ಪ್ರೀತಿಯೆಂದರೆ............
ಮನಸಿನ ಭಾವನೆಗಳನ್ನೆಲ್ಲ ಹರಿಯ ಬಿಟ್ಟು ಒಂದು ಅರೆ ಕ್ಷಣ ನಿರಾಳವಾಗಿ ಉಸಿರಾಡಿದ ಕ್ಷಣವಿದು. ಪ್ರೀತಿಯ ಮಾತುಗಳೆಲ್ಲ ಮನದಲ್ಲೆ ಹುದುಗಿದರೂ ಏನೋ ಖುಷಿ. ಹೇಳುವ ಸಮಯಕ್ಕಾಗಿ ಕಾತುರ. ಕೌತುಕ ಕೂಡ. ಅವನ ಆಗಮನಕ್ಕಾಗಿ ಆಕೆ ಕಾಯುತ್ತಿದ್ದಾಳೆ. ಕನಸನ್ನೆಲ್ಲ ಹರಿವಿಕೊಂಡು, ಮುಖದಲ್ಲಿ ಮಂದಹಾಸ. ಆಕೆಯೂ ಒಳ್ಳೆ ಕೆಲಸದಲ್ಲಿದ್ದಾಳೆ. ಇಂಜಿನೀಯರ್ ಬೇರೆ. ನೋಡಲು ತಕ್ಕ ಮಟ್ಟಿಗೆ ಸುಂದರವಾಗಿದ್ದಾಳೆ. ಬೆಳೆದಿದ್ದೆಲ್ಲ ಹಳ್ಳಿಯಲ್ಲಾದರೂ ನಗರ ಜೀವನಕ್ಕೂ ಹೊಂದಿಕೊಂಡಿದ್ದಾಳೆ. ಓದಿದ್ದು ವಿಜ್ಞಾನವಾದರೂ ಸಾಹಿತ್ಯ, ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾಳೆ. ಬಿಡುವಿನ ವೇಳೆಯಲ್ಲಿ ಕತೆ,ಕಾದಂಬರಿ ಓದುವ ಆಕೆ ಅಲ್ಲಿನ ನಾಯಕಿಯ ಬ್ರಮೆಯಲ್ಲಿ ಒಮ್ಮೊಮ್ಮೆ ತೇಲುತ್ತಿರುತ್ತಾಳೆ. ಮೊನ್ನೆ ಕಂಪನಿಯಲ್ಲಿ ಸಂಬ್ರಮ. ವಾರ್ಷಿಕೋತ್ಸವದ ಆಚರಣೆ. ಆಕೆ ಹಾಡನ್ನು ಹಾಡಿದ್ದಳು. ಆಗಾಗ ಮೊಬೈಲಿನಲ್ಲಿ ಸೆರೆ ಹಿಡಿದ ಅವನ ಮುಖ ನೋಡುತ್ತಿದ್ದಳು. ತನ್ನಷ್ಟಕ್ಕೆ ತಾನೇ ಸಂತಸಗೊಳ್ಳುತ್ತಿದ್ದಳು. ಮನೆಗೆ ಬಂದರೆ ಕಾಫಿ ಕುಡಿದು ಅವನ ಕಳಿಸಿದ ಮೆಸೇಜ್ ಕಡೆ ಕಣ್ಣಾಡಿಸುತ್ತಿದ್ದಳು. ಆದರೆ ಈಗ ಒಂದು ವಾರದಿಂದ ಅವನಿಂದ ಯಾವ ಮೆಸೇಜ್ ಬಂದಿರಲಿಲ್ಲ. ಆಕೆ ಆಪೀಸಿಗೆ ರಜೆ ಹಾಕಿದ್ದಳು. ಮನಸ್ಸು ಸರಿಯಿರಲಿಲ್ಲ. ಊರಿನ ದಾರಿ ಹಿಡಿದಿದ್ದಳು. ದೂರದಿಂದಲೇ ನೋಡಿದ ತಮ್ಮ ಓಡುತ್ತಲೇ ಬಂದು ಬ್ಯಾಗ್ ತಗೆದುಕೊಂಡ. ಹೇಗಿದ್ದೀಯಾ? ಅಕ್ಕ.ಎಂದ. ಚೆನ್ನಾಗಿದ್ದೀನಿ ಕಣೋ....ನೀನು ಹೇಗೆ ಓದುತ್ತಿದ್ದೀಯಾ?