top of page

ನಮ್ಮ ಭಾಷಾಪ್ರಪಂಚ

ಭಾಷೆಯ ಹುಟ್ಟು, ವೈಶಿಷ್ಟ್ಯ, ವೈಚಿತ್ರ್ಯ ****************************** ಭಾಷೆ ಹೇಗೆ ಹುಟ್ಟಿಬಂತು ಎನ್ನುವುದಕ್ಕೆ ಹಲವು ಭಾಷಾತಜ್ಞರು ಹಲವು ಬಗೆಯ ವ್ಯಾಖ್ಯೆಗಳನ್ನು ನೀಡಿದ್ದರೂ ಅವು ಯಾವವೂ ಪರಿಪೂರ್ಣವಲ್ಲ ಎಂದೇ ಹೇಳಲಾಗುತ್ತದೆ. ವಿಜ್ಞಾನಿ ಚಾರ್ಲಸ್ ಡಾರ್ವಿನ್ ಹೇಳುವಂತೆ " ಜಗತ್ತಿನ ಆವಿಷ್ಕಾರಗಳಲ್ಲೆಲ್ಲ ಭಾಷೆಯ ಉಪಯೋಗಿ ಆವಿಷ್ಕಾರದಷ್ಟು ಅದ್ಭುತವಾದುದು, ಮಹತ್ವಪೂರ್ಣವಾದುದು ಬೇರೆ ಯಾವುದೂ ಇಲ್ಲ". ಶಾಬ್ದಿಕ ಪ್ರವೃತ್ತಿ ಎಲ್ಲ ಪಶುಪಕ್ಷಿ ಜೀವಿಗಳಲ್ಲಿಯೂ ಇದೆಯಾದರೂ ಅದನ್ನೇ ಭಾಷೆ ಎಂದು ಹೇಳಲಾಗದು ಮತ್ತು ಅವು ಸೀಮಿತವಾದ ಪ್ರತಿಕ್ರಿಯಾತ್ಮಕ ಅಭಿವ್ಯಕ್ತಿಯ ಸಂಕೇತಗಳೆನಿಸಿಕೊಳ್ಳುತ್ತವೆ. ಭಾಷೆ ಎನ್ನುವುದು ನಿತ್ಯದ ವ್ಯವಹಾರಗಳಲ್ಲಿ ಮಾನವನಾಡುವ ಮಾತು ಮಾತ್ರ ಎನ್ನಲಾಗುತ್ತದೆ. ಯಾವುದೋ ಒಂದು ವಸ್ತುವಿಗೆ ನಾವು ಬಳಸುವ ಶಬ್ದ ಮೊದಲ ಸಲ ಹೇಗೆ ಹುಟ್ಟಿಬಂತು ಎನ್ನುವುದು ಕುತೂಹಲಕರವಾದ/ ವಿಸ್ಮಯದ ಸಂಗತಿ. ಅದಕ್ಕೆ ಖಚಿತ ವಿವರಣೆ ಸಿಗುವುದಿಲ್ಲ. ಹೇಗೋ ಹೊರಬಂದ ಆ ಉಚ್ಚರಣೆಯೇ ಮುಂದೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದಲ್ಲದೆ ಇತರ ಭಾಷೆಗಳಲ್ಲೂ ಅದಕ್ಕೆ ಬೇರೆ ಬೇರೆ ಶಬ್ದಗಳು ಹುಟ್ಟಿಕೊಳ್ಳುತ್ತವೆ. ಭಾಷೆ ಸಹಜೀವಿ. ಅಂದರೆ ಒಂದು ಭಾಷೆ ಬೆಳೆಯುವುದು ಇತರ ಭಾಷೆಗಳ ಸಹಕಾರದಿಂದಲೆ. ಆದ್ದರಿಂದಲೇ ಪ್ರತಿಯೊಂದು ಭಾಷೆಯಲ್ಲೂ ಮೂಲ ಶಬ್ದಗಳೊಂದಿಗೆ ಇತರ ಭಾಷೆಗಳ ಶಬ್ದಗಳೂ ಅಯಾಚಿತವಾಗಿ ಸೇರಿಕೊಳ್ಳುತ್ತವೆ. ಕೆಲವೊಮ್ಮೆ ಅವು ನಮ್ಮ ಭಾಷೆಯ ಶಬ್ದಗಳೇ ಎಂಬಂತೆ ನಾವು ಬಳಸುತ್ತಿರುತ್ತೇವೆ. ಅವು ಬೇರೆ ಭಾಷೆಯದೆನ್ನುವುದೇ ನಮಗೆ ತಿಳಿದಿರುವುದಿಲ್ಲ. " ಭಾಷೆ " ಎಂಬ ಶಬ್ದವೇ ಸಂಸ್ಕೃತದ " ಭಾಷಾ" ಎಂಬ ಶಬ್ದದ ತದ್ಭವ. " ಭಾಷ್" ಎನ್ನುವುದು ಮೂಲ ಧಾತು. ಭಾಷೆ ದೈವ ನಿರ್ಮಿತಿ ಅಲ್ಲ. ಮಾನವಸೃಷ್ಟಿ. ಭಾಷೆ ನೈಸರ್ಗಿಕ ಕ್ರಿಯೆ ಅಲ್ಲ. ಕಲಿಯುವ/ ಕಲಿತ ಆನುವಂಶಿಕ ಕ್ರಿಯೆ. ಕನ್ನಡ ಸಹಿತ ಎಲ್ಲ ಭಾಷೆಗಳಲ್ಲೂ ಶಬ್ದಗಳಿಗೆ ಅರ್ಥ ಹೇಳುತ್ತಾರೆ, ಆದರೆ ಸಂಸ್ಕೃತದಲ್ಲಿ ಪ್ರತಿ ಅಕ್ಷರಕ್ಕೂ ಅರ್ಥ ಹೇಳಲಾಗುತ್ತದೆ. ಉದಾಹರಣೆಗೆ - " ಗುರು" ಎಂಬ ಶಬ್ದ. ಇದೂ ಕನ್ನಡದ ಶಬ್ದ ಅಲ್ಲ. ಇಲ್ಲಿ 'ಗು' ಎಂದರೆ ಕತ್ತಲು/ ಅಂಧಕಾರ. 'ರು' ಎಂದರೆ ನಿವಾರಿಸುವುದು. ಅಂದರೆ ಅಜ್ಞಾನವೆಂಬ ಕತ್ತಲನ್ನು ನಿವಾರಿಸಿ ಜ್ಞಾನದ ಬೆಳಕು ನೀಡುವವನೇ ಗುರು. ( " ಗುಕಾರೋ ಅಂಧಕಾರಸ್ಯ , ರುಕಾರಸ್ತನ್ನಿರೋಧಕ:"). ಕನ್ನಡದಲ್ಲಿ ಬಹುಪಾಲು ಸಂಸ್ಕೃತಮೂಲದ ಶಬ್ದಗಳೇ ಇವೆ. ಹಾಗೆಯೇ ಇಂಗ್ಲಿಷ್, ಹಿಂದಿ, ಮರಾಠಿ, ಫಾರಸಿ, ಅರಬ್ಬಿ, ಪೋರ್ತುಗೀಜ ಮೊದಲಾದ ಭಾಷೆಗಳ ಶಬ್ದಗಳೂ ಇವೆ. ಆದರೆ ಅಂತಹ ಅನೇಕ ಶಬ್ದಗಳನ್ನು ನಾವು ನಮಗರಿವಿಲ್ಲದಂತೆ ನಮ್ಮ ಕನ್ನಡದ್ದೆಂಬಂತೆಯೇ ದಿನನಿತ್ಯ ಬಳಸುತ್ತಿರುತ್ತವೇವೆ. ( ಆಂಗ್ಲ ಶಬ್ದಕೋಶದಲ್ಲೂ ಕನ್ನಡದ ಶಬ್ದಗಳು ಇವೆಯೆನ್ನುವುದನ್ನು ಮರೆಯಬಾರದು.). ಟೀ, ಕಾಫಿ, ಟೀಚರ್, ಕಾರು, ರೈಲು, ಜೀಪು, ಸ್ಟೇಷನ್ನು, ಫೋನು, ಮೊಬೈಲ್, ಟೇಲರ್, ಕೋರ್ಟ್, ಪೋಲೀಸ್ ಕ್ಯಾಮರಾ, ಟಿಕೇಟು, ಹೊಟೆಲ್ಲು ಇಂತಹ ಲೆಕ್ಕವಿಲ್ಲದಷ್ಟು ಇಂಗ್ಲಿಷ್ ಶಬ್ದಗಳು ಕನ್ನಡೀಕರಣಗೊಂಡು ನಮ್ಮ ಬಳಕೆಯ ಭಾಷೆಯಲ್ಲಿ ಸೇರಿಕೊಂಡುಬಿಟ್ಟಿವೆ. ಇನ್ನು ಪರದೆ, ಸರದಾರ, ಕೂಲಿ, ಮಜೂರಿ, ಗೋರಿ, ಸಿಪಾಯಿ, ಲಕೋಟೆ, ಕುಸ್ತಿ, ಬಂದರು, ಶಾಯಿ, ತಮಾಷೆ, ಜವಾನ, ಸೇರು, ವಸೂಲು, ವರದಿ, ಲುಂಗಿ, ರುಮಾಲು, ಶಾಲು , ಮೇಜು, ಚಮಚಾ, ಪಲಾವು, ತರಕಾರಿ ಇವೆಲ್ಲ ಕನ್ನಡದ್ದಲ್ಲವೇ ಅಲ್ಲ. ಅವು ಮೂಲತ: ಫಾರ್ಸೀ ಭಾಷೆಗೆ ಸೇರಿದ ಶಬ್ದಗಳು. ಹಾಗೆಯೇ, ಮಸೀದಿ, ಜಿಲ್ಲೆ, ತಬಲಾ, ಕುರ್ಚಿ, ಮಾಲಿಕ, ಸಹಿ, ಜೇಬು, ದಿನಸಿ, ಸಾಮಾನು, ಜಪ್ತಿ, ತಂಬಾಕು, ರೊಕ್ಕ, ತಾಲ್ಲೂಕು, ಸಲಹೆ, ಹಾಜರಿ, ಸಾಹೇಬ, ನಕಲು, ಹಕ್ಕು, ಕಾಗದ, ಇವೆಲ್ಲ ಅರಬ್ಬೀ ಮೂಲದ ಶಬ್ದಗಳು. ಸಾಬೂನು, ಇಸ್ತ್ರಿ, ಕಂದೀಲು, ಅಲಮಾರಿ, ಬಟಾಟೆ, ಪಗಾರ, ಪಪ್ಪಾಯಿ, ಚೊಂಬು ಇವೆಲ್ಲ ಪೋರ್ತುಗೀಜ ಭಾಷೆಯಿಂದ ಬಂದಿವೆ. ಹೀಗೇ ಮರಾಠಿಯಿಂದ ಕನ್ನಡಕ್ಕೆ, ಕನ್ನಡದಿಂದ ಮರಾಠಿಗೆ ಸಾಕಷ್ಟು ಶಬ್ದಗಳು ವರ್ಗಾವಣೆಗೊಂಡಿವೆ. ಕನ್ನಡದ " ಹುಡುಕು" ಎಂಬ ಶಬ್ದವನ್ನು ಮರಾಠಿಯಲ್ಲಿ "ಹುಡುಕಾಯ್ಚೇ" ಎಂದು ಬಳಸುವುದೊಂದು ಉದಾಹರಣೆ. ಭಾಷೆ ಹರಡಿಕೊಳ್ಳುವುದೇ ಹೀಗೆ. ಅದು ಯಾವತ್ತು ಇನ್ನುಳಿದ ಭಾಷೆಗಳಿಗೆ ಋಣಿಯಾಗಿಯೆ ಇರುತ್ತದೆ. ನಾವು ಸಾಧ್ಯವಾದಷ್ಟು ಹೆಚ್ಚು ಭಾಷೆಗಳನ್ನು ಕಲಿಯುವುದರಿಂದ ನಮಗೇ ಲಾಭ. ತಮಿಳರ ಹಾಗೋ ಮರಾಠಿಗರ ಹಾಗೋ ಅತಿಯಾದ ಭಾಷಾಂಧತೆಯನ್ನು ಹೊಂದಿದರೆ ಜ್ಞಾನದಿಂದ ವಂಚಿತರಾಗುತ್ತೇವೆ. ಭಾಷಾಪ್ರಪಂಚ ಬಹಳ ವಿಸ್ತಾರವಾದುದು. ಜಾನ್ ಮೆಕ್ಕೆಲ್ ೧೮೨೦ ರಲ್ಲಿ ಕನ್ನಡದಲ್ಲಿ ೨೨೦ ಪುಟಗಳ ಕನ್ನಡ ವ್ಯಾಕರಣ ಪುಸ್ತಕ ಹೊರತಂದಿದ್ದಾನೆ. ಅದು ಕನ್ನಡದಲ್ಲಿ ಮುದ್ರಣಗೊಂಡ ಎರಡನೇ ಪುಸ್ತಕವೆನ್ಲಲಾಗಿದೆ. ಕನ್ನಡಿಗನಲ್ಲದ ಕಿಟೆಲ್ ೧೮೫೯ ರಲ್ಲಿ ೧೭೫೨ ಪುಟಗಳ ಕನ್ನಡ ಇಂಗ್ಲಿಷ್ ಶಬ್ದಕೋಶ ರಚಿಸಿದ. ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಾಥಮಿಕ ಶಿಕ್ಷಣ ಶಬ್ದಕೋಶ ಮತ್ತು ವ್ಯಾಕರಣದಿಂದಲೇ ಪ್ರಾರಂಭವಾಗುತ್ತಿತ್ತೆಂದೂ, ಆ ಶಾಲೆಗಳಿಗೆ " ಗ್ರಾಮರ್ ಸ್ಕೂಲ್" ಎಂದು ಕರೆಯಲಾಗುತ್ತಿತ್ತೆನ್ನಲಾಗಿದೆ. ಇವೆಲ್ಲಕ್ಕಿಂತ ಬಹಳ ಹಿಂದೆಯೆ ಭಾರತದಲ್ಲಿ ಪಾಣಿನಿ, ಪತಂಜಲಿ ಮುನಿಗಳಿಂದ ಸಂಸ್ಕೃತದಲ್ಲಿ ವ್ಯಾಕರಣ ಗ್ರಂಥಗಳು ರಚನೆಯಾಗಿರುವುದೂ ಹೆಮ್ಮೆಯ ವಿಚಾರ. - ಎಲ್. ಎಸ್. ಶಾಸ್ತ್ರಿ

ನಮ್ಮ ಭಾಷಾಪ್ರಪಂಚ
bottom of page