top of page

ಪೂರ್ಣಚಂದ್ರನಿಲ್ಲದ ಹಾದಿ ಹೊರಳಿ ನೋಡುತ್ತಾ......

[ ಮಹಾನ್ ಪ್ರತಿಭಾವಂತ ಲೇಖಕ ದಿ.ಪೂಚಂತೆಯವರ ಜನುಮದಿನದ ಪ್ರಯುಕ್ತ ಲೇಖಕರಾದ ಶ್ರೀ ಸಂಗಮೇಶ ಗಣಿಯವರು ಆಲೋಚನೆಗೆ ಕಳಿಸಿದ ಲೇಖನವನ್ನು ತಮ್ಮ ಮುಂದೆ ಪ್ರಸ್ತುತ ಪಡಿಸಲು ಸಂತಸವೆನಿಸುತ್ತದೆ -ಸಂಪಾದಕ] ಅವರು ಮನಸ್ಸು ಮಾಡಿದ್ದರೆ ನಾಡಿನ ಅಕಾಡಿಮಿಕ್ ವಲಯದಲ್ಲಿ ಗುರುತಿಸಿಕೊಂಡು, ಉನ್ನತ ಹುದ್ದೆ ಅಲಂಕರಿಸಿ, ತಮ್ಮ ಪಾಡಿಗೆ ತಾವು ಹಣ-ಹೆಸರು ಮಾಡಿಕೊಂಡು ಇದ್ದು ಬಿಡಬಹುದಾಗಿತ್ತು. ಅಷ್ಟೆ ಅಲ್ಲ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಬೆಳೆಯಬಹುದಾಗಿತ್ತು. ಆದರೆ ಅವರು ಹಾಗೆ ಬದುಕಿದ್ದರೆ ಇವತ್ತು ನಾಡಿನ ವಿದ್ವತ್‍ವಲಯಕ್ಕೆ ಹಾಗೂ ಶ್ರೀಸಾಮಾನ್ಯ ಓದುಗನ ಪಾಲಿಗೆ ಒದಗುತ್ತಿರಲಿಲ್ಲ. ತಮ್ಮೊಳಗನ್ನು ಪ್ರಶ್ನಿಸಿಕೊಳ್ಳುತ್ತಲೇ ಬೆಳೆದ ಅವರು ತಮ್ಮದೆ ಆದ ದೃಷ್ಟಿ-ಧೋರಣೆಗಳನ್ನು ಹೊಂದಿ, ಜೀವನ ರೂಪಿಸಿಕೊಂಡು ಮಾದರಿಯಾಗಬಲ್ಲ ಬದಕನ್ನು ನಿರ್ಭಿಡೆಯಿಂದ ನಡೆಸಿದವರು ಪೂರ್ಣಚಂದ್ರ ತೇಜಸ್ವಿ. ಇಂದು ತೇಜಸ್ವಿ ಅವರ ಜನ್ಮದಿನ (ಸೆಪ್ಟಂಬರ್-8, 1938) ಕನ್ನಡ ನವೋದಯ ಸಾಹಿತ್ಯದ ಮೇರು ಶಿಖರ ಪ್ರತಿಭೆ ಕುಂವೆಂಪು ಅವರ ಮಗನಾಗಿ ಅವರ ಪ್ರಭಾವದಿಂದ ದೂರ ಉಳಿದುಕೊಂಡೇ ತಮ್ಮ ಪ್ರತಿಭೆ, ಶ್ರಮ ಶ್ರಧ್ಧೆಗಳಿಂದಲೇ ನಾಡಿನ ಸಾಹಿತ್ಯಿಕ ವಲಯದಲ್ಲಿ ತುಂಬ ವಿಶಿಷ್ಟವಾಗಿ ಗುರುತಿಸಿಕೊಂಡ ಮಹಾನ್ ಲೇಖಕ ಪೂಚಂತೇ, ನಾಡಿನ ಒಂದು ಕಾಲ ಘಟ್ಟದ ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ಕ್ಷೇತ್ರಗಳಿಗೆ ವೈಚಾರಿಕ ಮತ್ತು ವೈಜ್ಞಾನಿಕ ನೆಲೆಗಟ್ಟನ್ನು ನೀಡಿದ ಅದಕ್ಕೊಂದು ರೀತಿಯ ಭಿನ್ನ ಪ್ರಭಾವಳಿಯನ್ನೆ ತಂದುಕೊಟ್ಟ ಕೀರ್ತಿ ಅವರದು. ಅಂತ ಮಹಾನ್ ಪ್ರತಿಭೆ ತೇಜಸ್ವಿ ಅವರು ಈ ನಾಡಿನ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಲೋಕಕ್ಕೆ ನೀಡಿದ ಅನನ್ಯ ಸೇವೆಯನ್ನು ಪುನರ್‍ಅವಲೋಕಿಸುವುದು ಅವರ ಜನ್ಮದಿನಾಚರಣೆಯ ಈ ಹೊತ್ತಲ್ಲಿ ಮುಖ್ಯವೆನಿಸುತ್ತದೆ. ತೇಜಸ್ವಿ ನವ್ಯಕಾಲದಲ್ಲಿ ಸಾಹಿತ್ಯ ಕೃಷಿಗೆ ತೊಡಗಿದರಾದರೂ, ಅವರ ಸಮಕಾಲೀನ ಬರಹಗಾರರಾದ ಪಿ.ಲಂಕೇಶ, ಶಾಂತಿನಾಥ ದೇಸಾಯಿ, ಯು.ಆರ್.ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗ ಮುಂತಾದವರಿಗಿಂತ ಭಿನ್ನವಾಗಿ ಬಾಳಿ ಬದುಕಿ ಬರೆದವರು. ನಂತರ ನವ್ಯದ ಕೊಂಡಿ ಕಳಚಿಕೊಂಡು, ಸಾಹಿತ್ಯದ ಪಾರಂಪರಿಕ ಅಭಿವ್ಯಕ್ತಿಯ ಸಾಧ್ಯತೆಗಳನ್ನು ಮೀರಿ, ತಮ್ಮದೆ ಆದ ದೃಷ್ಟಿ-ಧೊರಣೆಗಳನ್ನು ಪಡೆದು, ಸಾಹಿತ್ಯದ ಸಾಧ್ಯತೆಗಳನ್ನು ಸಾಧಿಸಿ ತೋರಿಸುತ್ತಲೇ ಬೆಳೆದು ಬಂದರೆಂಬುದನ್ನು ಅವರ ಹಲವಾರು ಕೃತಿಗಳೇ ಸಾಕ್ಷಿಕರಿಸುತ್ತವೆ. ತಮ್ಮ ತಂದೆಯ ಪ್ರಭಾವದಿಂದ ದೂರ ಉಳಿದು, ಒಂದು ರೀತಿಯ ಸವಾಲನ್ನೂ ಎದುರಿಸಿ, ಸ್ವಂತ ನಿಲುವು-ನಿರ್ಧಾರಗಳಿಂದ ಮೂಡಿಗೆರೆ ಕಾಡಿಗೆ ಬಂದು ನೆಲೆ ನಿಂತ ತೇಜಸ್ವಿ ' ಕಾಡಿನ ಕಿಂಡಿಯ ಮೂಲಕ ಇಡೀ ವಿಶ್ವದ ಜೀವ-ಜಗತ್ತಿನ ನಾಡಿ ಮಿಡಿತಗಳನ್ನು ಕಂಡು ಅವಕ್ಕೆ ಸ್ಪಂದಿಸುತ್ತಲೇ ಪ್ರಕೃತಿಯಲ್ಲಿನ ಜೀವ ವೈವಿಧ್ಯತೆಯಂತೆಯೇ ತಮ್ಮ ಬರವಣಿಗೆಯಲ್ಲೂ ವೈವಿಧ್ಯತೆಯನ್ನು ಪ್ರಜ್ಞಾಪೂರ್ವಕವಾಗಿ ಪಡಮೂಡಿಸಿದವರು ಪೂಚಂತೇ. ಮೂಡಿಗೆರೆ ಕಾಡಿಗೆ ಬಂದ ಬಗ್ಗೆ ತಮ್ಮ 'ಪರಿಸರ ಕತೆ' ಕೃತಿಯ ಮುನ್ನುಡಿಯಲ್ಲಿ ಹೇಳಿಕೊಂಡಂತೆ-" ಲಾಭದ ಉದ್ದೇಶದಿಂದ ಇಲ್ಲಿ ಕಾಫಿ ತೋಟ ಮಾಡಲಿಲ್ಲ. ಅಲ್ಲದೇ ಹಳ್ಳಿಗೆ ಮರಳಬೇಕೆಂಬ ಆದರ್ಶವಾಗಲಿ, ವ್ಯವಸಾಯದ ಮೇಲಿನ ಪ್ರೀತಿಯಿಂದಾಗಲಿ ಮೂಡಿಗೆರೆಯಲ್ಲಿ ಕೃಷಿ ವ್ಯವಸಾಯ ಮಾಡಿಕೊಂಡು ನೆಲೆಸಲಿಲ್ಲ. ಬದಲಿಗೆ ಯಾರ ಹಂಗು, ಭಯ, ಬೈಗಳಗಳ ಕಾಟವಿಲ್ಲದೇ ಕಾಡು-ಮೇಡು ಅಲೆದುಕೊಂಡು ಇರಬೇಕು ಎಂಬದೊಂದೇ ಮಖ್ಯ ಕಾರಣ" ಎಂದಿದ್ದಾರೆ. ಅವರ ಈ ಅಭಿಪ್ರಾಯ ಇಡೀ ಅವರ ವ್ಯಕ್ತಿತ್ವ ರೂಪಣೆಯ ಹಿಂದಿನ ಸೂತ್ರಪ್ರಾಯ ಮಾತೆಂದರೂ ತಪ್ಪಾಗಲಾರದು. ಅವರು ಬದುಕಿದ್ದೂ ಕೂಡ ಹಾಗೇ!. ಪ್ರಕೃತಿ ಮಡಿಲ ಮೂಡಿಗೆರೆ ಕಾಡಿನಲ್ಲಿ ಬದುಕನ್ನು ಕಟ್ಟಿಕೊಂಡು, ತಮ್ಮ ಜೀವನವನ್ನು ಹೊಸ ಹೊಸ ಪ್ರಯೋಗಗಳಿಗೆ ಒಳಗು ಮಾಡಿಕೊಳ್ಳುತ್ತಲೇ ಸಾಗಿ, ಹೊಸ ಅನ್ವೇಷಣಾ ದೃಷ್ಟಿಕೋನವನ್ನು ತಮ್ಮದಾಗಿಸಿಕೊಂಡ ತೇeಸ್ವಿ, ಇಡೀ ಜಗತ್ತಿನ ಎಲ್ಲಾ ತರಹದ ಜ್ಞಾನಕ್ಷೇತ್ರಗಳಿಗೆ ಅಲ್ಲಿಂದಲೇ ಕಿವಿ ಮತ್ತು ಕಣ್ಣಾದವರು. ಅವರ ಮುಂದಿನ ಸಾಧನೆಗೆ ತಕ್ಕ ಭೂಮಿಕೆಯು ಸಿದ್ದವಾದುದು ಸಹ ಅಲ್ಲಿಯೇ!. ವ್ಯಕ್ತಿಯು ವ್ಯಷ್ಟಿಯಿಂದ ಸಮಷ್ಟಿ ಕಡೆಗೆ ಸಾಗಿದಾಗಲೇ ಸಮಷ್ಟಿ ಕೇಂದ್ರಿತ ದೃಷ್ಟಿಕೋನ ಲಭ್ಯವಾಗಿ, ಬದುಕು ಸಮಷ್ಟಿಪರ ಶ್ರಮಿಸಲು ಪ್ರಯತ್ನಿಸುತ್ತದೆ ಎನ್ನುವ ಮಾತು ಸತ್ಯ. ಆ ಹಿನ್ನೆಲೆಯಲ್ಲಿ ಪ್ರಕೃತಿ ಮಧ್ಯ ಬದುಕುತ್ತಿದ್ದ ತೇಜಸ್ವಿ ಅವರು, ಸುತ್ತಣ ಜೀವ ಜಗತ್ತಿನ ಪ್ರತಿ ಮಿಡಿತಕ್ಕೂ, ಪ್ರತಿ ಸಂವೇದನೆಗೂ ಸ್ಪಂದಿಸಲು ಸಾಧ್ಯವಾಗಿದ್ದೂ ಸಹ ಅಲ್ಲಿಂದಲೇ!. ತಮ್ಮ ಪ್ರಜ್ಞೆಯ ಕಣ್ಣಿನಿಂದ ಪ್ರಪಂಚ ಕಂಡು, ತಮ್ಮ ಸಾಹಿತ್ಯಿಕ ಕೃತಿಗಳಲ್ಲಿ ಕಂಡರಿಸಲು ಸಾಧ್ಯವಾದದ್ದು ಅವರ ನಿರ್ಭಿಡೆ, ನಿರಾತಂಕ ಹಾಗೂ ಯಾರ ಹಂಗಿಗೂ ಒಳಗಾಗದೇ ಬದುಕಿದ್ದರ ಫಲವೆಂಬುದನ್ನು ಅಲ್ಲಗಳೆಯಬೇಕಿಲ್ಲ. ಮುಂದೆ ತಮ್ಮ 'ಅಬಚೂರಿನ ಫೋಸ್ಟಾಫೀಸು" ಕೃತಿಯ ಮುನ್ನುಡಿಯ "ಹೊಸದಿಗಂತದೆಡೆಗೆ' ಎನ್ನುವ ಮಾತಿನಲ್ಲಿ ಹೇಳಿಕೊಂಡಿರುವಂತೆ- " ಲೋಹಿಯಾ ಅವರ ತತ್ವ ಚಿಂತನೆ, ಕುಂವೆಂಪು ಅವರ ಕಲಾಸೃಷ್ಟಿ, ಕಾರಂತರ ಜೀವನ ದೃಷ್ಟಿ ಮತ್ತು ಪ್ರಯೋಗಶೀಲತೆ ಈ ಮೂರೇ ನನ್ನ ಈಚೀನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿರುವವು" ಎಂಬ ಅಭಿಪ್ರಾಯ ಮುಂದಿನ ಅವರ ಬದುಕು ಮತ್ತು ಬರಹಗಳಿಗೆ ಕಾರಣವಾಗಿದೆ ಎಂಬುದನ್ನು ಕನ್ನಡ ಸಾಹಿತ್ಯಿಕ ಸಾಂಸ್ಕøತಿಕ ವಲಯಗಳು ಗುರುತಿಸುತ್ತಲೇ ಬಂದಿವೆ. ಅವರ ನಿಷ್ಠುರ ನಿಲುವು, ನಡೆ-ನುಡಿ, ನೋಟ, ಆಸಕ್ತಿ-ಅಭಿರುಚಿ ಎಲ್ಲವೂ ಕಾಡಿನಂತೆ ವಿಸ್ಮಯ-ನಿಗೂಢ. ಹಾಗಂತ ಅವರನ್ನು ನಾಡ ಬದುಕಿನ ವಿರೋಧಿ ನಿಲುವುಳ್ಳ ವ್ಯಕ್ತಿ ಎಂದು ತಿಳಿದುಕೊಳ್ಳಬೇಕಿಲ್ಲ. ಕಾಡ ಬದುಕಿನ ಜೀವವೈವಿಧ್ಯತೆ ಕಂಡ ಅವರು, ನಾಡ ಮನುಷ್ಯನ ಜೀವನ ಕ್ರಮ, ಸಕಲ ಜೀವಜಾಲದ ಬಗ್ಗೆ ಅದಮ್ಯ ಕುತೂಹಲ ಹೊಂದಿದ್ದರು. ಅಷ್ಟೇ ಅಲ್ಲ, ವೈವಿಧ್ಯಮಯ ಜೀವಜಗತ್ತಿನ ಪ್ರತಿ ನಡೆಯನ್ನೂ ವಸ್ತುನಿಷ್ಠ ಹಾಗೂ ವೈಚಾರಿಕ ವೈಜ್ಞಾನಿಕ ದೃಷ್ಟಿಯಿಂದ ನೋಡಿದ ತೇಜಸ್ವಿ, ಕಾಡು ಮತ್ತು ನಾಡುಗಳ ನಡುವಿನ ಎಲ್ಲ ತರಹದ ಸೂಕ್ಷ್ಮ ಸಂವೇದನೆಗಳನ್ನು ಮುಖಾಮುಖಿಗೊಳಿಸುವ ಮೂಲಕ ಅಚ್ಚರಿಯುಂಟು ಮಾಡುತ್ತಾರೆ. ತೇಜಸ್ವಿ ಅವರ ಬರಹ ಜೀವಪರವಾದುದು, ಪ್ರಯೋಗಶೀಲವಾದುದು, ಮಾನವೀಯಪರವಾದುದು. " ಮಾನವನ ಘನತೆ, ಸೃಜನಶೀಲತೆಯನ್ನು ಯಾವುದೇ ಜಾತಿ ಕೇಂದ್ರಿತ, ವರ್ಗ ಕೇಂದ್ರಿತ ಚೌಕಟ್ಟಿಗೆ ಸೀಮಿತವಾದ ವ್ಯವಸ್ಥೆ ನಾಶಮಾಡುತ್ತದೆ" ಎಂಬ ಲೋಹಿಯಾ ಮತ್ತು ಅಂಬೇಡ್ಕರರ ಆಶಯದ ತಾತ್ವಿಕ ನೆಲೆಗಟ್ಟಿನ ಮೇಲೆ ತೇಜಸ್ವಿ ಅವರ ಸಾಹಿತ್ಯ ಸೃಷ್ಟಿ ಆಗಿದೆ. ಜಾತಿ ವರ್ಗ ಲಿಂಗ ಮುಂತಾದ ಸಂಕುಚಿತ ಸೀಮೆಗಳನ್ನು ದಾಟಿ, ಶ್ರೀಸಾಮಾನ್ಯ ಜನ ಸಮುದಾಯಗಳ ಸಂವೇದನೆಗಳಿಗೆ ತಮ್ಮ ಕೃತಿಗಳಲ್ಲಿ ಜೀವಂತಿಕೆ ತರುವ ಪ್ರಯತ್ನ ಮಾಡಿದ್ದಾರೆ. ತೇಜಸ್ವಿ ಅವರದು ಮೂಲತ: ಕಥಾ ಪ್ರತಿಭೆ. ಅವರ ಕಥನ ಕ್ರಮವೇ ವೈಶಿಷ್ಟ್ಯಪೂರ್ಣ. ಕನ್ನಡ ಕಥಾ ಸಾಹಿತ್ಯದ ದಿಕ್ಕು, ವಿಷಯ ವಸ್ತು, ಸಂವಿಧಾನ, ಅಭಿವ್ಯಕ್ತಿಯ ಸಾಧ್ಯತೆಗಳನ್ನು ವಿಸ್ತರಿಸಿದ ಪ್ರಯತ್ನ ಅವರ ಕತೆ, ಕಾದಂಬರಿಗಳಲ್ಲಿ ಕಾಣುತ್ತೇವೆ. 'ಹುಲಿಯೂರಿನ ಸರಹದ್ದು, ಅಬಚೂರಿನ ಫೋಸ್ಟಾಫೀಸು, ಕಿರಗೂರಿನ ಗಯ್ಯಾಳಿಗಳು, ಪರಿಸರದ ಕತೆ, ಪಾಕ ಕ್ರಾಂತಿ ಕಥಾ ಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ತೇಜಸ್ವಿ ಅವರು, ಮನುಷ್ಯ ಬದುಕಿನ ಆಯಾಮಗಳನ್ನು ಮತ್ತು ಮನುಷ್ಯನನ್ನೇ ಒಂದು ತಾತ್ವಿಕ ವೈಶಿಷ್ಟ್ಯತೆಯ ಪ್ರತೀಕವಾಗಿ ಕಾಣುವ ಮನೋಧರ್ಮ ವ್ಯಕ್ತಪಡಿಸಿದ್ದಾರೆ. 'ಸೋಮುವಿನ ಸ್ವಗತ ಲಹರಿ' ಎಂಬ ಕವನ ಸಂಕಲನ ಪ್ರಕಟಿಸಿದ ತೇಜಸ್ವಿ, 'ಯಮಳ ಪ್ರಶ್ನೆ' ಎಂಬ ಅಸಂಗತ ನಾಟಕ ರಚಿಸಿ ಆ ಮೂಲಕ ಬದುಕು-ಸಾವು, ಹಸಿವು, ಕ್ರೂರ ವ್ಯವಸ್ಥೆಗಳ ಕುರಿತು ಹಲವು ಮಹತ್ವದ ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತಾರೆ. ಈ ನಾಟಕ ಮಾನವೀಯತೆಯ ಸ್ಥಾಪನೆಯ ಉದ್ದೇಶವನ್ನು ತನ್ನೊಡಲೊಳಗೆ ಗರ್ಭೀಕರಿಸಿಕೊಂಡಿದೆ. ಸ್ವರೂಪ, ನಿಗೂಢ ಮನುಷ್ಯರು, ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಮಾಯಾಲೋಕ ಕಾದಂಬರಿಗಳು ತೇಜಸ್ವಿ ಅವರ ವೈವಿಧ್ಯಮಯವಾದ ವಿಷಯ ವಸ್ತು, ನಿರೂಪಣೆ, ಪತ್ತೆದಾರಿ ಕಥನ ಶೈಲಿ, ಪ್ರಕೃತಿ-ಮಾನುಷ್ಯ ಸಮಾಜಗಳ ಮುಖಾಮುಖಿ, ಕೆಳ ಸಮುದಾಯಗಳ ತಲ್ಲಣ-ತಳಮಳಗಳನ್ನು ಪ್ರಕಟಪಡಿಸುವ ಪ್ರಾತನಿಧಿಕ ಪಾತ್ರಗಳ ನಿರ್ಮಾಣ, ಪ್ರಕೃತಿಯ ನಿಗೂಢತೆಯೊಂದಿಗೆ ಬದುಕಿನ ನಿಗೂಢತೆಯನ್ನು ಸಮೀಕರಿಸುವ, ಮೌಲ್ಯ ನಿರ್ಣಯಿಸುವ, ಒಂದು ರೀತಿಯ ಅಂತ:ಸಂಬಂಧದ ಬೆಸುಗೆ ಮೂಡಿಸುವ ಪ್ರಯತ್ನಗಳಾಗಿ ತೋರುತ್ತವೆ. ಇವರ ಬಹುತೇಕ ಕಾದಂಬರಿಗಳು ಕೃಷಿ, ವ್ಯವಸಾಯ, ಆರ್ಥಿಕ, ಸಾಮಾಜಿಕ, ಜಾಗತೀಕರಣ, ಉದಾರೀಕರಣ ಮುಂತಾದ ವಸ್ತು ವೈವಿಧ್ಯತೆಯಿಂದಾಗಿ ಕನ್ನಡ ಕಾದಂಬರಿ ಲೋಕಕ್ಕೆ ತೀರ ಹೊಸತೆನ್ನುವಷ್ಟು ಗಮನ ಸೆಳೆಯುತ್ತವೆ. ಲೇಖಕ, ವಿಜ್ಞಾನಿ, ರಾಜಕಾರಣಿ ಆದವರು ತಮ್ಮ ಆತ್ಮವಂಚನೆ ಮಾಡಿಕೊಳ್ಳದೆ ಸತ್ಯವನ್ನು ನಿಷ್ಠುರವಾಗಿ ಮತ್ತು ಧಿಮಂತಿಕೆಯಿಂದ ನಿರ್ವಹಿಸುವದರಿಂದಲೇ ಪ್ರಮಾಣಿಕತನದಿಂದ ಕೂಡಿದ ಕಾರ್ಯಕಗಳು ಪ್ರಜ್ಞಾಪೂರ್ವಕವಾಗಿ ನಡೆಯಲು ಸಾಧ್ಯವಾಗುತ್ತದೆ ಎನ್ನುವ ಅವರ 'ವ್ಯಕ್ತಿವಿಶಿಷ್ಟ ಸಿದ್ದಾಂತ' ಕೃತಿ ವಿಚಾರವಂತರ, ವಿವೇಚನಾಶೀಲರ ಚಿಂತನೆಗೆ ತೊಡಗಿಸುವಲ್ಲಿ ಯಶ ಕಂಡಿದೆ. ಇವತ್ತಿನ ರಾಜಕೀಯ ಸಾಮಾಜಕ ವ್ಯವಸ್ಥೆಯಲ್ಲಿನಪ್ರಭುತ್ವಶಾಹಿ, ಆಡಳಿತಶಾಹಿಗಳು ಒಮ್ಮೆ ಈ ವಿಚಾರಗಳ ಬಗ್ಗೆ ಅವಲೋಕಿಸಿಕೊಳ್ಳುವ ಜರೂರಿದೆ. ಲೋಹಿಯಾ-ಅನುವಾದ, ವಿಮರ್ಶೆಯ ವಿಮರ್ಶೆ- ವಿಮಾರ್ಶಾ ಸಂಕಲನ, ಅಲೆಮಾರಿ ಅಂಡಮಾನ್ ಮತ್ತು ಮಹಾನದಿ ನೈಲ್- ಪ್ರವಾಸ ಕಥನ, ಅಣ್ಣನ ನೆನಪುಗಳು- ಜೀವನಚರಿತ್ರೆ, ಸಹಜ ಕೃಷಿ- ಕೃಷಿ ಚಂತನೆ, ಕಾಡಿನ ಕಥಾ ಮಾಲಿಕೆ ಮತ್ತು ಪ್ಯಾಪಿಲಾನ್ ಸಾಹಿತ್ಯ ಸರಣಿ- ಸಂಗ್ರಾಹಾನುವಾದ, ಪರಿಸರ ಕಥಾ ಸಾಹಿತ್ಯ, ಮಿಸ್ಸಿಂಗ್ ಲಿಂಕ್ ಮತ್ತು ಫ್ಲೈಯಿಂಗ್ ಸಾಸರ್ಸ್ ಸರಣಿ- ವೈಜ್ಞಾಣಿಕ ಸಾಹಿತ್ಯ, ಪರಿಸರ ವಿಸ್ಮಯ ಮಾಲಿಕೆ, ಪರಿಸರ ಮತ್ತು ಪಕ್ಷಿಲೋಕ, ಮಾಯೆಯ ಮುಖಗಳು-ಪೋಟೋಗ್ರಾಫಿ, ಮಿಲಿನಿಯಂ ಪುಸ್ತಕ ಸರಣಿ ಹೀಗೆ ವಿಫುಲ ಸಾಹಿತ್ಯ ಕೃಷಿಗೈದ ತೇಜಸ್ವಿ ಅವರದು ವಿಶಿಷ್ಟ ವಸ್ತುನಿಷ್ಠ ವೈಜ್ಞಾನಿಕ, ವೈಚಾರಿಕ ಪ್ರತಿಭೆ ಎಂಬುದು ಅವರ ಮೇಲಿನ ಕೃತಿಗಳು