ಎಂದಳು. ಪರ್ವಾಗಿಲ್ಲ...ಪಾಸಾಗುತ್ತಿದ್ದೇನೆ ಎಂದ. ಅಮ್ಮಾ....ಎನೇ ಸ್ವಲ್ಪ ಸೊರಗಿದ್ದೀಯಾ. ಊಟ ಚೆನ್ನಾಗಿ ಮಾಡ್ತಾ ಇಲ್ಲವಾ? ಎಂದು ಕೇಳಿದರು. ಮಾಡ್ತಿದಿನಮ್ಮಾ.... ಕಂಪನಿಯಲ್ಲಿ ತುಂಬಾ ಕೆಲಸ...ಅಷ್ಟೇ ಅಂದಳು. ಅಪ್ಪ...ಮನೆಯಲ್ಲಿ ಇರಲಿಲ್ಲ. ತೋಟಕ್ಕೆ ಹೋಗಿದ್ದರು. ಆಕೆ ಗದ್ದೆಯೆಲ್ಲಾ ಓಡಾಡಿದಳು. ಪಕ್ಕದಲ್ಲಿದ್ದ ಗೆಳತಿ ಅನುರಾಧಳ ಮನೆಗೆ ಹೋಗಿದ್ದಳು. ಹೈಸ್ಕೂಲ್,ಕಾಲೇಜು ಇಬ್ಬರೂ ಒಟ್ಟಿಗೆ ಓದಿದ್ದರು. ಒಳ್ಳೆಯ ಸಂಬಂಧ ಬಂದಿದ್ದರಿಂದ ಅನುರಾಧಳ ಮದುವೆಯಾಗಿತ್ತು. ಈಗ ಆಕೆ ಪುಟ್ಟ ಮಗುವಿನ ತಾಯಿ. ಗೆಳತಿ ನೋಡಿದ ಕೂಡಲೇ ಇಬ್ಬರ ಮುಖದಲ್ಲೂ ಖುಷಿ. ಇವತ್ತು ನಮ್ಮ ಮನೆಯಲ್ಲೆ ಊಟ ಮಾಡಿಕೊಂಡು ಹೋಗಬೇಕು ಎಂದು ದುಂಬಾಲು ಬಿದ್ದರು. ಆಕೆಯೂ ಅಲ್ಲೆ ಇರುವ ನಿರ್ಧಾರ ಮಾಡಿದಳು. ಮಗು ತೊಟ್ಟಿಲಲ್ಲಿ ಮಲಗಿತ್ತು. ಆಕೆಯ ರೀತಿಯೇ ಕಾಣುತ್ತಿತ್ತು. ಸಂಸಾರದಲ್ಲಿ ಖುಷಿಯಾಗಿದ್ದೇನೆ. ಕೈ ಹಿಡಿದವನು ತುಂಬಾ ಒಳ್ಳೆಯವನು. ನನ್ನ ತುಂಬಾ ಪ್ರೀತಿಸುತ್ತಾನೆ ಎಂದಳು. ಗೆಳತಿಯ ಜೀವನ ಕಂಡು ಆಕೆಯೂ ಸಂತಸಗೊಂಡಳು. ನಿನ್ನ ಮದುವೆ ಯಾವಾಗ? ಬೇಗ ಊಟ ಹಾಕಿಸು ಎಂದಳು. ಆಕೆ ಸರಿ ಎಂದಳು. ಆದರೂ ಮನಸ್ಸಿನ್ನಲ್ಲಿ ತಾನು ಪ್ರೀತಿಸಿದ ಅವನು ಸಿಗುತ್ತಾನೋ ಇಲ್ಲವೋ ಎನ್ನುವ ಆತಂಕ ಆಕೆಯನ್ನು ಕಾಡುತ್ತಿತ್ತು. ಇಬ್ಬರೂ ಊಟಕ್ಕೆ ಕುಳಿತಿದ್ದರು ಅಷ್ಟೊತ್ತಿಗೆ ಮಗುವಿನ ಅಳು.....ಬಂದೆ ಪುಟ್ಟಾ ಎಂದು ಗೆಳತಿ ಹೊರಟಳು....ಕಣ್ಣು ಪಿಳಿ ಪಿಳಿ ಮಿಟಿಕಿಸುತ್ತ ಬಂದ ಮಗು ಅಂಬೆ ಹರಿಯುತ್ತಿತ್ತು. ತನ್ನ ಊಟದ ಪ್ಲೇಟಿನಲ್ಲೆ ತುತ್ತು ತಿನ್ನಿಸಿದಳು. ಆಕೆಗೆ ತನ್ನ ಬದುಕು ಅವನ ಜೊತೆ ಹೀಗೆ ಇದ್ದರೆ? ಪುಟ್ಟ ಮಗು ಜೊತೆಯಲ್ಲಿದ್ದರೆ? ಮನಸ್ಸಿನಲ್ಲೇ ಅಂದುಕೊಂಡಳು. ಮಗು ಎತ್ತಿಕೊಂಡು ಸಕ್ಕರೆ ತಿನ್ನಿಸಿ ದುಡ್ಡು ಕೊಟ್ಟು ಬಂದಳು. ಅಮ್ಮಾ ಗೆಳತಿ ಅನುರಾಧ ತುಂಬಾ ಖುಷಿಯಾಗಿದ್ದಾಳೆ. ಕಾಲೇಜಿನ ದಿನಗಳನ್ನೆಲ್ಲ ನೆನಪಿಸಿಕೊಂಡಳು. ಆಕೆಯ ಮಗು ತುಂಬಾ ಚೆನ್ನಾಗಿ ಇದೆ ಎಂದಳು. ನೀನು ಅವಳು ಒಂದೆ ಓರಗೆಯವರು. ಆಕೆಗೆ ಮದುವೆಯಾಗಿ ಮಗುನೂ ಆಯ್ತು. ನೀನು ಯಾವಾಗ್ಲೆ ಮದುವೆಯಾಗೋದು ಎಂದರು. ಆಕೆ ಏನೂ ಹೇಳದೆ ಸುಮ್ಮನಾದಳು. ಮುಖ ಬಾಡಿತು. ಆಚೆ ಊರಿನ ಶಂಕರನ ಮಗ ಚಿನ್ನಾಗಿ ಓದಿದ್ದಾನೆ. ಒಳ್ಳೆ ಕೆಲಸದಲ್ಲಿದ್ದಾನೆ. ನಿನ್ನ ಜಾತಕ ಕೇಳ್ತಾ ಇದ್ದರು. ಕೊಡೋಣ ಅಂದ್ಕೋಂಡಿದೀವಿ ಎಂದರು. ಅಲ್ಲದೇ ನಿಮ್ಮ ಅಪ್ಪನಿಗೂ ತುಂಬಾ ಮನಸ್ಸಿದೆ. ಎಲ್ಲ ಸರಿ ಹೋದರೆ ಮುಂದಿನ ತಿಂಗಳೆ ಲಗ್ನ ಕಾಯಂ ಮಾಡೋಣ ಎಂದರು. ಅಕೆ ಸ್ವಲ್ಪ ತಡೀಯಮ್ಮಾ ನಾನು ಹೇಳ್ತೀನಿ ಎಂದಳು.... ಊರಿನಿಂದ ಬಂದ ಆಕೆ ಅವನು ಕೆಲಸ ಮಾಡುವ ಆಫೀಸಿನ ಕಡೆ ಕಣ್ಣು ಹಾಯಿಸಿದ್ದಳು. ಅವನು ಬಂದಿರಲಿಲ್ಲ. ಇನ್ನೂ ಒಂದು ವಾರವಾಗತ್ತೆ ಎಂದು ಆಫೀಸಿನ ಪ್ಯೂನ್ ಹೇಳಿದ. ಆಕೆ ಸಪ್ಪೆ ಮುಖದೊಂದಿಗೆ ಕಂಪನಿಗೆ ಹೊರಟಳು. ಕೆಲಸ ಮುಗಿಸಿ ಹತ್ತಿರದಲ್ಲೆ ಇದ್ದ ಪಾರ್ಕಗೆ ಹೋದಳು. ಅವನ ಜೊತೆ ಚುರುಮುರಿ ತಿಂದ ನೆನಪಾಯಿತು. ಅವನ ನಗು, ತಮಾಷೆ, ಆಗಾಗ ಬರುವ ಕೋಪ ಎಲ್ಲವನ್ನು ನೆನಪಿಸಿಕೊಂಡಳು. ಅವನದ್ದು ಪ್ರೀತಿಯಾ? ಇಲ್ಲ ಗೆಳತನವಾ? ಆಕೆಗೆ ಅನುಮಾನವಿತ್ತು. ಆದರೆ ಆಕೆ ಮಾತ್ರ ಅವನನ್ನು ತುಂಬಾ ಪ್ರೀತಿಸುತ್ತಿದ್ದಳು. ಅವತ್ತು ಅವನ ಆಫೀಸಿನಲ್ಲಿ ಯಾರೂ ಇರಲಿಲ್ಲ. ಅವನು ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿದ್ದ. ಆಕೆ ತನ್ನ ಪ್ರೀತಿಯನ್ನು ಹೇಳಿ ಬಿಡಬೇಕು ಎಂದು ಕಾಯುತ್ತಿದ್ದಳು...ಅಷ್ಟೊತ್ತಿಗೆ ಅವನಿಗೆ ಪೋನ್ ಬಂತು. ಆಕೆ ಸುಮ್ಮನೆ ಎದ್ದು ಬಂದಿದ್ದಳು. ಅವನು ಪೋನ್ ಮಾಡಿ ಎನೋ ಹೇಳಲು ಬಂದಿದ್ದೆಯಲ್ಲಾ ಎನು? ಅಂದ. ಆಕೆ...ಅದು..ಅದು..ಏನಿಲ್ಲ. ಇನ್ನೊಂದು ದಿನ ಹೇಳುತ್ತೇನೆ ಎಂದು ಫೋನ್ ಇಟ್ಟಿದ್ದಳು. ಆಕೆಗೆ ಅವನ ನೆನಪಿನಲ್ಲಿ ಸಮಯ ಜಾರಿದ್ದೆ ತಿಳಿಯಲಿಲ್ಲ. ಲಗುಬಗೆಯಿಂದ ಮನೆ ಕಡೆ ಹೆಜ್ಜೆ ಹಾಕಿದಳು. ಕಂಪನಿಯಲ್ಲಿ ಕೆಲಸ ಹೆಚ್ಚಾಗಿತ್ತು.ಅಲ್ಲದೇ ಆಕೆ ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಬೇಕಿತ್ತು. ಅವನಿಗೆ ಪೋನ್ ಮಾಡಿದಳು. ಸ್ವಿಚ್ ಆಪ್ ಬಂತು. ಆಕೆ ಎರಡು ತಿಂಗಳ ಕೆಲಸದ ಮೇಲೆ ವಿದೇಶಕ್ಕೆ ಹೋದಳು. ಅವನು ಆಫೀಸಿಗೆ ಬಂದಿದ್ದ. ನಿಮ್ಮನ್ನು ಹುಡುಕಿಕೊಂಡು ಹುಡುಗಿ ಬಂದಿದ್ದಳು ಎಂದು ಪ್ಯೂನ್ ಹೇಳಿದ. ಅವನು ಯಾರು? ಅಂದುಕೊಂಡು ಮೊಬೈಲ್ ನೋಡಿದ. ಆಕೆ ಫೋನ್ ಮಾಡಿದ್ದು ತಿಳಿಯಿತು. ತಕ್ಷಣ ಪೋನ್ ಮಾಡಿದ. ಸ್ವಿಚ್ ಆಪ್ ಬಂತು. ಆಕೆಯ ಕಂಪನಿಗೆ ಹೋದ.....ಆಕೆ ವಿದೇಶಕ್ಕೆ ಹೋಗಿರುವುದು ತಿಳಿಯಿತು. ನಿಮ್ಮನ್ನು ಆಕೆ ತುಂಬಾ ಮಿಸ್ ಮಾಡ್ಕೋತಾ ಇದ್ದಳು...