top of page

ಬೊನ್ಸಾಯ್ ಮರ ಮತ್ತು ಒಂಟಿ ಲವ್ ಬsರ್ಡ

(ಒಂದು ವಿಪ್ರಲಂಭ) ಊಟಮುಗಿಸಿ ಕುಳಿತಲ್ಲೇ ಕಣ್ಣು ಹತ್ತಿ ಸೋಫಾದ ಮೇಲೆ ಒರಗಿ ಬಿಟ್ಟವ ಯಾವದೋ ದನಿಗೆ ಬೆಚ್ಚಿ ಎಚ್ಚತ್ತ. ಬದಿಯ ಎತ್ತರದ ಟೇಬಲ್ಲಿನ ಮೇಲಿನಿಂದ ಹೆಡೆಬಿಚ್ಚಿದ ಹಾವೊಂದು ಬಾಗಿ ತನ್ನನ್ನೇ ನೋಡುತ್ತಿರುವಂತೆ ಭಾಸವಾಯಿತು. ಎದೆ ಢವಢವಿಸಿ ಬದಿಯಲ್ಲಿ ಕಳಚಿಟ್ಟ ಕನ್ನಡಕವನ್ನು ಹುಡುಕಿ ಧರಿಸಿ ಮತ್ತೊಮ್ಮೆ ನೋಡಿದ : ಅಮ್ಮನ ಪ್ರೀತಿಯ ಆಲದ ಮರ. ಅವಳೇ ಬೊನ್ಸಾಯ್ ಮಾಡಿದ್ದು.ಅದಕ್ಕೀಗ ಹದಿನೈದು ವರ್ಷಕ್ಕಿಂತಲೂ ಹೆಚ್ಚು ಪ್ರಾಯ. ಪಿಂಗಾಣಿ ಕುಂಡದಲ್ಲಿ ಸಿಂಬೆಸುತ್ತಿ ಕುಳಿತಲ್ಲೇ ಕುಳಿತು ಮನೆಯ ಎಲ್ಲ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ಇಂದು ಅಮ್ಮನ ಶ್ರಾದ್ಧ. ಕಾರ್ಯಕ್ರಮಗಳೆಲ್ಲ ಮುಗಿದು ಬ್ರಾಹ್ಮಣರು ಹೋಗಿಯಾಗಿದೆ. ಅಡಿಗೆಯವನು ಚಹಮಾಡಿ ಎಬ್ಬಿಸಬಹುದು.ಸೂರ್ಯಾಸ್ತದ ಮೊದಲು ಬೀಚಿಗೆ ಹೋಗಿ ಪಿಂಡವಿಸರ್ಜನೆ ಮಾಡಬೇಕು. ಚಿಕ್ಕಮ್ಮ ಒಳಗಿನ ಕೋಣೆಯಲ್ಲಿ ಮಲಗಿದ್ದಾಳೆ. ನಾಳೆ ಅವಳೂ ಹೊರಡಬಹುದು. ಅಮ್ಮನಿದ್ದಾಗ ಮನೆತುಂಬ ಹರಡಿಕೊಂಡಿದ್ದ ಬೊನ್ಸಾಯ್ ಗಳಲ್ಲಿ ಹಲವನ್ನು ಅವಳು ಹೋದಬಳಿಕ ಅವಳ ಗೆಳತಿಯರು ನೆನಪಿನ ಕಾಣಿಕೆಯೆಂದು ಪಡೆದುಕೊಂಡು ಹೋದರು. ಈಗ ಕೆಲವಷ್ಟೇ ಉಳಿದಿವೆ. ಕಪಾಟುಗಳು ಮಾತ್ರ ಅವಳಿಗೆ ಸಿಕ್ಕ ಸ್ಮ್ರತಿಫಲಕಗಳಿಂದ, ಪ್ರಶಸ್ತಿಗಳಿಂದ ತುಂಬಿಕೊಂಡಿವೆ. ಒಬ್ಬನೇ ಮಗನೆಂದು ಅಮ್ಮನಿಗೆ ಅವನ ಮೇಲೆ ಬಲು ಅಕ್ಕರೆ ಮತ್ತು ಕಾಳಜಿ. ಥೇಟು ತನ್ನ ಬೊನ್ಸಾಯ್ ಗಳ ಮೇಲಿದ್ದಂತೆಯೇ. ಬಿಸಿಲಲ್ಲಿ ನಡೆದರೆ ಕಪ್ಪಾಗುವನು. ಮಳೆಯಲ್ಲಿ ತೊಯ್ದರೆ ನೆಗಡಿಯಾಗುವದು. ಟೀವಿ,ಸಿನೇಮಾ, ಮೊಬೈಲ್ ಗಳ ಉಪಯೋಗಕ್ಕಿಂತ ದುಷ್ಪರಿಣಾಮಗಳೇ ಹೆಚ್ಚು. ತುಂಟ ಗೆಳೆಯರ ಸಹವಾಸವೇ ಬೇಡ. ಅವರ ಸಂಗದಲ್ಲಿ ಇವನೂ ಹಾಳಾಗುವನು. ದಿನಬೆಳಗಾದರೆ ಅಮ್ಮ ಕೈಯಲ್ಲಿ ಕತ್ತರಿ ಹಿಡಿದು ಕುಂಡಗಳಲ್ಲಿನ ಸಸಿಗಳ ಚಿಗುರೆಲೆಗಳನ್ನು ಹುಡುಕಿ ಅರ್ಧದಷ್ಟು ಕತ್ತರಿಸುವಳು. ಗಿಡಕ್ಕೆ ಬಿಸಿಲು ತಾಕದಂತೆ ಕರ್ಟನ್ ಹಾಕುವಳು. ಔಷಧ ಕೊಡುವಂತೆ ಅಳತೆ ಮಾಡಿ ನೀರು ಹನಿಸುವಳು. ಹೊಸ ಗಿಡವನ್ನು ಕುಂಡದಲ್ಲಿ ನೆಡುವ ದಿನವನ್ನು ನೆನೆದರಂತೂ ಅವನ ಕಣ್ಣಲ್ಲಿ ನೀರು ಬರುವದುಂಟು. ಆಯ್ಕೆ ಮಾಡಿ ತೋಟದಿಂದ ಕಿತ್ತು ತಂದ ಸಸಿಯ ಉದ್ದನೆಯ ತಾಯಿಬೇರಿಗೆ ಮೊದಲು ಕತ್ತರಿ ಹಾಕುವಳು.ಬಳಿಕ ಚಿಕ್ಕ ಬೇರುಗಳ ಪೊತ್ತೆಯನ್ನು ಕಚಕಚ ಟ್ರಿಮ್ ಮಾಡಿ ಕುಂಡದಲ್ಲಿಟ್ಟು ಮಣ್ಣು ಮುಚ್ಚುವಳು. ಸ್ವಲ್ಪವೇ ಬಿಸಿಲು ತಾಕುವಂತೆ ನೋಡಿಕೊಂಡು ತುಸುವೇ ನೀರು ಸುರಿವಳು. ಗಿಡಕ್ಕೆ ಜೀವಿಸುವ ಆಸೆ ಇಂಗದಂತೆ ಆರೈಕೆ ಮಾಡುವಳು ಥೇಟು ಹೊಟ್ಟೆಯ ಮಗುವಿನಂತೆ. ಗೆಳೆತನ, ಆಟ ಓಟಗಳನ್ನು ಬದಿಗಿಟ್ಟು ಅವನು ಪಾಠಗಳಲ್ಲೇ ಮುಳುಗಿದ. ಕ್ಲಾಸಿನಲ್ಲಿ ಮೊದಲನೆಯವನಾದ. ತಾಲೂಕಿಗೆ ಮೊದಲಿಗನಾದ. ಜಿಲ್ಹೆಗೆ ಮೊದಲಿಗನಾದ. ಕಾಲೇಜಿಗೆ ದಪ್ಪ ಗಾಜಿನ ಕನ್ನಡಕ ಧರಿಸಿ ತಲುಪಿದ. ಅಲ್ಲಿ ಕ್ರಮೇಣ ಹೊಸ ಗೆಳೆಯರ ಶೋಕಿಗಳಿಗೆ, ಲಲನೆಯರ ಮೋಡಿಗಳಿಗೆ ಮರುಳಾದ.