ಕ್ಷಮಿಸಿ ಬಿಡು ಮಹಾತ್ಮಾ
ಹವಣಿಸುತಿದೆ, ಹವಣಿಸುತಿದೆ ಸತ್ಯವೆನ್ನುವ ಅಮಾಯಕ ಜಿಂಕೆಯ ತನು ಮನ ಅತ್ತ ಸುಮ್ಮನಿರಲಾಗದೆ ಇತ್ತ ಘರ್ಜಿಸಲೂ ಆಗದೆ ಪೊದೆಯಲ್ಲಿ ಅವಿತುಕೊಳ್ಳಲೆಂದು. ಹತ್ತಾರು ವ್ಯಾಘ್ರಗಳ 'ಹುಸಿ' ಘರ್ಜನೆ ಅಮಾಯಕ ಜಿಂಕೆಗಳ ಕತ್ತು ಹಿಚುಕಿ ಅಟ್ಟಹಾಸದಿಂದ ಮೆರೆಯುತ್ತಿರುವಾಗ ಬಾಪೂಜಿ, ನಿಮ್ಮ ಅಸ್ತ್ರಕ್ಕಿಲ್ಲೆಲ್ಲಿ ಜಾಗ? ದೇಶದಲಿ ಭಯೋತ್ಪಾದನೆ, ಹೊಡೆದಾಟ, ಗುದ್ದಾಟ ರಾರಾಜಿಸುತಿವೆ ಪ್ರತಿಭಟನೆಗಳೆಲ್ಲವೂ ನಾನಾ ರೂಪ ಪಡೆಯುತಿವೆ ದಿನ ದಿನವೂ ಕಲಹದಲೆಗಳು ಉಕ್ಕಿ ಬರುತಿವೆ ಹೆಡೆ ಬಿಚ್ಚದೇ ಬುಸುಗುಡುವ ಈ ಜನರ ಮಧ್ಯೆ ಬಾಪೂಜಿ, ನಿಮ್ಮ ಮೂಲಮಂತ್ರಕ್ಕಿಲ್ಲೆಲ್ಲಿ ಎಡೆ? ನಿಮ್ಮ ಜನುಮ ದಿನ 'ಅಹಿಂಸಾ ದಿನ'ವಂತೆ! ನಡೆಯುತ್ತಿಲ್ಲವೇ ಅಂದೇ ಹತ್ತಾರು ಕೊಲೆ, ಅತ್ಯಾಚಾರ? ಕೇಳಿಸುತ್ತಿದೆ ಎಲ್ಲೆಲ್ಲಿಯೂ ಹಿಂಸೆಯ ಆರ್ತನಾದ ನನಗೆ ನೊಂದ ಹೆಣ್ಣಿನ ಕೂಗು, ನನ್ನ ಕರ್ಣ ಪಟಲಕ್ಕೆ ಬಂದು ಬಡಿಯುತ್ತಿದೆ ಆದರೂ ಅಸಹಾಯಕಳಾಗಿ ಕೈ ಕಟ್ಟಿ ಕುಳಿತಿರುವ ನನ್ನನ್ನೊಮ್ಮೆ ಕ್ಷಮಿಸಿ ಬಿಡು ಮಹಾತ್ಮಾ... ನಿಮ್ಮ ಅಸ್ತ್ರವೆಂಬ ಹಸನಾದ ತೋಟವ ಹಾಳುಗೆಡವಿ ಸರಳತೆಯ ಅಪಹಾಸ್ಯ ಮಾಡಿ, ಕಿಚುಗುಡುವ ಮರ್ಕಟಗಳ ನೋಡುತ್ತಾ ಹಿಚುಕಿರುವ ಕತ್ತಿಂದ ಮಾತೇ ಇಲ್ಲವಾಗಿ ಏನೂ ಮಾಡಲಾಗದೆ ವ್ಯಾಘ್ರಕ್ಕೆ ಶಿರಬಾಗಿರುವ ನಮ್ಮೆಲ್ಲರನ್ನೊಮ್ಮೆ ಕ್ಷಮಿಸಿ ಬಿಡು ಮಹಾತ್ಮಾ ಕ್ಷಮಿಸಿ ಬಿಡು ನೀ ಕ್ಷಮಿಸಿ ಬಿಡು. ಪೂಜಾ ನಾರಾಯಣ ನಾಯಕ್ ✍️