top of page

ನಿಜದನಿಯ ಪ್ರೊ.ಜಿ.ಎಚ್.ನಾಯಕ

ಪ್ರೊ.ಜಿ.ಎಚ್.ನಾಯಕ ಅವರು ಇನ್ನಿಲ್ಲ ಎಂಬುದನ್ನು ಒಮ್ಮೆಲೆ ಒಪ್ಪಿಕೊಳ್ಳಲು‌ ಸಾಧ್ಯವಾಗುತ್ತಿಲ್ಲ. ನಾನು ಕಂಡು ಮಾತನಾಡಿ ಚರ್ಚಿಸಿ ಅವರ ಪ್ರೀತಿಗೆ ಪಾತ್ರನಾದ‌ ಆ ದಿನಗಳು ಹಾಗು‌ ಕ್ಷಣಗಳು ಇಂದಿಗೂ ಮನಕ್ಕೆ ಮುದವನ್ನು ನೀಡುತ್ತವೆ. ಸ್ವಾತಂತ್ರ್ಯ ಯೋಧರ ಮನೆತನದಿಂದ ಬಂದ ಜಿ.ಎಚ್.ನಾಯಕ ಅವರು ಮೈಸೂರಿಗೆ ಉನ್ನತ ಶಿಕ್ಷಣ ಪಡೆಯಲು ಹೋಗಿ,ಮೈಸೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿ ಸತ್ಯ ಮತ್ತು‌ಪ್ರಾಮಾಣಿಕತೆಗೆ ಮಹತ್ವಕೊಟ್ಟು ಒಬ್ಬ ಉತ್ತಮ ಪ್ರಾಧ್ಯಾಪಕರಾಗಿ,ನಿಜದನಿಯ ವಿಮರ್ಶಕರಾಗಿ ನಿರಪೇಕ್ಷ ಮನೋಭಾವದಿಂದ ನುಡಿತಾಯಿಯ ಸೇವೆ ಸಲ್ಲಿಸಿದವರು ಅವರು. ' ಬದುಕೋದು ಬ್ಯಾರೆ ಬಾಳೋದು ಬ್ಯಾರೆ ' ಎಂದರು ವರಕವಿ ಬೇಂದ್ರೆಯವರು. ಉತ್ತಮಿಕೆಯನ್ನು ನೆಮ್ಮಿ ನಿಂತು‌ ಬಾಳಿದವರು ಪ್ರೊ.ಜಿ.ಎಚ್.ನಾಯಕ ಅವರು. ಅವರ ಆತ್ಮ ಚರಿತ್ರೆ ಹೆಸರು ಬಾಳು. ಅವರು ಓದಿ ಉತ್ತರ ಕನ್ನಡಕ್ಕೆ ನೌಕರಿಗೆ ಬರದೆ ಇದ್ದದ್ದು ಒಳ್ಳೆಯದೆ ಆಯಿತು.ನಮ್ಮ ಜಿಲ್ಲೆಯು ಗುಡ್ಡಗಾಡು ಜಿಲ್ಲೆಯಾದ ಕಾರಣ ಎಂತಹ ವ್ಯಕ್ತಿತ್ವದವರೆ ಇದ್ದರು ಅವರು ಮೇಲೆದ್ದು ನಿಲ್ಲಲು ಇಲ್ಲಿರುವ ಹೆಮ್ಮರಗಳು,ಹೂಳು ತುಂಬಿದ ನದಿಗಳು, ಮನಮೋಹಕ ವಾದ ನಿಸರ್ಗ ಸಂಪತ್ತುಗಳು, ತಮ್ಮದೆ ಹುದಲಿನಲ್ಲಿ ಹೂತು ಹೋದ ನಮ್ಮ ರಾಜಕಾರಣಿಗಳು ಕಾರಣ ಎಂದು ನನಗೆ ಅನಿಸುತ್ತದೆ. ಕಾರಣ ಇಷ್ಟೆ ವಿದ್ವತ್ ವಲಯದಲ್ಲಿ ವಿಮರ್ಶೆಯ ಕ್ಷೇತ್ರದಲ್ಲಿ ಎತ್ತರದ ವ್ಯಕ್ತಿಯಾಗಿದ್ದ ಗೌರೀಶ ಕಾಯ್ಕಿಣಿಯವರಿಗೆ ಪಂಪ ಪ್ರಶಸ್ತಿಯನ್ನು ಕೊಡಿಸಲಾಗದ ಅಸಹಾಯಕರು ನಾವು. ಮೈಸೂರಿನಲ್ಲಿಯು ಹತ್ತು ಹಲವು ಅಡ್ಡಿಗಳಿಗೆ ಎದೆಯೊಡ್ಡಿ ನಿಂತವರು ಅವರು. ಅವರು ಕನ್ನಡ ಅಧ್ಯಾಪಕರಾಗಿದ್ದ ಸಂದರ್ಭದಲ್ಲಿ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರು ' I know how to tame the wild horse' ಎಂದು ಹೇಳಿದ್ದರಂತೆ. ಇದನ್ನು ಪ್ರೊ.ಜಿ.ಎಚ್.ನಾಯಕರು ನನ್ನ ಜೊತೆ ಮಾತನಾಡುವಾಗ ಹೇಳಿದ್ದರು. ಆದರೆ ಅದು ಯಾವದಕ್ಕೂ ತಲೆ ಕೆಡಿಸಿಕೊಳ್ಳದೆ,ಯಾರ ಬಳಿಯೂ ಸಾರದೆ,ಪರಾಕು ಪಂಪನ್ನೊತ್ತದೆ ತಮ್ಮದೆ ಆದ ಕಾಲುದಾರಿಯಲ್ಲಿ ನಡೆದು ಅದನ್ನು ರಾಜ ಮಾರ್ಗವನ್ನಾಗಿಸಿದವರು.ಪೂರ್ಣಚಂದ್ರ ತೇಜಸ್ವಿಯವರು ಜಿ.ಎಚ್.ನಾಯಕ ಅವರನ್ನು ತುಂಬಾ ಹಚ್ಚಿಕೊಂಡಿದ್ದರು. ತೇಜಸ್ವಿ ಅವರ ಮಗಳು ಪ್ರೊ.ನಾಯಕ ಅವರ ಮನೆಯಲ್ಲಿ ಕೆಲಕಾಲ ಉಳಿದುಕೊಂಡಿದ್ದನ್ನು ನಾನು ಕೇಳಿ ತಿಳಿದಿದ್ದೆ. ಅಂಕೋಲೆಯಲ್ಲಿ ಪೀಪಲ್ಸ ಹೈಸ್ಕೂಲಿನಲ್ಲಿ ಓದುವಾಗ ಗುರುಗಳಾದ ಎಸ್.ವಿ.ಪಿಕಳೆಯವರ ಸಿದ್ಧಾಂತ ಹಾಗು ಹೋರಾಟದ ಮನೋಭಾವವನ್ನು ಮೆಚ್ಚಿಕೊಂಡು ಅದೆ ದಾರಿಯಲ್ಲಿ ಮುನ್ನಡೆದವರು. ಶೇಷಗಿರಿ ಪಿಕಳೆಯವರನ್ನು ಕೆನರಾ ವೆಲ್ ಫೇರ್ ಟ್ರಸ್ಟಿನಿಂದ ದಿನಕರ ದೇಸಾಯಿಯವರು (ಪರಸ್ಪರರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ) ತೆಗೆದು ಹಾಕಿದಾಗ ಅದರ ವಿರುದ್ಧ ನಡೆದ ಪ್ರತಿಭಟನೆಯ ನೇತ್ರತ್ವ ವಹಿಸಿದವರು ಪ್ರೊ.ಜಿ.ಎಚ್. ನಾಯಕ ಅವರು. ಕಂಡದ್ದನ್ನು ಕಂಡಂತೆ ಆಡುವ ನೇರ ನಡೆ ನುಡಿಯ ಧೀರ ಗಂಭೀರ ಗೋವಿಂದ್ರಾಯ ನಾಯಕರು ಸ್ಪುರದ್ರೂಪಿ ವ್ಯಕ್ತಿತ್ವದ ಸಂಭಾವಿತ ಮತ್ತು ಸಜ್ಜನರು. ೧೯೩೫ ನೇಯ ಇಸ್ವಿ ಸಪ್ಟಂಬರ ೧೮ ನೆ ತಾರೀಖಿನಂದು ಅವರು ಅಂಕೋಲೆಯ ಸೂರ್ವೆಯಲ್ಲಿ ಜನಿಸಿದರು.