ಅಂಕಗಳು ಕಡಿಮೆಯಾದವು. ದಿಗಿಲುಗೊಂಡ ಅಮ್ಮ ನಿಯಮಗಳನ್ನು ಬಿಗಿಗೊಳಿಸಿದಳು. ಆದರೆ ಫಾಯ್ನಲ್ ಪರೀಕ್ಷೆಯ ಕೊನೆಯ ದಿನ ಅವನು ಬಂಡೆದ್ದ. ಆದಿನ ಬೊನ್ಸಾಯ್ ಸಂಪಿಗೆಗೆ ಪುಟ್ಟ ಪುಟ್ಟ ಹೂ ಮೂಡಿದ್ದವು. ಅವನ ಬಂಡಾಯದ ಕಾರಣ ಅಮ್ಮನ ಗಮನಕ್ಕೆ ಬಾರದೇಇಲ್ಲ. ವಯೋಸಹಜವಾಗಿ ಮಗು ಯಾವದೋ ಮೋಹಿನಿಗೆ ಮರುಳಾಗಿದೆ. ಬಂಡಾಯವನ್ನು ಹತ್ತಿಕ್ಕಲು ಶಿಸ್ತಿನ ಸೇನಾನಿ ಅಮ್ಮನಿಗೆ ಇಪ್ಪತ್ತ್ನಾಲ್ಕು ಗಂಟೆಗಳೂ ಬೇಕಾಗಲಿಲ್ಲ. ಸಾಮ, ದಾನಗಳಿಂದಲೇ ಕೆಲಸವಾಯಿತು. ದಂಡ, ಭೇದಗಳ ಅಗತ್ಯ ಬೀಳಲಿಲ್ಲ. ಮರುದಿನ ಹೂಬಿಟ್ಟ ಬೊನ್ಸಾಯ್ ಮರದ ಜೊತೆ ಅಮ್ಮನ ಫೋಟೋ ಪೇಪರಿನಲ್ಲಿ ಬಂತು. ಅಡಿಗೆಯವನು ಎಬ್ಬಿಸಲು ಬಂದಾಗ ಅವನು ಹೂಮಾಲೆ ಹಾಕಿದ ಅಮ್ಮನ ಫೋಟೋದ ಎದುರು ನೆಲದಮೇಲೆ ಶಿರಸಾಷ್ಟಾಂಗ ನಮಸ್ಕಾರಹಾಕುತ್ತ ಏನನ್ನೋ ಮುಲುಕುತ್ತಿದ್ದ. ಅಡಿಗೆಯವನು ಬಹಳ ವರ್ಷಗಳಿಂದ ಇದ್ದವನು. " ಬಾಬು, ಚಹ ಮಾಡಲೇ? ಸೂರ್ಯಾಸ್ತದ ಮೊದಲು ಪಿಂಡ ವಿಸರ್ಜನೆ ಆಗಬೇಕಲ್ಲವೇ ?" ಎಂದು ಅಕ್ಕರೆಯಿಂದ ಕೇಳಿದ. ಅವನು ಎದ್ದು ನಿಂತು "ಇಷ್ಟು ಬೇಗ ಬೇಡ. ಐದು ಗಂಟೆಗೆ ಮಾಡಿದರೆ ಸಾಕು" ಎಂದು ಮನೆಯ ಹಿಂಬದಿಯ ಶೆಡ್ಡಿಗೆ ಹೋದ. ಅಲ್ಲಿಂದ ಪಿಕಾಸಿ ಗುದ್ದಲಿಗಳನ್ನು ಹಿಡಿದುಕೊಂಡು ಬಂದವನನ್ನು "ಏನು ಮಾಡುತ್ತೀಯೋ ಬಾಬು?" ಎಂದು ವಿಚಾರಿಸಿದಾಗ ಏನನ್ನೋ ಗೊಣಗುತ್ತ ಹಿತ್ತಲಿನಕಡೆಗೆ ಹೊರಟ. "ವಿಸರ್ಜನೆ...." ಅಂತ ಏನನ್ನೋ ಅಂದಂತೆ ಅಡಿಗೆಯವನ ಕಿವಿಗೆ ಬಿದ್ದಿತ್ತು. ಹಿತ್ತಲಲ್ಲಿ ದೊಡ್ಡ ಮರಗಳಿಂದ ದೂರ ನಾಲ್ಕಾರು ಕಡೆ ಬಿಸಿಲು ಬೀಳುತ್ತಿದ್ದ ಖಾಲಿ ಜಾಗಗಳಲ್ಲಿ ಪುಟ್ಟ ಹೊಂಡಗಳನ್ನು ಅವನು ತೋಡಿದ. ಬಳಿಕ ಮನೆಯಿಂದ ಒಂದೊಂದಾಗಿ ಬೊನ್ಸಾಯ್ ಮರಗಳನ್ನು ಹೊತ್ತು ತಂದು ಪಿಂಗಾಣಿ ಕುಂಡಗಳನ್ನು ಒಡೆದು ಮರಗಳನ್ನು ಹೊಂಡಗಳಲ್ಲಿ ನೆಟ್ಟು ನೀರುಹಾಕಿದ. ಅವನ ಈ ಕರ್ಮಕಾಂಡಗಳನ್ನು ಪಕ್ಕದಮನೆಯ ಹುಡುಗಿ ಮಹಡಿಮೇಲಿನ ಕಿಡಕಿಯಿಂದ ಗಮನಿಸಿ ನಿಟ್ಟುಸಿರು ಬಿಟ್ಟಳು. ಕಾಲೇಜು ದಿನಗಳಲ್ಲಿ ಸದಾ ಗುಮ್ಮನಗುಸಕನಾಗಿದ್ದ ಅವನು ತನ್ನನ್ನು ದೂರದಿಂದಲೇ ಹಿಂಬಾಲಿಸುವದನ್ನು, ಒಂದೆರಡು ಸಲ ಮಾತಾಡಲು ಪ್ರಯತ್ನಿಸಿದ್ದನ್ನು ಅವಳು ಗಮನಿಸಿದ್ದಳು. ಕೊನೆಗೊಂದು ದಿನ ಅವನು ಅನಿರೀಕ್ಷಿತವಾಗಿ ಎದುರಿಗೆ ಸಿಕ್ಕಿ " ನಾನು ನಿನ್ನನ್ನು ಪ್ರೀತಿಸುತ್ತೇನೆ " ಎಂದು ತಡವರಿಸಿದಾಗ ಅವಳಿಗೆ ಭಯ, ಕೋಪ, ಆಶ್ಚರ್ಯ ರೋಮಾಂಚನಗಳು ಒಟ್ಟಿಗೆಯೇ ಆಗಿದ್ದವು. ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದ ಅವಳ ಬಾಯಿಂದ "ನಿನ್ನ ತಾಯಿಯ ಪರವಾನಿಗೆ ಇದೆಯೇ ?" ಎಂಬ ಶಬ್ದಗಳು ಬಂದು ಬಿಟ್ಟಿದ್ದವು. ನಂತರದ ದಿನಗಳಲ್ಲಿ ತಾನು ಅಂದು ಹಾಗೆ ಅನ್ನಬಾರದಿತ್ತೆಂದು ಅವಳು ಹಲವು ಸಲ ಪರಿತಪಿಸಿದ್ದಾಳೆ. ತನ್ನ ಆ ಒಂದು ಮಾತಿನಲ್ಲಿ ಅನುದ್ದಿಷ್ಟ ವ್ಯಂಗ್ಯ, ಇಲ್ಲದ ಅಹಂಕಾರಗಳು ಅವನಿಗೆ ಕಂಡವೇ ಎಂದು ಯೋಚಿಸಿದ್ದಾಳೆ. ಆದರೆ ಆಡಿಹೋದ ಮಾತನ್ನು ಹೇಗೆ ಹಿಂದಕ್ಕೆ ಪಡೆಯುವದು ? ಆ ಬಳಿಕ ಅವನು ಮತ್ತೆಂದೂ ಅವಳನ್ನು ಹಿಂಬಾಲಿಸಲಿಲ್ಲ. ಎದುರಿಗೆ ಸಿಕ್ಕರೆ ತಲೆ ತಗ್ಗಿಸಿ ನಡೆದ. ಕಾಲೇಜು ಮುಗಿದ ಒಂದೆರಡು ವರ್ಷಗಳಲ್ಲಿ ಅವಳ ಮದುವೆಯಾಯಿತು. ದೊಡ್ಡ ಶಹರದ ದೊಡ್ಡ ವ್ಯವಸಾಯದ ಗಂಡ. ದೊಡ್ಡ ಬಂಗಲೆ, ದೊಡ್ಡ ಕಾರು, ದೊಡ್ಡ ಆಳುಕಾಳುಗಳ ದಂಡು. ಮದುವೆಯಾದ ಹೊಸತರಲ್ಲಿ ಅವಳು ಕಂಡ ಕನಸುಗಳಿಗೆ ಲೆಕ್ಕವಿಲ್ಲ. ಆದರೆ ದಿನ ಕಳೆದಂತೆ ಕರಾಳ ವಾಸ್ತವದ ದರ್ಶನವಾಗತೊಡಗಿತು. ಗಿಳಿಮರಿಯನ್ನು ಸಾಕಿ ಸಲುಹಿ ಗಿಡುಗದ ಕೈಗೆ ಕೊಟ್ಟಂತಾಯಿತು- ಎಂದು ತಂದೆತಾಯಿಗಳು ಪರಿತಪಿಸಿದರು. ಅವಳು ಧೈರ್ಯಗುಂದಲಿಲ್ಲ. ತನ್ನದೇ ಆದ ಹೋರಾಟ ನಡೆಸಿ ವಿಚ್ಛೇದನ ಪಡೆದು ತವರಿಗೆ ಮರಳಿದ್ದಳು. ಇತ್ತೀಚೆ ನೌಕರಿ ಹಿಡಿದಳು. ಹೊಸ ಬಾಳೊಂದನ್ನು ಕಟ್ಟಿಕೊಳ್ಳುವ ಯತ್ನಗಳನ್ನು ನಡೆಸಿದ್ದಳು. ಹಳೆಯ ಗೆಳತಿಯರೆಲ್ಲ ಚದುರಿ ಹೋಗಿದ್ದರು. ಹೊಸ ಆತ್ಮೀಯ ಸಂಬಂಧಗಳು ಕುದುರಲಿಲ್ಲ. ಏಕತಾನತೆ, ಒಂಟಿತನಗಳು ಬಿಡುವಿನ ಸಮಯ ಕಳೆಯುವದನ್ನು ಕಷ್ಟವಾಗಿಸಿದವು. ಆಗೆಲ್ಲ ಅವಳು ಪುಸ್ತಕಗಳ ಮೊರೆಹೊಕ್ಕಳು. ನಿದ್ರೆ ಬಾರದ ರಾತ್ರಿಗಳಲ್ಲಿ ' ಎಂ. ವ್ಯಾಸ' ರ ಕತೆಗಳನ್ನೋದುವಳು. ನೆಗಸು ಬಂದಾಗಿನ ಶಂಕರೀನದಿಯಂತೆ ಅವಳ ಮನಸ್ಸು ಹೊಯ್ದಾಡುವದು. ಕೆಲವೊಮ್ಮೆ ಜಗಜೀತ್ ಸಿಂಗನ ಗಝಲ್ ಹಚ್ಚಿ ಗ್ಯಾಲರಿಯಲ್ಲಿ ನಿಂತು ತಾರೆಗಳನ್ನೆಣಿಸುವಳು. ಅಂಥದೇ ಒಂದು ರಾತ್ರಿ 'ಒಂದು ಪುಟ್ಟ ಹಕ್ಕಿಯನ್ನಾದರೂ ಯಾಕೆ ಸಾಕಿಕೊಳ್ಳಬಾರದು?' ಎಂಬ ವಿಚಾರ ಅವಳಿಗೆ ಬಂತು. ಸಾಕು ಪ್ರಾಣಿಗಳ ಅಂಗಡಿಯ ದೊಡ್ಡ ಪಂಜರಗಳಲ್ಲಿ ಹಕ್ಕಿಗಳ ಸಂತೆ. ತರಹೆವಾರು ಬಣ್ಣ, ಆಕಾರ, ಕುಲ ಗೋತ್ರಗಳ ಹಕ್ಕಿಗಳು ತಮ್ಮ ಕಲರವ, ಹಾರಾಟ, ಕಾದಾಟಗಳೊಂದಿಗೆ ತಮ್ಮದೇ ಆದ ಪ್ರಪಂಚದಲ್ಲಿದ್ದವು. ಅವಳು ನಿಂಬೆಹಣ್ಣಿನ ಬಣ್ಣದ ಪುಟ್ಟ ಹಕ್ಕಿಯೊಂದನ್ನು ಆಯ್ಕೆ ಮಾಡಿದಳು. ಅದರ ರೆಕ್ಕೆಗಳ ಅಂಚುಗಳ ಮೇಲೆ ತಿಳಿಹಸಿರು ಅಲೆ ಅಲೆ ಚಿತ್ತಾರವಿತ್ತು. ದೊಡ್ಡದೊಂದು ಪಂಜರವನ್ನೂ, ನೀರು ತಿಂಡಿಗಳಿಗಾಗಿ ಬಟ್ಟಲುಗಳನ್ನೂ ಅವಳು ಖರೀದಿಸಿದಳು. ಅಂಗಡಿಯವನೆಂದ : " ಒಂದೇ ಹಕ್ಕಿ ಸಾಕೇ ಮೇಡಂ ? ಅದಕ್ಕೆ ಸಂಗಾತಿ ಬೇಡವೇ ?." ಅವಳು ಮನಸ್ಸಿನಲ್ಲೇ ' ನಾನೇ ಅದರ ಸಂಗಾತಿ' ಎಂದು ಅಂದುಕೊಂಡರೂ " ಸಧ್ಯಕ್ಕೆ ಒಂದೇ ಸಾಕು." ಎಂದಷ್ಟೇ ಉತ್ತರಿಸಿದಳು. ಹೊಸ ಮನೆಗೆ, ಹೊಸ ವಾತಾವರಣದಕ್ಕೆ ಹೊಂದಿಕೊಳ್ಳಲು ಹಕ್ಕಿಗೆ ಸಮಯ ಬೇಕಾಗುತ್ತದೆಯಂತೆ. ಹೊಸ ಮನುಷ್ಯರ ಬಗೆಗೆ ವಿಶ್ವಾಸ ಮೂಡುವದಕ್ಕೂ ಸಹ. ಹಕ್ಕಿಯೊಂದಿಗೆ ವ್ಯವಹರಿಸುವಾಗ ಅದರ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಬಾರದಂತೆ. ತಲೆ ಸ್ವಲ್ಪ ಓರೆಮಾಡಿ ಮೆಲುದನಿಯಲ್ಲಿ ಮಾತಾಡಬೇಕಂತೆ. ಅಪರಿಚಿತ ವ್ಯಕ್ತಿಯ ಎರಡೂ ಕಣ್ಣುಗಳನ್ನು ಹತ್ತಿರದಿಂದ ನೋಡಿದರೆ ಹಕ್ಕಿಗೆ 'ಇದು ತನ್ನನ್ನು ಬೇಟೆಯಾಡಲು ಬಂದಿರುವ ಪ್ರಾಣಿ' ಎಂಬ ಭಾವನೆ ಬಂದು ಅದರ ಮನಸ್ಥಿತಿ ವ್ಯಗ್ರವಾಗುತ್ತದಂತೆ. ಗೂಗಲ್ ಮಾಡಿ ಹಲವು ವಿಚಾರಗಳನ್ನು ಆಕೆ ತಿಳಿದುಕೊಂಡಿದ್ದಳು. ಹಕ್ಕಿಗೆ 'ಲೈಲಾ' ಎಂದು ಹೆಸರಿಟ್ಟು ಲಲ್ಲೆಗರೆದು ಕರೆದಳು. ಅವಳಿಗೆಂದು ಪುಟ್ಟ ಜೋಕಾಲಿ, ಪುಟ್ಟ ನಿಚ್ಚಣಿಕೆ,ಕಿಂಕಿಣಿ ನಾದದ ತೂಗುಗಂಟೆ, ಬಣ್ಣ ಬಣ್ಣದ ಮಣಿಸರಗಳೂ ಬಂದವು. ಮೊದಲದಿನ ಉಪವಾಸ ಸತ್ಯಾಗ್ರಹ ಹೂಡಿದ್ದ ಲೈಲಾ ಕ್ರಮೇಣ ಅವಳಲ್ಲಿ ಸಲಿಗೆ ತೋರಿಸತೊಡಗಿದಳು. ಎರಡು ವಾರಗಳಲ್ಲಿ 'ಲೈಲಾs' ಎಂದು ಕರೆದರೆ ಅದೇ ಧಾಟಿಯಲ್ಲಿ ಉತ್ತರಿಸತೊಡಗಿದಳು. ಪಂಜರದಲ್ಲಿ ಕೈಹಾಕಿ ಬೆರಳು