ಬೆನ್ನು ಕೆರೆಯುತ್ತಿದ್ದಾರೆ ಪರಸ್ಪರ
ತಿರುಗಾ ಮುರುಗಾ ನಿಂತಿದ್ದಾರೆ ಇಬ್ಬರೂ ಇವನ ಬೆನ್ನನ್ನು ಅವನು ಅವನ ಬೆನ್ನನ್ನು ಇವನು ಪರಸ್ಪರ ಆಹಾ! ಎಂತಹ ಹೃದಯಸ್ಪರ್ಶಿ ನಾಲಗೆಯ ಜಾಲ ಚಪ್ಪರಿಕೆಯ ಸಿಹಿಲೇಪ ಹೊಗಳಿಕೆಯ ಹೋಳಿಗೆಯನ್ನೆ ಮತ್ತೆ ಮತ್ತೆ ಮೆಲ್ಲುವ ಚಪಲ ಎತ್ತರದಿಂದ ಕೆಳಗೆ ಬೀಸಿ ಒಗೆವಂಥ ಭಾವ ಮುಸುಕಲ್ಲೆ ಹಳ್ಳಕ್ಕೆ ನೂಕಿ ಸಂಭಾವಿತರಾಗುವ ಲೋಕ ಆಹಾ! ನೋಡುಗರಿಗೆ ಅರ್ಥವೇ ಇರದ ಧ್ವನಿಗಳ ಸಮೂಹ ಕೆರೆಯುತ್ತಿದ್ದಾರೆ ಪರಸ್ಪರ ಕರಕರ ನವೆಯೇಳುವ ಹಾಗೆ ಮತ್ತೆ ಮತ್ತೆ ಒದಗುತ್ತಿದೆ ಮನರಂಜನೆ ಸರಾಗ ನಮಗೆ ನಿಮಗೆ ಬತ್ತೀಸರಾಗ ಮುಖಾಮುಖಿ ಕುಳಿತು ಎಲ್ಲಿ ಕಟ್ಟಬೇಕು ಎಲ್ಲಿ ಕೆತ್ತಬೇಕು ಚಂದ ಹೇಗೆ ಹೇಗೆ ವಿನ್ಯಾಸಗೊಳಿಸಿದರೆ ದೊರೆಯುತ್ತದೆ ಹೇಗೆ ಕೈಜೋಡಿಸಿದರೆ ಉತ್ತಮ ಫಲಿತ ಗುಣಮಟ್ಟದಾಕಾರ ತೀರಾ ಮುಖ್ಯ ಅಂತಿಮ ರೂಪ ಸ್ವರೂಪ ಅದೆಲ್ಲ ಮುಖ್ಯವೆ ಅಲ್ಲ ನಮಗೆ ಇವತ್ತಿನ ಹೊಟ್ಟೆ ತುಂಬಿದರೆ ಸಾಕು ನಾಳೆಯ ಚಿಂತೆ ಯಾಕೆ ಬಿಡಿ ಉಂಡವನೆ ಜಾಣ ಮಾತಿನರಮನೆಯಲ್ಲಿ ಹೊಗಳಿಕೆಯನ್ನೆ ತೇಗುವ ಜನ ನಾವು ಅದನ್ನೇ ಉಂಡು ಮಲಗುವೆವು ಅದನ್ನೇ ಹಾಸಿ ಹೊದೆಯುವೆವು ದಾರಿ ಬಿಡಿ ದಾರಿ ಬಿಡಿ ಭೋ ಪರಾಕು ಭೋ ಪರಾಕು ಹೊಗಳಿಕೆಯಲ್ಲೆ ನಮ್ಮ ಕಾರುಬಾರು ಹೊಗಳಿಕೆಯೆ ನಮ್ಮ ತೇರು. - ಡಾ. ವಸಂತಕುಮಾರ ಪೆರ್ಲ