ಬಾಲ್ಯದ ಶಿವರಾತ್ರಿ ಒಂದು ನೆನಪು...
ಆಗೆಲ್ಲ ಹಬ್ಬ ಹರಿದಿನ ಅಂದ್ರೆ ಮಕ್ಕಳನ್ನು ಹಿಡಿಯುವವರೇ ಇಲ್ಲ; ಪ್ರತಿಯೊಂದನ್ನೂ ಅನುಭವಿಸುವ ಜೀವನಪ್ರೀತಿ ಅದು. ನವರಾತ್ರಿಗೆ ಮಠಕ್ಕೆ ಹೋಗಲೇಬೇಕು, ಶಿವರಾತ್ರಿ ದಿನ ನಾವು ಶಿವರಾತ್ರಿ ಹೊಳೀಗೆ (ಸಹಸ್ರಲಿಂಗಕ್ಕೆ ನಾವಂದು ಇಟ್ಟಿದ್ದ ಸಂಕೇತನಾಮ ಅದು) ಹೋಗದೇ ಇದ್ರೆ ಶಿವರಾತ್ರಿ ನಡೆಯೋದೇ ಇಲ್ಲ! ಸುಡುಬಿಸಿಲಲ್ಲಿ ಕಿಲೋಮೀಟರ್ ಗಟ್ಟಲೆ ಮಣ್ಣಿನ (ಧೂಳಿನ?!) ರಸ್ತೆಯಲ್ಲಿ ನಡೆವಾಗ 'ಮೇಲೆ ಬೋಳು ಸುಡುವುದೂ ಕೆಳಗೆ ಪಾದ ಸುಡುವುದೂ ಲೆಕ್ಕಕ್ಕೇ ಇರುತ್ತಿರಲಿಲ್ಲ! ಚಪ್ಪಲಿಯಿಲ್ಲದೆ ನಡೆದು, ಸುಟ್ಟು ಸುಣ್ಣವಾಗಿ, ಧೂಳಿನಿಂದ ಧೂಸರವಾದ ಪಾದಪದ್ಮಂಗಳನ್ನು ಶಾಲ್ಮಲೆಯ ತಣ್ಣನೆಯ ಉದಕದಲ್ಲದ್ದಿದಾಗ ದೊರೆಯುತ್ತಿದ್ದ ಚಿದಾನಂದವನ್ನು ಬಣ್ಣಿಸಲಳವೆ?! ವರ್ಷಂಪ್ರತಿ ಶಿವರಾತ್ರಿಯಂದು ಆ ಹಿಮತಂಪಿನ ಹೊಳೆಯಲ್ಲಿ ಮುಳುಕುಹಾಕಿ, ಒಂದು ರೌಂಡು ಈಜಿದಾಗಲೇ ಹುಟ್ಟಿಗೊಂದು ಸಾರ್ಥಕತೆ ಎಂದು ತಿಳಿದಿದ್ದ ಅಂದಿನ ಅಬೋಧ ವಿಚಾರವಂತಿಕೆ ಇಂದು ಕೇವಲ ನೆನಪು ಮಾತ್ರ. ಶಿವರಾತ್ರಿಯ ಈ ಈಜುಗಾರಿಕೆ ಒಂದೇ ಸಲಕ್ಕೆ ಮುಗಿಯುತ್ತಿತ್ತೆಂದು ತಪ್ಪಾಗಿ ಭಾವಿಸಿಕೊಂಡರೆ ಅದಕ್ಕೆ ನಾನು ಹೊಣೆಗಾರನಲ್ಲ! ಎಮ್ಮೆಗಳು ಬೇಸಿಗೆಯಲ್ಲಿ ಹೊಂಡ ತೊಣಕುವಂತೆಯೇ ಆರಿಆರಿ ಸಂಜೆಯವರೆಗೂ ಮುಳಕುಹಾಕುವುದು, ಈಜುವುದು ನಡೆದೇ ಇರುತ್ತಿತ್ತು. ಹಸಿವು, ತೃಷೆ? ಎನ್ನುವಿರೋ, ಅವೆಲ್ಲಕ್ಕೂ ನಮ್ಮಣ್ಣ ಚಾಣಕ್ಯ- ತಾರಾನಾಥನ ಬಳಿ ಪ್ಲ್ಯಾನ್ ಎ, ಅದು ಪ್ಲಾಪಾದರೆ ಬಿ...! ಹೀಗೆ ಹಲವು ತಂತ್ರಗಳಿರುತ್ತಿದ್ದವು! ಮೊದಲ ರೌಂಡು ಮುಗಿಸಿ ವಸ್ತ್ರ ಹಾಕಿಕೊಂಡು ಮೆಟ್ಟಿಲು