ಚಾಚಿದರೆ ಅದರಮೇಲೆ ಹತ್ತಿ ಕುಳಿತುಕೊಳ್ಳುವಳು. ಕುಳಿತಲ್ಲೇ ಹಾರುವವಳಂತೆ ಪಟಪಟ ರೆಕ್ಕೆ ಬಡಿದರೂ ಬಡಿದಳೇ. ಅದು ಅವಳ ಜಾತಿಯವರಲ್ಲಿ ಖುಷಿ ಜಾಹೀರುಪಡಿಸುವ ರೀತಿಯಂತೆ. ಹಾರಲು ಬಿಟ್ಟರೆ ಲೈಲಾ ಮಗುವಿನಂತೆ ಚೀರುತ್ತ ರೂಮೆಲ್ಲ ಸುತ್ತಾಡಿ ಅವಳ ಹೆಗಲಮೇಲೆ ಕೂತು ತೋಳಿಗೆ ತನ್ನ ಕೊಕ್ಕು ತಿಕ್ಕುವಳು. ಉಗುರು ಬೆಚ್ಚಗಿನ ನೀರಿನ ಬೌಲಿನಲ್ಲಿ ಹಸಿರು ಹುಲ್ಲಿನ ಚೂರುಗಳನ್ನು ಹಾಕಿಟ್ಟರೆ ಅದರ ಮೇಲೆ ಹೊರಳಾಡಿ ಸ್ನಾನ ಮಾಡುವಳು. ಅವಳ ಮೊಬೈಲ್ ಪೂರ್ತಿ ಲೈಲಾಳ ವೀಡಿಯೋ ಗಳಿಂದ ತುಂಬಿ ಹೋಯಿತು. ರಜೆ ಮುಗಿಯುತ್ತ ಬಂದಂತೆ ಅವಳಿಗೆ ಚಿಂತೆಯಾಗತೊಡಗಿತು. ತಾನು ಆಫೀಸಿಗೆ ಹೋದಾಗ ಲೈಲಾ ಒಬ್ಬಳೇ ಆಗುತ್ತಾಳಲ್ಲ- ಎಂದು. ಕೆಳಗಿನ ಕೋಣೆಗಳಲ್ಲಿ ತಮ್ಮ ಸಾಮ್ರಾಜ್ಯ ಹೊಂದಿರುವ ಅಪ್ಪ ಅಮ್ಮ ಮಹಡಿ ಹತ್ತುವದೇ ಅಪರೂಪ. ಹಕ್ಕಿಯಂಗಡಿಯವನು ಸೂಚಿಸಿದಂತೆ ಜೋಡಿ ಹಕ್ಕಿಗಳನ್ನೇ ತರಬಹುದಿತ್ತು ಎಂದೆನಿಸಿ ಮತ್ತೆ ಅಲ್ಲಿಗೆ ಹೋದಳು. ಈ ಬಾರಿ ಗುರುತಿಸಲು ಸುಲಭವೆಂದು ಬೂದು ಬಣ್ಣದ ಹಕ್ಕಿ ಆಯ್ದಳು. ಅಂಗಡಿಕಾರನೆಂದ : "ಮೇಡಂ, ಒಮ್ಮೆಲೇ ಎರಡೂ ಹಕ್ಕಿಗಳನ್ನು ಒಂದೇ ಪಂಜರದಲ್ಲಿ ಬಿಡಬೇಡಿ. ಇದಕ್ಕಾಗಿ ಬೇರೊಂದು ಸಣ್ಣ ಪಂಜರ ಕೊಡುತ್ತೇನೆ. ಇಬ್ಬರನ್ನೂ ಕೆಲವು ದಿನ ಪರಸ್ಪರ ಹತ್ತಿರದಲ್ಲಿಡಿ. ಇಬ್ಬರಲ್ಲೂ ದೋಸ್ತಿಯಾದರೆ ಸೈ. ಇಬ್ಬರೂ ಜಗಳವಾಡತೊಡಗಿದರೆ, ಪರಸ್ಪರ ಬೆನ್ನು ಮಾಡಿ ಕೂತರೆ ಇದನ್ನು ವಾಪಸು ತನ್ನಿ. ಬೇರೆ ಹಕ್ಕಿ ಕೊಡುತ್ತೇನೆ. ನಶೀಬದಲ್ಲಿದ್ದವರು ಮಾತ್ರ ಒಟ್ಟಿಗೆ ಇರುತ್ತಾರೆ. " ಲೈಲಾ ಮಜನೂರ ನಡುವೆ ದೋಸ್ತಿಯಾಗಲೇ ಇಲ್ಲ. ತಾನೇ ಅವಳ ಸಂಗಾತಿಯಾಗುವದು ನಶೀಬದಲ್ಲಿರಬೇಕೆಂದು ಬಗೆದು ಅವನನ್ನು ವಾಪಸು ಕೊಟ್ಟಳು. ಈ ನಡುವೆ ಪಕ್ಕದ ಮನೆಯಿಂದ ಕ್ರಯಕ್ಕಾಗಿಯಾದರೂ ಬೊನ್ಸಾಯ್ ಮರವೊಂದನ್ನು ತಂದಿಟ್ಟರೆ ಲೈಲಾ ಅದರ ಮೇಲೆ ಹತ್ತಿ ಆಡಬಹುದಲ್ಲವೇ ಎಂಬ ವಿಚಾರವೊಂದು ಅವಳಿಗೆ ಬಾರದಿರಲಿಲ್ಲ. ತನ್ನ ಕಲ್ಪನೆಗೆ ಅವಳಿಗೆ ತನ್ನ ಮೇಲೆಯೇ ನಗು ಬಂದಿತ್ತು. ಈಗ ಕಿಡಕಿಯಾಚೆ ಅವನು ಬಂಧನದಿಂದ ಮುಕ್ತನಾಗಲಿರುವ ಕೈದಿಯಂತೆ ತನ್ನ ಕಲಾಪಗಳನ್ನು ನಡೆಸುತ್ತಿರಲು ತಾನು ಮಾತ್ರ ಲೈಲಾಳ ಜೊತೆ ಪಂಜರ ಸೇರುತ್ತಿದ್ದೇನೆಯೇ ಎಂಬ ವಿಚಾರ ಬಂದು ಅವಳು ನಿಟ್ಟುಸಿರು ಬಿಟ್ಟಳು. - ಶರದ ಸೌಕೂರ ಶರದ್ ಸೌಕೂರ ನಮ್ಮ ನಡುವಿನ ಗಂಭೀರ ಕಾಳಜಿಯ ಪ್ರಜ್ಞಾವಂತ ಲೇಖಕರು.ಅವರ ಹಿರಿಯರು ಉತ್ತರ ಕನ್ನಡ ಜಿಲ್ಲೆಯವರು. ಮುಂಬಯಿಯಲ್ಲಿ ಜನಿಸಿದ ಶರದ್ ಸೌಕೂರ ಹೊನ್ನಾವರದ ನ್ಯೂ ಇಂಗ್ಲೀಷ ಸ್ಕೂಲ್ ಮತ್ತು ಹೊನ್ನಾವರದ ಅಂದಿನ ಎಂ.ಪಿ.ಇ.ಎಸ್.ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವೀಧರರು. ರಾಷ್ಟ್ರೀಕೃತ ಬ್ಯಾಂಕನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಮುಂಬೈ ವಾಸಿಯಾಗಿರುವ ಅವರಿಗೆ ಸಾಹಿತ್ಯದಲ್ಲಿ ಅತೀವ ಆಸಕ್ತಿ.ಅವರ ಕವಿತೆ,ಕತೆ,ನಗೆ ಬರಹ,ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಅವರ ಬರವಣಿಗೆಯ ಬಗೆ ಹೊಸತನದಿಂದ ಗಮನಾರ್ಹವಾಗಿದೆ - ಸಂಪಾದಕ

ಬೊನ್ಸಾಯ್ ಮರ ಮತ್ತು ಒಂಟಿ ಲವ್ ಬsರ್ಡ
bottom of page