ನೀರು ನೆಲಗಳ ಸೆಳೆತ
ಎಂದೊ ಮೂಡಿದ ಹಸಿವು ನಾಲಿಗೆಯ ಚಾಚುತಿದೆ ಎಂದೊ ಕಾಡಿದ ದಾಹ ಸೆಳೆಯುತ್ತಿದೆ ಒಳಗೊಳಗೆ ಸುಳಿಯಾಗಿ ಒಂದಕೊಂದರ ಮೋಹ ಇಂದು ಹೊಸ ತುರುಸಿನಲಿ ಎಳೆಯುತ್ತಿದೆ ಕೊತಕೊತನೆ ಕುದಿವ ಭೂಮಿಯಾಳದ ಬೇಗೆ ಬೆದೆಯಾಗಿ ಹತಹತನೆ ಹಂಬಲಿಸಿದೆ ಮೈಗಾವು ತಣಿಸಲು ಕೂಗುತಿದೆ ಕರೆಯುತಿದೆ ಬಿಟ್ಟ ಬಿರುಕೆ ಬಾಯಾಗಿ ಬೆಂಬಲಿಸಿದೆ ತಳಮಳಿಸಿ ಸಳಮಳಿಸಿ ಮಣ್ಣ ಮೈಯೊಳಗಾಡಿ ಉಗಿಯಾದ ನೀರು ಮೋಡವಾಗಿ ವಿರಹದುರಿಯೇ ಹಾಗೆ ಕಿಚ್ಚಿರದ ಬೇಗೆ ಹಬ್ಬಿಹುದು ಬಾನೊಳಗೆ ಕಡುಗಪ್ಪು ಹೊಗೆಯಾಗಿ ಕಾಯುತಿದೆ ನೆಲಕಪ್ಪಳಿಸಿ ಧಬಧಬಿಸಿ ಧಾರೆಗಟ್ಟಿ ಜಡಿಮಳೆಯಾಗಿ ಹಿಡಿ ಹಿಡಿದು ಜಡಿಯಲು ಗುಡುಗು ಸಿಡಿಲಿನಬ್ಬರದಿ ಮದವೇರಿ ಧುಮುಕಿ ಕಂಡಕಡೆ ಕಚಗುಳಿಯಿಕ್ಕಿ ಮೀಟಿ ಮಿಡಿಯಲು ಮಿಂಚುಗಳ ರೋಮಾಂಚನದಿ ತೋಳು ಚಾಚಿ ಸಿಕ್ಕ ಸಿಕ್ಕಲ್ಲಿ ಕಚ್ಚಿ ಕಡಿದು ಉಕ್ಕಿ ಮುಕ್ಕಿ ಬೆಟ್ಟ ಕಣಿವೆಗಳ ಉಬ್ಬು ತಗ್ಗುಗಳಲಿ ನುಗ್ಗಿ ಸಂದು ಗೊಂದಿಗಳ ಹಿಗ್ಗಿಸಿ ಹಿಗ್ಗಿ ತೀಡಿ ತಿಕ್ಕಿ ನೆಲದ ತೊಗಲ ಹರಿ ಹರಿದು ಕಿತ್ತು ಈಡಾಡಿ ಹೊಳೆ ಹಳ್ಳ ತೊರೆಯಾಗಿ ಹರಿದು ಓಡಾಡಿ ಕಡಲಾಗಿ ಭೋರ್ಗರೆದು ತಳಸೇರಿ ತೊಡೆಕೊರೆದು ಒಳಹೊರಗೆ ತೂಗಾಡಿ ಜೀವಸೆಲೆಯಾಡಿ ಮುತ್ತುಗಳ ಭಂಡಾರದ ಬೀಗಮುದ್ರೆಯನೊಡೆದು ಚಲ್ಲೊರೆದು ಸುರಿಸುರಿದು ಸೂರೆಗೊಂಡು ಒಂದಗೊಳಗೊಂದು ಸೇರಿ ಹೊಸ ಜೀವ ಹೊಡೆಹಿರಿದು ಮರ ಮರಳುವ ಮರು ಹುಟ್ಟಿಗೆ ಫಲಗೊಂಡು ನೆಲದ ಕಣಕಣದಲ್ಲು ನೆನಪಿನ ಕಣಜ ಉಸಿರುಸಿರಿನಲ್ಲು ಪರಿಮಳವು ತುಂಬಿ ನೀರ ಹನಿ ಹನಿಯಲ್ಲು ನೆಲದ ಕನಸಿನ ತೇಜ ಕಣ್ಣೊಳಗೆ ಆಡುವವು ನಿತ್ಯ ಬೆಳಕಿನ ಗೊಂಬಿ ಯಾವುದು ಹತ್ತಿರ ಯಾವುದು ದೂರ ಹೇಳುವುದು ಅಷ್ಟೊಂದು ಸುಲಭವೇ ಗೆಳತಿ ಜೀವಗಳ ಬೆರೆತಾಗ ಎಲ್ಲಿಹುದು ಅಂತರ ಎರಡು ಒಂದಾದಾಗ ಎಂಥ ಅಳತಿ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