ದೇಶವೊಂದು ಹಾಳೆಯಾಗದಿರಲಿ
ವಾಲೇಸ್ ಎಳೆದ ಗೆರೆ ಹುಡುಕಲು ಸಾಧ್ಯವೇ ಖಂಡಗಳ ಅಂತರ ಹೇಳಲು ಅವನೆಳೆದದ್ದು ಕಾಲ್ಪನಿಕ ಗೆರೆ ಗ್ರಿನಿಚ್ ನ ತುಂಬ ಅಡ್ಡಾಡಿದರೂ ರೇಖೆಯ ಜಾಡು ಹಿಡಿಯುವುದು ಉಂಟೇ ಸಮುದ್ರದಲ್ಲೂ ಹಾಯುವ ಅದು ಕಾಣದ ಗೆರೆ ಭೂ ಮಧ್ಯ ರೇಖೆಯನು ಭೂಮಿಯೊಳ ತೂರಿ ಎಳೆದವರು ಯಾರು ಅಕ್ಷಾಂಶ ರೇಖಾಂಶ ಎಳೆದವರೇ ಇರಬೇಕು ತಲುಪಲಾಗದ ಆಗಸದಲ್ಲೂ ಗೆರೆಯೆಳೆದು ವೃತ್ತ ಕಂಡವರು ದೇಶಗಳ ನಡುವೆ ಎಳೆಯುವುದೇನು ಮಹಾ ಎಷ್ಟು ಸುಂದರ ನಕ್ಷೆ ಬಿಡಿಸಿಟ್ಟ ಚರಿತೆ ಕನಸ ನಕ್ಷೆಗಳು ಹೇಗಿವೆಯೋ ಹಣೆಯ ಮೇಲೂ ನಿರಿಗೆ ಎಳೆವ ತುರುಸಿನಲ್ಲಿ ಪೆನ್ಸಿಲು ಹಿಡಿದು ಹುಡುಕುತ್ತ ಅಲೆವವರಿಗೆ ದೇಶವೊಂದು ಹಾಳೆಯಾಗದಿರಲಿ ಯಾರದೋ ಗೆರೆಗೆ ನಮ್ಮ ಎದೆ ಬಣ್ಣ ಚೆಲ್ಲುವ ಮೊದಲು ಇರುವ ನಕ್ಷೆ ಹರಿಯದಿರಲಿ ಕನಸ ಕಕ್ಷೆಯಾಗದಿರಲಿ ಕೈಯೊಳಗಿನ ಗೆರೆಗಳನ್ನು ಕಣ್ಣುಗಳು ಕಾಯಲಿ ಕಣ್ಣುಗಳ ನಡುವೆ ಯಾರೂ ಎಳೆಯದಿರಲಿ ಅಳೆಯದಿರಲಿ - ಜಿ.ಕೆ.ರವೀಂದ್ರಕುಮಾರ್ ನಮ್ಮ ನಡುವಿನ ಕವಿ ಮತ್ತು ಮಾನವತಾವಾದಿ ಜಿ.ಕೆ.ರವೀಂದ್ರ ಕುಮಾರ ಅವರ ಕವಿತೆ "ದೇಶವೊಂದು ಹಾಳೆಯಾಗದಿರಲಿ" ಮಂಗಳೂರು ವಿ.ವಿ. ಕನ್ನಡ ವಿಷಯದ ಮೊದಲ ಸೆಮಿಸ್ಟರಿಗೆ ಕಲಾ ಗಂಗೋತ್ರಿ -೧ ರಲ್ಲಿ ಪ್ರಕಟವಾಗಿ ಕವಿ ಅಮರ ಎಂಬ ಸತ್ಯವನ್ನು ಶ್ರುತ ಪಡಿಸಿದೆ.- ಸಂಪಾದಕರು