ಎಂದು ಅಕೆಯ ಗೆಳತಿ ಗೀತಾ ಹೇಳಿದಳು. ಅವನು ಯೋಚನೆಗೆ ಬಿದ್ದ. ಆಕೆ ಏನಾದರೂ ನನ್ನನ್ನು ಪ್ರೀತಿಸುತ್ತಿದ್ದಾಳೆಯೆ? ಅವನ ಮನಸ್ಸು ಗೊಂದಲಗೊಂಡಿತ್ತು. ಸೀದಾ ಮನೆಗೆ ಬಂದಿದ್ದ. ಅವನ ಮನೆಯಲ್ಲಿ ಸಂಬಂಧದಲ್ಲಿಯೇ ಒಂದು ಹುಡುಗಿ ನಿಶ್ಚಯವಾಗಿದ್ದಳು. ಮನೆಯಲ್ಲ ಎಲ್ಲರೂ ಆಕೆಯನ್ನು ಒಪ್ಪಿಕೊಂಡಿದ್ದರು. ಇವನ ಒಪ್ಪಿಗೆಗಾಗಿ ಕಾಯುತ್ತಿದ್ದರು. ನೋಡು ನಾವು ಅವರಿಗೆ ಒಪ್ಪಿಗೆ ತಿಳಿಸಬೇಕು.. ಅವರು ನಮ್ಮ ಉತ್ತರಕ್ಕೆ ಕಾಯುತ್ತಿದ್ದಾರೆ ಎಂದು ಅಪ್ಪ ಅವನ ಹತ್ತಿರ ಹೇಳುತ್ತಿದ್ದರು. ಅಲ್ಲದೇ ಬೇಗ ನಿನ್ನ ಅಭಿಪ್ರಾಯ ತಿಳಿಸು ಎಂದು ಒತ್ತಾಯಿಸಿದ್ದರು .ಅವನು ಒಂದು ವಾರದ ಸಮಯ ಕೇಳಿದ್ದ. ಆಕೆಗೆ ದಿನಾ ಒಂದು ಸಲ ಪೋನ್ ಮಾಡುತ್ತಿದ್ದ. ಆದರೆ ತಾಗುತ್ತಿರಲಿಲ್ಲ. ಅವನು ಆಕೆ ಇದ್ದ ಮನೆ ಕಡೆ ನಡೆದ. ಆಕೆ ವಿದೇಶಕ್ಕೆ ಹೋದ ಸುದ್ಧಿ ತಿಳಿಸಿದರು. ಒಳಗಡೆ ಯಾರಿದ್ದಾರೆ ಎಂದ. ಆಕೆಯ ರೂಮ್ ಮೇಟ್ ಎಂದರು. ಅವನು ಓನರ್ ಹತ್ತಿರ ಮಾತನಾಡಬಹುದಾ?ಎಂದ. ಅವರು ಹೋಗಿ ಎಂದರು. ಅವನು ತನ್ನ ಪರಿಚಯ ಹೇಳಿಕೊಂಡ. ಅವನು ಆಕೆಯ ಬಗ್ಗೆ ಕೇಳಿದ. ಅವಳು ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದಾಳೆ. ಒಂದು ದಿನ ನಿಮ್ಮ ಸುದ್ದಿಯಿಲ್ಲದೇ ಆಕೆ ಮಲಗುತ್ತಿರಲಿಲ್ಲ. ನಿಮ್ಮ ಇಷ್ಟದ ಕಲರ್, ನಿಮ್ಮ ಇಷ್ಟದ ತಿಂಡಿ, ನಿಮ್ಮ ಮಾತು, ನಗು, ಎಲ್ಲವನ್ನು ಹೇಳುತ್ತಿದ್ದಳು. ನೀವು ಊರಿಗೆ ಹೋದಾಗಿನಿಂದ ಸ್ವಲ್ಪ ಮಂಕಾಗಿದ್ದಳು. ಆಕೆಗೂ ಮನೆಯಲ್ಲಿ ಬೇರೆ ಗಂಡು ನೋಡುತ್ತಿದ್ದಾರೆ.. ನೀವು ಆದಷ್ಟು ಬೇಗ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ರೂಮ್ ಮೇಟ್ ಹೇಳಿ ಹೊರಟಳು. ಅವನು....ಒಮ್ಮೆಲೆ ಖುಷಿಗೊಂಡ. ಅಂದರೆ ಆಕೆ ತನ್ನನ್ನು ಪ್ರೀತಿಸುತ್ತಿದ್ದಾಳೆ. ಅವನು ಮೊಬೈಲ್ ನಲ್ಲಿದ್ದ ತಮ್ಮಿಬ್ಬರ ಸೆಲ್ಪಿ ನೋಡಿಕೊಂಡ. ಮನೆಯಲ್ಲಿ ಹೇಳಿ ಬಿಡಬೇಕು...ತಾನು ಆಕೆಯನ್ನೆ ಮದುವೆಯಾಗುತ್ತೇನೆಂದು. ಅವನು ಆಕೆಯ ಬರುವಿಕೆಯನ್ನು ಕಾಯುತ್ತಿದ್ದ. ಆಕೆ ವಿದೇಶದಲ್ಲಿ ಕೆಲಸದಲ್ಲಿ ಮುಳುಗಿ ಹೋಗಿದ್ದಳು. ಅಲ್ಲಿಯ ರೀತಿ ರಿವಾಜುಗಳಿಗೆ ಹೊಂದಿಕೊಳ್ಳುತ್ತಿದ್ದಳು. ಅವನ ನೆನಪಾಗುತ್ತಿತ್ತು. ಆದರೆ ಪೋನ್ ಮಾಡಿರಲಿಲ್ಲ. ಆಕೆಯ ರೂಮ್ ಮೇಟ್ ಅವನು ಬಂದು ವಿಚಾರಿಸಿಕೊಂಡು ಹೋಗಿರುವುದನ್ನು ಹೇಳಿದ್ದಳು. ಆಕೆ ನಿಜವಾದ ಪ್ರೀತಿ ಬಯಸಿದ್ದಳು. ಹೃದಯದ ಸಂವೇದನೆಗೆ ಒಳಪಡುವ ಪ್ರೀತಿ ಅವಳದಾಗಿತ್ತು. ಮನಸ್ಸಿನ ಆಳದಲ್ಲಿ ಅವನ ಕುರಿತು ಒಳ್ಳೆಯ ಭಾವನೆಗಳನ್ನು ಹೊಂದಿದ್ದಳು. ಜೀವನದ ಜೊತೆ ಅವನ ಸಾಂಗತ್ಯವನ್ನು ಬಯಸಿದ್ದಳು. ಬಹುಶ:ಅವನ ಬಿಟ್ಟು ಆಕೆ ಬೇರೆ ಯಾರನ್ನು ಕಲ್ಪಿಸಿಕೊಳ್ಳಲು ತಯಾರಿರಲಿಲ್ಲ. ಹೆಜ್ಜೆ ಹೆಜ್ಜೆಯಲ್ಲಿ ಅವನ ಗುರುತು ಕಾಣುತ್ತಿದ್ದಳು. ಪ್ರೀತಿಯೆಂದರೆ ತನ್ನನ್ನೆ ತಾನು ಕೊಟ್ಟುಕೊಳ್ಳುವುದು....ಆಕೆ ತಾನು ಓದಿದ ಕಾದಂಬರಿಯ ಸಾಲುಗಳನ್ನು ಮೆಲಕು ಹಾಕುತ್ತಿದ್ದಳು. ಅವನು ಆಕೆಯ ಕಂಪನಿಯಲ್ಲಿ ವಿಚಾರಿಸುತ್ತಿದ್ದ. ಆಕೆ ಬರುವ ದಿನಕ್ಕಾಗಿ ಕಾಯುತ್ತಲೇ ಇದ್ದ. ತಾನು ಪ್ರೀತಿಸುತ್ತಿರುವ ವಿಷಯವನ್ನು ಆಕೆಗೆ ಹೇಳಿ ಬಿಡಬೇಕು....ಅವನು ಆ ಕ್ಷಣಕ್ಕಾಗಿ ಕಾತರಿಸುತ್ತಿದ್ದ. ಆಕೆ ಭಾರತದ ವಿಮಾನ ಏರಿದ್ದಳು .ಕಂಪನಿಯ ಕೆಲಸವನ್ನು ತುಂಬ ಶ್ರದ್ದೆಯಿಂದ ಮಾಡಿದ್ದಳು. ಆಕೆ ಕಂಪನಿಗೆ ಬಂದು ತಕ್ಷಣ ರಜೆ ಪಡೆದು ಊರಿಗೆ ಹೊರಟಿದ್ದಳು .