top of page

ಪುಸ್ತಕ ಪರಿಚಯ

ಕಾಯ್ದೆಯ ಗೊಂಡಾರಣ್ಯದಲ್ಲಿ ಸಿಲುಕಿ ಕಳೆದುಹೋದ ಜೀವ " ಸವಿತಾ" *** ಗ್ರಂಥಕರ್ತರು: ಜ್ಯೋತಿ ಬದಾಮಿ ********* ಒಬ್ಬ ಪತ್ರಕರ್ತನಾಗಿ ನನಗಿನ್ನೂ ನೆನಪಿದೆ. ೨೦೧೨ ನೇ ಇಸ್ವಿ. ಐರ್ಲೆಂಡ್ ಎಂಬ ಪುಟ್ಟ ದೇಶದಲ್ಲಿ ಭಾರತೀಯ ಮೂಲದ , ಅದರಲ್ಲೂ ನಮ್ಮ ಬೆಳಗಾವಿಯ ಓರ್ವ ಮಹಿಳೆ , ಆ ದೇಶದ ಕುರುಡು ಕಾನೂನಿನಿಂದಾಗಿ ಜೀವ ಕಳೆದುಕೊಂಡಿದ್ದು , ಅದರ ವಿರುದ್ಧ ಹೋರಾಟ, ಪ್ರತಿಭಟನೆಗಳು ನಡೆದದ್ದು..ನ್ಯಾಯಾಲಯದ ಮೆಟ್ಟಿಲು ಹತ್ತಿದ ಆ ಪ್ರಕರಣ ಅಲ್ಲಿಯ ಕಾನೂನನ್ನೇ ಬದಲಿಸಲು ಕಾರಣವಾದದ್ದು... .ಎಲ್ಲ ಈಗಲೂ ಮರೆತಿಲ್ಲ. ಆ ಮಹಿಳೆಯ ಹೆಸರು ಸವಿತಾ. ಇದೀಗ ನನ್ನ ಕೈಯಲ್ಲಿರುವ ಈ ಪುಸ್ತಕ ಅಂದಿನ ಆ ನೈಜ ಘಟನೆಯನ್ನು ಹೃದಯಂಗಮವಾಗಿ ಬಣ್ಣಿಸುವ ಒಂದು ವಿಶಿಷ್ಟ ಕೃತಿ. ಇದು ಕತೆಯಲ್ಲ. ನಿಜವಾಗಿ ನಡೆದದ್ದು. ಬೆಳಗಾವಿಯ ಲೇಖಕಿ ಶ್ರೀಮತಿ ಜ್ಯೋತಿ ಬದಾಮಿಯವರು ಐತಿಹಾಸಿಕವಾಗಿ ದಾಖಲಾದ ಆ ಘಟನೆಯನ್ನು ಪುಸ್ತಕ ರೂಪದಲ್ಲಿ ಬರೆದು ನಮಗೆ ಓದಲು ನೀಡಿರುವದು ಸ್ವಾಗತಾರ್ಹ. ಸವಿತಾ ಮೂಲತಃ ಬಾಗಲಕೋಟೆಯವರಾದ ಅಂದಾನಪ್ಪಾ- ಅಕ್ಕಮಹಾದೇವಿ ಯಾಳಗಿ ದಂಪತಿಗಳ ಮಗಳು. ೧೯೯೦ ರಲ್ಲಿ ಬೆಳಗಾವಿಗೆ ಬಂದು ನೆಲೆಗೊಂಡವರು. ಸವಿತಾ ದಂತವೈದ್ಯಕೀಯ ಪದವಿ ಪಡೆದು ಹಾವೇರಿಯ ಪ್ರವೀಣ ಹಾಲಪ್ಪನವರ ಎಂಬ ಇಂಜಿನಿಯರ್ ನನ್ನು ಮದುವೆಯಾಗಿ ಐರ್ಲೆಂಡ್ ನಲ್ಲಿ ವಾಸ ಮಾಡುತ್ತಿದ್ದಳು. ಪ್ರವೀಣ ಅಲ್ಲಿಯ ಗಾಲವೇ ಎಂಬಲ್ಲಿ ಬಾಸ್ಟನ್ ಸೈಂಟಿಫಿಕ್ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದ. ಸವಿತಾ ಮದುವೆಯಾದ ನಂತರ ಅಲ್ಲಿಗೆ ಹೋಗಿ " ಇಇಎ" ಎಂಬ ವಿಶೇಷ ಪರೀಕ್ಷೆ ಮುಗಿಸಿ ಅಲ್ಲಿ ದಂತವೈದ್ಯೆಯಾಗಿ ಕೆಲಸ ಮಾಡುವ ಅರ್ಹತೆ ಗಳಿಸಿಕೊಂಡಿದ್ದಳು. ಅಷ್ಟರಲ್ಲಿ ಸವಿತಾ ಗರ್ಭವತಿಯಾಗಿದ್ದಳು. ಎಂಟನೆಯ ತಿಂಗಳಲ್ಲಿ ಅವಳ ಆರೋಗ್ಯದಲ್ಲಿ ಒಮ್ಮಿಂದೊಮ್ಮೆಲೇ ಏರುಪೇರಾಯಿತು. ಗರ್ಭಪಾತ ಮಾಡಿಸುವಂತಹ ಪರಿಸ್ಥಿತಿ. ಆದರೆ ಆ ದೇಶದಲ್ಲಿ ಗರ್ಭಪಾತಕ್ಕೆ ಕಾನೂನಿನ ಪ್ರಕಾರ ಅನುಮತಿಯಿಲ್ಲ. ಗರ್ಭಪಾತ ಮಾಡಿಸದಿದ್ದರೆ ಸವಿತಾಳ ಪ್ರಾಣಕ್ಕೆ ಅಪಾಯವಿತ್ತು. ಆದರೆ ಐರಿಶ್ ಸರಕಾರದ ಕ್ರಿಶ್ಚಿಯನ್ ಧರ್ಮಾಧಾರಿತ ಕಠೋರ ಕಾನೂನು ಕೊನೆಗೂ ಸವಿತಾಳನ್ನು ಬಲಿ ತೆಗೆದುಕೊಂಡೇಬಿಟ್ಟಿತು. ಅವಳ ಬದುಕುವ ಹಕ್ಕನ್ನು ಕಸಿದುಕೊಂಡಿತು. ೩೧ ನೆಯ ವಯಸ್ಸಿನಲ್ಲೇ ಆ ಮುಗ್ಧ ಹೆಣ್ಣುಮಗಳ ಬದುಕು ಮುಕ್ತಾಯಗೊಂಡಿತ್ತು. ಇದು ಆ ದೇಶದಲ್ಲಿ ಹೊಸದೊಂದು ಕೋಲಾಹಲವನ್ನೇ ಸೃಷ್ಟಿಸಿತು‌. ಕುರುಡು ಅಮಾನವೀಯ ಕಾನೂನಿನ ವಿರುದ್ಧ ಪ್ರಬಲ ಹೋರಾಟಕ್ಕೆ ಕಾರಣವಾಯಿತು. ಭಾರತೀಯರಂತೆ ಐರ್ಲೆಂಡ್ ಜನರೂ ಸಹ ಈ ಹೋರಾಟದಲ್ಕಿ ಪಾಲ್ಗೊಂ ಡರು. ಕಿಟ್ಟಿ ಹಾಲೆಂಡ್ ಎಂಬ ಪತ್ರಕರ್ತೆ ಹೋರಾಟದ ಮುಂಚೂಣಿಯಲ್ಲಿ ನಿಂತಳು. ಇದು ಜಾಗತಿಕವಾಗಿ ಸುದ್ದಿಯಾಯಿತು. ಇನ್ನೊಮ್ಮೆ ಸವಿತಾಳಂತಹ ಸಾವು ಇನ್ಯಾರಿಗೂ ಬರಬಾರದು ಎಂಬುದೇ ಎಲ್ಲರ ಕಳಕಳಿ ಯಾಗಿತ್ತು. ಐರ್ಲೆಂಡ್ ಸರಕಾರದ ಮೇಲೇ ಕೊಲೆಗಡುಕತನದ ಆರೋಪ ಬಂದು ಸರಕಾರ ತೀವ್ರ ಮುಜುಗರಕ್ಕೊಳಗಾಗಿತ್ತು. ನಿರಂತರ ಆರು ವರ್ಷಗಳ ಕಾಲ ನಡೆದ ಈ ಕಾನೂನು ಹೋರಾಟ ೨೦೧೮ ಡಿಸೆಂಬರ್ ತಿಂಗಳಲ್ಲಿ ಯಶಸ್ಸು ಪಡೆದು ಐರ್ಲೆಂಡ್ ಸಂಸತ್ತು ಗರ್ಭಪಾತ ವನ್ನು ಕಾನೂನುಬದ್ಧಗೊಳಿಸುವ ಮಸೂದೆ ಸ್ವೀಕರಿಸಿತು. ಅಷ್ಟಾದರೂ ಆ ದೇಶದ ಪರಿಸ್ಥಿತಿಯಲ್ಲಿ ಪೂರ್ತಿ ಬದಲಾವಣೆಯೇನೂ ಆಗಿಲ್ಲ. ಅತ್ಯಾಧುನಿಕ ದೇಶಗಳಲ್ಕೂ ಹೇಗೆ ಕೆಲವೊಂದು ಮೂಢನಂಬಿಕೆಗಳು ವ್ಯಾಪಿಸಿಕೊಂಡಿರುತ್ತವೆನ್ನುವದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ‌ ಕಿಟ್ಟಿ ಹಾಲೆಂಡ್ ಅವರು ಈ ಇಡೀ ಪ್ರಕರಣವನ್ನು ಎಳೆಎಳೆಯಾಗಿ ಇಂಗ್ಲಿಷ್ ನಲ್ಲಿ ( Savita the Tregedy that shook the nation) ಬರೆದಿದ್ದಾರೆ. ಅದನ್ನು ಆಧರಿಸಿ ಜ್ಯೋತಿ ಬದಾಮಿಯವರು ಕನ್ನಡಿಗರಿಗೂ ಆ ಪ್ರಕರಣದ ಅರಿವು ಉಂಟಾಗುವಂತೆ ಮಾಡಿದ್ದಾರೆ. ಪುಸ್ತಕ ನೇರ ಅನುವಾದವಲ್ಲ. ತಮ್ಮದೇ ಶೈಲಿಯಲ್ಲಿ ಬರೆದಿದ್ದಾರೆ. ಓದುತ್ತ ಓದುತ್ತ ನಮ್ಮ ಕಣ್ಣು ಒದ್ದೆಯಾಗದೇ ಇರದು. ಹಲವು ಕಾರಣಗಳಿಗಾಗಿ ಇದು ಎಲ್ಲರೂ‌ ಓದಲೇಬೇಕಾದ ಪುಸ್ತಕ. ಮುದ್ದಾಂ ತರಿಸಿಕೊಂಡು ಓದಿ. ಯಾವುದೇ ದೇಶವಿರಲಿ, ಯಾವುದೇ ಕಾಯ್ದೆ ಕಾನೂನು ರಚಿಸುವಾಗಲೂ ಅದು ಮನುಷ್ಯ ವಿರೋಧಿ ಧೋರಣೆ ಒಳಗೊಂಡಿರಬಾರದು. ಮನುಷ್ಯನ ಬದುಕುವ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಬದುಕು ಎಲ್ಲರಿಗೂ ಮುಖ್ಯ. ನಂತರ ಕಾನೂನು. ಸವಿತಾ ತಾನು ಸತ್ತು ತನ್ನಂತಹ ಹಲವು ಜೀವಿಗಳ ಪ್ರಾಣ ಉಳಿಸುವದಕ್ಕೆ ಪ್ರೇರಣೆಯಾಗಿ ಅಮರಳಾಗಿದ್ದಾಳೆ. ಕನ್ನಡಿಗರಿಗೂ ಈ ಘಟನೆಯನ್ನು ಅರಿಯಲು ಅವಕಾಶ ಮಾಡಿಕೊಟ್ಟ ಜ್ಯೋತಿ ಬದಾಮಿಯವರಿಗೆ ಧನ್ಯವಾದಗಳು. ಸವಿತಾ ಜಗದೊಳಗೆ ನೀನು- ನಿನ್ನೊಳಗೆ ಜಗತ್ತು ************ ಪುಟ:೧೭೨ ಬೆಲೆ: ೨೦೦/- ರೂ. ಜ್ಯೋತಿ ಪ್ರಕಾಶನ, ಬೆಳಗಾವಿ ಮೊ. ನಂ. ೯೮೮೬೧೫೭೧೩೫ ‌‌‌ - ಎಲ್. ಎಸ್. ಶಾಸ್ತ್ರಿ

ಪುಸ್ತಕ ಪರಿಚಯ
bottom of page