top of page

ಪ್ಲಾಸ್ಟಿಕ್ ನಿಷೇಧ ಕಾಯ್ದೆ!!

ಕಾಗದದ ಹುಲಿಯಂತಾದ ಪ್ಲಾಸ್ಟಿಕ್ ನಿಷೇಧ ಕಾಯ್ದೆ! ಕಾಯ್ದೆ ಕಾನೂನುಗಳೆಲ್ಲ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದರೆ ಅಥವಾ ಜನ ಅದನ್ನು ಪಾಲಿಸಿದ್ದರೆ ದೇಶ ಹೇಗಿರುತ್ತಿರಲಿಲ್ಲ .ಬಹುತೇಕ ಕಾನೂನುಗಳು ಕೇವಲ ದಾಖಲೆಗಳಾಗಿ ಉಳಿಯುತ್ತವಷ್ಟೇ; ಜನ ಅದನ್ನು ಕ್ಯಾರೇ ಅನ್ನದೇ ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುವುದು ವಾಡಿಕೆ. ದೇಶಾಭಿಮಾನ ,ಮಾನವೀಯತೆ ಸಾಮಾಜಿಕ ಕಳಕಳಿ ಜವಾಬ್ದಾರಿ ಇರುವವರಿಗೆ ಮಾತ್ರ ಎಲ್ಲವೂ ಅನ್ವಯ ಆಗುತ್ತವೆ. ಬೇಜವಾಬ್ದಾರಿಯಿಂದ ಉಡಾಫೆಯಿಂದ ಯಾವ ಕಟ್ಟುಪಾಡುಗಳು ತಮಗಲ್ಲ ಎಂದು ವರ್ತಿಸುತ್ತಿರುವ ಬಹುಸಂಖ್ಯಾತ ಜನರಿಂದ ಇಂದು ಸಮಾಜ ಹತ್ತು ಹಲವು ಬಗೆಯ ಆರ್ಥಿಕ, ಸಾಮಾಜಿಕ ಸಮಸ್ಯೆಗಳಿಂದ ಬಳಲುವಂತಾಗಿದೆ. ಇದಕ್ಕೆ ನಮ್ಮ ಜನರ ಉಡಾಫೆ ಧೋರಣೆ ಮಾತ್ರವೇ ಕಾರಣವಾಗಿರದೆ ಇಲಾಖೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷವೂ ಬಹುದೊಡ್ಡ ಕಾರಣವಾಗಿದೆ  ಪ್ಲಾಸ್ಟಿಕ್ ನಿಷೇಧ ಕಾಯ್ದೆಯೂ ಇದಕ್ಕೆ ಹೊರತಾಗಿಲ್ಲ. ಸ್ವಚ್ಛತೆ ಎನ್ನುವುದು ಬದುಕಿನ ಅವಿಭಾಜ್ಯ ಅಂಗವಾದಾಗ ಸಮಾಜದ ಸ್ವಾಸ್ಥ್ಯ ತನ್ನಿಂದ ತಾನೇ ಸುಧಾರಣೆಯಾಗುತ್ತದೆ.  ಆರೋಗ್ಯವೂ  ವೃದ್ಧಿಸುತ್ತದೆ; ಆದಾಯ ದ್ವಿಗುಣಗೊಳ್ಳುತ್ತದೆ. ಆದರೆ ನಮ್ಮಲ್ಲಿ ಸ್ವಚ್ಛತೆಯ ಪ್ರಜ್ಞೆ ಬಹುತೇಕರಿಗೆ ವೈಯಕ್ತಿಕವಾಗಿ ಮಾತ್ರ ಸಮಾಜ ,ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯ ಗಂಧ ಗಾಳಿಯೂ ಇಲ್ಲದವರಂತೆ ಜಾಣ ನಡೆ ಪ್ರದರ್ಶಿಸಿ ತಮ್ಮ ಕೆಲಸ ತಾವು ಮುಗಿಸಿ ಬರುವ ಬೇಜವಾಬ್ದಾರಿ ಜನಗಳಿಂದಾಗಿ ಸ್ವಚ್ಛ ಸುಂದರವಾಗಿದ್ದ ನಮ್ಮ ಸುತ್ತಮುತ್ತಲಿನ ಪರಿಸರ ಕಸದ ತೊಟ್ಟಿಯಾಗಿದೆ. ಪ್ಲಾಸ್ಟಿಕ್ ನಿಷೇಧ ಕಾಯ್ದೆ ಜಾರಿಯಲ್ಲಿ ಬಂದು  ವರ್ಷವೇ ಉರುಳಿದೆ ಆದರೆ ಪರಿಣಾಮವೇನು ಆಗಿಲ್ಲ. ಎಗ್ಗಿಲ್ಲದೆ ಎಲ್ಲ ಅಂಗಡಿ ಮುಂಗಟುಗಳಲ್ಲಿ ಪ್ಲಾಸ್ಟಿಕ್ ಮಾರಾಟ, ಪ್ಲಾಸ್ಟಿಕ್  ಕ್ಯಾರಿ ಬ್ಯಾಗ್ ನಲ್ಲಿ ಸಾಮಾನು ಸರಂಜಾಮುಗಳನ್ನು ಒಯ್ಯುವ ಕೊಡುವ ನಡೆ ಬದಲಾಗಿಲ್ಲ. ಒಂದೊಂದು ಕಿರಾಣಿ ಅಂಗಡಿಯಿಂದ ಮನೆಗೆ ಸಾಮಗ್ರಿ ಒಯ್ಯುವಾಗ ಹತ್ತಿಪ್ಪತ್ತು ಪ್ಲಾಸ್ಟಿಕ್ ಕವರ್ ಗಳು ಮನೆ ಸೇರುತ್ತವೆ. ಗ್ರಾಮೀಣ ಪ್ರದೇಶದಲ್ಲಿ  ಬಹುತೇಕ ಜನ ಬಳಸಿದ ಕಸ, ಪ್ಲಾಸ್ಟಿಕ್ ಎಲ್ಲವನ್ನು  ಬಿಸಾಡುವುದು ಹಳ್ಳ ನದಿಯ ಮಡಿಲಿಗೆ! ಹೋಗಲಿ ಬಿಡಿ ಪ್ಲಾಸ್ಟಿಕ್ ಗೆ ಪರ್ಯಾಯ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಜಾರಿಯಲ್ಲಿ ಬಂದಿಲ್ಲ ಎಂದಿಟ್ಟು ಕೊಳ್ಳೋಣ ಕನಿಷ್ಠಪಕ್ಷ ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳಲ್ಲಿ , ಮನೆಗಳಲ್ಲಿ ಸಂಗ್ರಹವಾಗುವ  ಕಸ ಪ್ಲಾಸ್ಟಿಕ್ ವಿಲೇವಾರಿಯನ್ನು ಅವರವರೇ ಜವಾಬ್ದಾರಿಯಿಂದ ಮಾಡಬೇಕಲ್ಲವೇ ?ಆದರೆ ಇವರು ಮಾಡುತ್ತಿರುವುದೇನು?? ಕತ್ತಲಾಗುತ್ತಿದ್ದಂತೆ ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಚ್ಛಗೊಳಿಸಿ ರಾಶಿ ರಾಶಿ ಕಸಗಳನ್ನು ಮೂಟೆ ಕಟ್ಟಿ ತಂದು ರಸ್ತೆ ಬದಿಯಲ್ಲಿ ಬಿಸಾಡಿ ಹೋಗುವುದು! ಇಂದು ರಾಷ್ಟ್ರೀಯ ಹೆದ್ದಾರಿಯ ಸುತ್ತಮುತ್ತಲ ಪರಿಸರ ಕಸದ ತೊಟ್ಟಿಯಂತಾಗಿ ನೋಡಿದರೆ ಅಸಹ್ಯವಾಗುತ್ತದೆ. ಗ್ರಾಮೀಣ ಪ್ರದೇಶದ ರಸ್ತೆ ಅಕ್ಕಪಕ್ಕ ಕುಡಿತದ ಬಾಟಲ್, ಪ್ಲಾಸ್ಟಿಕ್ ಬಾಟಲ್ ಕಸದಿಂದ ಗಬ್ಬೆದ್ದು ನಾರುತ್ತಿವೆ ಕನಿಷ್ಠ ಪಕ್ಷ ತಮ್ಮ ತಮ್ಮ ಕರ್ತವ್ಯವನ್ನಾದರೂ ಎಲ್ಲರೂ ನಿಭಾಯಿಸಿದ್ದರೆ ಹೀಗಾಗುತ್ತಿರಲಿಲ್ಲ. ಇನ್ನೂ ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿಗೆ ವಾಹನಗಳು ಇರುವುದೇನು ನಿಜ ಎಷ್ಟು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ? ಎಷ್ಟೋ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ವಾಹನಗಳೆ ಇಲ್ಲ; ವಾಹನಗಳಿದ್ದರೂ ಉದ್ಘಾಟನೆಗೊಳ್ಳದೆ ಕಾರ್ಯನಿರ್ವಹಣೆಗೆ ಇನ್ನೂ ಇಳಿದಿಲ್ಲ, ನಿರ್ವಹಣೆಗೆ ಅನುದಾನವಿಲ್ಲ! ಸಾರ್ವಜನಿಕ ಸ್ಥಳಗಳಲ್ಲಿ ಕಸದ ತೊಟ್ಟಿಗಳಿಲ್ಲ; ಶಾಲೆ ಕಾಲೇಜು ಓದುವ ಮಕ್ಕಳಿಗೆ ಸಾಮಾಜಿಕ ಕಳಕಳಿ ಎನ್ನುವುದು ಇಲ್ಲವೇ ಇಲ್ಲ. ಪೆಪ್ಸಿ, ಚಿಪ್ಸ್ ಯಾವುದೇ ಬಗೆಯ ಜಂಕ್ ಫುಡ್ ತಿಂದರೂ ಬೇಕಾಬಿಟ್ಟಿ ರಸ್ತೆ ಬದಿಯಲ್ಲಿ ಎಸೆದು ಹೋಗುವ ಇವರ ಮನಸ್ಥಿತಿಗೆ ದೊಡ್ಡವರ ಬೇಜವಾಬ್ದಾರಿಯು  ಕಾರಣವಾಗಿದೆ. ಗಾಂಧೀಜಿಯವರು ಸ್ವಚ್ಛತೆಗೆ ಅತ್ಯಂತ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿ ವಿಶ್ವ ವಿಖ್ಯಾತರಾಗಿದ್ದರು, ಹೀಗಾಗಿ ಸ್ವಚ್ಛತೆ ಎಂಬುದು ಗಾಂಧೀ ಜಯಂತಿ ದಿನಕ್ಕೆ ಸೀಮಿತವಾಗಿ ಉಳಿದ ದಿನಗಳಲ್ಲಿ ಮತ್ತೆ ಮಾಮೂಲಿ ಎಂಬಂತಾಗಿದೆ .ಕೇಂದ್ರ ಸರಕಾರದ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸಮಾಜದಲ್ಲಿ ಒಂದಿಷ್ಟು ಸುಧಾರಣೆ ಬದಲಾವಣೆ ಕಂಡುಬಂದರೂ ಬಹುತೇಕರ ಮನಸ್ಥಿತಿ ಒಂದಿನಿತೂ ಬದಲಾಗಿಲ್ಲ.  ಅದೆಷ್ಟೋ ಸಂಘ-ಸಂಸ್ಥೆಗಳು, ಸಾಮಾಜಿಕ ಕಳಕಳಿಯುಳ್ಳವರು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಆದರೆ ಸಾವಿರ ಕೈಗಳು ಮಾಡಿ ಬಿಸಾಕಿದ ಕಸದ ರಾಶಿಯನ್ನು ಎರಡು ನಾಲ್ಕು ಕೈಗಳು ಸ್ವಚ್ಛಗೊಳಿಸಲು ಸಾಧ್ಯವೇ? ಈ ಬಗ್ಗೆ ಅದೆಷ್ಟೋ ಬಾರಿ ಗ್ರಾಮ ಪಂಚಾಯಿತಿ, ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ದೂರು ನೀಡಿದಾಗಲೂ ಏನೂ ಪ್ರಯೋಜನವಾಗುತ್ತಿಲ್ಲ . ಎಲ್ಲೆಂದರಲ್ಲಿ ಕಸ ಬಿಸಾಕುವ ಸಾರ್ವಜನಿಕರಿಗೆ, ಉದ್ಯಮಿಗಳಿಗೆ ದಂಡ ವಿಧಿಸುವ ಕಟ್ಟುನಿಟ್ಟಿನ ಕ್ರಮ ಕೈಗೊಂಡರಷ್ಟೇ ಬದಲಾವಣೆ ಸಾಧ್ಯವಾಗಬಹುದು.  ಹೊಸದಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸುವಂತಾಗಬೇಕು.ಪ್ಲಾಸ್ಟಿಕ್ ಎಂಬ ಹೆಮ್ಮಾರಿ ಇಡೀ ಭೂಮಂಡಲವನ್ನು ವ್ಯಾಪಿಸಿ ಜೀವ ಸಂಕುಲವನ್ನು ನಾಶಪಡಿಸುವ ಮೊದಲು ಜನ,  ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡರೆ ಒಳಿತು. ಸುಧಾ ಹಡಿನಬಾಳ

ಪ್ಲಾಸ್ಟಿಕ್ ನಿಷೇಧ ಕಾಯ್ದೆ!!
bottom of page