್ದರು. ೨೫ ವರ್ಷ ಪ್ರಾಧ್ಯಾಪಕರಾಗಿ, ೪ ವರ್ಷ ಕುಲಸಚಿವರಾಗಿ ಕಾರ್ಯ ನಿರ್ವಹಿಸಿದ ಅವರು ೧೯೩೮ ರಿಂದ ೪೨ ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದರು. ೧೯೨೮ ರಲ್ಲಿ ಕಲಬುರ್ಗಿಯಲ್ಲಿ ನಡೆದ ೧೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ದೊರಕಿತ್ತು. ೧೯೪೪ ಕ್ಕೆ ಧಾರವಾಡಕ್ಕೆ ಬಂದ ಅವರು ಕೆಇ ಬೋರ್ಡ್ ಆರ್ಟ್ಸ್ ಕಾಲೇಜಿನ ಪ್ರಾಚಾರ್ಯರಾಗಿಯೂ ಕೆಲಸ ಮಾಡಿದರು. ೧೯೪೬ ರ ಜನೆವರಿ ೫ ರಂದು ಅವರು ಧಾರವಾಡ ದಲ್ಲೇ ನಿಧನ ಹೊಂದಿದರು. ಕನ್ನಡದ ಕಣ್ವರೆನಿಸಿದ್ದು ******* ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯ ಕನ್ನಡಿಗರ ಬಳಿ ಬಂದದ್ದು ಬಿ.ಎಂ. ಶ್ರೀಯವರ ಕಾಲದಲ್ಲಿ. ೧೯೩೮ ರಲ್ಲಿ ಅದರ ಉಪಾಧ್ಯಕ್ಷರಾದ ಅವರು ( ಆರಂಭದಲ್ಲಿ ಮಹಾರಾಜರೇ ಅದರ ಅಧ್ಯಕ್ಷರಾಗಿರುತ್ತಿದ್ದರು. ) ಪರಿಷತ್ತು ಕನ್ನಡಿಗರ ಸಾರ್ವಜನಿಕ ವಿದ್ಯಾಪೀಠವಾಗಬೇಕೆಂದು ಬಯಸಿದ ಅವರು ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದರು. ಅವುಗಳಲ್ಲಿ ಮುಖ್ಯವಾಗಿ ಸ್ವತಂತ್ರ ಅಚ್ಚುಕೂಟ ಸ್ಥಾಪನೆ , ಕನ್ನಡ ನುಡಿ ಪತ್ರಿಕೆ ಆರಂಭ, ಮಹಿಳಾ ವಿಭಾಗ ತೆರೆದದ್ದು, ಕನ್ನಡ ಪರೀಕ್ಷೆಗಳನ್ನು ನಡೆಸಿದ್ದು , ರಾಜ್ಯದಾದ್ಯಂತ ಓಡಾಡಿ ತಮ್ಮ ಉಪನ್ಯಾಸಗಳಿಂದ ಕನ್ನಡದ ಪ್ರೀತಿ ಅಭಿಮಾನ ಬೆಳೆಸಿದ್ದು, ಕಾರ್ಯಕ್ರಮ ಗಳನ್ನು ನಡೆಸಿದ್ದು ಇತ್ಯಾದಿ. ೧೯೪೦ ರಲ್ಲಿ ಪರಿಷತ್ತಿನ ಬೆಳ್ಳಿಹಬ್ಬವನ್ನು ಆಚರಿಸಿದರು. ಬಿಎಂಶ್ರೀಯವರ ಕೃತಿಗಳಲ್ಲಿ ಅಶ್ವತ್ಥಾಮನ್, ಗದಾಯುದ್ಧ ನಾಟಕಗಳು ಪ್ತಸಿದ್ಧ. ಗ್ರೀಕ್ ನಾಟಕಕಾರ ಸಾಫೊಕ್ಲೀಸ್ ನ ಪ್ರಸಿದ್ಧ " ಏಜಾಕ್ಸ್ " ನಿಂದ ಪ್ರೇರಣೆ ಪಡೆದು ಅವರು ಅಶ್ವತ್ಥಾಮನ್ ನಾಟಕ ಬರೆದರು. ಹೊಂಗನಸುಗಳು, ಇಂಗ್ಲಿಷ್ ಗೀತೆಗಳು, ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ, ಕನ್ನಡ ಕೈಪಿಡಿ, ಕುರಾಲ ಮೊದಲಾದವು ಅವರ ಕೃತಿಗಳು. ಕರ್ನಾಟಕದಲ್ಲಿ ಕನ್ನಡ ಅನಾಥ ಸ್ಥಿತಿಯಲ್ಲಿ ಇದ್ದಾಗ ಅದನ್ನು ಎತ್ತಿ ಲಾಲನೆಪಾಲನೆ ಮಾಡಿ ಬೆಳೆಸಿದ್ದಕ್ಕಾಗಿ ಅವರನ್ನು "ಕನ್ನಡದ ಕಣ್ವ" ಎಂದು ಕರೆಯಲಾಯಿತು. ‌‌‌‌‌‌‌ - ಎಲ್. ಎಸ್. ಶಾಸ್ತ್ರಿ

ಮರೆಯಲಾಗದ ಮಹಾನುಭಾವರು-೧೩೪
bottom of page