ಪುಷ್ಟಿಕರೀಸುತ್ತವೆ. ಕೃಷಿಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡ ತೇಜಸ್ವಿ ಅವರ ಜೀವನಕ್ಕೆ ಹತ್ತು ಹಲವು ಆಸಕ್ತಿ-ಅಭಿರುಚಿಯ ಮುಖಗಳಿದ್ದು, ಅವರ ಪ್ರಯೋಗಶೀಲ, ಕುತೂಹಲಭರಿತ ಬದುಕೇ ಅಗಾಧ ಪ್ರಮಾಣದ ಬರವಣಿಗೆಗೆ ಕಾರಣವಾಗಿದೆ. ಸಮಾಜವಾದಿ ಚಳುವಳಿ, ಜಾತಿ ವಿನಾಶ ಸಮ್ಮೇಳನ, ರೈತ ಚಳುವಳಿ ಮುಂತಾದ ಹೋರಾಟದ ಭಾಗವಾಗಿ ಬೆಳೆದು ಬಂದ ತೇಜಸ್ವಿ, ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿದವರು. ಬರವಣಿಗೆಯ ಮೂಲಕ ಧ್ವನಿ ಆದವರು. ಪರಿಣಾಮವಾಗಿ ಸಮಾಜ ವಿರೋಧಿ ನಿಲುವುಳ್ಳ ವಿಚಾರ ಹಾಗೂ ವಿಚಾರವಂತರು, ಚಿಂತಕರೆಂದು ಬಡಾಯಿ ಕೊಚ್ಚಿಕೊಳ್ಳವವರ ವಿರುದ್ಧ, ಎಷ್ಟೋ ಸಾರಿ ಮಹಾನ್ ಸಾಹಿತಿಗಳ ಅಸಮಂಜಸವೆನಿಸುವ ಅಭಿಪ್ರಾಯ, ಕೃತಿಗಳ ಬಗ್ಗೆಯೂ ಎದೆಸೆಟಿಸಿ ಪ್ರತಿಕ್ರಿಯಿಸುವ ಮತ್ತು ವಿರೋಧಿಸುವ ಛಾತಿ ಅವರಿಗಿತ್ತು. ಅದ್ವೈತ ದೃಷ್ಟಿಕೋನ ಹೊಂದಿದ್ದ ತಮ್ಮ ತಂದೆ ಕುವೆಂಪು ಅವರು ತಮ್ಮ ' ವಿಶ್ವಮಾನವ ಸಂದೇಶ'ವನ್ನು ಬರೆಯುವ ಹೊತ್ತಿಗೆ " ಪ್ರತಿಯೊಬ್ಬ ಮನುಷ್ಯನಿಗೆ ಅವನದೆ ಆದ ಒಂದು ಸ್ವತಂತ್ರ ಧರ್ಮ ಇರಬೇಕು" ಎಂಬ ತೀರ್ಮಾಣಕ್ಕೆ ಬರುವಲ್ಲಿ ತಾವು ವ್ಯಕ್ತಪಡಿಸಿದ ಪ್ರತಿರೋಧವೇ ಕಾರಣ ಎಂದು ತೇಜಸ್ವಿ ಒಂದೆಡೆ ಹೇಳಿಕೊಳ್ಳುತ್ತಾರೆ. 'ಕಲಾ ನಿರ್ಮಿತಿ ಎಂದರೆ ಬರಹಗಾರನಿಗೆ ತನ್ನ ಭಾಷೆಯ, ಕಾಲದ, ದೇಶದ ಸಾಧ್ಯತೆಗಳನ್ನು ಅರಿಯುವ ಮತ್ತು ಮೀರುವ ಕ್ರಿಯೆ' ಎನ್ನುವ ಮಾತಿನಂತೆ ತೇಜಸ್ವಿ ತಮ್ಮ ಸಾಹಿತ್ಯ ನಿರ್ಮಿತಿಯಲ್ಲಿ ಅಂತ ಅದ್ಭುತ ಕಲಾಕೃತಿಗಳನ್ನು ನಾಡಿನ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ವಲಯಗಳಿಗೆ ನೀಡಿದ್ದಾರೆ ಅದನ್ನು ಮೀರಿ!. " ಮಾನವನ ಅಭ್ಯಾಸ ತಿಳುವಳಿಕೆ, ಕಲಿಯುವಿಕೆ ಇವೆಲ್ಲಾ ವ್ಯಷ್ಟಿಯನ್ನು ಸಮಷ್ಟಿಯಲ್ಲಿ ವಿಲೀನಗೊಳಿಸುವುದರಿಂದ ವ್ಯಕ್ತಿ ವಿಶಿಷ್ಟತೆಯ ಸಂವೇನೆ ಅತ್ಯಂತ ಸ್ವಂತ ದರ್ಶನವಾಗಿ ತೋರುತ್ತದೆ" ಎನ್ನುವ ತೇಜಸ್ವಿ ಅವರು, ತತ್ವ-ಪಂಥಗಳು ಭಾರತದಲ್ಲಿ ಬರಹಗಾರನ ಅಭಿವ್ಯಕ್ತಿಯ ಮೇಲೆ ಮಾತ್ರ ಪ್ರಬಾವ ಬೀರುವುದಿಲ್ಲ. ಅವನ ಗ್ರಹಣಶಕ್ತಿಯನ್ನೂ, ವ್ಯಕ್ತಿತ್ವವನ್ನೂ ತಿರುಚಿ ವಿಕಲಗೊಳಿಸುತ್ತದೆ" ಎನ್ನುವ ಎಚ್ಚರಿಕೆ ಇಟ್ಟುಕೊಂಡೇ ಬದುಕಿದರು ಎನ್ನುವುದು ನಿಜವಾದರೂ, ಜಾಗತೀಕರಣವನ್ನು ವಿರೋಧಿಸುವ ತಮ್ಮ ಮನೋಧರ್ಮವನ್ನು ತಮ್ಮ ಕೊನೆಗಾಲದಲ್ಲಿ ಬದಲಿಸಿಕೊಂಡು ಬದುಕಿದರೆನ್ನುವುದು ಅವರ ಮಿತಿಯಂತೆಯೇ ಕಾಣಿಸುವುದು. ಇಷ್ಟೆಲ್ಲಾ ಸಾಧಿಸಿದರೂ ಪ್ರಚಾರಪ್ರೀಯತೆ, ಅಧಿಕಾರಗಳ ಯಾವುದೇ ರೀತಿಯ ಪ್ರಭಾವಗಳಿಗೂ ಎಡೆಗೊಡದೆ, ಕಾಡಿನಲ್ಲಿದ್ದ ತೇಜಸ್ವಿ ಕನ್ನಡದಲ್ಲಿ ಏನೂ ಇಲ್ಲ, ಇರುವುದೆಲ್ಲವೂ ಬೂಸಾ ಎನ್ನುವವರೂ, ಕನ್ನಡದಲ್ಲಿ ಸರ್ವಸಮಸ್ತವೂ ಇದೆ ಎನ್ನುವವರೂ ಕೊಂಚ ವಿವೇಕ ತೋರಿ ಮೌನವಹಿಸಿದ್ದೇ ಆದರೆ ನಮ್ಮ ಮುಂದಿರುವ ಅಗಾಧ ರಚನಾತ್ಮಕ ಜವಾಬ್ಧಾರಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದಂತೆ ಅದನ್ನು ಸಾಧ್ಯವಾಗಿಸಿದ ಮಹಾನ್ ನಿಸರ್ಗ ಚಿಂತಕ ಚೇತನ ಪೂಚಂತೇ ಅವರು ಮಾಡಿದ ಕಾರ್ಯಗಳನ್ನು ನಾಡಿನ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಲೋಕ ಮತ್ತೆ ಮತ್ತೆ ಅವಲೋಕಿಸಿಕೊಂಡು ಮುನ್ನಡೆಯಬೇಕಾದ ಅಗತ್ಯತೆಯಿದೆ. - ಸಂಗಮೇಶ ಎಸ್ ಗಣಿ ಶಿಕ್ಷಕರು, ಟಿಎಎಇಎಸ್ ಡಿಎವಿ ಪಬ್ಲಿಕ್ ಶಾಲೆ ಬಳ್ಳಾರಿ ರಸ್ತೆ, ಸಂಕ್ಲಾಪುರ-583201 ಹೊಸಪೇಟೆ- ಜಿಲ್ಲಾ-ಬಳ್ಳಾರಿ ಮೋ-9743171324

ಪೂರ್ಣಚಂದ್ರನಿಲ್ಲದ ಹಾದಿ ಹೊರಳಿ ನೋಡುತ್ತಾ......
bottom of page