top of page

ಬಿದಿರ ಏಣಿಯ ಸ್ವಗತ..!

ನಾನೊಂದು ಏಣಿ. ದಟ್ಟ ಅಡವಿಯಲ್ಲಿ ಬಿದಿರು ಮೆಳೆಯಲ್ಲಿ ನನ್ನ ಜನ್ಮ. ಸುತ್ತಲಿನ ಮರ, ಗಿಡಗಳೆಲ್ಲ ಫಲ, ಪುಷ್ಪಗಳಿಂದ ತೊನೆದಾಡುತ್ತಿದ್ದರೆ ಬರಗಾಲದಲ್ಲಿ ಗರ ಬಡಿದವರಂತಿದ್ದ ನಾನು ಎಲ್ಲರ ಪಾಲಿಗೆ ಒಣಕಲು ಬಿದಿರು ಮಾತ್ರ. ಇತರರಂತೆ ಎದ್ದು ಕಾಣುವ ಬಣ್ಣ, ಗುಣ, ಸಾಮರ್ಥ್ಯಗಳು ನನ್ನಲ್ಲಿ ಇರಲಿಲ್ಲ. ಹಾಗಾಗಿ ಬಿದಿರಿನಿಂದೇನಾದೀತು ಎಂಬ ಕೀಳರಿಮೆ ನನ್ನನ್ನು ಆಳುತ್ತಿದ್ದ ಕಾಲವದು.              ಅಂದು ರೈತನೊಬ್ಬ ಉರುವಲಿಗಾಗಿ ಕಾಡಿಗೆ ಬಂದಾಗ  ನಾನು ಆತನ ಕಣ್ಣಿಗೆ ಬೀಳಬೇಕೆ!? ಆದರೆ ಆತ ನನ್ನನ್ನು ಬೆಂಕಿ ಹಚ್ಚಲು ಬಳಸಲಿಲ್ಲ. ಬದಲಾಗಿ ನಡೆವವರಿಗೆ ಕೈಹಿಡಿದು ಮುನ್ನಡೆಸುವ ಕಾಯಕ ನನಗೆ ನೀಡಿದ‌. ಅಂದರೆ, ಎತ್ತರಕ್ಕೆ ಏರುವವರಿಗೆ ಸಹಾಯವಾಗಲಿ ಎಂದು ನನಗೆ ಏಣಿಯ ರೂಪ ನೀಡಿದ. ಅದೆಂಥ ಅದ್ಭುತ ರೂಪವದು! ಎಲ್ಲರೂ ನನ್ನ ಮೈಮೇಲೆ ಕೈಯಾಡಿಸುತ್ತ ಮೆಚ್ಚುಗೆ ಸೂಚಿಸುವವರೇ. ನನ್ನ ಪ್ರಯೋಜನದ ಬಗ್ಗೆ ವಿಶೇಷ ಟಿಪ್ಪಣಿ ಮಾಡುವ ಜನರಿಗೇನೂ ಕೊರತೆ ಇಲ್ಲ.  ಭಗವಂತನ ಕೃಪಾಶೀರ್ವಾದದಿಂದ ನಾನು ಜನರಿಗೆ ಏಣಿಯಾಗಿ ಬದುಕಿಗೆ ಹೊಸ ಅರ್ಥ ಕಂಡುಕೊಂಡ ಸಾರ್ಥಕ್ಯ ನನ್ನಲ್ಲಿ ಮನೆ ಮಾಡಿದೆ.  ನನ್ನ ಮೇಲೆ ಜನರಿಗೆ ಪ್ರೀತಿಯ ಜೊತೆಗೆ ಸಾಕಷ್ಟು ನಿರೀಕ್ಷೆಗಳೂ ಇವೆ. ನನ್ನ ಮೇಲೆ ಹತ್ತಿ ತಮ್ಮ ಗಮ್ಯ ಸೇರಿದವರಿಗಂತೂ ಲೆಕ್ಕವೇ ಇಲ್ಲ. ಈ ಕಾಯಕದಲ್ಲಿ ಕಾಯಾ, ವಾಚಾ, ಮನಸಾ ನನ್ನನ್ನು ತೊಡಗಿಸಿಕೊಂಡ ಬಗ್ಗೆ ನನಗೆ ಹೆಮ್ಮೆಯಿದೆ! ನನ್ನ ಆಯುಷ್ಯದಲ್ಲಿ ಯಾರನ್ನೂ ಕೆಳಕ್ಕೆ ಬೀಳಿಸಿದ ನೆನಪಂತೂ ನನಗಿಲ್ಲ. ಬದಲಿಗೆ, ಕೆಳಗಿದ್ದವರಿಗೂ ಮೇಲಕ್ಕೆ ಹೋಗುವ ಅವಕಾಶ ಖಂಡಿತ ಇದೆ ಎಂದು ನಾನು ತೋರಿಸಿದ್ದೇನೆ. ಅವರಲ್ಲಿ ಬತ್ತಿದ ಆತ್ಮವಿಶ್ವಾಸವನ್ನು ಪುನಃ ಸೃಷ್ಟಿಸಲು ಕೈಲಾದ ಪ್ರಯತ್ನ ಮಾಡಿದ್ದೇನೆ. ನನ್ನೆರಡು ರಟ್ಟೆಗಳಿಗೆ ಹೆಚ್ಚಿನ ಶಕ್ತಿ ತುಂಬಲು ನಾನಿದ್ದ ಅರಣ್ಯಕ್ಕೆ ಹತ್ತಿರದಲ್ಲಿಯೇ ಬೆಳೆದುನಿಂತಿದ್ದ ಹೆಣ್ಣುಬಿದಿರ ತುಂಡನ್ನು ತಂದ ರೈತ ನನ್ನೆರಡು ಬಾಹುಗಳಿಗೆ ಜೋಡಿಸಿದ. ಅಂದಿನಿಂದ ಏಣಿಯಾಗಿ ನನ್ನ ಬಲ ವರ್ಧಿಸಿದೆ! ಆಶ್ಚರ್ಯವೆಂದರೆ, ಅವಳು ನನ್ನ ಜೊತೆಗೂಡಿದಾಗಿನಿಂದ ಅವಳೂ ಸಹ ಜಿದ್ದಿಗೆ ಬಿದ್ದವರಂತೆ ಅನ್ಯರಿಗೆ ಏಣಿಯಾಗಿ ನಿಂತಿದ್ದಾಳೆ! ನನಗಿಂತ ಒಂದು ತೂಕ ಹೆಚ್ಚು ಅನ್ನುವಷ್ಟು ಎಲ್ಲರಿಗೆ ಪ್ರೀತಿ, ಮಮತೆ ಹಂಚಿದ್ದಾಳೆ!  ಎಷ್ಟೋ ಮಕ್ಕಳು ಉನ್ನತ ದರ್ಜೆಗೆ ಏರಿದವರು ಹಬ್ಬಕ್ಕೆ ಊರಿಗೆ ಬಂದಾಗಲಂತೂ ನಮಗೆ  ಎಲ್ಲಿಲ್ಲದ ಹರ್ಷ! ನಮ್ಮ ಸ್ವಂತ ಮಕ್ಕಳೇ ಇವರು ಎಂಬ ಕಕ್ಕುಲತೆ ನಮಗೆ. ಅವರು ಬಂದು ನಮ್ಮನ್ನು ಪ್ರೀತಿಯಿಂದ ಮಾತಾಡಿಸಿ, ನಮ್ಮೊಂದಿಗೆ ಕಳೆದ ಬದುಕಿನ ಅಮೂಲ್ಯ ಕ್ಷಣಗಳು ಮತ್ತು ಅವರ ಬಾಲಲೀಲೆಗಳನ್ನು ನೆನಪಿಸಿಕೊಳ್ಳುವಾಗ ನಮ್ಮಿಬ್ಬರಿಗೆ ಹರಯ ಉಕ್ಕಿದ ಅನುಭವ! ಅವರಿಗಷ್ಟೇ ಅಲ್ಲ, ಅವರ ಮಕ್ಕಳನ್ನು ಸಹ ಬೆನ್ನ ಮೇಲೆ ಮೇಲೆ ಹತ್ತಿಸಿಕೊಂಡು ಕುದುರೆಯಾಟ ಆಡಿದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಕೆಲವು ಮಕ್ಕಳು ಈ ಏಣಿಯ ತುದಿಯವರೆಗೆ ಹತ್ತಿ ಆಗಸದಲ್ಲಿ ಮಿನುಗುವ ನಕ್ಷತ್ರ ಹೊಳೆಯುವ ಚಂದ್ರರನ್ನು ನೋಡಿ ಸಂತಸ ಪಟ್ಟಿದ್ದಾರೆ. ಅವರ ಜೊತೆಗೆ ನಾವೂ ಖುಷಿ ಅನುಭವಿಸಿದ್ದೇವೆ! ಆದರೆ.. ಆದರೆ.. ಹತ್ತಿದ ಏಣಿಯನ್ನೇ ಒದ್ದು ಧಿಕ್ಕರಿಸಿ ನಡೆದ ಕೆಲವರ ನಡೆ ಮಾತ್ರ ಇನ್ನೂ ನಿಗೂಢ. ಕೆಳಕ್ಕೆ ಬಿದ್ದಾಗ ಎತ್ತಿ ನಿಲ್ಲಿಸಿದವರನ್ನು  ಮರೆತು ಬಿಡುವ ವಿಸ್ಮ್ರತಿ ಅವರಿಗೆ! ಗುಡಿಸಲಿನಿಂದ ಮಹಲಿನವರೆಗಿನ  ಪಯಣದಲ್ಲಿ ಜೊತೆಗಿದ್ದವರ ನೆನಪೂ ಇಲ್ಲದಂತೆ ವರ್ತಿಸುವವರ ಬಗ್ಗೆ ಮರುಕಪಟ್ಟಿದ್ದೇವೆ..! ಹತ್ತಲಷ್ಟೇ ಅಲ್ಲ, ಇಳಿಯಲೂ ಸಹ ಏಣಿ ಬೇಕು ಎಂಬ ಪ್ರಜ್ಞೆಯಿದ್ದವ ಮತ್ತು ಉಪಕಾರ ಸ್ಮರಣೆ ಇಟ್ಟುಕೊಂಡವ ಮಾತ್ರ ಮನುಷ್ಯನಾಗಬಲ್ಲ..!!  ಒಂದು ದಿನ ನನಗೆ ಹೊಸ ರೂಪ ನೀಡಿದ ಸಾಕ್ಷಾತ್ ಭಗವಂತ ಸ್ವರೂಪಿಯಾದ ರೈತ, ನನ್ನ ಕನಸಿನಲ್ಲಿ ಬಂದು, " ಮಗೂ ಅನ್ಯರ ಬಗ್ಗೆ ವಿಚಾರ ಮಾಡುವ ಬದಲು ನಿನ್ನ ಪಾಲಿನ ಕರ್ಮ ಮಾಡುತ್ತ ನಡೆ" ಎಂದು ಉಪದೇಶಿಸಿದ! ಅಂದಿನಿಂದ ಬದುಕು ಅಂದರೆ ಸಿಹಿ, ಕಹಿಗಳ ಮಿಶ್ರಣ ಎಂಬ ಕಟುಸತ್ಯದ ಅರಿವಾಗಿ, "ಯಾರು ಕಿವಿ ಮುಚ್ಚಿದರೂ ಎನಗಿಲ್ಲ ಚಿಂತೆ" ಎಂಬಂತೆ   ಸ್ಥಿತಪ್ರಜ್ಞನಾಗಿ ನನ್ನ ಹುಟ್ಟಿನ ಉದ್ದೇಶದತ್ತ ಗಮನ ಹರಿಸಿದ್ದೇನೆ.  ಇನ್ನೊಂದು ಬಹಳ ಮುಖ್ಯವಾದ ಸಂಗತಿಯೆಂದರೆ, ನನ್ನದೇ ಬಿದಿರಿನ ವಂಶದಲ್ಲಿ ಹುಟ್ಟಿದ ದಾಯಾದಿಯೋರ್ವಳು  ಯಾವುದೋ ಪುಣ್ಯ ಗಳಿಗೆಯಲ್ಲಿ ಕೊಳಲಾಗಿ ಶ್ರೀಕೃಷ್ಣ ಪರಮಾತ್ಮನ ಅದ್ಭುತ ಸಂಗಾತಿಯಾಗಿ, ನಾದಲೋಕದ ಮುಕುಟಪ್ರಾಯವಾಗಿದ್ದು ಸಾಮಾನ್ಯವಾದ ಸಾಧನೆಯೇನೂ ಅಲ್ಲ! ಇದೇ ಬಿದಿರಿನಿಂದ ತಯಾರಾದ ತಟ್ಟಿ, ಬುಟ್ಟಿ, ಊರುಗೋಲು, ಮೊರ ಎಲ್ಲವೂ ಜನರ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಅಲ್ಲದೇ ಬಿದಿರು, ಹುಟ್ಟಿದ ಮಗುವನ್ನು ತೂಗಲು ತೊಟ್ಟಿಲಾದರೆ, ಕೊನೆಗೆ ಆತನ ಅಂತಿಮ ಯಾತ್ರೆಗೆ ಚಟ್ಟವಾಗಿಯೂ ನಿಂತು " ನಾನಿಲ್ಲದೇ ಜನರ ಬದುಕಿಲ್ಲ..!" ಎಂದು ಗರ್ವದಿಂದ ಹೇಳಿಕೊಳ್ಳವಂತಾಗಿದೆ. ಹಾಗಾಗಿ " ನಾನು ಈ ಸೃಷ್ಟಿಯಲ್ಲಿ ಏನೇನೂ ಅಲ್ಲ ಎಂಬ ಕೀಳರಿಮೆ ಬೇಡ. ಭಗವಂತನ ಸೃಷ್ಟಿಯ ಹಿಂದಿರುವ ಉದ್ದೇಶವನ್ನು ಅರ್ಥ ಮಾಡಿಕೊಂಡು ನಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ನಮ್ಮಲ್ಲಿರುವ ಅದಮ್ಯ ಕೌಶಲ್ಯ ಮತ್ತು ಅಗಾಧ ಯೋಗ್ಯತೆಗಳನ್ನು ಪುನರುಜ್ಜೀವನ ಗೊಳಿಸುವದರ ಮೂಲಕ ಜೀವನ ಸಾರ್ಥಕ್ಯ ಪಡೆಯುವದೇ ನಾವು ಭಗವಂತನಿಗೆ ಸಲ್ಲಿಸುವ ಕೃತಜ್ಞತೆಯಾದೀತು! ಸ್ನೇಹಿತರೇ ಕಾಲೆಳೆಯುವದು ಮಹಾಪಾಪ ಎಂತಾದರೆ ಕೈಹಿಡಿದು ಮೇಲಕ್ಕೆ ಹತ್ತಿಸುವದು ಬಹು ಪುಣ್ಯದ ಕೆಲಸ.  "ಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಷು ಕದಾಚನ" ಎಂಬ ಭಗವದ್ಗೀತೆಯ ನುಡಿಯಂತೆ "ಕರ್ಮ ಮಾಡಲಿಕಷ್ಟೇ ನಮಗಿರುವ ಅಧಿಕಾರ, ಫಲಾಫಲಗಳ ಮೇಲೆ ಬೇಡ ಮಮಕಾರ" ಎಂಬುದನ್ನು ಅರಿತುಕೊಂಡು ಅದರಂತೆ ನಡೆಯುವ ಪಣ ತೊಟ್ಟಿದ್ದೇವೆ. ಇನ್ನೇಕೆ ತಡ..!? ಈ ಏಣಿಯಿರುವದೇ ನಿಮಗಾಗಿ..! ಇದರ ಮೇಲೆ ಹತ್ತಿ ನೀವು ಇದುವರೆಗೆ ನೋಡದ ಜಗತ್ತನ್ನು ನೋಡಿ ಆನಂದಿಸಿ..! ನಿಮ್ಮ ಭವಿಷ್ಯವನ್ನು ಎತ್ತರಕ್ಕೇರಿಸಲು ಈ ಏಣಿ ಸದಾ ಸಿದ್ಧವಿದೆ..!!         ಎಣೆಯಿಲ್ಲದ ದುರ್ಲಭ ಮನುಷ್ಯ ಜನ್ಮದಲಿ ಅಣಿಯಾಗು, ಅನ್ಯರ ದಾರಿಗೆ ದೀಪವಾಗು/ ಗುಣಿಯಾಗು, ಮಾನವತೆಯ ಗಣಿಯಾಗು ಏಣಿಯಾಗು  ಸಮಾಜಕೆ - ಶ್ರೀವೆಂಕಟ//                   .....