ಜೀವ ನದಿಗೆ ಬೆಳಕ ಹರಿಸು
ಎಲ್ಲೋ ಬೆಳೆಸಿದೆ ಇನ್ನೆಲ್ಲೋ ಬಾಳಿಸುವೆ ಇಂದಿಲ್ಲಿ ಬಾಳಿಸುತ್ತಿರುವೆ ಅಳಿದುಳಿವ ಬಾಳಿಗೆ ಇನ್ನೆಲ್ಲೊ ಸವಿ ತುಂಬುವೆ. ಮತ್ತೆಲ್ಲೋ ಜೀವನದಿಯನು ದೇವನದಿಗೆ ಹರಿಸುವೆ ದೇವದೇವನೆ ಏನು ಮಾಯೆಯೋ ಇದು ದೇವ ಏನು ಮಾಯೆಯೋ ಏನಾಗಿ ಹುಟ್ಟಿಸುವೆಯೋ ಏನೆಂದು ಬೆಳೆಸುವೆಯೊ ಹೇಗೆಲ್ಲ ಬಾಳಿಸುವೆಯೊ ದೇವ ನಿನ್ನ ಕೃಪೆಯೊಂದಿರಲಿ. ದೇವ ಎಂದೂ ಎನ್ನ ನಿನ್ನ ಅಡಿಯ ಹೂವಾಗಿಸೊ, ಜೀವನದ ಪರಿಮಳವ ತುಂಬು ಮುಳ್ಳಿರಲಿ ಮೃದುವಲರಾಗಿರಲಿ. ಶ್ರೀಭಕ್ತಿಯನೆ ಹೊಸೆಯುವೆನು ನಿನ್ನದುರು ಕೃಪಾಸಾಗರನೆ,ನೀ ಕರೆಯು ತಂದೆ ಮಗುವಿನಂತೆ,ನಿನ್ನೆದುರು ನಿಲ್ಲುವ ಸಿರಿ ಗೋಪನಂತೆ, ಭವಸಾಗರಕ್ಕೆ ಧುಮುಕಿಸು ಈಸಲು ಬಿಡು,ನಿನ್ನ ಹಿಡಿತವಿರಲಿ ಹಿಂದೆ, ಶರಣಾಗತವಾಗಿಸಿಕೊ ನಿನ್ನ ಭವ್ಯ ಜೀವನಕೆ. ಲಘು ಮನದ ಲೋಗರ ವಿಚಾರಗಳನ್ನು ಸ್ಪಷ್ಟಪಡಿಸದೆನಗೆ, ದೇವ ನಿನ್ನ ಮಹಾದಾಲೋಚನೆಗಳ ಧಾರೆ ಎರೆ. ಪ್ರೀತಿಯ ಬೆಳಕ ಎತ್ತಲೂ ಹರಿಸು, ಕವಿದಿರುವ ಕತ್ತಲೆಯ ಎತ್ತಲೋ ಸರಿಸು, ಸಪ್ರೇಮದ ಜೀವನ ಬಾಂದಳದೆ ಎನ್ನನಿರಿಸು,ಜೀವನ ದೇವನೇ ಸುಖೀರಾಜ್ಯ ತಿಲಕಲನೆ,ಪ್ರೇಮದ ಮೂರ್ತಿಯನ್ನಾಗಿಸು, ಸರ್ವಧರ್ಮಸ್ವರೂಪನೆನಿಸು, ಶ್ರೀಮಾತೆಯ ಜೀವನ ದೇವನೆ ಪಾವನನೆ. ಎನ್ನುಳಿರುವ ಜಡವ ತೊಡೆ ನಿನ್ನೊಳಿರುವ ಚೇತನವ ಎರೆ ತನುವು ನಿನ್ನ ಕೃಪೆಯಂತೆ ಭಕ್ತಿಯಲಿ,ಶಾಂತಿಯ ಮಂತ್ರವ ಸಾರಲಿ ಅನಂತ ಗಗನದೇಶದೊಳು ಸುಯ್ಯುವ ಗಾಳಿಗೆ ಓಡಲಿ ಕುಣಿಯಲಿ ಹಾರಲಿ ಚೇತನವು ನೀ ಕರುಣಿಸಿಹ ಬಾಳ್ವೆಯು,ಬಾಳಿನ ಹಬ್ಬವ ಸವಿಯಲಿ, ಹಲವು ನೆಚ್ಚುಗಳ ನಡುವೆ ಹಲವು ಕಿಚ್ಚುಗಳ ನಡುವೆ, ಹೃನ್ಮನ ನೆಮ್ಮದಿಯ ಬೀಡಾಗಲಿ ಗುರುದೇವನೆ ನಿನ್ನದೇ ಆಗಲಿ ಎನ್ನ ಜೀವನವೆಂದೂ.. ಕರ ನೀಡುವ ತವರಾಗಲಿ ಎನ್ನ ನೆಮ್ಮದಿ ಶಾಂತಿ ನಿನ್ನಿಂದಾಗಲಿ ದೇವ ನಿನ್ನ ಕರುಣೆಯ ಕಣ್ಣಲ್ಲಿ ಬೆಳಗುವ ಬೆಳಕಾಗಿಸೊ ನಿತ್ಯದೂರಿನ ಭಾಸ್ಕರನೆ ಜಯ ಜಯವೆನ್ನಲಿ ಸುರನರರೆಲ್ಲರು ಜಯದ ಕಿರೀಟವೇರಲಿ ಮಹತೇಜನೆ ನಿನಗೆ . ಲಕ್ಷ್ಮೀ ದಾವಣಗೆರೆ ಕವಯತ್ರಿ ಲಕ್ಷ್ಮೀ ದಾವಣಗೆರೆ ಅವರು ಆಲೋಚನೆ.ಕಾಂ ಪತ್ರಿಕೆಯ ಗಂಭೀರ ಓದುಗರು ಮತ್ತು ಬರಹಗಾರರು. ಕವಿತೆ ಅವರ ಕಾಯಕ. ಕಾವ್ಯದ ಒಡಲಲ್ಲಿ ಭಕ್ತಿ ಮತ್ತು ತಾತ್ವಿಕತೆಯನ್ನು ಮೇಳವಿಸುವಲ್ಲಿ ಶಕ್ತರು. ಅವರ ಜೀವ ನದಿಗೆ ಬೆಳಕ ಹರಿಸು ಕವನ ನಿಮ್ಮ ಸ್ಪಂದನಕ್ಕಾಗಿ. ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