ಮನದ ಮುಂದಣ ನಿರ್ಧಾರ
ನಿರ್ಧಾರ ತೆಗೆದುಕೊಳ್ಳುವುದು ಒಂದು ಕಲೆ. ಎಲ್ಲರಿಗು ಅದು ದಕ್ಕುವುದಿಲ್ಲ.ಬಂದ ಮಳೆಗೆ ಕೊಡೆ ಹಿಡಿದು ಬೆಚ್ಚಗಿರುವವರು ಕೆಲವರು.ಮಳೆ ಬರುವುದಿಲ್ಲ.ಈ ಕೊಡೆ ಇನ್ನೊಂದು ಭಾರ. ಎಂದು ಕೊಡೆಯನ್ನು ಬಿಟ್ಟು ಹೋದವರು ಒಮ್ಮೆಲೆ ಸುರಿದ ಬಿರು ಮಳೆಗೆ ಎಲ್ಲೊ ಗೂಡಂಗಡಿಯೊ,ಬಸ್ ಸ್ಟಾಪೊ,ಮರದ ನೆರಳನ್ನೊ ಆಶ್ರಯಿಸಿ ಕೊನೆಗೆ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿ ಮನೆಗೆ ಬಂದು ಮೈ ಒರೆಸಿಕೊಂಡು ಬಟ್ಟೆ ಬದಲಾಯಿಸಿಕೊಂಡು ಮರು ದಿನ ನೆಗಡಿ ಜ್ವರ ಒಟ್ಟಿಗೆ ಬಂದು ಆಸ್ಪತ್ರೆಗೆ ಧಾವಿಸುವವರು ಹಲವರು.ಕೆಲವರು ಏನೂ ನಡೆದೆ ಇಲ್ಲ ಎಂಬ ಹಾಗೆ ಕ್ಷೇಮವಾಗಿರುತ್ತಾರೆ.ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಹೇಳ ಬೇಕಾದ ಸಂದರ್ಭದಲ್ಲಿ ನೆನಪಿಗೆ ಬಂದ ಸಂಗತಿ ಇದು. ಕೆಲವರು ತಮ್ಮ ಜೀವನದ ಪ್ರತಿಯೊಂದು ಘಟನೆಯನ್ನು ಹೇಗೆ ನಿರ್ವಹಿಸ ಬೇಕು ಎಂಬ ಬಗ್ಗೆ ಒಂದು ವೇಳಾ ಪಟ್ಟಿಯನ್ನು ಮಾಡಿಕೊಂಡು ಅದನ್ನು ಕಾರ್ಯಗತ ಮಾಡುತ್ತಾರೆ.ಇದು ಇವೆಂಟ ಮೆನೆಜಮೆಂಟ ಎಂದು ಹೆಸರಾಗಿದೆ.ಅದು ಪ್ರಚಾರದಲ್ಲಿಯು ಇದೆ.ಆದರೆ ಬಹಳ ಜನರು ಮುಂದೆ ಏನು,ಹೇಗೆ,ಎಂತು ಎಂಬ ಬಗ್ಗೆ ಯೋಚಿಸುವುದಿಲ್ಲ.ಅದರ ಉಸಾಬರಿಗು ಹೋಗುವುದಿಲ್ಲ.ಸಿನೆಮಾ ಇಂಟರ್ವಲ್ ಬಿಟ್ಟ ಮೇಲೆ ಎಲ್ಲರು ವಾಶ್ ರೂಮಿಗೆ ಧಾವಿಸುವಂತೆ, ಚಹಾ ಅಂಗಡಿಗೆ ನುಗ್ಗಿದಂತೆ ಇವರ ಪರಿ. ಇದಕ್ಕಿಂತ ಭಿನ್ನವಾಗಿ ಕೆಲವರು ಎಲ್ಲರೂ ವಾಶ್ ರೂಮಿನಿಂದ ಬಂದ ಬಳಿಕ ಹೋಗುತ್ತಾರೆ.ಮಧ್ಯಂತರದಲ್ಲಿ ತಿನ್ನಲು ಮನೆಯಲ್ಲಿ ಸಿದ್ಧಮಾಡಿದ್ದ ಉತ್ತಮ ಗುಣಮಟ್ಟದ ಪ್ರೋಟೀನ್ ಯುಕ್ತ ತಿನಿಸುಗಳನ್ನು ಒಯ್ಯುತ್ತಾರೆ.ಅವಸರದ ತಿಂಡಿ ಕೆಲವೊಮ್ಮೆ ಆರೋಗ್ಯವನ್ನು ಹದಗೆಡಿಸ ಬಹುದು. ಹಾಗೆ ಬಹಳ ಜನ ತಮ್ಮ ಬದುಕು ಭವಿಷ್ಯದ ಬಗ್ಗೆ ಯಾವುದೆ ನಿರ್ಧಾರವನ್ನು ತೆಗೆದುಕೊಳ್ಳದೆ. ಕೊನೆಗೆ ಅವಸರ ಪಡುತ್ತಾರೆ. ದುಡುಕುತ್ತಾರೆ.ಮದ್ಯ ಪಾನ ಮಾಡುವವರಿಗೆ ಅಂಗಡಿಯವರು ಮದ್ಯದ ಜೊತೆಗೆ ಕೊಟ್ಟ ಉಪ್ಪಿನಕಾಯಿ,ಹುರಿದ ಬಟಾಣಿ ಕಾಳು ಅತ್ಯಂತ ರುಚಿಯಾಗಿ ಬಿಡುತ್ತದೆ.ಮತ್ತೆ ಮತ್ತೆ ಕೇಳಿ ಪಡಯುತ್ತಾರೆ.ಅವರಿಗೆ ಬೇರೆ ಆಯ್ಕೆ ಇರುವುದಿಲ್ಲ. ಹಾಗೆ ಓದುವ ವಿಷಯಗಳ ಆಯ್ಕೆ,ದುಡಿಯುವ ವೃತ್ತಿಯ ಆಯ್ಕೆ ಬಾಳಿನ ಸಂಗಾತಿಗಳ ಆಯ್ಕೆಯಲ್ಲಿಯು ಬಹಳಷ್ಟು ಜನ ಅವರದು ತೀರ್ಮಾನಕ್ಕೆ ಬಂದು ಕೊನೆಗೆ ಜೀವಮಾನ ಉದ್ದಕ್ಕೂ ಪರಿತಪಿಸುತ್ತಿರುತ್ತಾರೆ.ಓದು ವೃತ್ತಿ ಮದುವೆ ಇವೆಲ್ಲವು ಮಜಾ ಉಡಾಯಿಸಲಿಕ್ಕೆ ಎಂದು ಇಂತಹ ಅನೇಕ ವಿಷಯಗಳಲ್ಲಿ ಅವಸರದ ತೀರ್ಮಾನ ತೆಗೆದುಕೊಂಡವರಲ್ಲಿ ಕೆಲವರು ಯಶಸ್ವಿ ಗಳಾಗಿರಲು ಸಾಧ್ಯ.ಆದರೆ ಹಲವರು ತಮ್ಮ ನಿರ್ಧಾರದ ಬಗ್ಗೆ ಹಳಹಳಿಸುತ್ತಲೆ ಇರುತ್ತಾರೆ. ಮತ್ತೆ ಕೆಲವರು ತಾವು ನಡೆದದ್ದೆ ಹಾದಿ ಹಿಡಿದದ್ದೆ ಹಟ ಎಂದು ಕೊನೆಯವರೆಗು ಅಡಿಗೆ ಬಿದ್ದರು ಮೀಸೆ ಮಣ್ಣಾಗಲಿಲ್ಲ ಎಂದು ಮೊಂಡು ವಾದ ಮಾಡುತ್ತಾರೆ. ಮತ್ತೆ ಕೆಲವರು ನಾನು ಸರಿಯಾಗಿಯೆ ಇದ್ದ ನನ್ನ ಅಪ್ಪ ಅಮ್ಮ ದಾರಿ ತಪ್ಪಿಸಿದರು.