top of page
ಪರಿವರ್ತನೆ
ದ್ರೌಪದಿಯಾಗಲಾರೆ ನಾನು ಪಾಂಡವರ ಹಳವಂಡಗಳಿಗೆಲ್ಲ ಮುಡಿಯ ಬಿಚ್ಚಿಡಲಿಕ್ಕೆ ಹಚ್ಚಿಡಬಲ್ಲೆ ಕಿಡಿಯ ಹೊತ್ತುರಿಯಲಿ ಹಾಗೆ ಕುರುಕ್ಷೇತ್ರ ಶಬರಿಯಾಗುವಂತ ಜರೂರತ್ತುಗಳಿಲ್ಲ ನನಗೆ ಕೂದಲು ನೆರೆಯುವವರೆಗಿನ ಕತೆ ಹೇಳುತ್ತ ಕೂಡಲಿಕ್ಕೆ ಹದವಾಗುವವರೆಗೂ ಕಾದು ಕಾವಲಿಯಿಂದ ಜಿಗಿಯಬೇಕು ಸೀದ ನಭದ ಅಂಗಳಕ್ಕೆ ಸೀತೆಯಾದೆನೆಂದರೆ ನೋಡಿ ಸಾಬೀತುಪಡಿಸಬೇಕಂತೆ ಪಾವಿತ್ರ್ಯ ಕಿಚ್ಚಿನೊಳಗೆ ಉರಿದು ಬೂದಿಯಾಗುವವರೆಗೂ ಸೋಜಿಗವ ನೋಡುವ ಜಗಕ್ಕೆ ಸುಡಲೇಕೆ ಬಾಳು ಬೆಳಗಲಾರೆನೇ ಹಣತೆ? ಸಾವಿತ್ರಿಯಾಗುವ ಹಂಬಲಕ್ಕೆ ಯಮನ ಬೆನ್ನಟ್ಟಿದವಳಲ್ಲ ಆದರೂ ಬದುಕಿಸಬಲ್ಲೆ ಹೆಣವಾದವರ ಹೆಣ್ಣಾಗಿದ್ದಕ್ಕೆ ಕಲ್ಲಾಗಲಿ ಏಕೆ ನಾನೂ ಶಾಪವನಿಡಬಲ್ಲೆ ರಾಮಾ ಅಹಲ್ಯೆಯ ತಲ್ಲಣಗಳಿಗೆ ಉತ್ತರವಾಗದ ಮುನಿಗೆ ಕಂಡವರ ಪಾಪಗಳ ತೊಳೆದು ಗಂಗೆಯಾಗುವುದಿಲ್ಲ ಕೊಳೆಯಾಗುವ ಮುನ್ನ ಹೊಳೆದೇನು ನಾನು... ಸಂಧ್ಯಾ ವಿ. ನಾಯ್ಕ ಅಘನಾಶಿನಿ
bottom of page