ಆಕೆ ಮನೆಗೆ ಬಂದಾಗ ಅಪ್ಪ, ಅಮ್ಮ ,ತಮ್ಮನಿಗೆ ಖುಷಿಯೋ ಖುಷಿ. ವಿದೇಶದಿಂದ ಆಕೆ ಎಲ್ಲರಿಗೂ ಗಿಪ್ಟ ತಂದಿದ್ದಳು. ನಿನ್ನ ಮದುವೆ ಮಾಡಿಕೊಳ್ಳಲು ಅವರಿಗೆ ಒಪ್ಪಿಗೆ ಇದೆ ಕಣೆ.....ನಿನ್ನ ಒಪ್ಪಿಗೆ ತಿಳಿಸು ಎಂದು ಅಮ್ಮ ಹೇಳಿದ್ದರು. ಆಕೆ ಸರಿನಮ್ಮ ಎಂದಿದ್ದಳು. ಆದರೆ ಮನಸ್ಸು ಮತ್ತೆ ಮತ್ತೆ ಅವನನ್ನೆ ಬಯಸುತ್ತಿತ್ತು. ಆಕೆ ಎಂದಿನಂತೆ ತೋಟಕ್ಕೆ ಹೋಗಿ ಕಲ್ಲುಬಂಡೆಯ ಮೇಲೆ ಕುಳಿತಿದ್ದಳು. ಪಕ್ಕದಲ್ಲೆ ಇದ್ದ ಕೆರೆಗೆ ಕಲ್ಲು ಒಗೆಯುತಿದ್ದಳು. ಓಡಿ ಬಂದ ತಮ್ಮ ಅಕ್ಕ ನಿನ್ನ ಹುಡುಕಿಕೊಂಡು ಯಾರೊ ಬಂದಿದ್ದಾರೆ. ನೋಡಲು ತುಂಬ ಸುಂದರವಾಗಿದ್ದಾರೆ. ಬಾರೆ ಅಕ್ಕ ಎಂದ. ಆಕೆ ಯಾರಿರಬಹುದು? ಎಂದು ಕುತೂಹಲದಿಂದಲೇ ಹೋದಳು. ಒಳಗೆ ಬಂದು ನೋಡಿದರೆ ಅವನು.....ಆಕೆಗೆ ಒಮ್ಮೆ ದಿಗಿಲಾಯಿತು....ನೀವು.ಇಲ್ಲಿ? ಅಂದಳು. ಅವನು ಮುಗಳ್ನಕ್ಕ. ನಿಮ್ಮ ಜೊತೆ ಮಾತನಾಡಬೇಕಿತ್ತು ಎಂದ. ಆಕೆ ಬನ್ನಿ ಇಲ್ಲೆ ನಮ್ಮ ತೋಟವಿದೆ ಎಂದು ಕರೆದುಕೊಂಡು ಹೋದಳು. ಅವನು ಇಲ್ಲಿನ ಪರಿಸರ ತುಂಬಾ ಚೆನ್ನಾಗಿದೆ....ಜೊತೆಗೆ ನೀವೂ ಕೂಡ ಎಂದ. ಆಕೆ ನಕ್ಕಳು. ವಿದೇಶದ ಅನುಭವ ಹೇಳಿ ಎಂದ. ಆಕೆ ಕೆಲಸ, ಅಲ್ಲಿಯ ಜನ, ಜೊತೆಗೆ ನಿಮ್ಮ ನೆನಪು...ಎಂದಳು. ಅವನು ನಾನು ನೀವು ಬರುವ ದಾರಿಯನ್ನೆ ಕಾಯುತ್ತಿದ್ದೆ ಎಂದ. ಆಕೆ ಏಕೆ?ಎಂದಳು. ಅವನು ನಾನೆ ಮೊದಲು ಹೇಳಬೇಕ?ಎಂದ. ಆಕೆ ಸುಮ್ಮನಿದ್ದಳು. ಹಕ್ಕಿಯ ಚಿಲಿಪಲಿ ಗಾನ, ನೀರಿನ ಝಳುಝುಳು ನಾದ, ತಂಪಾದ ತಂಗಾಳಿ ಅವರ ನಡುವಿತ್ತು. ಅವನು ಆಕೆಯ ಕೈ ಹಿಡಿದ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದ. ಆಕೆ ಕಣ್ಣಲ್ಲಿ ನೀರು. ಅವನ ಕೈಯನ್ನು ಕಣ್ಣಿಗೆ ಒತ್ತಿಕೊಂಡಳು. ಮೌನವಾದಳು. ಅವನು ಮಾತನಾಡುವದಿಲ್ಲವಾ? ನಗುವಿಲ್ಲಮುಖದಲ್ಲಿ ಎಂದ. ಆಕೆ ನಾನು ನಿನ್ನನ್ನು ತುಂಬಾ ತುಂಬಾ ಪ್ರೀತಿಸುತ್ತೇನೆ ಎಂದು ಅವನ ಕೆನ್ನೆ ಚಿವುಟಿದಳು.