ಹತ್ತಿ ಮೇಲೆ ಬಂದಕೂಡಲೇ ನಮ್ಮಣ್ಣ ಟವಲ್ಲು ಇತ್ಯಾದಿ ವಸ್ತುಗಳನ್ನು ನನಗೆ ಹಸ್ತಾಂತರಿಸುತ್ತಿದ್ದ. ಮನೆಯಿಂದ ಬರುವಾಗಲೇ ತಂದಿರುತ್ತಿದ್ದ ದೊಡ್ಡ ಪ್ಲಾಸ್ಟಿಕ್ ಸಂಚಿಯೆಂಬ ಬ್ರಹ್ಮಾಸ್ತ್ರವನ್ನು ಹೊರತೆಗೆಯುತ್ತಿದ್ದ. ಅದನ್ನು ಬಿಚ್ಚುತ್ತಲೇ ಅಸಲೀ ಆಟ ಶುರು! ಕೈಲಿ ತಿರಗಿಚಂಡೆ (ಒಂದು ವಿಧದ ಕಾಡು ಹೂ. ಶಿವನಿಗೆ ಪ್ರಿಯವಂತೆ. ನಮ್ಮ ಗದ್ದೆ ಅಂಚಿನ ಮಂಗನಕೊಡ್ಲಿನಲ್ಲಿ ಈಗಲೂ ಹೇರಳವಾಗಿದೆ), ಬಿಲ್ವಪತ್ರೆ, ದೂರ್ವೆ ಇತ್ಯಾದಿ ಕಟ್ಟುಗಳನ್ನು ಹಿಡಿದುಕೊಂಡು 'ಹೂಪತ್ರೆ.... ಹೂಪತ್ರೆ...' ಎನ್ನುತ್ತ ತಿರುಗುವುದು. ದೂರದೂರುಗಳಿಂದ ಬರುತ್ತಿದ್ದ ಭಗವದ್ಭಕ್ತರು ಭಕ್ತಿಭಾವ ಪರವಶರಾಗಿ ಕೊಳ್ಳುತ್ತಿದ್ದರು. ಎಷ್ಟಕ್ಕೆ? ಒಂದು ಕಟ್ಟಿಗೆ ನಾಲ್ಕಾಣೆ! ಆ ಕಾಲಕ್ಕೆ ಭಾರೀ ದರ ಅದು. ನಮ್ಮ ಪಾಲಿಗಂತೂ ಕೋಟಿ ಬೆಲೆ! ನಮ್ಮ ಅಪ್ಪನ ಪ್ರಕಾರ ಊರಿನ ತುದಿಗೇ ಇರುವ ಶಿವರಾತ್ರಿ ಹೊಳೆಗೆ ನಡೆದೇ ಹೋಗುವುದು, ಬೆಳಗ್ಗೆ ಸಮಾ ಅವಲಕ್ಕಿ ಕತ್ತರಿಸಿಕೊಂಡು ಹೋಗುವ ಮಕ್ಕಳು ಮಧ್ಯಾಹ್ನದೂಟಕ್ಕೆ ಮನೆಗೆ ಬರುತ್ತಾರೆ. (ಅದು ಅವನ ತಿಳುವಳಿಕೆಯಾಗಿತ್ತು. ನಾವು ಬರುತ್ತಿದ್ದುದು ನೇಸರು ಕಂತಿದ ಮೇಲೆಯೇ!) ಹಾಗಾಗಿ ಒಂದು ದಮ್ಮಡಿಯನ್ನೂ ಕೊಡುತ್ತಿರಲಿಲ್ಲ. ಅವನು ಕೊಡದಿದ್ದರೇನಾಯಿತು? ನಮ್ಮಣ್ಣ ಜಗದೇಕಮಲ್ಲನ ಬಳಿ ತಂತ್ರಗಳಿಗೆ ಬರವೆ?! ಹಾಗಂತ ಏನೇ ಮಾಡುವುದಿದ್ದರೂ ನಮ್ಮಿಬ್ಬರ ಹೊರತಾಗಿ ಮನೆಯಲ್ಲಿ ಇನ್ನಾರಿಗೂ ತಿಳಿಯದಂತೆ ಜಾಗೃತೆ ವಹಿಸಬೇಕಿತ್ತು- ನಮ್ಮ ಸುಬ್ಬಣ್ಣ ಮತ್ತು ತಂಗಿ ಪ್ರೇಮಾ ಅವರಿಗೇನಾದರೂ ತಿಳಿದರೆ ಅಪ್ಪನ ಬಳಿ ಫಿಟ್ಟಿಂಗ್ ಇಡದೇ ಬಿಡುವ ಇಸಮೇ ಅವರಾಗಿರಲಿಲ್ಲ. ಹಾಗಾಗಿ ಈ ಸಾಹಿತ್ಯಗಳನ್ನು ಮುನ್ನಾದಿನವೇ ಹೊಂದಿಸಿ ಬಚ್ಚಿಟ್ಟುಕೊಳ್ಳಲು ನಾವು ಪಡುತ್ತಿದ್ದ ಪಾಡು ಅಷ್ಟಿಷ್ಟಲ್ಲ. ಅಂತೂ ತಂದಿದ್ದ ಹೂಪತ್ರೆಗಳನ್ನು ಮಾರಿದಾಗ ಮೂರೋ ನಾಲ್ಕೋ ರೂಪಾಯಿಗಳ ಕಮಾಯಿ ಆಗುತ್ತಿತ್ತು. ಆ ನಯಾಪೈಸೆಗಳನ್ನೇ ಚಡ್ಡಿಕಿಸೆಯಲ್ಲಿ ಜಣಗುಡಿಸುತ್ತ ನಮ್ಮಣ್ಣ ಕೊಡುತ್ತಿದ್ದ ಪೋಸನ್ನು ನೋಡಿದರೆ, ಕೋಟಿ ಕಮಾಯಿ ಮಾಡಿದ್ದಾನೆಯೋ ಎಂಬಂತಿರುತ್ತಿತ್ತು, ಅವನ ಜಾಪು! ಆ ಜಾಪಾದರೂ ಎಷ್ಟೊತ್ತು? ಒಂದೆರಡು ಆಯ್ಸಕ್ಯಾಂಡಿ, ಆಯಿಗೆ, ತಂಗಿಗೆ ಪ್ರಿಯವೆಂದು ಒಂದು ಕಲ್ಲಂಗಡಿ, (ಇದನ್ನಾದರೂ ಅವರ ಉದರಕ್ಕೆ ಸೇರಿಸಲು ಮನೆಗೆ ಹೋಗುವುದರೊಳಗೆ ಸುಳ್ಳಿನ ಸರಮಾಲೆಯನ್ನೇ ರೆಡಿ ಮಾಡಿಟ್ಟುಕೊಳ್ಳುತ್ತಿದ್ದ ನಮ್ಮ ಸರದಾರ! 'ದುಡ್ಡೆಲ್ಲಿಂದ ಬಂತು?' ಎಂಬ ಅಪ್ಪನ ಕೋರ್ಟ್ ಮಾರ್ಷಲ್ ಗೆ ಉತ್ತರಿಸಬೇಕಲ್ಲ!) ಇನ್ನೂ ಮಿಕ್ಕಿದ್ದರೆ ಒಂದೆರಡು ಕಿತ್ತಳೆ ಹಣ್ಣು,... ಅಲ್ಲಿಗೆ ಮುಗಿಯಿತು ಇವರ ಶಿವರಾತ್ರಿ ವೈಭವ ಅಂದುಕೊಳ್ಳಬೇಡಿ; ನಮ್ಮಣ್ಣನ ಪ್ಲ್ಯಾನ್ ಬಿ ಇನ್ನೂ ಬಾಕಿ ಇದೆ! ಹೂಪತ್ರೆ ಮಾರಿದ್ದನ್ನು ಹೊಟ್ಟೆಯೆಂಬ ತಿಜೋರಿಗೆ ಸೇರಿಸಿದ ತರುವಾಯ ಎರಡನೇ ರೌಂಡ್ ಮೀಸಾಟ. ಪುನಃ ಹೊಟ್ಟೆ ಚುರುಗುಡಲು ಆರಂಭಿಸುತ್ತಿತ್ತು- 'ಹಡಗು ತುಂಬಲು ಹೋದವನು ಬಂದರೂ ಹೊಟ್ಟೆ ತುಂಬಲು ಹೋದವನು ಬರಲಿಲ್ಲ'ವೆಂಬ ಗಾದೆಯನ್ನು ಸುಮ್ಮನೇ ಕಟ್ಟಿದ್ದಾರೆಯೆ? ಅದಿರಲಿ, ನಮ್ಮ ಹೊಟ್ಟೆ ತುಂಬಿಸಿಕೊಳ್ಳಬೇಕಲ್ಲ. ನಮ್ಮಣ್ಣನ ಪ್ಲ್ಯಾನ್ ಬಿ ಜಾರಿಗೆ ಬರುತ್ತಿದ್ದುದೇ ಆಗ! ಅಷ್ಟೊತ್ತಿಗಾಗಲೇ ಪರಿಚಿತರ ಹಣ್ಣು, ಕಾಯಿ, ಸಿಹಿ ತಿಂಡಿಯ ಅಂಗಡಿ ಯಾವುದಾದರೂ ಇದ್ದರೆ ಪತ್ತೆ ಮಾಡಿ ಇಟ್ಟುಕೊಂಡಿರುತ್ತಿದ್ದ ಅವನು ಒಂದೆರಡು ಬಾರಿ ಅಂಗಡಿಯ ಮುಂದೆ ಸುಳಮಳ ಮಾಡಿ, ಬಿಳಿನಗೆ ತುಳುಕಿಸಿ ಅಂಗಡಿ ಮಾಲೀಕನನ್ನು ಮಳ್ಳು ಮಾಡುತ್ತಿದ್ದ. ಪರಿಚಿತರೇ ಆಗಿರುತ್ತಿದ್ದುದರಿಂದ ಅವರೂ ಒಂದು ತುಟ್ಟಿನಗು ಬಿಸಾಡುತ್ತಿದ್ದರು. ಅತಿ ಪರಿಚಿತ ನಗು ಬೀರಿದರೆ ಪುಕ್ಕಟೆ ಕೊಡಬೇಕಾದ ಪ್ರಸಂಗ ಬರಬಹುದೆಂದು ಬೇಕೋ ಬೇಡವೋ ಎಂಬಂತೆ ಇಷ್ಟೇ ಇಷ್ಟು ನಗುತ್ತಿದ್ದರವರು. ನಮ್ಮಣ್ಣನಿಗೆ ಅಷ್ಟು ಮಾತ್ರ ಸಾಕಾಗುತ್ತಿತ್ತು. ಅವರ ಬಳಿಗೆ ಸರಿದು ನಿಂತು, ಅದು ಇದು ಸಹಾಯ ಮಾಡತೊಡಗಿಬಿಡುತ್ತಿದ್ದ. ಅವರಿಗೂ ನಮ್ಮಂತಹ ಬಿಟ್ಟಿ ಹುಡುಗರ ಅಗತ್ಯವಿರುತ್ತಿದ್ದುದರಿಂದ ಮಾಡಿದರೆ ಮಾಡಲೆಂದು ಸುಮ್ಮನಿರುತ್ತಿದ್ದರು. ಆರಂಭದಲ್ಲಿ ಹೊಂದಾಣಿಕೆ ತುಸು ಕಷ್ಟವಾದರೂ ಕೆಲವೇ ಸಮಯದಲ್ಲಿ ಯಜಮಾನರ ವಿಶ್ವಾಸ ಗಳಿಸಿಕೊಳ್ಳುವ ಕಲೆ ಅವನಿಗೆ ಕರತಲಾಮಲಕವಾಗಿತ್ತು. ಒಮ್ಮೆ ವಿಶ್ವಾಸ ಕುದುರಿತೆಂದರೆ ಅಂಗಡಿ ನಮ್ಮದೇ ಅಲ್ಲವೆ! ಸಂಜೆವರೆಗೂ ಹಣ್ಣುಗಳೋ, ತಿಂಡಿಗಳೋ ನಮ್ಮ ಬಸಿರೆಂಬ ಬಕಾಸುರನನ್ನು ಸೇರುತ್ತಿದ್ದವು! ನಡು ನಡುವೆ ಸರದಿ ಪ್ರಕಾರ ಹೊಳೆಯನ್ನು ದುಡುಬ್ಯಾಡುವ ಕ್ರಿಯೆ ನಡೆದೇ ಇರುತ್ತಿತ್ತೆನ್ನಿ. ಒಂದೋ ಅಂಗಡಿಯವನು ಚಾಪೆಸುತ್ತಿಕೊಳ್ಳಬೇಕು, ಇಲ್ಲವೇ ನೇಸರನು ಪಡುಗಡಲಿಗೆ ಜಾರಬೇಕು. ಆಗ ಕಲ್ಲಂಗಡಿಯನ್ನೂ ಅಂಗಡಿಯವನು ಕೊಟ್ಟಿರುತ್ತಿದ್ದ ತಿಂಡಿಗಳನ್ನೂ ಹೊತ್ತು, ಅಪ್ಪನಿಗೆ ಒಪ್ಪಿಸಬೇಕಾದ ಸುಳ್ಳಿನ ಕಂತೆಯನ್ನು ಮನದಲ್ಲೇ ಒಗ್ಗೂಡಿಸುತ್ತ ಕಾಲುಗಳು ಮನೆಯತ್ತ ನಡೆಯುತ್ತಿದ್ದವು. ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು💐🙏 - ಹುಳಗೋಳ ನಾಗಪತಿ ಹೆಗಡೆ