top of page

ನಡೆ ನುಡಿ ಒಂದಾಗಿರಲಿ

ನೆರೆಮನೆಯಲ್ಲಿ ಸಿರಿಯಿರ್ದಡೆ ಕಾರಣವೇನು? ಪುರಾತನರ ವಚನ ವಚಿಸಿದಲ್ಲಿ ಫಲವೇನು? ವಚನದಂತೆ ತಾನಿಲ್ಲ, ತನ್ನಂತೆ ವಚನವಿಲ್ಲ ಮೂಗಿಲ್ಲದವರು ಕನ್ನಡಿಯ ನೋಡಿದಡೆ, ಶೃಂಗಾರ ಮೆರೆವುದೇ, ದೇವರಾಯ ಸೊಡ್ಡಳಾ? ನುಡಿ ಮತ್ತು ನಡೆ (ಮಾತು ಮತ್ತು ಕೃತಿ) ಒಂದಾಗಿರಬೇಕೆಂಬ ನಿಲುವು ಇಂದು ನಿನ್ನೆಯದಲ್ಲ. ಪುರಾತನ ಕಾಲದಿಂದಲೂ ಬಳಕೆಯಲ್ಲಿರುವ ನುಡಿಗಟ್ಟು ಅದು. ’ತ್ರಿಕರಣಪೂರ್ವಕ’ ಎಂಬ ಮಾತು ಅದನ್ನೇ ಸೂಚಿಸುತ್ತಿದೆ. ಆಲೋಚನೆ, ಮಾತು ಮತ್ತು ಕೃತಿ ಒಂದಾಗುವುದೆಂದರೆ ವ್ಯಕ್ತಿಯ ಅಭಿಪ್ರಾಯ ಸಂಪೂರ್ಣವಾಗಿ ನಿಜಾರ್ಥದಲ್ಲಿ ಸಂವಹನಗೊಳ್ಳುತ್ತದೆಂದು ಭಾವಿಸಿಕೊಳ್ಳಬಹುದು. ನಡೆ ಮತ್ತು ನುಡಿ ಒಂದಾಗದಿದ್ದರೆ ಆತ್ಮ ಮತ್ತು ಪರಮಾತ್ಮನ ಅನುಸಂಧಾನ ಏರ್ಪಡುವುದಿಲ್ಲ. ಅದು ಆತ್ಮವಂಚನೆಯೇ ಆಗಿಬಿಡುತ್ತದೆ. ಅಂಥವರಿಗೆ ದೇವರು ಒಲಿಯುವುದಿಲ್ಲ ಅಥವಾ ಅವರ ಪ್ರಯತ್ನ ಕೈಗೂಡುವುದಿಲ್ಲ. ಹೇಳುವುದೊಂದು, ಮಾಡುವುದು ಮತ್ತೊಂದು ಎಂದಾದರೆ ಯಾರು ತಾನೇ ಅಂಥವರನ್ನು ಮೆಚ್ಚುತ್ತಾರೆ? ಹುಸಿ ವ್ಯಕ್ತಿತ್ವ ಅಥವಾ ಢಾಂಬಿಕತೆ ಉಳ್ಳವರನ್ನು ಸೊಡ್ಡಳ ಬಾಚರಸನ ಈ ವಚನ ಚೆನ್ನಾಗಿ ವಿಮರ್ಶಿಸುತ್ತದೆ. ಎತ್ತರಕ್ಕೆ ಬೆಳೆದ ಮರವೊಂದು ಅಷ್ಟೇ ಆಳಕ್ಕೆ ತನ್ನ ಬೇರನ್ನು ಕಳಿಸಿರುತ್ತದೆ. ಇಲ್ಲವಾದರೆ ಆ ಮರ ಗಾಳಿ ಮಳೆಗೆ ಉರುಳಿ ಬೀಳುವುದರಲ್ಲಿ ಅನುಮಾನವಿಲ್ಲ. ಇರುವುದಕ್ಕಿಂತ ಹೆಚ್ಚು ತೋರಿಸಲು ಪ್ರಯತ್ನಿಸಿದರೆ ಅವರ ನಿಜಬಣ್ಣ ಬಹು ಬೇಗ ಬಯಲಾಗಿ ನಗೆಪಾಟಲಿಗೆ ಈಡಾಗುವರು. ಜಗತ್ತನ್ನು ಮೆಚ್ಚಿಸುವ ಹುಚ್ಚು ಪ್ರಯತ್ನಕ್ಕಿಂತ ನಿಜದ ನೇರಕ್ಕೆ ನಾವು ನಡೆದುಕೊಂಡರೆ ಅಷ್ಟೇ ಸಾಕು. ನಾವು ಮಾಡುವ ಕೆಲಸ ನಮಗೆ ತೃಪ್ತಿ ಕೊಟ್ಟರೆ ಅದಕ್ಕಿಂತ ದೊಡ್ಡ ಸಂತೋಷ ಬೇರೆ ಇಲ್ಲ. ಆತ್ಮತೃಪ್ತಿ ಮತ್ತು ಆತ್ಮಸಂತೋಷ ಬಲು ದೊಡ್ಡದು. ಬಾಹುಬಲಿಯಂತೆ, ತನ್ನನ್ನು ತಾನು ಗೆದ್ದವನು ಜಗತ್ತನ್ನು ಗೆಲ್ಲುವುದರಲ್ಲಿ ಸಂಶಯವಿಲ್ಲ. ನಡೆ ನುಡಿ ಒಂದಾಗುವುದೇ ತನ್ನನ್ನು ತಾನು ಗೆಲ್ಲಲಿರುವ ಮೊದಲ ಹಂತ. ನಮ್ಮ ನೆರೆಮನೆಯವರು ಶ್ರೀಮಂತರಾಗಿರಬಹುದು. ಅದರ ಕಾರಣವನ್ನು (ಅಥವಾ ಮೂಲವನ್ನು) ಅರಿಯುವುದರಿಂದ ಉಪಯೋಗವೇನು? ನಾವು ಶ್ರೀಮಂತರಾಗಬೇಕಾದರೆ ಕಾಯಕವೇ ಕೈಲಾಸ ಎಂದು ತಿಳಿದು ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ದುಡಿಯಬೇಕು. ಆಗ ಫಲಪ್ರಾಪ್ತಿ ಆಗಬಹುದು. ವಚನದಂತೆ (ಮಾತಿನಂತೆ) ನಡೆದುಕೊಂಡರೆ ವರ್ಚಸ್ಸು ವೃದ್ಧಿಯಾಗುತ್ತದೆ. ಲೋಕದಲ್ಲಿ ಕೀರ್ತಿ ಬೆಳಗುತ್ತದೆ. ಇಲ್ಲವಾದರೆ ಹಿಂದಿನಿಂದ ಆಡಿಕೊಂಡು ಮಂದಿ ನಗುವರು. ಜೀವಂತ ಶವದಂತೆ ಬಾಳು ಸವೆಸಬೇಕಾಗುವುದು. ಉಪನಿಷದ್ ವಾಕ್ಯಗಳನ್ನು ಉದ್ಧರಿಸಿ ದೊಡ್ಡ ದೊಡ್ಡ ಮಾತುಗಳನ್ನು ಹೇಳುವುದರಿಂದಲೂ ಉಪಯೋಗವಿಲ್ಲ. ಮಾತು ಅಥವಾ ಉಪದೇಶ ಸ್ವಾನುಭವದಿಂದ ಮೂಡಿ ಬರಬೇಕು. ಅನುಭವಕ್ಕಿಂತ ದೊಡ್ಡ ಪಾಠವಿಲ್ಲ. ಹಾಗಾಗಿ, ಪುರಾತನರ ಮಾತನ್ನು ಬರಿದೇ ಉದ್ಧರಿಸದೆ - ಬೇರೆಯವರ ಅಭಿಪ್ರಾಯಗಳಿಗೆ ಕೊರಳಾಗದೆ - ನಮ್ಮ ಸ್ವಂತ ವಿಚಾರಗಳನ್ನು ’ಆನು ಒಲಿದಂತೆ’ ಆಡಬೇಕು. ಆಗ ಅದಕ್ಕೆ ನೆಲೆ ಮತ್ತು ಬೆಲೆ ಪ್ರಾಪ್ತಿಯಾಗುವುದು. ಯಾವುದೇ ಸಂಘಟನೆಯಲ್ಲಿ ಅದರ ಎಲ್ಲ ಆಶಯಗಳನ್ನು ಅರಿತುಕೊಂಡ ಕೆನೆಪದರದ ವ್ಯಕ್ತಿಗಳಿರುವಂತೆ, ಮೇಲ್ ಸ್ತರದಲ್ಲಿ ಕೆಲಸ ಮಾಡುವ ಅಥವಾ ಕೆಲಸ ಮಾಡುವವರಂತೆ ನಟಿಸುವ ವ್ಯಕ್ತಿಗಳೂ ಇರುತ್ತಾರೆ. ಅನುಭವ ಮಂಟಪದಲ್ಲಿ ಮತ್ತು ಮಹಾಮನೆಯಲ್ಲಿ ಇರುವ ಇಂತಹ ವ್ಯಕ್ತಿಗಳ ಅತ್ಯುತ್ಸಾಹದ ಮಾತುಗಳ ಬಗ್ಗೆ, ಸೋಗಲಾಡಿತನದ ಬಗ್ಗೆ ಸೊಡ್ಡಳ ಬಾಚರಸ ಚಾಟಿ ಬೀಸುತ್ತಾನೆ. ’ವಚನದಂತೆ ತಾನಿಲ್ಲ, ತನ್ನಂತೆ ವಚನವಿಲ್ಲ’ ಎಂದು ಅಂಥವರ ಬಗ್ಗೆ ಸೊಡ್ಡಳ ಟೀಕಿಸುತ್ತಾನೆ. ಮೂಗು ಸೌಂದರ್ಯದ ಪ್ರತೀಕ. ಸಂಪಿಗೆ ಎಸಳಿನಂತಹ ಮೂಗಿನ ಬಗ್ಗೆ ಕವಿಗಳು ಹಾಡಿ ಹೊಗಳಿದ್ದಾರೆ. ಮುಖಕ್ಕೆ ಮೂಗು ಭೂಷಣ. ಮೂಗು ಇಲ್ಲದಿದ್ದರೆ ಮೊಗ ಸೊಗಯಿಸುತ್ತದೆಯೇ? ’ಮೂಗಿಲ್ಲದವರ ರಾಜ್ಯದಲ್ಲಿ ಮುರಿದ ಮೂಗಿನವನೇ ರಾಜ’ ಎಂಬ ಗಾದೆ ಮಾತೊಂದಿದೆ. ಅಂದರೆ ಮೂಗು ಇರದವರ ನಡುವೆ ಮುರಿದ ಮೂಗಿನವನು ರಾಜನಾಗಿ ಮೆರೆಯುವನು ಎಂಬುದು ಭಾವಾರ್ಥ. ಅಂದಾಗ ಮೂಗಿನ ಮಹತ್ವವನ್ನು ಅರಿಯಬಹುದು. ಮೂಗಿಲ್ಲದವರು ಕನ್ನಡಿಯ ನೋಡಿದರೆ ಹೇಗೆ ಶೃಂಗಾರ ಮೆರೆಯುವುದಿಲ್ಲವೋ ಹಾಗೆ ನುಡಿದಂತೆ ನಡೆಯದಿದ್ದರೆ ಚೆಲುವಿಲ್ಲ ಎಂದು ಸೊಡ್ಡಳ ಢಾಂಬಿಕ ಜನರನ್ನು ಟೀಕಿಸುತ್ತಾನೆ. ಉದ್ದೇಶ ಯಶಸ್ವಿಯಾಗಬೇಕಾದರೆ ನಿಜಭಕ್ತಿಯುಳ್ಳ, ನಿಷ್ಠಾವಂತ, ಶ್ರದ್ಧಾಳುಗಳಾದ ಅನುಯಾಯಿಗಳು ಬೇಕು ಎಂಬುದು ಅವನ ಅಭಿಪ್ರಾಯ. ನೇತ್ಯಾತ್ಮಕ ಮಾತುಗಳ ಮೂಲಕ ಇತ್ಯಾತ್ಮಕ ಅಂಶಗಳನ್ನು ಸೊಡ್ಡಳ ಇಲ್ಲಿ ಎತ್ತಿ ಹೇಳುತ್ತಿದ್ದಾನೆ. ನೆರೆಮನೆಯಲ್ಲಿ ಸಿರಿ ಇದ್ದು ಫಲವೇನು? ಹಿಂದಣವರ ಮಾತನ್ನು (ಅನುಸರಿಸದೆ, ಅನುಷ್ಠಾನಕ್ಕೆ ತಾರದೆ) ಹೇಳಿದಲ್ಲಿ ಉಪಯೋಗವೇನು? ಆಡಿದ ಮಾತಿನಂತೆ ನಡೆದುಕೊಳ್ಳದಿದ್ದರೆ ಉಪಯೋಗವೇನು? ಇವೆಲ್ಲ ಮೂಗಿಲ್ಲದವರು ಕನ್ನಡಿಯನ್ನು ನೋಡಿಕೊಂಡಂತೆ ಹಾಸ್ಯಾಸ್ಪದವಾಗುತ್ತದೆ ಎಂದು ಖಾರವಾಗಿ ವಿಡಂಬಿಸುತ್ತಾನೆ. ಅವನ ಈ ಮಾತು ಇಂದಿನ ಸಮಾಜಕ್ಕೂ ಅನ್ವಯಿಸುತ್ತದೆ. -ಡಾ. ವಸಂತಕುಮಾರ ಪೆರ್ಲ.

ನಡೆ ನುಡಿ ಒಂದಾಗಿರಲಿ
bottom of page