ಭಾರತದೇಶದ ಪೂಜಾ ಮಂದಿರಗಳಲ್ಲಿ / ಪೂಜಾ ಸ್ಥಳಗಳಲ್ಲಿ ಪರಿಸರ ಮಾಲಿನ್ಯ
ಭಾರತ ದೇಶದಲ್ಲಿ ದೇವಸ್ಥಾನ, ದೇವಮಂದಿರ, ಚರ್ಚ್, ಮಸೀದಿ, ದರ್ಗಾ ಇತರೆ ಜಾಗಗಳು ಪೂಜಾ ಸ್ಥಳಗಳೆನಿಸಿಕೊಳ್ಳುತ್ತವೆ. 2001 ಇಸವಿಯ ಎಣಿಕೆಯ ಪ್ರಕಾರ ಭಾರತ ದೇಶದಲ್ಲಿ 20 ಲಕ್ಷ ದೇವಸ್ಥಾನಗಳು, 3 ಲಕ್ಷ ಮಸೀದಿಗಳು ಹಾಗೂ ಸಾವಿರಾರು ಚರ್ಚ್‍ಗಳಿವೆ. ಪರಿಸರ ಮಾಲಿನ್ಯ ವೆಂದರೆ ಗಾಳಿ ನೀರು, ನೆಲ ಇವುಗಳು ವಿಷಕಾರಕ/ಹಾನಿಕಾರಕ ವಸ್ತುಗಳಿಂದ ಮಲಿನಗೊಂಡು ಜೀವರಾಶಿಗಳಿಗೆÉ (ಮನುಷ್ಯ, ಪ್ರಾಣಿ, ಪಶು, ಪಕ್ಷಿ ಮತ್ತು ಕ್ರಿಮಿ ಕೀಟಗಳಿಗೆ) ಹಾನಿ ಆಗುವುದು. ಗಾಳಿಯಲ್ಲಿ ಧೂಳಿನ ಕಣಗಳು (Particulate Matter), ಆಮ್ಲಜನಕದ ಕೊರತೆಯುಂಟಾಗಿ, ಕಾರ್ಬನ್ ಡೈ ಆಕ್ಸೈಡ್, (Co2), ಕಾರ್ಬನ್ ಮಾನೋಕ್ಸೈಡ್, (CO), ಸಲ್‍ಫರ್ ಡೈ ಆಕ್ಸೈಡ್, ಸೀಸ (Lead), ನೈಟ್ರೋಜನ್ ಡೈ ಆಕ್ಸೈಡ್ (No2), ಹೆಚ್ಚಾಗುವುದು. ಇವೆಲ್ಲವೂ ಜೀವರಾಶಿಗೆ ಹಾನಿಕಾರಕ. ಗಾಳಿಯಲ್ಲಿ ತೇಲಿಬರುವ ಶಬ್ಧಮಾಲಿನ್ಯ : ಶಬ್ಧದ ತೀವ್ರತೆ 65 ಡೆಸಿಬಲ್ (Db) ಗಿಂತ ಹೆಚ್ಚಾಗಿರಬಾರದು. 75 ಡೆಸಿಬಲ್ (Db) ಗಿಂತ ಹೆಚ್ಚಾದರೆ ಕಿವುಡುತನ ಬರುವ ಸಾಧ್ಯತೆ ಇದೆ. ಗಾಳಿಯಲ್ಲಿ ಉಷ್ಣಾಂಶ ಹೆಚ್ಚಾದರೆ (ಬಿಸಿಲಿನ ಬೇಗೆ) ಥರ್‍ಮಲ್ ಪ್ರಾಜೆಕ್ಟ್‍ನಿಂದ ಹೊರಸೂಸುವ ಉಷ್ಣ, ಅಗ್ನಿ ಪರ್ವತದಿಂದ ಬರುವ ತೀವ್ರತರ ಶಾಖ, ಕಾಡ್ಗಿಚ್ಚು, ಇವೆಲ್ಲವೂ ಜೇವರಾಶಿಗೆ ತೀವ್ರತರವಾದ ಹಾನಿಯನ್ನುಂಟು ಮಾಡುತ್ತದೆ. ಪರಿಸರ ಮಾಲಿನ್ಯವೆಂದರೇನು, ಮತ್ತು ಅದು ಹೇಗೆ ಉಂಟಾಗುತ್ತದೆ ಎಂದು ಸ್ತೂಲವಾಗಿ ತಿಳಿದ ಮೇಲೆ, ಪೂಜಾ ಮಂದಿರಗಳಲ್ಲಿ / ಪೂಜಾ ಸ್ಥಳಗಳಲ್ಲಿ ಹೇಗೆ ಮಾಲಿನ್ಯ ಉಂಟಾಗುತ್ತದೆ ಎಂದು ತಿಳಿಯೋಣ. ಹಿಂದೂ ದೇವಸ್ಥಾನಗಳಲ್ಲಿ ನಿತ್ಯವೂ ಪೂಜೆಗಳಲ್ಲಿ, ಗಂಧದ ಕಡ್ಡಿ (ಊದುಕಡ್ಡಿ, (Incense). ಕರ್ಪೂರ ಮತ್ತು ಕೆಲವು ಸಾರಿ ಸಾಮ್ರಾಣಿಯನ್ನು ಉರಿಸುತ್ತಾರೆ. ಇವುಗಳೆಲ್ಲವನ್ನು ಉರಿಸುವುದರಿಂದ ಮೇಲೆ ತಿಳಿಸಿದ ಪೂರ್ಣ ಹಾನಿಕಾರಕ ರಾಸಾಯನಿಕ ವಸ್ತುಗಳು ಬಿಡುಗಡೆಯಾಗುತ್ತವೆ. ಇವುಗಳೆಲ್ಲದರ ಜೊತೆಗೆ ಗಾಳಿಯಲ್ಲಿ ತೇಲುವ ಕಣಗಳು (Particulate Matter) ಕೂಡಿಕೊಂಡು ಕ್ಯಾನ್ಸ್‍ರ್‍ಕಾರಕವಾಗುವ ಸಾಧ್ಯತೆ ಇರುತ್ತದೆ ಮತ್ತು ಜೀವಕೋಶ ಮಾರಕ (Cytotoxic) ಮತ್ತು ವಂಶವಾಹಿ ಮಾರಕ (Genotoxic) ಆಗುವುದು ಅಲ್ಲದೆ, ಅಸ್ತಮಾ, ಕೆಮ್ಮು, ಹೃದಯದ ಕಾಯಿಲೆಗಳು, ಅಲರ್ಜಿ ಇತ್ಯಾದಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಅಲ್ಲದೆ ವಂಶವಾಹಿ ತಳಿ(DNA)ಗೂ ಬಹಳ ಮಾರಕಗುತ್ತದೆ. ಪೂಜೆಗೆ ಕೆಲವು ಭಕ್ತರು ದಿನ ನಿತ್ಯವೂ ಬಂದು ಹೋಗುವವರಿರುತ್ತಾರೆ. ಅಲ್ಲದೆ ದೇವಸ್ಥಾನದಲ್ಲಿ ಪ್ರತಿನಿತ್ಯ ಪೂಜೆ ಮಾಡುವ ಅರ್ಚಕರು, ಸಹಾಯಕರು ಅದೇ ಹಾನಿಕಾರಕ ವಾಯುವನ್ನು ನಿತ್ಯವೂ ಸೇವಿಸಬೇಕಾಗುತ್ತದೆ. ಪ್ರತಿಯೊಬ್ಬ ಭಕ್ತರು, ಭಕ್ತರ ಗುಂಪು ಬಂದಾಗಲೆಲ್ಲ ಕಡ್ಡಿ-ಕರ್ಪೂರ ಹಚ್ಚುತ್ತಲೇ ಇರುತ್ತಾರೆ. ದೇವರಲ್ಲಿ ‘ವರ’ ಕೇಳಲು ಬರುವವರು ಐದೈದು ನಿಮಿಷಕ್ಕೊಮ್ಮೆ ಕರ್ಪೂರದಾರತಿ ಬೆಳಗುತ್ತಲೇ ಇರುತ್ತಾರೆ. ಗರ್ಭಿಣಿ ಸ್ತ್ರೀಯರಿಗೆ, ಮಕ್ಕಳಿಗೆ ಈ ಕಲುಷಿತ ಹೊಗೆಯು ಬಹು ಅಪಾಯಕಾರಿ. ಮಕ್ಕಳಿಗೆ ಲ್ಯೂಕಿಮಿಯಾ(ಬಿಳಿ ರಕ್ತ ಕಣಗಳು ಕ್ಯಾನ್ಸ್‍ರ್) ಬರುವ ಸಾಧ್ಯತೆ ಹೆಚ್ಚು. ಗಂಧಕದ ಕಡ್ಡಿಯ ಹೊಗೆಯು ಸಿಗರೇಟ್ ಹೊಗೆಗಿಂತ ಹೆಚ್ಚು ಹಾನಿಕಾರಕ. ಈ ವಿಷಯವನ್ನು ಈಗಾಗಲೇ ಖಚಿತ ಪಡಿಸಲಾಗಿದೆ. ಇತ್ತೀಚೆಗೆ ಮಡಿಕೇರಿಯ ಒಂದು ಪ್ರಸಿದ್ಧ ದೇವಸ್ಥಾನದ ಪ್ರಧಾನ ಅರ್ಚಕರೊಬ್ಬರು ಶ್ವಾಸಕೋಶದ ಕ್ಯಾನ್ಸ್‍ರ್‍ನಿಂದ ಸಾವನ್ನಪ್ಪಿದರು. ಅವರು 3-4 ದಶಕಗಳವರೆಗೂ ಅಲ್ಲಿ ಅರ್ಚಕರಾಗಿದ್ದರು. ಈ ವಿಚಾರವು ಬಹಳ ವಾಟ್ಸ್‍ಆಪ್‍ನಲ್ಲಿ ವೈರಲ್ ಆಗಿತ್ತು. Ref. Science Daily : Higher Cytoxicity and Genotoxicity of burning Incense than Cigarette Smoking. ಕರ್ಪೂರ ಉರಿಸುವುದರಿಂದ ಸಣ್ಣಪುಟ್ಟ ಚರ್ಮದ ಖಾಯಿಲೆಗಳ ಜೊತೆಗೆ ಕೆಮ್ಮು, ಉಸಿರಾಟದ ತೊಂದರೆ, ಅಸ್ತಮಾ ಇತ್ಯಾದಿ ಬರಬಹುದು. Ref. . ವಿಶ್ವಜ ಸಂಬದ್ - ಪರಿಸರ ಆರೋಗ್ಯ ಸಂಶೋಧಕರು (Nov 7, 2019), ಅಪರ ಮುಖ್ಯ ಕಾರ್ಯದರ್ಶಿ, ಪ್ರವಾಸೋದ್ಯಮ ಮತ್ತು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ, ಕೇಂದ್ರ ಸರ್ಕಾರ. (Hindu Religious and Charitable Endowments, 7th April, 2016) ಇಷ್ಟೇ ಅಲ್ಲದೆ, ದೇವಸ್ಥಾನದ ಗರ್ಭಗುಡಿಯು ಬಹಳ ಕಿರಿದಾಗಿರುತ್ತದೆ. ಮಂಗಳಾರತಿ, ಊದುಕಡ್ಡಿ ಹಚ್ಚಿದಾಗ ಗರ್ಭಗುಡಿಯಲ್ಲಿ ಪೂರ್ಣಹೊಗೆ ಆವರಿಸಿಕೊಳ್ಳುತ್ತದೆ. ಹೊಗೆ ಹೋಗಲು ಕಿಟಕಿ ಅಥವ ವೆಂಟಿಲೇಟರ್‍ಗಳ (Exhaust Fan) ಕೊರತೆ ಇರುತ್ತದೆ. ಕೆಲವು ದೇವಸ್ಥಾನಗಳಲ್ಲಿ ಸೋಮವಾರ, ಗುರುವಾ, ಶನಿವಾರ ದಿನಗಳಲ್ಲಿ ಹೆಚ್ಚು ಹೊಗೆ ಹೊಮ್ಮುತ್ತಿರುತ್ತದೆ.