top of page

ಬೆಳ್ಳಕ್ಕಿಯ ಕವಿ ಸು. ರಂ. ಯಕ್ಕುಂಡಿ

ನಾವಿನ್ನೂ ಬರೆಯಲು ಆರಂಭದ ಹೆಜ್ಜೆ ಇಡುತ್ತಿದ್ದ ಕಾಲ ಅದು. ೫೦-೬೦ ರ ದಶಕ. ಆಗ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ನಮ್ಮ ಬೆನು ಚಪ್ಪರಿಸಿ ಬರೆಯಿಸಿ ಪ್ರೋತ್ಸಾಹಿಸುತ್ತಿದ್ದ ಕೆಲವು ಹಿರಿಯರಿದ್ದರು. ಪಾಂಡೇಶ್ವರರು, ಗೌರೀಶ ಕಾಯ್ಕಿಣಿಯವರು, ಬಿ. ಎಚ್. ಶ್ರೀಧರರು, ಸು. ರಂ. ಯಕ್ಕುಂಡಿಯವರು, ಎಂ. ಅಕಬರ ಅಲಿಯವರು...ಅವರಿಂದಾಗಿಯೇ ನಾವು ಬರೆಹಗಾರರಾಗಿ ರೂಪುಗೊಂಡಿದ್ದು. ಸುಬ್ಬಣ್ಣ ರಂಗನಾಥ ಯಕ್ಕುಂಡಿ ಅವರು ಹುಟ್ಟಿದ್ದು ರಾಣಿ ಬೆನ್ನೂರು(. ೧೯೨೩ ಜನೆವರಿ ೨೦). ಆದರೆ ಅವರ ಬದುಕಿನ ಬಹುಪಾಲು ಕಳೆದದ್ದು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ. ಅಲ್ಲಿಯ ಆನಂದಾಶ್ರಮ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಅದರ ಮುಖ್ಯೋಪಾಧ್ಯಾಯರೂ ಆಗಿ ನಿವೃತ್ತರಾದ ಯಕ್ಕುಂಡಿಯವರು‌ ನಮ್ಮ ಜಿಲ್ಲೆಯ ವಾತಾವರಣದಲ್ಲಿ ಪೂರ್ತಿ ಬೆರೆತುಹೋಗಿದ್ದರು. ಕಾರವಾರ ಜಿಲ್ಲೆಯ ನಿಸರ್ಗ ಸೌಂದರ್ಯ ಅವರ ಕಾವ್ಯಕ್ಕೆ‌ ಸೊಗಸು ತಂದಿತು. ಅವರನ್ನು ಜಿಲ್ಲೆ ಬೆಳ್ಳಕ್ಕಿಯ ಕವಿ ಎಂದೇ ಕರೆಯಿತು, ಪ್ರೀತಿಸಿತು. ೨೦೦೮ ರಲ್ಲಿ ಹೊರತರಲಾದ ಅವರ ಸಮಗ್ರ ಕಾವ್ಯ ಕೃತಿಗೆ "ಬೆಳ್ಳಕ್ಕಿ ಹಿಂಡು " ಎಂಬ ಹೆಸರಿಡಲಾಯಿತು. ಅವರು ಪದವಿ ಪಡೆದದ್ದು ಸಾಂಗ್ಲಿ ವಿಲ್ಲಿಂಗ್ಡನ್ ಕಾಲೇಜಿನಲ್ಲಿ. ವಿ. ಕೃ. ಗೋಕಾಕ, ರಂ. ಶ್ರೀ. ಮುಗಳಿಯಂತಹ ದಿಗ್ಗಜಗಳ ಶಿಷ್ಯರು. ಜಿಲ್ಲೆಯ ಇನ್ನೊಬ್ಬ ಶ್ರೇಷ್ಠ ಕವಿ ಗಂಗಾಧರ ಚಿತ್ತಾಲರು ಇವರು ಅಲ್ಲಿ ಜೊತೆ. ಕಾವ್ಯಪ್ರೀತಿ ತನ್ನಿಂದ ತಾನೇ ಬೆಳೆಯಿತು. ಪದವಿ ಪಡೆದವರು ಪಡುಗಡಲ ತೀರಕ್ಕೆ ಬಂದರು. ಕುಮಟಾ ಅಂಕೋಲಾ ನಡುವಿನ ಪುಟ್ಟ ಸುಂದರ ಬಂಕಿಕೊಡ್ಲ. ಅಲ್ಲೇ ಪಕ್ಕದಲ್ಲಿ‌ ಗೋಕರ್ಣದ ಭದ್ರಕಾಳಿ ಹೈಸ್ಕೂಲಿನಲ್ಲಿ ಗೌರೀಶ ಕಾಯ್ಕಿಣಿಯವರು. ಹತ್ತಿರದ ಹನೇಹಳ್ಳಿ ಚಿತ್ತಾಲ ಸಹೋದರರದು. ಕವಿಗೆ ಮತ್ಸ್ಯಗಂಧಿನಿಯರೂ ಬೆಳ್ಳಕ್ಕಿಗಳೂ ಬಕುಳದ ಹೂಗಳೂ ಕಾವ್ಯಕ್ಕೆ ಸರಕಾದವು. ಅವರ ಮೊದಲ ಸಂಕಲನದ ಹೆಸರೇ " ಮತ್ಸ್ಯಗಂಧಿ". ಮತ್ತೊಂದು "ಬಕುಳದ ಹೂಗಳು". ಇನ್ನೊಂದು "ಬೆಳ್ಳಕ್ಕಿಗಳು.". ಸಂಗಡ ಸುಭದ್ರಾ, ಮಿಥಿಲೆ, ಸಂತಾನ, ಆನಂದತೀರ್ಥ, ಗೋದಿಯ ತೆನೆಗಳು, ಹಾವಾಡಿಗರ ಹುಡುಗ, ಕಥನ ಕವನಗಳು , ನೆರಳು ಸಣ್ಣ ಕಥೆಗಳು ಮೊದಲಾದ ಕೃತಿಗಳು ಹೊರಬಂದವು. ಎರಡು ರಶಿಯನ್‌ ಕಾದಂಬರಿಗಳನ್ನು ಅನುವಾದಿಸಿದರು. ಅವರಿಗೆ ಸೋವಿಯತ್ ಲ್ಯಾಂಡ್ ಪ್ರಶಸ್ತಿಯೂ ಬಂತು. ಕೇಂದ್ರ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು, ವರ್ಧಮಾನ ಪ್ರಶಸ್ತಿ, ಶ್ರೇಷ್ಠ ಶಿಕ್ಷಕ ರಾಷ್ಟ್ರಪ್ರಶಸ್ತಿ ‌ಮೊದಲಾದ ಗೌರವಗಳು. ಎಲ್ಲಕ್ಕಿಂತ ಹೆಚ್ಚಾಗಿ‌ ಸು. ರಂ. ಯಕ್ಕುಂಡಿ ಅವರು ಓರ್ವ ಹೂಮನದ ಕವಿ. ಸಹೃದಯಿ. ಸಜ್ಜನ. ಎಲ್ಲರಿಗೂ ಪ್ರಿಯರಾದವರು. ೧೯೬೨ ರಲ್ಲಿ ನಮ್ಮ ಶೃಂಗಾರ ಪತ್ರಿಕೆ ಆರಂಭವಾದ ನಂತರ ಅವರು ಪ್ರತಿ ಸಂಚಿಕೆಗೂ ತಮ್ಮ ಕವನಗಳನ್ನು ಕೊಡುತ್ತಿದ್ದರು. ಆ‌ ಪತ್ರಿಕೆ ತಮ್ಮದೇ ಎನ್ನುವಷ್ಟು‌ಪ್ರೀತಿ ಅವರಿಗೆ. ಅವರೇ ಒಮ್ಮೆ ಹೇಳಿದ್ದರು -" ಜಿಲ್ಲೆಗೆ ಶಂಗಾರ ನೀಡಿದ್ದು ಎರಡು, ಒಂದು ನಿಸರ್ಗ, ಇನ್ನೊಂದು‌ ಶೃಂಗಾರ ಪತ್ರಿಕೆ " ಎಂದು. ೬೫ ರಲ್ಲಿ ಕಾರವಾರದಲ್ಲಿ ಸಾಹಿತ್ಯ ಸಮ್ಮೇಳನ ನಡೆದಾಗ ಮುಂಚಿನ ದಿನ ಸಂಜೆ ಜಿ. ಎಸ್. ಶಿವರುದ್ರಪ್ಪನವರು, ಅಕಬರ ಅಲಿಯವರು, ಯಕ್ಕುಂಡಿಯವರು ಮತ್ತು ‌ನಾನು ಕಾರವಾರದ ಕಡಲ ತೀರದಲ್ಲಿ ಎರಡು‌ಗಂಟೆಗಳ ಕಾಲ ಕುಳಿತು ಕಾವ್ಯದ ಕುರಿತು ಚರ್ಚಿಸಿದ್ದು‌ ಮರೆಯಲಾಗದ ನೆನಪು. ಅಲ್ಲಿ ಹಾರಾಡುವ ಬೆಳ್ಳಕ್ಕಿಗಳನ್ನು ಕಂಡು ಯಕ್ಕುಂಡಿಯವರು ಬೆಳ್ಳಕ್ಕಿಗಳ ಕುರಿತಾದ ತಮ್ಮ ಕವನವನ್ನೂ ಹಾಡಿದ್ದು ಎಲ್ಲರಿಗೂ ಖುಷಿ ತಂದಿತ್ತು. ಇಂದಿರಾ ಅವರ ಪತ್ನಿಯ ಹೆಸರು. ಕನ್ನಡ ಕಾವ್ಯಕ್ಷೇತ್ರದಲ್ಲಿ ಮಹತ್ವದ ಹೆಸರು ಯಕ್ಕುಂಡಿಯವರದು. ಅವರ ಕವನಗಳನ್ನು ಓದಿ, ಹಾಡಿ ಸಂತಸ ಪಡದವರು ಯಾರು?

ಬೆಳ್ಳಕ್ಕಿಯ ಕವಿ ಸು. ರಂ. ಯಕ್ಕುಂಡಿ
bottom of page