top of page

ಪತ್ರಿಕಾರಂಗದ ನನ್ನ ೬೦ ವರ್ಷಗಳು ಭಾಗ-೧೭

ಬೆಳಗಾವಿಯ ಕೆಲ ಅನುಭವಗಳು ********* ರಾಜಕೀಯ ವಿಷಜೀವಿಗಳು ಪತ್ರಿಕಾ ರಂಗದಲ್ಲೂ ಇರುತ್ತಾರೆ ********* ಸುಮ್ಮನೇ ಕುಳಿತು ಅಭ್ಯಾಸವಿಲ್ಲವಲ್ಲ. " ಏನಾದರೂ ಮಾಡುತಿರು ಮಂಕುತಿಮ್ಮ " ಎನ್ನುವಂತೆ ಜಿಲ್ಲಾ ಸಣ್ಣ ಪತ್ರಿಕೆಗಳ ಸಂಘ ಕಟ್ಟಿ ಹತ್ತು ವರ್ಷ ಕಾರ್ಯಕ್ರಮಗಳನ್ನು ಮಾಡಿದವನು ೧೯೯೭ -೯೮ ರಲ್ಲಿ ಕರ್ನಾಟಕ ಕಾರ್ಯನಿರತ ಸಂಘದ ಬೆಳಗಾವಿ ಜಿಲ್ಲಾ ಸಂಘ ಸ್ಥಾಪಿಸಲು ಮುಂದಾದೆ‌. ಆಗ ರಾಜ್ಯ ಅಧ್ಯಕ್ಷರಾಗಿ ಶ್ರೀ ಜಿ. ಕೆ ಸತ್ಯ ಅವರಿದ್ದರು. ಶ್ರೀ ವಿ. ವೆಂಕಟೇಶ ಕಾರ್ಯದರ್ಶಿಯಾಗಿದ್ದರು. ಇಬ್ಬರೂ ಬಂದು ಜಿಲ್ಲಾ ಘಟಕ ಉದ್ಘಾಟಿಸಿದರು. ರಾಜಕೀಯ ಎಲ್ಲಿಲ್ಲ? ಬೆಳಗಾವಿಯಲ್ಲಿರಬಾರದೆಂದೇನಿಲ್ಲವಲ್ಲ. ಇಲ್ಲೂ ಇದೆ ಧಾರಾಳವಾಗಿ. ಇಲ್ಲಿ ಪತ್ರಕರ್ತರ ಕಾಲೆಳೆಯುವವರು, ಕಟ್ಟಿದ ಸಂಸ್ಥೆ ಹಾಳು ಮಾಡುವವರು ಎಲ್ಲ ಪತ್ರಕರ್ತರೆ. ನನಗಿಂತ ಹಿಂದೆಯೂ ಇಲ್ಲಿ ಪತ್ರಿಕಾ ಸಂಘಟನೆ ಕಟ್ಟಿದವರಿದ್ದಾರೆ. ಹಾಳು ಮಾಡಿದವರೂ ಇದ್ದಾರೆ. ಈಮೊದಲು ಪತ್ರಕರ್ತರಿಗಾಗಿ ಜಿಲ್ಲಾಡಳಿತ ಒಂದು ಜಾಗ ಮಂಜೂರು ಮಾಡಿತ್ತು. ಆದರೆ ಅದನ್ನು ಹತ್ತಿಪ್ಪತ್ತು ವರ್ಷ ಹಾಗೇ ಇಟ್ಟು ಕೊನೆಗೂ ಅದು ಕೈತಪ್ಪಿತು. ಬೆಳಗಾವಿಯಲ್ಲಿ ಪತ್ರಕರ್ತರು ಒಂದಾಗದಂತೆ ನೋಡಿಕೊಳ್ಳುವ ಧೂರ್ತರೂ ಇದ್ದಾರೆ. ವಿ. ವಿ. ಶೆಣೈ ಎಂಬವರು ಬೆಳಗಾವಿ ಪ್ರೆಸ್ ಕ್ಲಬ್ ರಚಿಸಿದ್ದರು. ಎರಡು ಮೂರು ವರ್ಷ ನಡೆದಿರಬೇಕು. ಚೆನ್ನಾಗಿಯೇ ನಡೆದಿತ್ತು. ಅವರ ಪ್ರಯತ್ನದ ಫಲವಾಗಿಯೇ ಇಲ್ಲಿಯ ಪತ್ರಕರ್ತರಿಗಾಗಿ ಹಿಂಡಲಗಾ ಹತ್ತಿರ ಒಂದೆಡೆ ಜಾಗ ಕೊಡಲಾಗಿತ್ತು. ಬಹಳಷ್ಟು ಜನ ಅಲ್ಲಿ ಸೈಟ್ ತೆಗೆದುಕೊಂಡರು. ಕೆಲವರು ಮನೆ ಕಟ್ಟಿಕೊಂಡಿದ್ದಾರೆ. ಕೆಲವರು ಮಾರಿದ್ದಾರೆ. (ಪತ್ರಕರ್ತರ ಕಾಲನಿ ಎಂದು ಅದಕ್ಕೆ ಕರೆಯುತ್ತಾರೆ. ) ಆದರೆ ಪತ್ರಕರ್ತರೇ ಕೆಲವರು ಒಟ್ಟಾಗಿ ಪ್ರೆಸ್ ಕ್ಲಬ್ ಹಾಳು ಮಾಡಿದರು. ಇಂತಹ ವಾತಾವರಣದಲ್ಲಿ ನಾನು ಕೆ. ಯು. ಡಬ್ಲ್ಯು. ಜೆ. ಇಲ್ಲಿ ಆರಂಭಿಸಿದೆ. ನಾನು ಅಧ್ಯಕ್ಷ. ಮುರುಗೇಶ ಶಿವಪೂಜಿ ಕಾರ್ಯದರ್ಶಿಯಾದರು. ಹತ್ತೂ ತಾಲೂಕುಗಳಲ್ಲಿ ಸಂಚರಿಸಿ ತಾಲೂಕು ಘಟಕಗಳನ್ನು ಸ್ಥಾಪಿಸಿದೆವು. . ಗ್ರಾಮೀಣ ಪತ್ರಕರ್ತರನ್ನು ಸಂಘಟಿಸಿ ಅವರಿಗೆ ಮೊದಲ ಬಾರಿ ವೇದಿಕೆ ಒದಗಿಸಿದೆವು. ಸಂಘದಿಂದ ಮೂರು ದಿವಸಗಳ ಪತ್ರಿಕಾ ತರಬೇತಿ ಕಾರ್ಯಾಗಾರವನ್ನು ಪತ್ರಿಕಾ ಅಕಾಡೆಮಿ ಮತ್ತು ವಾರ್ತಾ ಇಲಾಖೆ ಸಹಕಾರದೊಡನೆ ನಡೆಸಿದೆವು. ೨೦೦೧ ಅಕ್ಟೋಬರ್ ತಿಂಗಳು ಬೆಳಗಾವಿಯಲ್ಲಿ ರಾಜ್ಯ ಮಟ್ಟದ ೨೨ ನೇ ಪತ್ರಕರ್ತರ ಸಮ್ಮೇಳನ ನಡೆಸಲು ನಿರ್ಧರಿಸಿದೆವು. ಆಗ ಬಿ. ವಿ. ಮಲ್ಲಿಕಾರ್ಜುನಯ್ಯ ಅವರು ರಾಜ್ಯ ಅಧ್ಯಕ್ಷರಿದ್ದರು. ಸಮ್ಮೇಳನ ಘೋಷಣೆಯಾದದ್ದೇ ತಡ, ಕೆಲವು ಪತ್ರಕರ್ತರಿಗೆ ಕಸಿವಿಸಿಯಾಗತೊಡಗಿತು. ಹೇಗಾದರೂ ನಮ್ಮ ಸಮ್ಮೇಳನ ಆಗದಂತೆ ಅಥವಾ ಯಶಸ್ವಿಯಾಗದಂತೆ ನಮ್ಮ ವಿರುದ್ಧ ಅಪಪ್ರಚಾರ ಆರಂಭಿಸಿದರು. ಇವರಲ್ಲಿ ಕೆಲ ದೊಡ್ಡ ಪತ್ರಿಕೆಯ ದೊಡ್ಡ ಪತ್ರಕರ್ತರೂ ಇದ್ದರು. ನಮ್ಮ ವಿರುದ್ಧ ಬರೆದರು. ಹಲವೆಡೆ ಹಣ ಜಾಹೀರಾತು ಸಿಗದಂತೆ ನೋಡಿಕೊಂಡರು. ಹಣ ತಿಂದರೆಂದೂ ಆರೋಪಿಸಿದರು. ಸಮ್ಮೇಳನ ಹೇಗೆ ಮಾಡುತ್ತಾರೆ ನೋಡೋಣ ಎಂದು ಒಬ್ಬರು ಇಲ್ಲದ ಮೀಸೆ ತಿರುವಿದರು. ನಾನು ಮತ್ತು ಶಿವಪೂಜಿ ಇದನ್ನು ಒಂದು ಸವಾಲಾಗಿ ಸ್ವೀಕರಿಸಿದೆವು. ಮೂರು ತಿಂಗಳು ಸತತ ಜಿಲ್ಲೆಯಾದ್ಯಂತ ಓಡಾಡಿದೆವು. ತಾಲೂಕಾ ಘಟಕದವರು ಸಹಕರಿಸಿದರು. ಮೂರು ದಿನ ರಾಜ್ಯ ಮಟ್ಟದ ಸಮ್ಮೇಳನವನ್ನು ನ ಭೂತೋ ನ ಭವಿಷ್ಯತಿ ಎಂಬಂತೆ ಅದ್ದೂರಿಯಾಗಿ ಮಾಡಿ ಮುಗಿಸಿದೆವು. ಈತನಕ ಇಂತಹ ಸಮ್ಮೇಳನ ಆಗಲಿಲ್ಲ ಎಂದು ಸ್ವತಃ ರಾಜ್ಯ ಸಮಿತಿಯವರೇ ಪ್ರಶಂಸಿಸಿದರು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದ ಪತ್ರಕರ್ತರಿಗೆ ಉತ್ತಮ ನೆನಪಿನ ಕಾಣಿಕೆ ಕೊಟ್ಟೆವು. ಉತ್ತಮ ವಸತಿ ಮತ್ತು ಊಟದ ವ್ಯವಸ್ಥೆ ಮಾಡಿದೆವು. ಯಾವುದೇ ಕೊರತೆಯಾಗದಂತೆ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ಮಾಡಿ ಮುಗಿಸಿದಾಗ ನಮ್ಮನ್ನು ವಿರೋಧಿಸಿದವರೇ ಇಂಗು ತಿಂದ ಮಂಗನಂತಾಗಿದ್ದರು. ಸಮ್ಮೇಳನ ಆಗದಂತೆ ನೋಡಿಕೊಳ್ಳುತ್ತೇನೆಂದ ಮಹಾನ್ ಪತ್ರಕರ್ತರು ಮುಖ ಮರೆಸಿಕೊಂಡರು. ಸಮ್ಮೇಳನದ ವೇದಿಕೆಯಲ್ಲಿ ಗ್ರಾಮೀಣ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿದೆವು. ಇದೇ ವೇಳೆಗೆ ಸಮಾರೋಪ ಸಮಾರಂಭದಲ್ಲಿ ನನಗೆ ಯಶೋದಮ್ಮ ಜಿ. ನಾರಾಯಣ ಪತ್ರಿಕಾ ಪ್ರಶಸ್ತಿಯನ್ನು