ಚಾಕು ಚೂರಿ ಸಹವಾಸ
ಚಾಕು ಚೂರಿಗಳ ಹರಿತಕೆ ಚೂರಾದ ಜೀವಗಳೆಷ್ಟೋ ಕತ್ತರಿಯ ಅಲುಗಿಗೆ ನಲುಗಿ ತುಂಡಾದ ಪಿಂಡಗಳೆಷ್ಟೋ ಬಿಸಿ ಬೆಂಕಿಗೆ ಬೆಂದ ಕರಗಿದ ಬಡಪಾಯಿಗಳೆಷ್ಟೋ ಕಲ್ಲ ಹೊಡೆತಕೆ ಸಿಕ್ಕಿ ಚಚ್ಚಿ ಹೋದವರೆಷ್ಟೋ ಕತ್ತಿಯ ಝಳಪಿಗೆ ಹಾರಿದ ತಲೆ ಬಾಲಗಳೆಷ್ಟೋ ಜಗದ ಹಂತಕರೆಲ್ಲ ಸೇರಿಯೂ ನನ್ನಷ್ಟು ಸಂಹಾರ ಮಾಡಿರಲಿಕ್ಕಿಲ್ಲ ನನ್ನ ಮೀರಿಸಿದ ರುದ್ರರು ಭೂಲೋಕದಲ್ಲಿರಲಿಕ್ಕಿಲ್ಲ ಎಂದಿಗೂ ನಾನು ಸಿಕ್ಕಿಬಿದ್ದಿಲ್lಲ ನನಗ್ಯಾವ ಶಿಕ್ಷೆಯನೂ ಕೊಡುವವರಿಲ್ಲ ಹೌದು ಯಾರೆಂದಿರಾ ನಾನು? ರೌಡಿಯಲ್ಲ ಬಿಡಿ ನಾನೊಬ್ಬಳು ಹೆಣ್ಣು ಅಡಿಗೆ ಮನೆಯೇ ನನ್ನ ಆಡುಂಬೊಲ ತರಕಾರಿಗಳನೆ ಕೊಚ್ಚಿ ಕತ್ತರಿಸಿ ಗುದ್ದಿ ಅರೆದು ಬೇಯಿಸಿ ಪ್ರೀತಿಯಲಿ ಬಡಿಸುವೆ ಒಮ್ಮೆಯಾದರೂ ಚಿಂತಿಸಿರುವಿರಾ ಹೇಗೆ ಅಪಾಯಗಳ ಚಕ್ರವ್ಯೂಹದಿ ಸಿಕ್ಕಿ ಬಿದ್ದಿಹೆ ನಾನು ಕ್ಷಣ ಕಣ್ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಬರೆದಿಟ್ಟುಕೊಳ್ಳಿ ನನ್ನ ಬದುಕೇ ಬಲಿಯಾದೀತು ಇಷ್ಟಾದರೂ ಮತ್ತೆಮತ್ತೆ ಎಂದಿಗೂ ಅಂಜದೆ ಅಳುಕದೆ ಅದೇ ಅಪಾಯ ತುಂಬಿದ ಜಾಗಕೆ ನನ್ನ ಸಂಸಾರವೆಂಬ ಸಡಗರಕೋ ಇಲ್ಲ ಬೆಂಬಿಡದ ಅನಿವಾರ್ಯಕೋ ನಡೆವೆ ಎಲ್ಲ ಆಪತ್ತುಗಳ ಮರೆತು ನಗುತಲಿರುವೆ --- ಕವಿತಾ ಹೆಗಡೆ