ಮೊದಲೇ ಬೆಳ್ಳಗಿದ್ದ ಅವನ ಮುಖ ಕೆಂಪು ಕೆಂಪಾಯಿತು. ಆಗಸದ ತುಂಬ ಶುಭ್ರ ಬೆಳಕು. ಇಬ್ಬರ ಮುಖದಲ್ಲೂ ಖುಷಿಯ ಮಂದಹಾಸ.ಇಬ್ಬರ ನಡೆಯಲ್ಲೂ ಮಾಸದ ಪ್ರೀತಿಯ ಹೆಜ್ಜೆ ಗುರುತು. - ಎನ್.ಆರ್.ರೂಪಶ್ರೀ. ಶಿರಸಿ ಮೂಲತಃ ಶಿರಸಿಯವರಾದ ಶ್ರೀಮತಿ ಎನ್.ಆರ್.ರೂಪಶ್ರೀಯವರು ಪ್ರತಿಭಾನ್ವಿತ ಲೇಖಕಿ. ಕತೆ, ಕವನಗಳಲ್ಲದೇ , ಆಧ್ಯಾತ್ಮಿಕ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಈಗಾಗಲೇ ಎರಡು ಕವಿತಾ ಸಂಕಲನ, ಮೂರು ಕಥಾ ಸಂಕಲನ ಹಾಗೂ ಒಂದು ಆಧ್ಯಾತ್ಮಿಕ ಲೇಖನಗಳ ಸಂಗ್ರಹವನ್ನು ಅವರು ಹೊರ ತಂದಿದ್ದಾರೆ. ಇವರಿಗೆ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲಾ ಭಕ್ತಿ ಸಾಹಿತ್ಯ ಪ್ರಶಸ್ತಿ, ಉಡುಪಿಯ ಮಲ್ಲಿಗೆ ಮುಗುಳು ಸಾಹಿತ್ಯ ಪ್ರಸಸ್ತಿ, ಸಂಚಯ ಕಾವ್ಯ ಪ್ರಶಸ್ತಿ, ರಾಜೀವ ಗಾಂಧಿ ಏಕತಾ ಪ್ರಶಸ್ತಿ, ಮಹಿಳಾ ಹಿತರಕ್ಷಣಾ ವೇದಿಕೆ ನೀಡುವ ಝಾನ್ಸಿ ಲಕ್ಷ್ಮೀಬಾಯಿ ಪ್ರಶಸ್ತಿ, ಮೈಸೂರಿನ ಸಾಹಿತ್ಯ ಸಿಂಧು ಪ್ರಶಸ್ತಿ, ಶಿರಸಿ ತಾಲೂಕ ರಾಜ್ಯೋತ್ಸವ ಪ್ರಶಸ್ತಿ, ಹವ್ಯಕ ಮಹಾ ಸಭಾ ವಿಶೇಷ ಸಾದನಾ ಪ್ರಶಸ್ತಿ [ ಎರಡು ಬಾರಿ ], ಧಾರವಾಡದ ಆರೂಢ ಜ್ಯೋತಿ ಪ್ರಶಸ್ತಿ, ಲೇಖಿಕಾ ಪುರಸ್ಕಾರ – ಹೀಗೆ ಸಾಕಷ್ಟು ಪ್ರಶಸ್ತಿ-ಪುರಸ್ಕಾರಗಳು ದೊರೆತಿವೆ. ಪ್ರಸ್ತುತದಲ್ಲಿ ಇವರು ಮೈಸೂರಿನಲ್ಲಿ ವಾಸವಾಗಿದ್ದಾರೆ - ಸಂಪಾದಕ