top of page

ನೀನಾರಿಗಾದೆಯೋ ಎಲೆ ಮಾನವಾ

ಗೋವಿನ ಕುರಿತು ಈ ಒಂದು ಅದ್ಭುತ ಕವನ ಬರೆದ ಕವಿ ಎಸ್. ಜಿ. ನರಸಿಂಹಾಚಾರ್ಯರು. ಕೃತಘ್ನ ಮನುಷ್ಯರಿಗೂ ಈ ಕವನ ಸಂಬಂಧಿಸುತ್ತದೆ. ಆ ಹಳೆಯ ಕವನದ ಮರು ನೆನಪು ನೀನಾರಿಗಾದೆಯೋ ಎಲೆ ಮಾನವಾ ********** ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ ಸುಟ್ಟರೆ ನೊಸಲಿಗೆ ವಿಭೂತಿಯಾದೆ ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ ನೀನಾರಿಗಾದೆಯೋ ಎಲೆ ಮಾನವಾ..‌ ಹರಿ ಹರೀ ಗೋವು ನಾನು|| ೧|| ಹಾಲಾದೆ ಕರೆದರೆ, ಮೊಸರಾದೆ ಹೆತ್ತರೆ ಮೇಲೆ ಕೆನೆಗಡೆದರೆ ಬೆಣ್ಣೆಯಾದೆ ಮೇಲಾದೆ ತುಪ್ಪವೂ ನಾನಾದೆ ಕಾಸಿದರೆ ನೀನಾರಿಗಾದೆಯೋ ಎಲೆ ಮಾನವಾ||೨|| ಉಳುವೆ ನಾ ಭೂಮಿಯನು, ಹೊರುವೆ ನಾ ಹೇರನ್ನು ತುಳಿದು ಕಡ್ಡಿಯ ನಾ ವಿಂಗಡಿಸುವೆ ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ ನೀನಾರಿಗಾದೆಯೋ ಎಲೆ ಮಾನವಾ||೩|| ಹಾಯೆ ಹರಿಗೋಲಾದೆ, ರಾಯಭೇರಿಗೆಯಾದೆ ರಾಯರಾ ಕಾಲಿಗೆ ಮುಳ್ಳೊತ್ತುವಾದೆ ಆಯವರಿತು ಹೊಡೆಯೆ ಮಧುರ ಗಾನಕ್ಕಾದೆ ನೀನಾರಿಗಾದೆಯೋ ಎಲೆ ಮಾನವಾ||೪|| ಹಾದಿಬೀದಿಯಲಿರುವ ಕಸದ ಹುಲ್ಲನು ಹುಡುಕಿ ಮೇದು ಮನೆಗೈದಿ ನಾನಮೃತವೀವೆ ಅದನುಂಡು ನನಗೆರಡ ಬಗೆವ ಮಾನವ ಹೇಳು ನೀನಾರಿಗಾದೆಯೋ ಎಲೆ ಮಾನವಾ||೫|| - ಎಸ್. ಜಿ. ನರಸಿಂಹಾಚಾರ್ ( ನರಸಿಂಹಾಚಾರ್ ಅವರು ಶ್ರೀರಂಗಪಟ್ಟಣದವರು. ಕೇವಲ ೪೫ ವರ್ಷ ಬದುಕಿದ ಅವರು ಘನ ವಿದ್ವಾಂಸರೂ ಹೌದು. ಅವರ ಬಗ್ಗೆ ಪ್ರತ್ಯೇಕ ಬರೆದಿರುವೆ)

ನೀನಾರಿಗಾದೆಯೋ ಎಲೆ ಮಾನವಾ
bottom of page