(ವಾರದ ಪೂಜಾ ಪ್ರಯುಕ್ತ). ಅಲ್ಲದೇ ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆಗಳಿಂದ ಹೆಚ್ಚು ಹಾನಿಕಾರಕ ಗಾಳಿಯು ಹೊಗೆಯಾಡುತ್ತಿರುತ್ತದೆ. ಮತ್ತೆ ಹೋಮ ಹವನ ಮಾಡುವಾಗ ಕಟ್ಟಿಗೆ ಉರಿಸುವುದರಿಂದ ಇನ್ನೂ ಹೆಚ್ಚಿನ ಹಾನಿಕಾರಕ ಹೊಗೆ ಹೊರಸೂಸುತ್ತದೆ. ಇದರಿಂದ ಸುತ್ತಮುತ್ತ ವಾಸಿಸುವ ನಾಗರೀಕರೂ ಹಾನಿ ಅನುಭವಿಸಬೇಕಾಗುತ್ತದೆ. ಅಲ್ಲದೆ ಜಾತ್ರೆಗಳಲ್ಲಿ ಸಾವಿರಾರು - ಲಕ್ಷಾಂತರ ಜನಗಳು ಸೇರುವುದರಿಂದ, ಪರಿಸರ ತೀವ್ರ ಹದಗೆಡುತ್ತದೆ. ನದಿ ಕೆರೆಗಳು ಕಲುಷಿತಗೊಳ್ಳುತ್ತವೆ. ಸಂಕ್ರಾಮಿಕ ರೋಗಗಳಿಗೆ ದಾರಿಯಾಗುತ್ತದೆ. ಜಾತ್ರೆ, ಉತ್ಸವ, ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ನಿಷೇಧಿಸಬೇಕು. ಇದರ ವಿರುದ್ಧ ಜನರ (ಭಕ್ತರ) ತೀವ್ರ ವಿರೋಧವಿರುತ್ತದೆಯಾದರೂ ಸತತ ಪ್ರಯತ್ನ ಅಗತ್ಯ ಕೂಡ. ಸರ್ಕಾರದ ನಿಷೇಧಾಜ್ಞೆಯನ್ನು ಭಕ್ತರ ಗಮನಕ್ಕೆ ತಂದು ಅವರ ಮನ ಒಲಿಸಬೇಕು. ಪರಿಹಾರ : ದೇವಸ್ಥಾನಗಳಲ್ಲಿ, ಊದುಕಡ್ಡಿ, ಕರ್ಪೂರ, ಹೋಮ ಮಾಡುವಾಗ ಕಟ್ಟಿಗೆ ಉಪಯೋಗಿಸುವುದನ್ನು ನಿಷೇಧಿಸಬೇಕು. ಇದಕ್ಕೆ ವಿಜ್ಞಾನಿಗಳ ಸಂಶೋಧನೆಯ ಕಟ್ಟೆಚ್ಚರ ( Warning ) ಮತ್ತು ಕೇಂದ್ರ ಸರ್ಕಾರದ ಆಜ್ಞೆ ಕೂಡ ಇದೆ, ಇವೆರಡನ್ನು ಪಾಲಿಸದಿದ್ದರೆ ಸಾರ್ವಜನಿಕರ ಜೀವ ಹಾನಿ, ಆರೋಗ್ಯಕ್ಕೆ ಧಕ್ಕೆ ಮತ್ತು ಆಜ್ಞೋಲ್ಲಂಘನೆ ಕೂಡ ಆದಂತಾಗುತ್ತದೆ. ಅದಕ್ಕಾಗಿ ದೇವಸ್ಥಾನದ ಹೊರಗಡೆ ಕಟ್ಟುನಿಟ್ಟಾದ ಸೂಚನಾ ಫಲಕಗಳನ್ನು ಹಾಕಿಸಬೇಕು. ಪ್ರಾರಂಭದಲ್ಲಿ ವಿರೋಧ ಬರಬಹುದು. ಜಿಲ್ಲಾಡಳಿತ ಮನಸ್ಸು ಮಾಡಿದರೆ ಈ ಕ್ರಮ ದೊಡ್ಡದೇನಲ್ಲ. ಗರ್ಭ ಗುಡಿಯಲ್ಲಿ ಹೆಚ್ಚು ಗಾಳಿ ಬೆಳಕು ಬರುವಂತಿರಬೇಕು. ವೆಂಟಿಲೇಟರ್ (Exhaust Fan) ಬಹಳ ಸೂಕ್ತವೆನಿಸುತ್ತದೆ. ವೆಂಟಿಲೇಟರ್ ಮತ್ತು ಕಿಟಕಿಗಳಿಗೆ ಜಾಲರಿ ಹಾಕಿಸಿದರೆ ಒಳ್ಳೆಯದು. (ಬೆಕ್ಕು, ಅಳಿಲು, ಪಕ್ಷಿ, ಬಾವಲಿಗಳು (Bat) ಮತ್ತು ದಪ್ಪ ಕಸಕಡ್ಡಿ ಬರುವುದನ್ನು ತಪ್ಪಿಸಬಹುದು. ಕಡ್ಡಿ ಕರ್ಪೂರ ಹಚ್ಚುವ ಬದಲು ಎಣ್ಣೆಯ ದೀಪ ಮತ್ತು ಎಣ್ಣೆಯ ದೀಪದಾರತಿ ಉಪಯೋಗಿಸಬಹುದು. ಕೆಲವು ಚರ್ಚ್‍ಗಳಲ್ಲಿ ಮತ್ತು ಮಸೀದಿ-ದರ್ಗಾಗಳಲ್ಲಿಯೂ ಸಾಮ್ರಾಣೀ ಮತ್ತು ಊದುಕಡ್ಡಿಯ ಉಪಯೋಗವಿರುತ್ತದೆ. ಆದರೆ ಹಿಂದೂ ದೇವಾಲಯಗಳಲ್ಲಿ ಆಗುವಷ್ಟು ಹೊಗೆ ಧೂಮ ಇರುವುದಿಲ್ಲ. ಜಿಲ್ಲಾಡಳಿತದವರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಇರುವ ಮುಜರಾಯಿ ಪೂಜಾ ಸ್ಥಳಗಳಲ್ಲಿಯಾದರೂ ಮೇಲೆ ತಿಳಿಸಿದ ಊದುಕಡ್ಡಿ, ಕರ್ಪೂರಗಳ ಉಪಯೋಗದಿಂದ ಅಲ್ಲಿ ಉಂಟಾಗುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಕ್ರಮ ಕೈಗೊಳ್ಳಬೇಕು. ತನ್ಮೂಲಕ ಭಾರತದಾದ್ಯಾಂತ ಲಕ್ಷಾಂತರ ದೇವಸ್ಥಾನದಲ್ಲಿನ ಪರಿಸರ ಮಾಲಿನ್ಯವನ್ನು ಹೋಗಲಾಡಿಸಬಹುದು. ಅದರಿಂದ ಜನ ಸಾಮಾನ್ಯರ ಆರೋಗ್ಯವನ್ನು ಕಾಪಾಡಬಹುದು. ಡಾ. ದಾಮೋದರ ಕೆ . ಪಿ.