ಇದೆ ವಿಷಯ ಓದು,ಇದೆ ನೌಕರಿ ಮಾಡು,ನಾವು ತೋರಿಸಿದ ಹುಡುಗಿಯನ್ನೆ ಮದುವೆಯಾಗು ಎಂದು ನನ್ನ ಆಯ್ಕೆಯ ಸ್ವಾತಂತ್ರ್ಯವನ್ನೆ ಅಪಹರಿಸಿದರು.ನನ್ನನ್ನು ಒಂದು ಮಾತು ಕೇಳಲಿಲ್ಲ.ಮದುವೆಯಾಗುವ ವಯಸ್ಸಿನಲ್ಲಿ ಮದುವೆ ಮಾಡಲಿಲ್ಲ.ನನ್ನ ಜೀವಿತದ ( ಆಯುಷ್ಯ ನೂರು ವರ್ಷ ಎಂಬ ಮಾಪನದ ಪ್ರಕಾರ) ಒಂದು ಮೂರಾಂಶ ಕಾಲವನ್ನು ಬ್ರಹ್ಮಚರ್ಯವನ್ನು ಪಾಲಿಸುತ್ತ ಕಳೆದೆ.ಈಗ ನನ್ನ ಆಶೆ ಆಸಕ್ತಿಗಳ ಒರತೆ ಬತ್ತ ತೊಡಗಿದೆ. ಎಂದು ಅಪ್ಪ ಅಮ್ಮನ ಮೇಲೆ ಭಾರಹಾಕುತ್ತಾರೆ. ಕೆಲವು ಪಾಲಕರು ಇಂತಹ ಗುಣದವರೆ. ಆದರೆ ವಿದೇಶದಲ್ಲಿ ಈ ಪದ್ದತಿ ಇಲ್ಲ. ಮಕ್ಕಳಿಗೆ ಸ್ವಾವಲಂಬನೆಯ ಪಾಠವನ್ನು ಬಾಲ್ಯದಲ್ಲಿಯೆ ರೂಢಿಸುತ್ತಾರೆ.ರೆಕ್ಕೆ ಬಂದ ಹಕ್ಕಿ ಮನಸೊ ಇಚ್ಚೆ ಹಾರಿ ಹೋಗಲು ಬಿಡುತ್ತಾರೆ.ಅಲ್ಲಿ ತಂದೆ ತಾಯಂದಿರನ್ನು ಇಳಿ ವಯಸ್ಸಿನಲ್ಲಿ ಪರಿಪಾಲಿಸುವುದು ಮಕ್ಕಳ ಜವಾಬ್ದಾರಿ ಅಲ್ಲ. ಅಲ್ಲಿಯ ಸರ್ಕಾರಗಳು ಹಿರಿಯ ನಾಗರೀಕರ ಬಗ್ಗೆ ಕಾಳಜಿವಹಿಸುತ್ತವೆ.ವಿದೇಶದಲ್ಲಿ ಸಂಸಾರದ ಬಂಧ ಸಡಿಲವಾದುದು.ಆದರೆ ಅದು ಭಾರತದಂತಹ ದೇಶದಲ್ಲಿ ಅಷ್ಟಬಂಧಕ್ಕಿಂತ ಬಿಗಿಯಾದುದು. ಅದಕ್ಕಾಗಿ ಬಹಳ ಜನ ಭಾರತೀಯರು ವಿದೇಶಕ್ಕೆ ಹೋದವರು ಗ್ರೀನ್ ಕಾರ್ಡ ಪಡೆದು ಅಲ್ಲಿಯೆ ನೆಲೆಗೊಳ್ಳಲು ಶತಾಯು ಗತಾಯು ಪ್ರಯತ್ನ ಮಾಡುತ್ತಾರೆ. ಭಾರತದ ಆಧ್ಯಾತ್ಮವಾದಿಗಳು ಮೋಕ್ಷ ಪಡೆಯಲು ಹಂಬಲಿಸಿದಂತೆ( ಮುಮುಕ್ಷು) ವಿದೇಶದಲ್ಲಿ ಗ್ರೀನ್ ಕಾರ್ಡ ಪಡೆಯಲು ತ್ರಿಕರಣ ಪೂರ್ವಕ (ಕಾಯಾ ವಾಚಾ ಮನಸಾ) ಪ್ರಯತ್ನ ಮಾಡುತ್ತಾರೆ.ಒಂದು ವೇಳೆ ಬಯಸಿದ್ದು ಫಲಿಸದೆ ಇದ್ದರೆ ಖಿನ್ನತೆಗೆ ಒಳಗಾಗುತ್ತಾರೆ. ಬಹಳ ಜನರಿಗೆ ತಮ್ಮ ಜೀವನವನ್ನು ಹೇಗೆ ರೂಪಿಸಿಕೊಳ್ಳ ಬೇಕು ಎಂಬ ಬಗ್ಗೆ ಅರಿವೆ ಇರುವುದಿಲ್ಲ.ಅವರ ಮುಂದೆ ಯಾವುದೆ ಸಿದ್ಧ ಮಾದರಿಗಳು ಇರುವುದಿಲ್ಲ.ಇದ್ದರೂ ಅದನ್ನು ಒಪ್ಪಕೊಳ್ಳುವ ಮನೋಭಾವ ಮೊದಲೆ ಇರುವುದಿಲ್ಲ. ಕಾಲಕ್ಕೆ ತಕ್ಕಂತೆ ತಮ್ಮದೆ ಆದ ತಾಳದಲ್ಲಿ( ಅದು ಬೇತಾಳ) ಕುಣಿಯುವುದೆ ಕೆಲವರಿಗೆ ಇಷ್ಟ."ಮರುಳು ಮಾಡಾಕ ಹೋಗಿ ಮರುಳ ಸಿದ್ಧನ ನಾರಿ ಮರುಳು ಆಗ್ಯಾಳ ಜಂಗಮಯ್ಯಗ ಕಿನ್ನರಿ ಆಗ್ಯಾಳ ಅವನ ಕೈಯಾಗ" ಎಂದರು ತಮ್ಮ ಕವಿತೆಯಲ್ಲಿ ದ.ರಾ. ಬೇಂದ್ರೆ ಅವರು. ಜಂಗಮನನ್ನೆ ಮರುಳ ಮಾಡ ಹೋದವಳು ತಾನೆ ಆತನಿಗೆ ಮರುಳಾಗಿ ಅವನ ಕೈಯ ಕಿನ್ನರಿಯಾದಳು ಎಂಬುದು ಆಕಾಲದ ಸತ್ಯ.ಈಗ ಮರುಳಾಗಿ ಬಂದವನನ್ನು ತುತ್ತೂರಿ ಮಾಡಿ,ಪೀಪಿ ಮಾಡಿ,ತಮಟೆ ಮಾಡಿ ತಮಗೆ ಬೇಕಾದ ಹಾಗೆ ಊದುವವರು,ಬಾರಿಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮನಸ್ಸು ಹುಚ್ಚು ಮಂಗನಂತೆ ಅತ್ತ ಇತ್ತ ಹರಿದಾಡುತ್ತ ಇರುತ್ತದೆ.ಆ ಮಂಗ್ಯಾಗೆ ಮದ್ಯ ಕುಡಿಸಿ ಚೇಳು ಕಡಿಸಿದರೆ ಅದು ಕುಣಿಯುವ ಪರಿಯನ್ನು ನೋಡುವುದೆ ಒಂದು ಮೋಜು.