top of page

ಜಾನಪದ ನಂಬಿಕೆಗಳು

ಡಾ. ಪೆರ್ಲರ ವಾರಾಂಕಣ ವಸಂತೋಕ್ತಿ – 15. ನಾವು, ಜಾನಪದವನ್ನು ಅಧ್ಯಯನ ಮಾಡುವವರು, ಜನಪದ ನಂಬಿಕೆಗಳ ಬಗ್ಗೆ ಮಾತಾಡುತ್ತೇವೆ. ಆಧುನಿಕ ವೈಚಾರಿಕರು, ಕ್ಷೇತ್ರ ತಮ್ಮದಲ್ಲದಿದ್ದರೂ, ಅವನ್ನೆಲ್ಲ ಮೂಢನಂಬಿಕೆಗಳು ಎಂದು ಕರೆಯುತ್ತಾರೆ. ಯಾವುದು ನಂಬಿಕೆ, ಯಾವುದು ಮೂಢನಂಬಿಕೆ ಎಂದು ಗೆರೆ ಎಳೆದಂತೆ ಮಾತಾಡುವುದು ಬಹಳ ಕಷ್ಟ. ಪ್ರತಿಯೊಂದು ತಲೆಮಾರು ಜೀವನದ ಪ್ರವಾಹದಲ್ಲಿ ಜರ್ಜರಿತವಾಗಿ ತನ್ನ ಕಾಲದ ಸಹನೀಯ ಬದುಕಿಗೆ ಬೇಕಾದ ಕೆಲವು ನಂಬಿಕೆಗಳನ್ನು ಅಳವಡಿಸಿಕೊಳ್ಳುತ್ತದೆ. ತಮ್ಮ ಮನಸ್ಸಿಗೆ ಬಲ - ಧೈರ್ಯ ತಂದುಕೊಳ್ಳಲು ಅಂತಹ ನಂಬಿಕೆ ಬೇಕಾಗುತ್ತದೆ. ನಂಬಿಕೆಯು ಆತ್ಮವಿಶ್ವಾಸವನ್ನು ಗಟ್ಟಿಗೊಳಿಸಿಕೊಳ್ಳಲು ಬೇಕಾದ ಒಂದು ಸಾಧನ. ಅದರಿಂದ ಯಾರಿಗೂ ನಷ್ಟವಿಲ್ಲ. ಹಕ್ಕಿಗಳು ಗೂಡು ಕಟ್ಟುವಾಗ ಸೂಕ್ಷ್ಮವಾಗಿ ಗಮನಿಸಿ. ಗಂಡು ಹೆಣ್ಣು ಪಕ್ಷಿಗಳು ಸೇರಿಕೊಂಡು ಗೂಡು ಕಟ್ಟುತ್ತವೆ. ಪುರ್ರನೆ ಹಾರಿ ಹೋಗಿ ಕಸ ಕಡ್ಡಿ ತರಗೆಲೆ ಏನೇನೋ ತರುತ್ತವೆ. ಗೂಡು ಕಟ್ಟುವಾಗ ಕೆಳಗೆ ಬಿದ್ದವುಗಳನ್ನು ಅವು ಮತ್ತೆ ತೆಗೆದುಕೊಳ್ಳುವುದಿಲ್ಲ. ಕೆಳಗೆ ಬಿದ್ದುದು ಅಯೋಗ್ಯವಾದದ್ದು ಮತ್ತು ತ್ಯಾಜ್ಯ ಎಂದೇ ಅವುಗಳ ಲೆಕ್ಕ. ಗೂಡು ಕಟ್ಟುವಲ್ಲಿ ಸಂಜೆ ವೇಳೆಗೆ ನೀವು ನೋಡಿದರೆ ಕೆಳಗೆ ನೆಲದಲ್ಲಿ ಒಂದು ತಟ್ಟೆ ಕಸಕಡ್ಡಿ ದೊರೆಯುತ್ತದೆ. ಯಾಕೆ ಅವು ಕೆಳಗೆ ಬಿದ್ದುದನ್ನು ಮತ್ತೆ ತೆಗೆದುಕೊಳ್ಳುವುದಿಲ್ಲ? ಒಂದು ಪ್ರಾಣಿ ಬೇಟೆಯಾಡುವುದನ್ನು ನೋಡಿ. ಸಿಂಹ, ಹುಲಿ ಅಥವಾ ಚಿರತೆ ಹಸಿವಾದಾಗ ಒಂದು ಪ್ರಾಣಿಯನ್ನು ಗುರುತಿಸಿ ಲಕ್ಷ್ಯವಿಟ್ಟು ದಾಳಿ ಮಾಡುತ್ತದೆ. ಕೆಲವೊಮ್ಮೆ ದಾಳಿಗೊಳಗಾಗುವ ಪ್ರಾಣಿಗೆ ಅದು ಗೊತ್ತಾಗಿಬಿಟ್ಟರೆ ಓಡಿ ತಪ್ಪಿಸಿಕೊಳ್ಳುತ್ತದೆ. ಬೇಟೆಯಾಡುವ ಪ್ರಾಣಿ ಬೆನ್ನಟ್ಟಿ ಹಿಡಿಯುತ್ತದೆ. ಆದರೆ ಕೆಲವೊಮ್ಮೆ ಸಿಗದೇ ಹೋಗಬಹುದು. ಆಗ ಆ ಪ್ರಾಣಿ ತನ್ನ ಬಲಿಯನ್ನು ಬಿಟ್ಟು ಬೇರೆ ಪ್ರಾಣಿಗಳತ್ತ ಲಕ್ಷ್ಯ ವಹಿಸುತ್ತದೆ. ಯಾಕೆ ತಪ್ಪಿಸಿಕೊಂಡು ಹೋದ ಪ್ರಾಣಿಯನ್ನು ಅದು ಬಿಟ್ಟುಬಿಡುತ್ತದೆ? ಅಂದರೆ ಅದು ಪ್ರಾಣಿಗಳ ನಂಬಿಕೆ ಮತ್ತು ಅವುಗಳ ಜೀವನ ವಿಧಾನಕ್ಕೆ ಸಂಬಂಧಿಸಿದ ಶಿಸ್ತು. ಇಂಥವಕ್ಕೆ ವಿವರಣೆ ವಿಶ್ಲೇಷಣೆ ಬೇಕಾಗಿಲ್ಲ. ಗೂಡು ಕಟ್ಟುತ್ತಿರುವಾಗ ಕೆಳಗೆ ಬಿದ್ದ ಕಸ ಕಡ್ಡಿ ತರಗೆಲೆ ತನ್ನ ವಾಸ್ತುವಿಗೆ ಅಯೋಗ್ಯವಾದದ್ದು ಎಂದು ಹಕ್ಕಿ ಪರಿಗಣಿಸುತ್ತದೆ. ಓಡಿ ತಪ್ಪಿಸಿಕೊಂಡ ಬೇಟೆ ತನ್ನ ಅಂದಿನ ಆಹಾರಕ್ಕೆ ತಕ್ಕುದಾದುದಲ್ಲ ಎಂದು ಬೇಟೆಯಾಡುವ ಪ್ರಾಣಿ ನಿರ್ಧರಿಸುತ್ತದೆ. ಅಂತೆಯೇ, ಮನುಷ್ಯನಿಗೆ ತನ್ನ ದೈನಂದಿನ ಜೀವನ ನಿರ್ವಹಣೆಯ ಸಂದರ್ಭದಲ್ಲಿ ಮಾನಸಿಕವಾದ ಆಸೆ ಭರವಸೆಗಳಿಗಾಗಿ ಕೆಲವು ನಂಬಿಕೆಗಳ ಊರೆಗೋಲು ಬೇಕಾಗುತ್ತದೆ. ಅದನ್ನು ಮೂಢನಂಬಿಕೆ ಎಂದು ಅಲ್ಲಗಳೆಯಲಾಗದು. ತನಗೆ ಪ್ರಕೃತಿಯ ಅಥವಾ ದೇವರ ನೆರವು ಬೇಕಾಗಿಲ್ಲ, ತಾನೇ ಎಲ್ಲವನ್ನೂ ಮಾಡಬಲ್ಲೆ ಎಂಬ ಅತೀವ ಆತ್ಮವಿಶ್ವಾಸ ಮನುಷ್ಯನಿಗೆ ಇದೆ. ಇರಲಿ, ಅದು ತಪ್ಪಲ್ಲ. ಆದರೆ ಅದು ಮೈಯಲ್ಲಿ ಕಸುವು – ಬಿಸಿನೆತ್ತರು ಇರುವ ವರೆಗೆ ಮಾತ್ರ. ಕಸುವು ಉಡುಗಿದ ಮೇಲೆ, ಆಸ್ಪತ್ರೆಗೆ ಹೋಗಿ ಬಂದು, ರಾಮಾ ಕೃಷ್ಣಾ ಎಂದು ಭಜನೆ ಮಾಡುತ್ತ ಕೂರುವುದನ್ನು ಮತ್ತು ಇತರರಿಗಿಂತ ಹೆಚ್ಚು ದೈವಭಕ್ತರಾಗುವುದನ್ನು ಕಾಣುತ್ತೇವೆ! ನಮ್ಮ ಮನೆಯ ಹತ್ತಿರ ಒಂದು ದೊಡ್ಡ ಮನೆ ನಿರ್ಮಾಣವಾಗುತ್ತಿದೆ. ನಿನ್ನೆ ಅತ್ತ ಕಡೆ ಹೋಗಿದ್ದೆ. ಅರ್ಧ ಕೆಲಸ ಆಗಿತ್ತು. ಕಟ್ಟಡದ ಮುಂಭಾಗದಲ್ಲಿ ದೃಷ್ಟಿ ತಾಗದಂತೆ ನಾಲಗೆ ಹೊರಚಾಚಿದ ರಾಕ್ಷಸನ ಮುಖವಾಡ ನೇತಾಡಿಸಿದ್ದರು. ನನ್ನ ಪರಿಚಿತ ಎಂಜಿನಿಯರ್. ಗೊತ್ತಿತ್ತು, ಆದರೂ ಅದೇನು ಅಂತ ಅವರ ಬಳಿ ಕೇಳಿದೆ. ಅವರಿಗೆ ನನ್ನ ಧ್ವನಿ ಅರ್ಥವಾಯಿತು. ಹೊಸಮನೆಗಳಿಗೆ ದೃಷ್ಟಿ ತಾಗದಂತೆ ರಕ್ಕಸನ ಮುಖವಾಡ ಕಟ್ಟುವುದು ವಾಡಿಕೆ ಎಂದರು. ಅದೊಂದು ಮೂಢನಂಬಿಕೆ ಅಲ್ಲವೇ ಎಂದೆ. ನಿಮಗೆ ಗೊತ್ತಿಲ್ಲ. ಅದು ಅರ್ಥಿಂಗ್ ವ್ಯವಸ್ಥೆ (earthing point) ಎಂದರು. ಎಲ್ಲ ಜನರಲ್ಲೂ ಒಂದೇ ರೀತಿಯ ಭಾವನೆಗಳು ಇರುವುದಿಲ್ಲ, ತಂತಿಯಲ್ಲಿ ವಿದ್ಯುಚ್ಛಕ್ತಿ ಪ್ರವಹಿಸುವಾಗ ಹೆಚ್ಚಾದ ವಿದ್ಯುಚ್ಛಕ್ತಿಯನ್ನು earthing ವ್ಯವಸ್ಥೆಯ ಮೂಲಕ ಭೂಮಿಗೆ ಹರಿಸಿ ನಮ್ಮ ವಿದ್ಯುತ್ ಉಪಕರಣಗಳನ್ನು ಹೇಗೆ ರಕ್ಷಿಸಿಕೊಳ್ಳುತ್ತೇವೋ ಹಾಗೆ ಇಂತಹ ದೃಷ್ಟಿಬೊಟ್ಟುಗಳ ಮೂಲಕ ಜನರ ಭಾವನೆಗಳ ವಿಷಪ್ರವಾಹವನ್ನು ನಿರಸನಗೊಳಿಸಿ ನಮ್ಮ ರಚನೆಗಳನ್ನು ಸಂರಕ್ಷಿಸಿಕೊಳ್ಳುವ ಒಂದು ಕ್ರಮ ಇದು ಎಂದರು! ಜನರ ಮಿತಿಮೀರಿದ ವಿಷಭಾವನೆಗಳನ್ನು ಸ್ವೀಕರಿಸಿ ಅದನ್ನು ಭೂಮಿ ಹೀರಿಕೊಳ್ಳುವಂತೆ ಮಾಡುವುದೇ ದೃಷ್ಟಿಬೊಟ್ಟಿನ ಕೆಲಸ! ವಿಷಭಾವನೆಗಳೇ ಆಗಬೇಕಾಗಿಲ್ಲ, ಮೆಚ್ಚುಗೆಗಳೂ ಮಿತಿಮೀರಿದಾಗ ಅರಗಿಸಿಕೊಳ್ಳುವುದು ಕಷ್ಟ! ಎಂಜಿನಿಯರ್ ಹೇಳಿದ ಈ ಮಾತಿನಲ್ಲಿ ನಂಬಿಕೆ - ಮೂಢನಂಬಿಕೆಗಳ ಬಗೆಗಿನ ಎಷ್ಟು ಒಳ್ಳೆಯ ವ್ಯಾಖ್ಯೆ ಇದೆ ನೋಡಿ! ಹೊಸ ವಿನ್ಯಾಸದ ಸುಂದರ ಮನೆ ನಿರ್ಮಿಸುವಾಗ ಜನರ ಮಾತ್ಸರ್ಯದ, ಕೇಡಿನ, ಹೊಟ್ಟೆಕಿಚ್ಚಿನ ಅಥವಾ ಮೆಚ್ಚುಗೆಯ ಅಧಿಕತಮ ಭಾವನೆಗಳನ್ನು ನಿಯಂತ್ರಿಸುವುದು ರಾಕ್ಷಸನ ಮುಖವಾಡ ಇಡುವುದರ ಹಿಂದಿನ ಗುಟ್ಟು ಎಂಬ ಎಂಜಿನಿಯರ್ ಮಾತು ನನ್ನ ತಲೆಯಲ್ಲಿ ಹೊಸ ಯೋಚನಾ ತರಂಗಗಳನ್ನು ಎಬ್ಬಿಸಿತು. ಕೊಲ್ಲೂರಿನ ಜಾತ್ರಾ ಮಹೋತ್ಸವದ ನೇರಪ್ರಸಾರಕ್ಕಾಗಿ ಮಂಗಳೂರು ಆಕಾಶವಾಣಿ ವತಿಯಿಂದ ಪ್ರಾಂಗಣದ ಮಹಡಿ ಮೇಲೆ ಅಟ್ಟಳಿಗೆ ನಿರ್ಮಿಸಿದ್ದೆವು. ನಮ್ಮ ತಂಡದಲ್ಲಿ ಒಬ್ಬ ಮಲಯಾಳಿ ಇದ್ದ. ನಮ್ಮ ತಂಡವನ್ನು ನೋಡುತ್ತಲೇ ಕೇರಳದ ಒಬ್ಬ ಮಲಯಾಳಿ ಶಾಲಿನಿಂದ ಮುಖ ಮರೆಮಾಡಿಕೊಂಡು ಓಡಿ ಹೋದ. ನಮ್ಮ ಮಲಯಾಳಿ ಸಹೋದ್ಯೋಗಿಯ ಪರಿಚಯದವನಂತೆ. ಅರೇ !ಅನ್ನುತ್ತ ನಮ್ಮ ಸಹೋದ್ಯೋಗಿ ಅವನ ಬೆನ್ನುಹತ್ತಿ ಬಹಳ ಕಷ್ಟದಿಂದ ಗುಂಪಿನಲ್ಲಿ ಹೇಗೋ ಅವನನ್ನು ಪತ್ತೆಹಚ್ಚಿ ಬಲವಂತವಾಗಿ ಎಳೆದುಕೊಂಡು ಬಂದ. ಊರಿನಲ್ಲಿ ಧರ್ಮ - ದೇವರ ವಿರೋಧಿಯಾಗಿ ಭಾಷಣ ಬಿಗಿಯುತ್ತ ವೈಚಾರಿಕವಾಗಿ ತಿರುಗುತ್ತಿದ್ದ ಓರ್ವ ಕಮ್ಯೂನಿಸ್ಟ್ ವ್ಯಕ್ತಿ. ಮಹಾ ಭಕ್ತನ ವೇಷದಲ್ಲಿ ದೇವಸ್ಥಾನಕ್ಕೆ ಬಂದಿದ್ದಾನೆ ಎಂದು ಅವನನ್ನು ಆಚೆ ಕಳಿಸಿ ಆತನ ಸೋಗಲಾಡಿತನದ ಬಗ್ಗೆ ನಮ್ಮ ಸಹೋದ್ಯೋಗಿ ವಾಚಾಮಗೋಚರ ಬಯ್ಯತೊಡಗಿದ. ಎಂತಹ ಢಂಬಾಚಾರ ನೋಡಿ! ಅಲ್ಲಿ ನಾಸ್ತಿಕ, ಇಲ್ಲಿ ಆಸ್ತಿಕ! ಬದುಕಿನಲ್ಲಿ ಬದ್ಧತೆ ಇರುವವರಿಗೆ ಮಾತ್ರ ನಂಬಿಕೆಗಳು ಇರುತ್ತವೆ. ನಂಬಿಕೆಗಳು ಮನುಷ್ಯನ ನಿಡುಗಾಲದ ಬದುಕಿನ ಮೂಸೆಯಲ್ಲಿ ಮಿಂದು ಬಂದಾಗ ಎದುರಾದ ಕಾರ್ಪಣ್ಯಗಳ ಅಭಿವ್ಯಕ್ತಿ. ಒಬ್ಬೊಬ್ಬರಿಗೂ ಅಂತಹ ವಿಶಿಷ್ಟ ಅನುಭವಗಳು ಮತ್ತು ನಂಬಿಕೆಗಳು ಇರಬಹುದು. ಅವನ್ನು ನಮ್ಮ ಅಳತೆಗೋಲು ಮತ್ತು ಚೌಕಟ್ಟಿನಿಂದ ವಿಶ್ಲೇಷಿಸಿ ಅಲ್ಲಗಳೆಯಲು ಬರುವುದಿಲ್ಲ. ಅವರವರ ನಂಬಿಕೆಗಳು ಅವರವರಿಗೆ. ಇಂಥವನ್ನೆಲ್ಲ ಸಮಷ್ಟಿಯಾಗಿ ಜನಪದ ನಂಬಿಕೆಗಳು ಎಂದು ಕರೆದಿದ್ದೇವೆ. ಅವುಗಳ ಕುರಿತು ನಾವು ಅಧ್ಯಯನ ಮಾಡಬಹುದು. ತಿಳಿದುಕೊಳ್ಳುವ ವಿಷಯಗಳು ತುಂಬ ಇರುತ್ತವೆ. ಅವು ಮೌಲ್ಯ ಇಲ್ಲದವು ಎಂದು ಸಾರಾಸಗಟಾಗಿ ಅಲ್ಲಗಳೆಯಲು ಬರುವುದಿಲ್ಲ. ನಂಬಿಕೆಗಳನ್ನು ಮಾನವೀಯ ನೆಲೆಯಿಂದ ನೋಡಿ ಅಧ್ಯಯನ ಮಾಡಬೇಕು. ಡಾ.ವಸಂತಕುಮಾರ ಪೆರ್ಲ ನಮ್ಮ ಪತ್ರಿಕೆಯ ಹಿತ ಚಿಂತಕರು,ಹೆಸರಾಂತ ಸಂಶೋಧಕರು,ಪತ್ರಕರ್ತರು,ಕವಿಗಳು,ಜಾನಪದ ತಜ್ಞರು ಆದ ಡಾ.ವಸಂತಕುಮಾರ ಪೆರ್ಲ ಅವರ " ಜನಪದ ನಂಬಿಕೆಗಳು" ಎಂಬ ಲೇಖನ ನಿಮ್ಮ ಓದಿಗಾಗಿ. ಡಾ.ಶ್ರೀಪಾದ ಶೆಟ್ಟಿ ಸಂಪಾದಕರು ಆಲೋಚನೆ.ಕಾಂ

ಜಾನಪದ ನಂಬಿಕೆಗಳು
bottom of page