top of page

ಕ್ಷಮೆ ಬಾಳಿನ ಧರ್ಮ

ಕಬೀರ ಕಂಡಂತೆ..೨೫ ಕ್ಷಮಾ ಬಡನ್ ಕೊ ಚಾಹಿಯೆ, ಛೋಟನ್ ಕೊ ಉತ್ಪಾತ/ ಕಹಾ ವಿಷ್ಣು ಕೊ ಘಟಗಯೋ, ಭೃಗುನೆ ಮಾರಿ ಲಾತ// ಚಿಕ್ಕವರು ಮಾಡಿದ ತಪ್ಪು ಹಿರಿಯರು ಕ್ಷಮಿಸುವರಲ್ಲ/ ಭೃಗು ಎದೆಗೊದ್ದರೂ ವಿಷ್ಣು ಮಾತ್ರ ಸಣ್ಣವನಾಗಲಿಲ್ಲ// ಬದುಕಿನ ಪ್ರತಿ ಹೆಜ್ಜೆಯಲ್ಲಿ ವಯಸ್ಸಿನ ಮಿತಿ ಯಿಲ್ಲದೇ ಎಲ್ಲರೂ ತಪ್ಪು ಮಾಡುವದು ಸಹಜ. ಆದರೆ ಬೇರೆಯವರ ತಪ್ಪುಗಳನ್ನು ಕ್ಷಮಿಸುವವ ಖಂಡಿತವಾಗಿ 'ದೊಡ್ಡವ' ಎನಿಸಿಕೊಳ್ಳುತ್ತಾನೆ. ಮನೆಯಲ್ಲಿ ಸಹ ಚಿಕ್ಕವರು ಮಾಡುವ ತಪ್ಪುಗಳನ್ನು ಹಿರಿಯರು ವಿಮರ್ಶೆ ಮಾಡಿ ತಪ್ಪುಗಾರರಿಗೆ ಬುದ್ಧಿ ಹೇಳಿ ಅವರನ್ನು ಕ್ಷಮಿಸುತ್ತಾರೆ. ಕೆಲವು ಸಲ ಅರಿವಿಲ್ಲದೇ ತಪ್ಪುಗಳು ನಡೆದಿರಬಹುದು. ಇಲ್ಲವೆ ನಮ್ಮ ಅಜ್ಞಾನದಿಂದ ಅವಘಡಗಳು ಸಂಭವಿಸ ಬಹುದು. ಇಂಥ ಸಂದರ್ಭಗಳಲ್ಲಿ ಅಂಥ ತಪ್ಪು ಕ್ಷಮಿಸಲೇಬೇಕು. ಆದರೆ ಕೆಲವರಿಗೆ ತಪ್ಪು ಮಾಡುವದೇ ಚಟವಾಗಿ ಬೆಳೆದಿರುತ್ತದೆ. ಅಂಥವರಿಗೆ ಶಿಕ್ಷೆ ವಿಧಿಸುವದು ಅನಿವಾರ್ಯ. ಸಂಬಂಧಗಳನ್ನು ಒಡೆಯುಂಥ ತಪ್ಪುಗಳನ್ನು ಉದಾರ ಮನಸ್ಸಿನಿಂದ ಕ್ಷಮಿಸುವದು ಅತ್ಯಂತ ಮಹತ್ವದ್ದು. ಇತರರ ತಪ್ಪುಗಳನ್ನು ಎತ್ತಿ ತೋರಿಸುವದರ ಬದಲು ನಮ್ಮ ತಪ್ಪುಗಳನ್ನು ವಿಮರ್ಶಿಸಿ ಅವನ್ನು ತಿದ್ದಿಕೊಳ್ಳುವದು ಉತ್ತಮ ವ್ಯಕ್ತಿತ್ವದ ಲಕ್ಷಣ. ಸಂತ ಕಬೀರರು, ಸಣ್ಣವರ ತಪ್ಪನ್ನು ಹಿರಿಯರು ಕ್ಷಮಿಸಬೇಕು. ಭೃಗು ಮುನಿ ಎದೆಗೊದ್ದರೂ ವಿಷ್ಣುವಿನ ದೈವತ್ವಕ್ಕೇನೂ ಕುಂದಾಗ ಲಿಲ್ಲ ಎಂದಿದ್ದಾರೆ. ದೇವತೆಗಳಲ್ಲಿ ಯಾರು ಶ್ರೇಷ್ಠರು ಎಂಬ ಜಿಜ್ಞಾಸೆ ಋಷಿಗಳಲ್ಲಿ ಮೂಡಿ ಭೃಗು ಮುನಿ ಬ್ರಹ್ಮ ಮತ್ತು ಈಶ್ವರರನ್ನು ಪರಿಕ್ಷಿಸಿದಾಗ ಅವರು ಸೋಲುತ್ತಾರೆ. ನಂತರ ವಿಷ್ಣು ಲಕ್ಷ್ಮಿ ಯೊಂದಿಗೆ ಏಕಾಂತದಲ್ಲಿ ಇದ್ದ ಸಂದರ್ಭದಲ್ಲಿ ಭೃಗು ವಿಷ್ಣುವಿನ ಎದೆಗೆ ಒದೆಯುತ್ತಾನೆ. ಸರ್ವಶಕ್ತನಾದ ವಿಷ್ಣು, ಸ್ವಲ್ಪವೂ ಸಿಟ್ಟಿಗೇಳದೇ ಭೃಗುವನ್ನು ಸತ್ಕರಿಸುತ್ತಾನೆ. ಹಾಗಾಗಿ ತ್ರಿಮೂರ್ತಿಗಳಲ್ಲಿ ಶ್ರೇಷ್ಠ ಎಂಬ ಹೆಗ್ಗಳಿಕೆಗೆ ಪಾತ್ರನಾದ! ವ್ಯಕ್ತಿ ಎಷ್ಟೇ ದೊಡ್ಡವನಿರಲಿ, ಅವನಿಗೆ ಸಹನೆ ಮತ್ತು ಕ್ಷಮಾಗುಣಗಳು ಇರಬೇಕು ಎಂಬ ತತ್ವ ಬಹಳ ಮುಖ್ಯವಾದದ್ದು. ತಪ್ಪು ಮಾಡುವದು ಸಹಜ ಗುಣ. ಆದರೆ ಇತರರ ತಪ್ಪನ್ನು ಕ್ಷಮಿಸುವದು ಸಾತ್ವಿಕ ಗುಣ ಎಂಬುದನ್ನು ಅರಿತು ನಡೆದಾಗ ಬದುಕು ಸುಂದರವಾದೀತು! ತಪ್ಪು- ಒಪ್ಪುಗಳ ಲೆಕ್ಕವಿಡದಿರು ಬರಿದೆ ಒಪ್ಪಿಕೊಳೊ ಜಗವ ನೋವುಗಳ ಮರೆತು/ ತ್ರಿಮೂರ್ತಿಗಳಲ್ಲಿ ತಪ್ಪು ಮಾಡದವರಾರು? ಕ್ಷಮೆ ಬಾಳಿನ ಧರ್ಮ - ಶ್ರೀವೆಂಕಟ // ಶ್ರೀರಂಗ ಕಟ್ಟಿ ಯಲ್ಲಾಪುರ.

ಕ್ಷಮೆ ಬಾಳಿನ ಧರ್ಮ
bottom of page