ನಮಸ್ಕಾರ....   -   ಶ್ರೀರಂಗ ಕಟ್ಟಿ ಯಲ್ಲಾಪುರ. ನಿವೃತ್ತ ಪ್ರಾಚಾರ್ಯರು. ಉತ್ಸಾಹ ಮತ್ತು ಕ್ರಿಯಾಶೀಲತೆಗೆ ಇನ್ನೊಂದು ಹೆಸರು ಎನ್ನವ ಹಾಗೆ ನಿವೃತ್ತಿಯ ದಿನಗಳಲ್ಲು ಪೃರ್ವತ್ತರಾಗಿರುವವರು ಶ್ರೀರಂಗ ಕಟ್ಟಿಯವರು.೩೮ ವರ್ಷಗಳ ಕಾಲ ಯಲ್ಲಾಪುರದ ವೈಟಿಎಸ್ಎಸ್  ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕ ಮತ್ತು ಪ್ರಾಚಾರ್ಯರಾಗಿ ಸೇವೆಸಲ್ಲಿಸಿ  ಸಾವಿರಾರು ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿರುವ  ಶ್ರೀರಂಗ ವೆಂಕಟರಾವ್ ಕಟ್ಟಿಯವರು ನಿವೃತ್ತರಾದರೂ ತಮ್ಮ ಕರ್ತತ್ವಶಕ್ತಿಯ ಬಲದಿಂದ ಸಮಾಜದ ಏಳ್ಗೆಗಾಗಿ ಸದಾ ತುಡಿಯುವ, ದುಡಿಯುವ ಹಂಬಲ ಹೊಂದಿದವರು‌. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಇವರು ಪತ್ರಿಕೋದ್ಯಮದಲ್ಲಿ ತಮ್ಮ ಸಮಾಜಮುಖಿ ಬರಹಗಳಿಂದ ಎರಡು ಬಾರಿ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದವರು. ಕಳೆದ ಹಲವಾರು ವರ್ಷಗಳಿಂದ ವಿವಿಧ ಪತ್ರಿಕೆಗಳ ಅಂಕಣಕಾರ ರಾಗಿ ಇವರ ಚಿಂತನ ಬರಹಗಳು ಪ್ರಕಟಗೊಂಡು ಜನ ಮೆಚ್ಚುಗೆ ಗಳಿಸಿವೆ.ಇದೀಗ ಶ್ರೀರಂಗ ಕಟ್ಟಿಯವರು, ಸದ್ವಿಚಾರ, ಸತ್ ಚಿಂತನೆ ಮತ್ತು ಬದುಕಿಗೆ ಅಗತ್ಯವಾದ ಅನುಭವದ ನುಡಿಗಳನ್ನು ನಾಡಿನ ಜನತೆಗೆ ತಲುಪಿಸಲು, ಯೂಟ್ಯೂಬ್ ಚಾನೆಲ್  ತೆರೆದಿದ್ದು ಅದರಲ್ಲಿ ಪಾಕ್ಷಿಕವಾಗಿ "ಬದುಕು ಜಟಕಾಬಂಡಿ" ಚಿಂತನ ಮಾಲಿಕೆಯ ವಿಡೀಯೊಗಳು  ಪ್ರಸಾರವಾಗುತ್ತಿವೆ.ಅವರ ಚಿಂತನಗಳು ನಿಮ್ಮ ಓದಿಗಾಗಿ.  ಸಂಪಾದಕರು

ಬಿದಿರ ಏಣಿಯ ಸ್ವಗತ..!
bottom of page