ರಾಜ್ಯ ಸಂಘ ನೀಡಿದ್ದನ್ನು ಆಗಿನ ಸಚಿವ ಎಚ್. ಕೆ. ಪಾಟೀಲರು‌ ಪ್ರದಾನ ಮಾಡಿದರು. ಎಲ್ಲ ತಾಲೂಕಾ ಪತ್ರಕರ್ತರೂ ಬಂದು ಅಂದು ನನ್ನನ್ನು ಶಾಲು ಹೂಮಾಲೆಗಳಿಂದ ಮುಚ್ಚಿದ್ದು ಎಂದೂ‌ ಮರೆಯಲಾಗದ ಒಂದು ಹೆಮ್ಮೆಯ ಕ್ಷಣ! ಮಳೆ ನಿಂತರೂ ಮಳೆಹನಿ ನಿಲ್ಲುವದಿಲ್ಲವಲ್ಲ. ಸಮ್ಮೇಳನ ಮುಗಿದ ಮೇಲೂ ನಾವೆಲ್ಲ ಲಕ್ಷಗಟ್ಟಲೆ ಹಣ ತಿಂದೆವೆಂದು ಬರೆದು ತೃಪ್ತಿಪಟ್ಟುಕೊಂಡರು. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲಿಲ್ಲ. ಹಾಗೆ ಬರೆದವರೇ ಇಂದು ಹೇಳಹೆಸರಿಲ್ಲವಾಗಿದ್ದಾರೆ. ನಾವಿನ್ನೂ ಪತ್ರಿಕಾರಂಗದಲ್ಲಿ ಗೌರವದಿಂದ ಉಳಿದುಕೊಂಡಿದ್ದೇವೆ. ನಾನು ರಾಜ್ಯಮಟ್ಟದ ಒಂದು ಪತ್ರಿಕಾ ಸಮ್ಮೇಳನವಲ್ಲದೆ, ಎರಡು ರಾಜ್ಯ ಚುಟುಕು ಸಮ್ಮೇಳನಗಳನ್ನೂ ಎರಡು ಜಿಲ್ಲಾ ಸಮ್ಮೇಳನಗಳನ್ನೂ ಮಾಡಿದ್ದೇನೆ. ಲಕ್ಷಗಟ್ಟಲೆ ಹಣ ಸಂಪಾದಿಸಿದ್ದರೆ ಇಂದಿಗೂ ಸ್ವಂತ ಮನೆಯಿಲ್ಲದೆ ಬದುಕುವಂತಹ ಪರಿಸ್ಥಿತಿಯೇನೂ ಇರುತ್ತಿರಲಿಲ್ಲ. ಸಾಮಾನ್ಯ ವರದಿಗಾರರಾಗಿಯೂ ಕೆಲವರು ಕೋಟಿ ಮೊತ್ತದ ಬಂಗಲೆ ಕಾರು ಸಹಿತ ವೈಭವದ ಜೀವನ‌ ನಡೆಸುತ್ತಿದ್ದಾರಲ್ಲ. ಅವರು ಪ್ರಾಮಾಣಿಕರಾಗಿ‌ ಕೆಲಸ ಮಾಡಿದ್ದರೆ ಅದೆಲ್ಲ ಸಾಧ್ಯವಿತ್ತೇ? ನಮ್ಮಂಥವರಿಗೆ ಬುದ್ಧಿ ಹೇಳುವ ಯಾವ ನೈತಿಕ ಹಕ್ಕು ಅವರಿಗಿದೆ? ‌ಇದು ಬೆಳಗಾವಿ ಪತ್ರಿಕಾ ರಂಗದ ಒಂದು ಮುಖ! ‌‌‌ ‌ ‌‌‌‌‌ - ಎಲ್. ಎಸ್. ಶಾಸ್ತ್ರಿ

ಪತ್ರಿಕಾರಂಗದ ನನ್ನ ೬೦ ವರ್ಷಗಳು ಭಾಗ-೧೭
bottom of page