ವಿಮರ್ಶಕರಾಗಿ ಅವರು ಹೊಸಗನ್ನಡ ಸಾಹಿತ್ಯ ಚರಿತ್ರೆಯಲ್ಲಿ ತಮ್ಮದೆ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು. ಸಮಕಾಲೀನ,ಅನಿವಾರ್ಯ,ನಿರಪೇಕ್ಷ,ನಿಜದನಿ,ಸಕಾಲಿಕ,ಗುಣ ಗೌರವ,ಹರಿಶ್ಚಂದ್ರ ಕಾವ್ಯ ಓದು ವಿಮರ್ಶೆ,ದಲಿತ ಹೋರಾಟ ಗಂಭೀರ ಸವಾಲುಗಳು,ಸ್ತ್ರೀ ಪ್ರಜ್ಞೆ,ಸಾಹಿತ್ಯ ಸಮೀಕ್ಷೆ,ಉತ್ತರಾರ್ಧ ಇವು ಅವರ ವಿಮರ್ಶಾ ಕೃತಿಗಳು. ಕನ್ನಡ ಸಣ್ಣ ಕತೆಗಳು,ಹೊಸಗನ್ಬಡ ಕವಿತೆ,ಶತಮಾನದ ಕನ್ನಡ ಸಾಹಿತ್ಯ ಸಂ.೧ ಮತ್ತು ಸಂಪುಟ ೨. ಇವು ಅವರು ಸಂಪಾದಿಸಿದ ಕೃತಿಗಳು. ಬಾಳು ಅವರ ಆತ್ಮ ಕತೆ.ಅವರ ನಿರಪೇಕ್ಷ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ನಿಜ ದನಿ ಕೃತಿಗೆ ವಿ.ಎಂ.ಇನಾಮದಾರ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ,ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ,ಜಿ.ಎಸ್.ಶಿವರುದ್ರಪ್ಪ ವಿಮರ್ಶಾ ಪ್ರಶಸ್ತಿ,ಶಿವರಾಮ ಕಾರಂತ ಪ್ರಶಸ್ತಿ,ಪಂಪ ಪ್ರಶಸ್ತಿ,ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ ಡಿಲಿಟ್ ಪದವಿ, ತಿ.ನಂ.ಶ್ರೀ ಪ್ರಶಸ್ತಿ,ಕನ್ನಡ ವಿ.ವಿ.ಹಂಪಿ ಹಾಗು ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಗೌರವಗಳು ಅವರಿಗೆ ಸಂದಾಯವಾಗಿದ್ದವು.ಅಮೇರಿಕಾ ಮ್ಯಾಸನ್ ವಿಶ್ವವಿದ್ಯಾಲಯ ಹಾಗು ಅಮೇರಿಕಾ ಸರ್ಕಾರದ ಅತಿಥಿಯಾಗಿ ಅಮೇರಿಕಾ ಪ್ರವಾಸ ಮಾಡಿದ್ದ ಅವರು ಇಂಗ್ಲೆಂಡ್ ಮತ್ತು ಚೀನಾ ದೇಶವನ್ನು ಭೇಟಿ ಮಾಡಿದ್ದರು. ಎಂಬತ್ತರ ದಶಕದಲ್ಲಿ‌ ಅಂಕೋಲೆಯ ಕರ್ನಾಟಕ ಸಂಘದ ವಿಚಾರ ಸಂಕಿರಣಕ್ಕೆ ಪ್ರೊ.ನಾಯಕ ಅವರು ಬಂದು ಉಪನ್ಯಾಸ ನೀಡಿದ ಬಳಿಕ ಪ್ರಶ್ನೋತ್ತರದ ಅವಧಿಯಲ್ಲಿ ನಾನು ನಮಗೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಬಂದ ನವ್ಯ ಸಾಹಿತ್ಯ ನೀಡಿದ ಕೊಡುಗೆ ಏನು? ಅನಾಥ ಪ್ರಜ್ಞೆ, ಮಣ್ಣಿನ ವಾಸನೆ,ಸಂಕೀರ್ಣತೆ ಇವಕ್ಕೆಲ್ಲಾ ಏನು ಅರ್ಥ ಎಂದು ಪ್ರಶ್ನೆ ಕೇಳಿದೆ. ಬಿ.ಎಸ್ಸಿ ಓದದವನು ಯಾವುದೊ ಪ್ರಮೇಯದ ಬಗ್ಗೆ ಕೇಳಿದಂತೆ ಈ ಪ್ರಶ್ನೆ,ಕೋಳಿ ಸಾರಿನ ಬಗ್ಗೆ ಮಾತನಾಡುವಾಗ ಅದನ್ನು ಮಾಡುವ ಬಗೆಯನ್ನು ಅರಿತಿರ ಬೇಕು ಎಂದು ಉತ್ತರಿಸಿದರು. ನನಗೆ ಆ ವರೆಗೆ ಅವರ ಮುಖ ಪರಿಚಯವಾಗಿರಲಿಲ್ಲ. ನಾನು ಅವರ ಉತ್ತರ ಕೇಳಿ ಸುಮ್ಮನಾದೆ. ಅವರ ಕೃತಿಗಳನ್ನು ಓದಿದ ಕಾರಣ ವಾದವನ್ನು ಮಾಡಲಿಲ್ಲ. ಅದು ಅಂಕೋಲೆಯಲ್ಲಿ ಸುದ್ದಿಯಾಯಿತು. ಆ ಬಳಿಕ ಪ್ರೊ.ನಾಯಕರ ಒಡನಾಡಿಗಳು ನನ್ನ ಬಗ್ಗೆ ಅವರಿಗೆ ಹೇಳಿದರು. ಮರುದಿನ ವಿಚಾರ ಸಂಕಿರಣಕ್ಕೆ ಬಂದ ಪುರುಷೋತ್ತಮ ಬಿಳಿಮಲೆಯವರು ಸುದ್ದಿ ತಿಳಿದು ನನ್ನ ಪ್ರಶ್ನೆಯ ಪ್ರಸ್ತುತತೆಯ ಬಗ್ಗೆ ಮಾತನಾಡಿದರು. ಇದೆಲ್ಲಾ ಮುಗಿದು ೧೯೮೯ ರಲ್ಲಿ ಕನ್ನಡ ಅಧ್ಯಾಪಕರ ಪುನರ್ನವೀಕರಣ ಶಿಬಿರಕ್ಕೆ ( ರಿಫ್ರೆಷರ್ ಕೋರ್ಸ) ನಾನು ಹೋಗಿದ್ದೆ. ನಮಗೆ ಉಪನ್ಯಾಸ ನೀಡಲು ಬಂದ ಪ್ರೊ.ಜಿ.ಎಚ್. ನಾಯಕ ಅವರು‌ ಶಿಬಿರಾರ್ಥಿಗಳಿಗೆಲ್ಲ ನನ್ನ ಸಾಹಿತ್ಯದ ಓದು ಮತ್ತು ಆಸಕ್ತಿಯ ಬಗ್ಗೆ ಹೇಳಿದರು. ತಮ್ಮ ಮನೆಗೆ ಊಟಕ್ಕೆ ಬರಬೇಕು ಎಂದು ಕರೆದರು. ನಾನು ಮತ್ತು ಮಿತ್ರರಾದ ಡಾ.ಆರ್.ಪಿ. ಹೆಗಡೆ ಅವರು ನಾಯಕ ಅವರ ಕುವೆಂಪು ನಗರದ ಕಾಮಾಕ್ಷಿ ಆಸ್ಪತ್ರೆಯ ಹಿಂದುಗಡೆ ಇರುವ ಅವರ ಮನೆ ಪ್ರೀತಿಗೆ ಹೋಗಿ ಮೀರಕ್ಕ ಮತ್ತು ಅವರ ಆತ್ಮೀಯ ಆತಿಥ್ಯವನ್ನು ಸ್ವೀಕರಿಸಿ ಬಂದೆವು. ನಾನು ಪಿಎಚ್,ಡಿ.