top of page

ಗಂಟು ಸೇರಿದ ಕನಸೊಂದು

ಇಂದಿರಮ್ಮ ಸಮೃದ್ಧ ಸಂಸಾರದ ಸುಮಾರು 70 ವರ್ಷದ ವೃದ್ಧೆ. ಇಂದಿರಮ್ಮನ ಗಂಡ ಶ್ರೀಕಂಠಯ್ಯ ಶಿಸ್ತಿನ ಮನುಷ್ಯ... ಸಿಟ್ಟಿನ ಮನುಷ್ಯ..! ಇಂದಿರಮ್ಮ ಎಂದಿಗೂ ಪತಿಯ ಇಷ್ಟದ ವಿರುದ್ಧ ನೆಡೆದುಕೊಂಡವರಲ್ಲ. ದೊಡ್ಡವರಾಗಿ, ಮದುವೆಯಾದರೂ ಮಕ್ಕಳಿಗೂ ಅಪ್ಪನೆಂದರೆ ಭಯ..! ಇಂದಿರಮ್ಮ ತುಂಬಾ ಚಿಕ್ಕ ವಯಸ್ಸಿಗೆ ಮದುವೆಯಾಗಿ ಶ್ರೀಕಂಠಯ್ಯನ ಮಡದಿಯಾಗಿದ್ದರು. ಅಂದಿನಿಂದ ಇಂದಿನವರೆಗೆ ಅಂದರೆ ಅವರ ಜೀವನದ ಈ ಇಳಿಸಂಜೆಯಲ್ಲಿ ಸಹ ಗಂಡನ ಒಪ್ಪಿಗೆಯಿಲ್ಲದೆ ಸಣ್ಣ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿರಲಿಲ್ಲ ಇಂದಿರಮ್ಮನಿಗೆ..! ಏಕತಾನತೆ ತುಂಬಿದ್ದ ಬದುಕನ್ನು ತಪಸ್ಸಿನಂತೆ ಕಳೆದಿದ್ದರು ಇಂದಿರಮ್ಮ..! ಶ್ರೀಕಂಠಯ್ಯ, ಇಂದಿರಮ್ಮನಿಗೆ ಮೂರು ಗಂಡು ಮಕ್ಕಳು. ದೊಡ್ಡವರಿಬ್ಬರು ಸಂಸಾರ ಸಮೇತ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಕೊನೆಯ ಮಗ, ಸೊಸೆ ಊರಲ್ಲಿ ಇವರ ಜೊತೆಗಿದ್ದರು. ಅಮ್ಮನ ಪರಿಸ್ಥಿತಿಯ ಅರಿವಿದ್ದ ಮಕ್ಕಳಿಗೆ ಅಮ್ಮನೆಂದರೆ ಹೆಚ್ಚಿನ ಪ್ರೀತಿ. ಅದರಲ್ಲೂ ಜೊತೆಗಿರುವ ಕೊನೆಯ ಸೊಸೆ ಸುರಭಿಗೆ ಅತ್ತೆ ಅಂದರೆ ವಿಶೇಷ ಪ್ರೀತಿ, ಅಕ್ಕರೆ. ತಾಯಿ ಇಲ್ಲದ ಸುರಭಿಗೆ ಅತ್ತೆಯೇ ತಾಯಿಯಂತೆ. ಶ್ರೀಕಂಠಯ್ಯ ಮನೆಯಿಂದ ಆಚೆ ಎಲ್ಲಾದರೂ ಹೋದರೆ ಅತ್ತೆ, ಸೊಸೆಯದು ಮುಗಿಯದ ಮಾತು, ನಗು... ಆ ದಿನ ಶ್ರೀಕಂಠಯ್ಯ ಮಗನ ಜೊತೆಗೆ ಕೋರ್ಟಿನ ಕೆಲಸಕ್ಕೆಂದು 3 ದಿನ ಬೆಂಗಳೂರಿಗೆ ಹೊರಟಿದ್ದರು. ಮಾವ ಹೋಗುವುದನ್ನು ತಿಳಿದಾಗಿನಿಂದ ಅತ್ತೆಯಲ್ಲಾದ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದಳು ಸುರಭಿ. 'ಯಾಕೆ ಅತ್ತೆ ತುಂಬಾ ಗೆಲುವಾಗಿದ್ದೀರಾ?'ಅಂತಾ ಸುರಭಿ ಕೇಳಿದರು, ಇಂದಿರಮ್ಮ ಏನೂ ಹೇಳಿರಲಿಲ್ಲ. ಆ ದಿನ ಮನೆಯ ಗಂಡಸರಿಬ್ಬರು ಬೆಂಗಳೂರಿಗೆ ಹೋದ ನಂತರ ಇಂದಿರಮ್ಮ ಮುದ್ದೆ ಕಟ್ಟಿದ್ದ ದಿನಪತ್ರಿಕೆಯ ತುಂಡೊಂದನ್ನು ಸೊಸೆಗೆ ಕೊಟ್ಟಿದ್ದರು. ಅದನ್ನು ಬಿಡಿಸಿ ನೋಡಿದಳು ಸುರಭಿ... ಅದೊಂದು ದಿನಪತ್ರಿಕೆಯಲ್ಲಿ ಭರತನಾಟ್ಯ ಪ್ರದರ್ಶನದ ಮಾಹಿತಿ ನೀಡುವ ತುಂಡಾಗಿತ್ತು. ಗೊತ್ತಿತ್ತು ಸುರಭಿಗೆ ಅವರ ಊರಿನಿಂದ 20 km ದೂರದ ಪಟ್ಟಣದಲ್ಲಿ ಪ್ರಸಿದ್ಧ ಕಲಾವಿದ ಜೋಡಿ 'ಮಾನಸ ಶ್ರೀಧರ' ಅವರ ಭರತನಾಟ್ಯ ಪ್ರದರ್ಶನವಿರುವುದು. ಈಗ ಎರಡು ದಿನಗಳಿಂದ ಪ್ರತಿದಿನ ದಿನಪತ್ರಿಕೆಯಲ್ಲಿ ಜಾಹೀರಾತು ನೋಡುತ್ತಿದ್ದಳು. 'ಮೊನ್ನೆಯ ಪೇಪರ್ ನಲ್ಲಿ ನೋಡಿದ್ದೆ ಈ ಜಾಹೀರಾತು ನೀವ್ಯಾಕೆ ಇಟ್ಟ್ಕೊಂಡಿದ್ದೀರಾ ಅತ್ತೆ' ಅಂದಳು ಸುರಭಿ... 'ನನಗೆ ಈ ಭರತನಾಟ್ಯ ಪ್ರದರ್ಶನಕ್ಕೆ ಹೋಗಬೇಕು ಕರ್ಕೊಂಡು ಹೋಗ್ತೀಯೇನೇ ಸುರಭಿ' ಕೇಳಿದರು ಇಂದಿರಮ್ಮ. 'ನಿಮಗೆ ಭರತನಾಟ್ಯ ಅಂದರೆ ಇಷ್ಟಾನ ಅತ್ತೆ' ಸುರಭಿಯ ಈ ಪ್ರಶ್ನೆಗೆ ಇಂದಿರಮ್ಮನ ವಯೋಸಹಜತೆಯಿಂದ ಮಂಜಾದ ಕಣ್ಣುಗಳು ನಕ್ಷತ್ರದಂತೆ ಹೊಳೆದಿತ್ತು..! ಸೊಸೆಯ ಕೈಹಿಡಿದು ತನ್ನ ಕೋಣೆಗೆ ಕರೆದೊಯ್ದರು. ಕಪಾಟಿನ ಕೆಳಗಡೆ ಕೈ ಹಾಕಿ ಸಣ್ಣ ಗಂಟನ್ನು ಎಳೆದು ಅಲ್ಲೇ ಕುಳಿತು ಬಿಚ್ಚಿದರು. ಸುರಭಿಗೆ ಏನೆಂದು ತಿಳಿಯದಿದ್ದರೂ ಕೂತುಹಲದಿಂದ ಅತ್ತೆಯನ್ನೇ ನೋಡುತ್ತಿದ್ದರು. ಕಪ್ಪು ಬಿಳುಪಿನ ಅಲ್ಲಲ್ಲಿ ಮಸುಕಾದ ಭಾವಚಿತ್ರಗಳು. ವಿವಿಧ ಭರತನಾಟ್ಯ ಭಂಗಿಗಳಲ್ಲಿ ಇಬ್ಬರು ಪುಟ್ಟ ಹುಡುಗಿಯರು..! 'ಯಾರು ಇದು ಅತ್ತೆ' ಕೇಳುತ್ತಾ ಅತ್ತೆಯ ಮುಖ ನೋಡಿದ ಸುರಭಿಗೆ ಹೆಮ್ಮೆಯ ನಗುವಿನ ಜೊತೆಗೆ ಕಣ್ಣಲ್ಲಿ ನೀರು ತುಂಬಿಕೊಂಡು 'ನಾನೇ ಅದು... ಇನ್ನೊಬ್ಬಳು ನನ್ನ ಗೆಳತಿ.' ಅಂದರು ಇಂದಿರಮ್ಮ. ಹೌದಾ ಅತ್ತೆ ನಿಜವಾಗ್ಲೂ ಅನ್ನುತ್ತಾ ಎಲ್ಲಾ ಫೋಟೋಗಳನ್ನು ಮತ್ತೆ ನೋಡಿದಳು ಸುರಭಿ. 'ಹೌದು ಪುಟ್ಟ ಹುಡಗಿಯರಲ್ಲಿ ಒಬ್ಬಳು ಅತ್ತೇನೆ.' 'ಅತ್ತೆ ನೀವು ಭರತನಾಟ್ಯ ಕಲಾವಿದೆನಾ' ಸುರಭಿಯ ಧ್ವನಿಯಲ್ಲಿ ಆಶ್ಚರ್ಯದ ಜೊತೆಗೆ ಸಂತೋಷವಿತ್ತು. ಮತ್ತೆ ಮತ್ತೆ ಫೋಟೋಗಳನ್ನು ನೋಡುತ್ತಿದ್ದಳು. 'ಅಷ್ಟೊಂದು ಅದೃಷ್ಟ ನನಗೆಲ್ಲಿದೆ ಸುರಭಿ..?? ನನಗೆ ಭರತನಾಟ್ಯ ಅಂದರೆ ತುಂಬಾ ಇಷ್ಟ. ನಾನು ಚಿಕ್ಕವಳಿರುವಾಗ ನನ್ನ ಗೆಳತಿಯ ಅಮ್ಮ ಭರತನಾಟ್ಯ ಮಾಡ್ತಾ ಇದ್ರು. ನನ್ನ ನಾಟ್ಯದ ಹುಚ್ಚಿಗೆ ನನ್ನ ಗೆಳತಿಯನ್ನು ಮೆಚ್ಚಿಸಿ ಅವಳ ಮನೆಗೆ ಹೋಗುತ್ತಿದ್ದೆ. ಗೆಳತಿಗೆ ಆಗಾಗ ಕಾಡುನೆಲ್ಲಿ, ಮಾವಿನಕಾಯಿ, ಹುಣಸೆ ಹಣ್ಣಿನ ಚಿಗುಳಿ ಎಲ್ಲಾ ಕೊಟ್ಟು ಅವಳ ಜೊತೆಗೆ ಗೆಳೆತನ ಗಟ್ಟಿ ಮಾಡಿಕೊಳ್ಳುತ್ತಿದ್ದೆ ಭರತನಾಟ್ಯದ ಆಸೆಗೆ. ನನ್ನ ಗೆಳತಿಯ ಅಮ್ಮ ಅವಳಿಗೆ ನಾಟ್ಯ ಕಲಿಸುವಾಗ ನಾನು ಅವಳ ಜೊತೆಗೆ ಹೆಜ್ಜೆ ಹಾಕುತ್ತಿದ್ದೆ. ನಾಟ್ಯದಲ್ಲಿ ನನ್ನ ಆಸಕ್ತಿ ನೋಡಿ ಅವರು ನನಗೆ ಈ ಗೆಜ್ಜೆ ತಂದುಕೊಟ್ಟಿದ್ದರು ಎಂದು ಗಂಟಿನಿಂದ ಒಂದು ಜೊತೆ ಗೆಜ್ಜೆ ತೆಗೆದಿದ್ದರು ಇಂದಿರಮ್ಮ. ಕೆಂಪುದಾರದಲ್ಲಿ ಕಟ್ಟಿದ್ದ ಗುಂಡುಗುಂಡಿನ ಗೆಜ್ಜೆ ಗಳನ್ನು 70ರ #ಅಜ್ಜಿ ಆಸೆಗಣ್ಣಿಂದ ನೋಡ್ತಾ ಇತ್ತು# ಅತ್ತೆಯ ಆ ನೋಟ ಸುರಭಿಗೆ ಇಂದಿಗೂ ಅವರಿಗೆ ನಾಟ್ಯದ ಮೇಲಿನ ಪ್ರೀತಿಯನ್ನು ತಿಳಿಸಿತ್ತು. 'ಅತ್ತೆ ಒಂದು ಸಲ ಈ ಗೆಜ್ಜೆ ಕಾಲಿಗೆ ಕಟ್ಟಿಕೊಂಡು ನಾಲ್ಕು ಹೆಜ್ಜೆ ನನ್ನ ಸಲುವಾಗಿ ಹಾಕ್ತೀರಾ?' ಸುರಭಿಯ ಪ್ರಶ್ನೆಗೆ ಬೆಚ್ಚಿ ಬಿದ್ದಿದ್ದರು ಇಂದಿರಮ್ಮ. ಯಾವದೋ ಲೋಕದಲ್ಲಿ ಕಳೆದು ಹೋಗಿದ್ದ ಇಂದಿರಮ್ಮ ಗಡಿಬಿಡಿಯಲ್ಲಿ ಗಂಟನ್ನು ಮುಚ್ಚಿಡಲು ಶುರುಮಾಡಿದ್ದರು. ಅವರ ಭಯ, ಗಾಬರಿ ನೋಡಿ ಸುರಭಿ 'ಯಾಕೆ ಅತ್ತೆ? ಏನಾಯ್ತು?' ಅನ್ನುತ್ತಾ ಅವರನ್ನು ತಡೆದಿದ್ದಳು. ತನ್ನ ಹೇಳಬಾರದ ಗುಟ್ಟೇನೂ ಹೇಳಿ ಬಿಟ್ಟಂತೆ ಸುರಭಿಯ ಎರಡು ತೋಳುಗಳನ್ನು ಹಿಡಿದು 'ಈ ವಿಷಯವನ್ನು ದಯವಿಟ್ಟು ಯಾರಿಗೂ ಹೇಳಬೇಡ ಸುರಭಿ' ಎನ್ನುತ್ತಾ ಜೋರಾಗಿ ಅತ್ತಿದ್ದರು. ಸುರಭಿಗೆ ಅತ್ತೆಯ ಸ್ಥಿತಿ ನೋಡಿ ಸಂಕಟವಾಗಿತ್ತು. ಅವರನ್ನು ಮಂಚದ ಮೇಲೆ ಕೂರಿಸಿ, ಕುಡಿಯಲು ನೀರು ಕೊಟ್ಟಳು. 'ಅತ್ತೆ ನಾಟ್ಯದ ಪ್ರೀತಿಯ ಜೊತೆಗಿರುವ ಈ ಭಯ ಯಾವುದು?' ಎಂದು ಕೇಳಿದಳು. ಇಷ್ಟು ಹೊತ್ತು ಕನಸಿನ... ಆಸೆಯ... ಗಂಟು ಬಿಚ್ಚಿದ್ದ ಇಂದಿರಮ್ಮ ಈಗ ನೆನಪಿನ ಗಂಟು ಬಿಚ್ಚಿದ್ದರು. ನಾನು ಗೆಳತಿಯ ಮನೆಯಲ್ಲಿ ಅವಳ ಜೊತೆಗೆ ನಾಟ್ಯ ಮಾಡುವುದು ನನ್ನಪ್ಪನಿಗೆ ಗೊತ್ತಾಗಿ ಹೋಗಿತ್ತು. ಒಂದು ದಿನ ನಾನು ನನ್ನ ಗೆಳತಿಯ ಮನೆಯಲ್ಲಿ ಅವಳ ಜೊತೆಗೆ ಗೆಜ್ಜೆ ಕಟ್ಟಿಕೊಂಡು ಹೆಜ್ಜೆ ಹಾಕುತ್ತಿದ್ದಾಗ ಅಲ್ಲಿಗೆ ಬಂದ ಅಪ್ಪಾ ಅವಳ ಅಮ್ಮನಿಗೆ ಬೈದು... ನನ್ನನ್ನು ದರದರನೇ ಮನೆಗೆ ಎಳೆದೊಯ್ದಿದ್ದರು. ಹಾಗೆ ಅವರು ನನ್ನನ್ನು ಎಳೆದೊಯ್ಯುತ್ತಿದ್ದರೆ ನನ್ನ ಕಾಲಲ್ಲಿನ ಗೆಜ್ಜೆ ಗಟ್ಟಿಯಾಗಿ ಬೊಬ್ಬೆಯಿಟ್ಟಿತ್ತು. ಆ ದಿನದ ಆ ಗೆಜ್ಜೆಯ ಸದ್ದು ನನ್ನನ್ನು ಇಂದಿಗೂ ಕಾಡುತ್ತಿರುತ್ತವೆ. ಎಂದು ಗಟ್ಟಿಯಾಗಿ ಕಿವಿಗಳನ್ನು ಮುಚ್ಚಿಕೊಂಡರು. ಮನೆಗೆ ಬಂದು 'ಮರ್ಯಾದಸ್ಥರ ಮನೆಯ ಹೆಣ್ಣುಮಕ್ಕಳು ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುತ್ತಾರಾ?' ಎನ್ನುತ್ತಾ ನನ್ನನ್ನು ಕಟ್ಟಿಗೆ ತುಂಡಾಗುವ ತನಕ ಹೊಡೆದಿದ್ದರು. ನನ್ನಮ್ಮ ನನ್ನ ಗಾಯಗಳಿಗೆ ಎಣ್ಣೆ ಹಚ್ಚುತ್ತಾ 'ಯಾಕೆ ನೀನು ಅವರ ಮನೆಗೆ ಹೋಗಿದ್ದೆ? ಆ ಕುಣಿಯುವವಳ ಮನೆಗೆ ಹಾಗೆಲ್ಲಾ ಹೋಗಬಾರದು. ಇನ್ಮೇಲೆ ಆ ಹುಡುಗಿನ ಮಾತಾಡ್ಸಬೇಡ.' ಅಂದಿದ್ದರು. ಮತ್ತೆರಡು ತಿಂಗಳಿನಲ್ಲಿ ನನಗೆ ಮದುವೆ ಮಾಡಿಬಿಟ್ಟಿದ್ದರು..! ಅತ್ತೆಯ ಮುಖ ನೋಡಿದ ಸುರಭಿಗೆ ಅತ್ತು ಮುಗಿಸಿದ ಅತ್ತೆಯ ಮುಖದಲ್ಲಿ ನಿರ್ಭಾವುಕತೆ ಕಂಡಿತ್ತು. ಇಂದಿರಮ್ಮ ಮುಂದುವರಿಸಿದ್ದರು ಅಂದಿನಿಂದ ಈ ಗಂಟನ್ನು ಒಬ್ಬಳೆ ಇರುವಾಗ ಬಿಚ್ಚಿ ನೋಡುವುದಷ್ಟೇ ಭಾಗ್ಯ ನನಗೆ. ಆದರೆ ಒಮ್ಮೆ ಮಾತ್ರ ನಾನೊಬ್ಬಳೇ ಇರುವಾಗ ಗೆಜ್ಜೆ ಕಟ್ಟಿ ತನ್ಮಯಳಾಗಿ ಹೆಜ್ಜೆ ಹಾಕಿದ್ದೆ ಅದನ್ನು ನೋಡಿದ ನಿನ್ನ ಮಾವ ಸುಡುತ್ತಿರುವ ಕಟ್ಟಿಗೆಯಿಂದ ಕಾಲಿನ ಮೇಲೆ ಬರೆ ಇಟ್ಟಿದ್ದರು. ಅಂದರು ತೀರಾ ಸಾಮಾನ್ಯ ಅನ್ನುವ ಹಾಗೆ. ಅವರ ಕತೆ ಕೇಳಿ ಸುರಭಿಗೆ ಈ ಪುರುಷ ಪ್ರಧಾನ ಸಮಾಜದ ಮೇಲೆ ಒಮ್ಮೆ ಅಸಹ್ಯವೆನಿಸಿತು. ಹೊಟ್ಟೆಯಲ್ಲಿ ಹೇಳಲಾರದ ಸಂಕಟವಾಗಿತ್ತು. ಅತ್ತೆಯನ್ನು ಒಮ್ಮೆ ಗಟ್ಟಿಯಾಗಿ ತಬ್ಬಿಕೊಂಡಳು. ಸನ್ನಿವೇಶವನ್ನು ತಿಳಿಗೊಳಿಸಲು ಅತ್ತೆ ನಾಳೆ ನಾನು ನಿಮ್ಮನ್ನು ಭರತನಾಟ್ಯ ಪ್ರದರ್ಶನಕ್ಕೆ ಕರೆದುಕೊಂಡು ಹೋಗುತ್ತೇನೆ ಆದರೆ ನನ್ನದೊಂದು ಆಸೆ ನೀವು ಈಡೇರಿಸಿದರೆ ಮಾತ್ರ ಅಂದಳು. 'ಅದೇನೇ ನಿನ್ನ ಆಸೆ' ಅಂದರು ಇಂದಿರಮ್ಮ. 'ಒಮ್ಮೆ ನೀವು ಈ ಗೆಜ್ಜೆ ಕಟ್ಟಿ, ನಿಮ್ಮ ನಾಟ್ಯ ನೋಡುವಾಸೆ ನನಗೆ' ಅಂದಳು ಸುರಭಿ ಚಿಕ್ಕ ಮಕ್ಕಳು ಹಠಮಾಡುವ ಹಾಗೆ. ಸಾಧ್ಯವೇ ಇಲ್ಲಾ ಎನ್ನುತ್ತಾ ಹೊರಗೆ ಹೋದ ಇಂದಿರಮ್ಮನನ್ನು ಓಲೈಸಿ ಅವರ ವೃದ್ಧ ಕಾಲುಗಳಿಗೆ ಸುರಭಿ ಗೆಜ್ಜೆ ಕಟ್ಟಿದಾಗ... ಬಲ ಕಳೆದುಕೊಳ್ಳುತ್ತಿರುವ ಕಾಲುಗಳನ್ನು ಒಂದೊಂದಾಗಿ ಇಡುತ್ತಾ ಆ ಗೆಜ್ಜೆ ಮಾಡಿದ ಸದ್ದನ್ನು ಅನುಭವಿಸುತ್ತಾ ಇಂದಿರಮ್ಮನ ಮುಖದಲ್ಲಿ ಎಷ್ಟೋ ವರುಷಗಳ ಆಸೆಯೊಂದು ಖುಷಿಯಾಗಿ ಕಣ್ಣಂಚಲಿ ಜಿನುಗಿತ್ತು..! ಗಂಟು ಸೇರಿದ್ದ ಕನಸೊಂದು ವೃದ್ದಾಪ್ಯದಲ್ಲಿ ಗಂಟಿಂದ ಇಣುಕಿತ್ತು...!! ಕವಿತಾ ಗಿರೀಶ ಹೆಗಡೆ ಶಾರ್ಜಾ ✍️✍️

ಗಂಟು ಸೇರಿದ ಕನಸೊಂದು
bottom of page