ಇಂತಹ ಮಂಗ್ಯಾಗಳು ಮದ್ಯದ ಅಮಲಿನಲ್ಲಿ ತನ್ನ ವೃತ್ತವನ್ನು ಬಿಟ್ಟು ವೃತ್ತಾಂತವನ್ನು ಬೈತಿಟ್ಟು " ತಾ ತಿಕಿಟ ತಮ್ಮಣ್ಣಾ ಮಾವನ ಮನೀಗ ಹೋಗೊ ದಾರಿ ಯಾವುದಣ್ಣ" ಎಂದು ಬೇಕಾಬಿಟ್ಟಿ ಕುಣಿಯುತ್ತವೆ. ಇಂತಹ ನರ್ತನವನ್ನು ವರ್ತನೆಯನ್ನು 'ಕಾಲಾಯ ತಸ್ಮೈ ನಮ:' ಎಂದು ಸಾಮಾನ್ಯೀಕರಣ ಮಾಡುವುದು ತಪ್ಪು.ನಿರ್ಧಾರವನ್ನು ಕೆಲವರು ದಶಕದ ಹಿಂದೆ ತೆಗೆದುಕೊಂಡಿರುತ್ತಾರೆ.ಅದರ ಕ್ರಿಯಾ ಯೋಜನೆಗಳನ್ನು ರೂಪಿಸಿಕೊಂಡಿರುತ್ತಾರೆ. ಆದರೆ ಸಂಬಂಧ ಪಟ್ಟವರ ಹತ್ತಿರ ಇಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ನಾನು ಈ ನಿರ್ಧಾರ ತೆಗೆದುಕೊಳ್ಳ ಬೇಕಾಗಿ ಬಂತು. ನಮ್ಮೆದುರು ನಡೆದ ಹಲವು ಕಹಿ ಘಟನೆಗಳು ಈ ನಿರ್ಧಾರಕ್ಕೆ ಬರುವಂತೆ ಮಾಡಿತು ಎಂದು ಬಲೂನು ಹಾರಿಸುತ್ತಾರೆ. ಓದನ್ನು ಯಾವ ಪರಿಸರದಲ್ಲಿ ಆರಂಭಿಸ ಬೇಕು,ವೃತ್ತಿಯನ್ನು ಎಲ್ಲಿ ಮಾಡ ಬೇಕು,ಮದುವೆಗೆ ಯಾರನ್ನು ಆಯ್ದುಕೊಳ್ಳ ಬೇಕು ಎಂಬುದು ಅವರವರ ಸ್ವತಂತ್ರ ನಿರ್ಧಾರ. ಮದುವೆಯನ್ನು ಎಲ್ಲಿ ಆಗ ಬೇಕು,ಹೇಗೆ ಆಗ ಬೇಕು,ಗಂಧರ್ವ ವಿವಾಹವೊ,ಸಾಂಪ್ರದಾಯಿಕ ವಿವಾಹವೊ,ಯಾವ ಧರ್ಮದ ನೆಲೆಯಲ್ಲಿ ವಿವಾಹವಾಗ ಬೇಕು,ಕುವೆಂಪು ಹೇಳಿದ ಮಂತ್ರ ಮಾಂಗಲ್ಯವಾ ಎಂದು ವಧು ವರರು ತಮ್ಮ ಆಪ್ತ ಮಿತ್ರರ ಸಲಹೆ ಪಡೆದು ಮದುವೆಯಾದರೆ ಎಲ್ಲರಿಗು ಸಂತಸ. ಮನದ ಮುಂದಣ ನಿರ್ಧಾರ ಎಲ್ಲಕ್ಕಿಂತ ದೊಡ್ಡದು. ಡಾ.ಶ್ರೀಪಾದ ಶೆಟ್ಟಿ.