ಗಜಲ್
ನಿನ್ನ ನೆನಪುಗಳು ಕಂಗಳಲಿ ಕಲೆತು ನೋಟದಲ್ಲಿರಿಸಿ ಜೀವ ದಹಿಸುತಿದೆ ನಿನ್ನ ನಗೆ ಭಾವದೊಲವು ಎದೆಯಲ್ಲಿ ಬೆರೆತು ಆಳದಲ್ಲಿರಿಸಿ ಜೀವ ದಹಿಸುತಿದೆ. ಹೂಗಳ ಗಂಧ ತಂಬೆಲರಿನಲಿ ಉಲಿದು ಲಯಬದ್ಧ ನಡಿಗೆಯ ನಿನ್ನ ಮೈಯ ಪರಿಮಳದ ಮತ್ತು ನೆಪಿನಲ್ಲಿರಿಸಿ ಜೀವ ದಹಿಸುತಿದೆ. ಪ್ರೀತಿ ನನಹುಗಳ ಬಾಚಿ ಹೊರಟ ನಿನ್ನ ಹೆಜ್ಜೆಗಳಂಚಲ್ಲಿದ್ದ ನನ್ನ ವಿರಹದ ಸಾಲುಗಳ ಎತ್ತಿ ಬದಿಗಿರಿಸಿದ್ದ ನೆನೆಸಿ ಜೀವ ದಹಿಸುತಿದೆ. ಸಾವನ್ನೂ ಗೆಲ್ಲೆನೆಂಬ ಹುಂಬ ಅಹಂಕಾರ ಹಾರಾಟವ ನಿಲ್ಲಿಸಿ ನನ್ನೊಳಗೆ ಪ್ರೀತಿ ಮೋಗಮ್ಮಾಗಿ ಗೆಲ್ಲಬಲ್ಲೆಂದದ್ದು ಮನಸಿನಲ್ಲಿರಿಸಿ ಜೀವ ದಹಿಸುತಿದೆ.
ಆಗಾಗ ದುಮುಗುಡುವ ಸಿಟ್ಟು ಸೆಡವುಗಳ ನಯವಾಗಿ ಹಣಿದು ಮೆದುವಾಗಿಸಿದುದ ಮನಸ ಬಳಿಯಲ್ಲಿರಿಸಿ ಜೀವ ದಹಿಸುತಿದೆ. ಚಾತಕದ ನಿರೀಕ್ಷೆಯಲಿ ದಂಡೆಯಲಿ ಕುಳಿತು ಬರುವ ಅಲೆಗಳ ಲೆಕ್ಕ ಹಾಕುತಲಿರುವೆ ಎಲ್ಲೋ ದೂರದ ನಿನಗೆ ತಿಳಿಯದೆನಿಸಿ ಜೀವ ದಹಿಸುತಿದೆ. ಈ ಹೃದಯ ಆಲಂಗಿಸುವ ಭಾವಗಳು ನಿನ್ನ ತುಂಟ ಕಣ್ಣುಗಳಲ್ಲಿವೆ ಮೌನ ಮುನಿಸು ಹಟ ಬದಿಗಿಟ್ಟು ಬಂದು ಬಿಡು ದಿನ ನೂಕುತ ನೆನೆಸಿ ಜೀವ ದಹಿಸುತಿದೆ
-ಫಾಲ್ಗುಣ ಗೌಡ ಅಚವೆ ಅಂಚೆ : ಅಂಕೋಲಾ ತಾಲೂಕು ಉತ್ತರ ಕನ್ನಡ ಜಿಲ್ಲೆ,581344