ಅಧ್ಯಯನ ಮಾಡುವಾಗ ಅವರ ಸಂದರ್ಶನ ಮಾಡಿ ವಿಚಾರ ವಿನಿಮಯ ಮಾಡಿದ್ದೆ. ಅವರು ಪಿಎಚ್,ಡಿ. ಬರವಣಿಗೆ ಎಂದರೆ ಕೌದಿ ಹೊಲಿಯುವ ಹಾಗೆ ಎಂದು ಹೇಳಿದ್ದರು.ಎಲ್ಲ ವಿಷಯಗಳನ್ನು ಕಲೆ ಹಾಕಿ ಹೊಲಿಯುವುದೆ ಒಂದು ಕಲೆ ಎಂದಿದ್ದರು. ಅವರ ಒಡನಾಟ ನನ್ನನ್ನು ಬೆಳೆಸಿದೆ. ನಾವು ಯಾವುದೆ ಹಬ್ಬ ಹುಣ್ಣಿಮೆ ಆಚರಿಸುವುದಿಲ್ಲ.ರಾಷ್ಟ್ರೀಯ ಹಬ್ಬಗಳನ್ನು ಮಾತ್ರ ಆಚರಿಸುತ್ತೇವೆ ಎಂದಿದ್ದರು. ಅವರ ಬಗ್ಗೆ ಅವರ ಅಣ್ಣನವರ ಮಗ ವಸಂತ ನಾಯಕರಿಂದ ಕೇಳುತ್ತಿದ್ದೆ.ಮಾದೇವ ಮಾಸ್ತರ ಸೂರ್ವೆ ಅವರಲ್ಲಿ ಕೇಳುತ್ತಿದ್ದೆ. ಇತ್ತೀಚೆಗೆ ಅವರ ನೆನಪಿನ ಶಕ್ತಿ ಕಡಿಮೆಯಾಗಿದೆ ಎಂದು ಕೇಳಿ ಬೇಸರಗೊಂಡಿದ್ದೆ. ಅವರನ್ನು ಕಂಡು ಮಾತನಾಡುವ ಆಸೆಯೊಂದು ಹಾಗೆಉಳಿಯಿತು. ಅವರ ಅಣ್ಣ ಸ್ವಾತಂತ್ರ್ಯಯೋಧ ನಾರಾಯಣ ನಾಯಕರು ನಾನು ಅಂಕೋಲೆಯಲ್ಲಿ ಕಂಡ ಸಜ್ಜನರು‌.ಅವರ ಮಗ ಹೇಮಂತ ನ್ನ ಪ್ರೀತಿಯ ವಿದ್ಯಾರ್ಥಿ. ಆತ ಚಿಕ್ಕಪ್ಪ ನೆಲೆಸಿರುವ ಮೈಸೂರಿನಲ್ಲೆ ನೆಲೆಗೊಂಡಿದ್ದ. ಅವರ ಬಳಗ ದೊಡ್ಡದು. ಪ್ರೊ.ಜಿ.ಎಚ್.ನಾಯಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರಂತೆ ವಾಡಿಕೆಯ ಮಾತನಾಡುವ ಧೈರ್ಯ ನನಗಿಲ್ಲ. ಆತ್ಮದ ಕುರಿತ ಅವರ ವಿಚಾರವನ್ನು ನಾನು ತಿಳಿದವನಲ್ಲ. ಬದುಕಿದಷ್ಟು ದಿನವು ಸಾರ್ಥಕವಾಗಿ ಬಾಳಿದ ಪ್ರೊ. ಗೋವಿಂದರಾಯ ನಾಯಕರ ಕೃತಿಗಳ ಓದು ನಮಗೆ ನಮ್ಮೊಳಗಿರುವ ಬೆಳಕನ್ನು ಇನ್ನಷ್ಟು ನಿಚ್ಚಳಗೊಳಿಸಲಿ. ಡಾ. ಶ್ರೀಪಾದ ಶೆಟ್ಟಿ

ನಿಜದನಿಯ ಪ್ರೊ.ಜಿ.ಎಚ್.ನಾಯಕ
bottom of page