top of page

ಕೆರೆಹಾವು ಮತ್ತು ಇಂಗ್ಲೀಷ ವಾರ್ತೆ

ಸುಮಾರು 1979 ರ ಜುಲೈ ತಿಂಗಳ ರಾತ್ರಿ ಹತ್ತರ ಸಮಯ. ನಾನು ಆರೋ ಏಳೋ ತರಗತಿಯಲ್ಲಿ ಕಲಿಯುತ್ತಿದ್ದೆ. ಕರಾವಳಿ ತೀರದ ಹಳ್ಳಿಮನೆ ಅಂದ ಮೇಲೆ ತೆಂಗು ಕಂಗು ಬಾಳೆ ಮಾವು ಹಲಸು ಅನಾನಸು ಅಂತೆಲ್ಲ ಬೆಳೆದು ನಿಂತ ಪುಟ್ಟ ತೋಟದ ಮಧ್ಯೆ ಮೂರಂಕಣದ ಕೆಂಪು ಹೆಂಚಿನ ಮನೆ. ಅದರಲ್ಲೂ ಮಳೆಗಾಲ ಅಂದರೆ ಕೇಳಬೇಕೆ, ಒಂದು ರಾತ್ರಿ ಎಂದಿನಂತೆಯೇ ಧೋ ಧೋ ಮಳೆ ಹತ್ತಿತ್ತು. ಬೇಲಿ ದಂಟೆಲ್ಲ ಚಿಗುರಿ ಹಸಿರು ಉಕ್ಕುವ ಕಾಲ. ಕಲ್ಲಿನ ಕಂಪೌಂಡಿನಲ್ಲೂ ಹಸಿರ ಮೆತ್ತೆ ನಳನಳಿಸುವ ಜಾಲ. ಹೊರಗಿನ ಗಾಳಿಗೆ ಮರದ ಟೊಂಗೆ ಕಳಚಿ ದೊಪ್ಪನೆ ನೆಲಕ್ಕಪ್ಪಳಿಸಿದ ಸದ್ದು, ತೆಂಗಿನ ಗಿಡಗಳು ಒಂದೇ ಸಮ ರೊಂಯನೆ ಹೊಯ್ದಾಡುವ ಸಪ್ಪಳ, ಕೆರೆ ಕಟ್ಟೆ ತುಂಬಿ ಹರಿದು ಪುಟ್ಟ ಕಟ್ಟಿಗೆಯ ಸೇತುವೆ ಕೊಚ್ಚಿ ಹೋಗಿ ಪಕ್ಕದೂರಿನ ಹೈಸ್ಕೂಲಿಗೆ ಹೋಗುವ ಅಣ್ಣನಿಗೆ ಅಘೋಷಿತ ರಜೆ. ನನ್ನ ಸರಕಾರಿ ಕನ್ನಡ ಶಾಲೆಗೆ ಪಕ್ಕದ ಪಟ್ಟಣದಿಂದ ಸೈಕಲ್ಲಿನಲ್ಲಿ ಬರುವ ಮಾಸ್ತರ್ರು ಅಂದಿನ ಮಳೆಯ ಆರ್ಭಟಕ್ಕೆ ಭೀತರಾಗಿ ಹೊತ್ತಿಗೆ ಮುಂಚೇ ರಜೆ ಕೊಟ್ಟು ಮಕ್ಕಳನ್ನು ಮನೆಗೆ ಕಳಿಸಿದ್ದರು. ಇಂಥ ಗಾಳಿಗೆ ಎಲ್ಲೋ ಎತ್ತರದ ಮರ ಉರುಳಿ ಇಂದು ರಾತ್ರಿ ಕರೆಂಟು ಹೋಗುವುದು ಗ್ಯಾರಂಟಿ ಅಂತ ಅಪ್ಪ ಅಜ್ಜಿ ಮಾತಾಡಿಕೊಂಡರು. ‘ಬೇಸಿಗೆಯಲ್ಲಿ ಸಾರಿಸಿದ ನಿಂಪು ಅಂಗಳ ಈ ಮಳೆಗೆ ಬಾದಾಗೇ ಹೋಯ್ತು’ ಅಂತ ಅಜ್ಜಿ ಅಪ್ಪನೊಡನೆ ಸಣ್ಣ ದೂರು ಕೊಟ್ಟಳು. ‘ಎಲ್ಲರ ಮನೆ ಅಂಗಳಕ್ಕಾದ ಗತಿ ನಮ್ಮನೆ ಅಂಗಳಕ್ಕೂ ಆಗ್ತದೆ, ಅದಕ್ಯಾಕೆ ಚಿಂತೆ ಮಾಡ್ತೀ’ ಅಂತ ಅಪ್ಪ ಮುಂಬಾಗಿಲಿನುದ್ದಕ್ಕೂ ಇಳಿಬಿಟ್ಟಂತೆ ಪ್ಲಾಸ್ಟಿಕ್ಕಿನ ಹಾಳೆ ಸಿಕ್ಕಿಸಿದರು. ‘ಬಾವಿಗೂ ಒಂದು ಹಾಳೆ ಹೊದಿಸಬೇಕಿತ್ತು, ಮರದ ಎಲೆಯೆಲ್ಲ ಬಿದ್ದು ಕಸ ಕೊಳೀತದೆ, ಇಂದು ಮಿಂದು ಮಡಿನೀರಿಗೆ ಹೋದಾಗ ಬಾವೀಲಿದ್ದ ಕಪ್ಪೆ ತಿನ್ನಲು ಬಂದ ಒಂದು ದೊಡ್ಡ ಕೆರೆ ಹಾವನ್ನೂ ಕಂಡೆ’ ಅನ್ನುತ್ತ ಚಿಮಣಿಯ ಬತ್ತಿ ಎಳೆದು ಅಜ್ಜಿ ಕುಡಿ ತೆಗೆಯುತ್ತಿದ್ದಳು. ನಡುಕೋಣೆಯ ಮೂಲೆಯಲ್ಲಿ ಟಪ್ ಟಪ್ ಹನಿ ಉದುರತೊಡಗಿದ್ದೇ ಅಪ್ಪ ಅಲ್ಲೊಂದು ಪಾತ್ರೆ ತಂದಿಟ್ಟರು, ‘ಮಂಗ ಕುಣಿದು ಒಡೆದ ಹೆಂಚು ಹೊದ್ದಿಸಲು ಮರೆತಿದ್ದಿ ನೀನು’ ಅಂತ ಅಜ್ಜಿ ಮತ್ತೊಮ್ಮೆ ಅಪ್ಪನನ್ನು ದೂರಿದಳು. ಅಣ್ಣ ಮತ್ತು ನಾನು ಶಾಲೆ ಅಭ್ಯಾಸ ಮಾಡುತ್ತ ಹೊರಕೋಣೆಯ ಜಗಲಿಯಲ್ಲಿ ಕೂತಿದ್ದೆವು. ಅರ್ಧ ಗೋಡೆ ಅರ್ಧ ಕಟಾಂಜನವಿದ್ದ ಹೊರಕೋಣೆಯಲ್ಲಿ ಗಾಳಿಗೆ ಹಾರಿ ಒಳಬಂದ ಮಳೆಯ ಹನಿಗಳು ಚಳಿ ಹುಟ್ಟಿಸುತ್ತಿದ್ದವು. ಮಳೆಯ ರಭಸ ಕ್ಷಣಕ್ಷಣಕ್ಕೂ ಜೋರೇ ಆಗುತ್ತಿತ್ತು. ಗುಡುಗು ಮಿಂಚಿನ ಸದ್ದಿಗೆ ಆತಂಕಗೊಂಡ ನಾನು ಆಗಾಗ ಎದುರಲ್ಲೇ ತಲೆ ತಗ್ಗಿಸಿ ಏನೋ ಬರೆಯುತ್ತ ಕೂತ ಅಣ್ಣನ ಮುಖ ನೋಡುತ್ತಿದ್ದೆ. ಫಟ್ಟನೆ ಕರೆಂಟು ಹೋಗಿಬಿಟ್ಟಿತು. ಎಲ್ಲೆಡೆ ಗಾಢಾಂಧಕಾರ, ಇಡೀ ಮನೆಯಷ್ಟೇ ಅಲ್ಲ ಊರಿಗೆ ಊರೇ ಕತ್ತಲು ಹಾಗೂ ಮಳೆಯಲ್ಲಿ ಮೀಯುತ್ತಿರುವಂತೆ ಕಾಣುತ್ತಿತ್ತು. ಸೀಮೆ ಎಣ್ಣೆ ಚಿಮಣಿಯನ್ನು ಬೆಳಗಿಸಿದ ಅಣ್ಣ ನಾವು ಹಾಸಿಕೊಂಡು ಕೂತ ಚಾಪೆಯ ಮಧ್ಯೆ ತಂದಿರಿಸಿದ. ಈಗ ಚಾಪೆಯಲ್ಲಿ ಕೂತ ನಮ್ಮಿಬ್ಬರ ಪಟ್ಟಿ ಪುಸ್ತಕದ ಮೇಲಷ್ಟೇ ಚಿಮಣಿಯ ಮಂದ ಬೆಳಕು ಹರಡಿತ್ತು. ಅಜ್ಜಿಯೂ ಹೂಬತ್ತಿ ಹೊಸೆಯುತ್ತ ಅಲ್ಲೇ ನಮ್ಮ ಬಳಿಯೇ ಬಂದ ಕೂತಳು. ಗದ್ದೆಯ ಬದುವಿಗೆ ಜಡ್ಡಿ ಮಣ್ಣು ಏರಿಸಿ ಬಂದ ಅಪ್ಪ ಆರಾಮ ಕುರ್ಚಿಯಲ್ಲಿ ದಣಿವಾರಿಸಿಕೊಳ್ಳುತ್ತಿದ್ದರು. ಅಮ್ಮ ಅಡುಗೆ ಮನೆಯಲ್ಲಿ ಇನ್ನೊಂದು ಚಿಮಣಿ ಹೊತ್ತಿಸಿಕೊಂಡು ದೋಸೆಗೆ ರುಬ್ಬುತ್ತಿದ್ದಳು. ಇದ್ದಕ್ಕಿದ್ದಂತೆ ಪಕ್ಕ ಕೂತ ಅಜ್ಜಿ ‘ಅಯ್ಯೋ ಏನೋ ತಣ್ಣಗೆ ಕೈಗೆ ಹತ್ತಿದ ಹಾಗಾಯ್ತು, ಏನೇ ತಂಗೀ, ಆಗಲೇ ಮಳೆಯಲ್ಲಿ ಲಂಗ ತೋಯಿಸಿಕೊಂಡು ಬಂದು ಕೂತಿದ್ದಿಯಾ ‘ ಕೇಳಿದ್ದಳು. ನಾನು ಇಲ್ಲವೆಂದೆ. ‘ನೋಡು ನೋಡು ಇಲ್ಲಿ ನೋಡು’ ಅಂತ ತಣ್ಣನೆ ಏನನ್ನೋ ಎತ್ತಿ ಎತ್ತಿ ತೋರಿದಳು. ನಾನೂ ಆ ದೀಪದ ಬೆಳಕಲ್ಲಿ ಮೆಲ್ಲಗೆ ಹಿಂದಕ್ಕೆ ತಿರುಗಿ ನಿರುಕಿಸಿದೆ, ಒಂದೇ ಕ್ಷಣ, ಅಯ್ಯೋ ಹಾವು ಅಂತ ಚೀರಿಕೊಂಡು ಕೂತಲ್ಲೇ ಹಾರಿಬಿದ್ದೆ. ಕೆರೆ ಹಾವೊಂದು ಅಜ್ಜಿಯ ಕೈಯಿಂದ ತಪ್ಪಿಸಿಕೊಳ್ಳುತ್ತ ಬಡಿವಾರ ತೋರುತ್ತ ತನ್ನ ಡೊಂಕು ಮೈ ವೈಯಾರದಿಂದ ತಿರುಗಿಸುತ್ತ ಸರಸರನೆ ಅಡುಗೆ ಕೋಣೆಯ ಕಡೆಗೆ ಹೊರಟಿದ್ದು ಅಣ್ಣನ ಕಣ್ಣಿಗೂ ಬಿತ್ತು. ನಾನೂ ಅಣ್ಣನೂ ಒಂದೇ ಗುಕ್ಕಿಗೆ ಓಡಿ ಕೋಣೆಯ ಮೂಲೆಗಿರುವ ಏಕಮಾತ್ರ ಮಂಚದ ಮೇಲೆ ಹತ್ತಿ ನಿಂತು ಭಯದಿಂದ ಅತ್ತಿತ್ತ ನೋಡಲಾರಂಭಿಸಿದೆವು, ಎರಡು ಮಾರುದ್ದದ ಆ ದಪ್ಪ ಹಾವು ಕೋಣೆಯ ಕತ್ತಲು ಬೆಳಕಿನ ಆವಾರದಲ್ಲಿ ಹೆಡೆಯೆತ್ತಿ ಚಲಿಸಿದ ಪರಿ ಕಂಡು ಮನಸ್ಸಿನ ಮೂಲೆಯಲ್ಲಿ ವಿಚಿತ್ರ ಅದುರಿಹೋಗಿದ್ದೆವು, ಅಷ್ಟರಲ್ಲೇ ನೆಲದಿಂದ ಎದ್ದ ಅಜ್ಜಿ ಆರಾಮಕುರ್ಚಿಯಲ್ಲಿ ಕಾಲುಗಳೆರಡನ್ನೂ ಮೇಲಕ್ಕೆಳೆದುಕೊಂಡು ಕೂತು ‘ಅಬ್ಬಾ, ಕೈಯಲ್ಲೇ ಮುಟ್ಟಿದರೂ ಕೆರೆಹಾವು ಅಂತ ಕಾಣಲಿಲ್ಲವಲ್ಲೇ, ಬೆಳಿಗ್ಗೆ ಆ ಬಾವಿಯಲ್ಲಿ ಕಂಡದ್ದೇ ಏರಿ ಬಂದು ಒಳ ನುಗ್ಗಿರಬೇಕು’ ಅನ್ನುತ್ತ ಸುಧಾರಿಸಿಕೊಳ್ಳುತ್ತಿದ್ದಳು. ಅಮ್ಮ ಕುಳಿತು ರುಬ್ಬುತ್ತಿದ್ದ ರುಬ್ಬುಗಲ್ಲಿನ ಸಂದಿಯಲ್ಲೇ ಅದು ಸರ್ರನೆ ನಡೆದದ್ದಕ್ಕೆ ಅಮ್ಮ ಎಲ್ಲ ಇದ್ದಲ್ಲೇ ಕೈಬಿಟ್ಟು ಚಿಮಣಿ ಎತ್ತಿಕೊಂಡು ಹೆದರುತ್ತಲೇ ಈಚೆ ಓಡಿ ಬಂದಳು. ಅಪ್ಪ ಬಾಗಿಲ ಮೂಲೆಗಿರುವ ಒಂದು ಬಡಿಗೆಯಿಂದ ಕೆರೆಹಾವು ಕೂತಲ್ಲಿಗೆ ಬಂದು ಹುಶ್ ಹುಶ್ ಅಂತ ತಿವಿದಾಗಲೂ ಅದು ಜಪ್ಪಯ್ಯ ಅಂದರೂ ಅಲುಗಾಡದೇ ಕೂತದ್ದನ್ನು ಕಂಡು ‘ಹೊರಗಿನ ಜೊಪ್ಪು ಮಳೆಗೆ ಹೆದರಿ ಒಳ ಬಂದಿದೆ, ಮಳೆ ನಿಂತ ನಂತರ ತಾನೇ ಹೊರ ಹೋಗ್ತದೆ ಬಿಡು ‘ಅಂತ ಅಷ್ಟೇ ಸಲೀಸಾಗಿ ಹೇಳಿದರು, ‘ಅಯ್ಯೋ ಹಾವನ್ನು ಕಾಲ ಬುಡದಲ್ಲಿರಿಸಿಕೊಂಡು ನಾನು ದೋಸೆ ಹ್ಯಾಗೆ ರುಬ್ಬಲಿ? ಅದನ್ನು ಈಗಲೇ ಹೊರಕ್ಕೆ ಓಡಿಸಿ, ಮಕ್ಕಳು ಮರಿ ನೋಡಿ ಹೆದರ್ತಾರೆ, ಹೀಗೆ ಸುಮ್ಮನಿದ್ದರೆ ಹ್ಯಾಗೆ, ಈಗ್ಲೇ ಏನಾದರೂ ಮಾಡಿ ’ ಅಂತ ಒತ್ತಾಯಿಸಿದಳು. ಅಮ್ಮ ಏನೋ ಉಪಾಯ ಹೊಳೆದಂತೆ, ಹೊರಕೋನೆಯ ಗೋಡೆ ಸ್ಟ್ಯಾಂಡಿನಲ್ಲಿದ್ದ ಸೆಲ್ಲಿನ ರೇಡಿಯೋವನ್ನು ಅಡುಗೆ ಖೋಲಿಗೆ ತಂದು ದೊಡ್ಡ ಸೌಂಡಿಗೆ ತಿರುವಿ ಹಚ್ಚಿಟ್ಟಳು, ಆ ಸದ್ದಿಗಾದರೂ ಅದು ಹೆದರಿ ಹೊರ ಹೋಗಬಹುದು ಎಂಬ ಯೋಚನೆ ಅಮ್ಮನದಾಗಿತ್ತು. ಆಗ ರಾತ್ರಿ ಎಂಟೂವರೆಯಾದದ್ದರಿಂದ ಧಾರವಾಡ ನಿಲಯದಲ್ಲಿ ಕನ್ನಡ ಕಾರ್ಯಕ್ರಮ ಮುಗಿದು ಇಂಗ್ಲೀಷ್ ವಾರ್ತೆ ಬರುತ್ತಿತ್ತು, . ‘ಕೆರೆ ಹಾವು ಅದನ್ನೇ ಕೇಳುತ್ತ ಅಲ್ಲೇ ಮಲಗಿಬಿಟ್ಟಿದೆ ಅಂತ ಕಾಣ್ತದೆ, ಬಂದು ನೋಡಿರಿಲ್ಲಿ ‘ ಅಂತ ಅಮ್ಮ ಪುನಃ ಅಲವತ್ತುಕೊಂಡಳು. ಅಪ್ಪ ಒಳ ಬಂದವರು ‘ಅದಕ್ಕೆಲ್ಲಿ ಕಿವಿ ಕೇಳ್ತದೆ? ರೇಡಿಯೋ ಅಷ್ಟೇ ಅಲ್ಲ ನೀನು ಸ್ವತಃ ನಿಂತು ಗದ್ದಲ ಹಾಕಿದರೂ ಅದಕ್ಕೆ ಕೇಳುವುದಿಲ್ಲ, ಕೋಲಲ್ಲಿ ತಿವಿದೇ ಅದನ್ನು ಹೊರಗೆ ಕಳಿಸಬೇಕು’ ಅಂತ ಗದರಿದರು. ‘ಅಯ್ಯೋ ನಿಮ್ಮ ಬಳಿ ಆಗದಿದ್ದರೆ ಆ ತಿಮ್ಮಣ್ಣ ಗೌಡನನ್ನಾದರೂ ಕರೆತನ್ನಿ , ಹಾವನ್ನು ಮನೆಯೊಳಗಿಟ್ಟುಕೊಂಡು ನಿಶ್ಚಿಂತೆಯಿಂದ ಮಲಗುವುದಾದರೂ ಹೇಗೆ?’ ಅಂತ ಅಮ್ಮ ಹೊರಬಂದು ಚಿಂತಾಕ್ರಾಂತಳಾಗಿ ಕೂತಳು. ಅಪ್ಪ ಅವಳ ಸಲಹೆಗೆ ‘ಛೆ, ತಿಮ್ಮಣ್ಣ ಬಂದರೆ ಅದನ್ನು ಬಡಿದು ಸಾಯಿಸಿಯೇ ಹೊರಹಾಕ್ತಾನೆ, ಸುಮ್ಮನಿರು ಅವನಿಗೆ ಮಾತ್ರ ಕರೆಯಲಾರೆ, ಇರು ಕಾಯೋಣ, ಮಳೆ ಕಡಿಮೆಯಾದರೆ ತಾನೇ ಹೊರಹೋಗ್ತದೆ’ ಅಂತ ಅಪ್ಪ ಖಡಾಖಂಡಿತವಾಗಿ ಹೇಳಿ, ಅಡುಗೆ ಮನೆಗೆ ನುಗ್ಗಿ ಅನ್ನ ಸಾರಿನ ಪಾತ್ರೆಯನ್ನೂ ಜೊತೆಗೆ ಎಲ್ಲರ ತಟ್ಟೆಗಳನ್ನೂ ಹೊರಖೋಲಿಗೆ ತಂದರು, ದೋಸೆಗೆ ರುಬ್ಬಿದ ಹಿಟ್ಟನ್ನು ಕಲ್ಲು ಗಡಗಡಿಸಿ ಪಾತ್ರೆಗೆ ತೆಗೆದರು, ಆದರೂ ಆ ಕೆರೆ ಹಾವು ಹೊರಹೋಗುವ ಸೂಚನೆಯನ್ನೇ ಕೊಡದೇ ಅಲ್ಲೇ ಇನ್ನಷ್ಟು ಮುದ್ದೆಯಾಗಿ ಮಲಗಿತ್ತು. ದೋಸೆ ಪಾತ್ರೆಯನ್ನೂ ಹೊರತಂದು ಮುಚ್ಚಿಡುತ್ತ ಅಪ್ಪ ಅಡುಗೆ ಮನೆಯ ಬಾಗಿಲು ಹಾಕಿಕೊಂಡು ‘ಉಂಡು ನಿಶ್ಚಿಂತೆಯಿಂದ ಮಲಗಿ , ಬೆಳಗಾಗುವುದರೊಳಗೆ ಅದು ತಾನಾಗೇ ಬಚ್ಚಲಿನ ರಂದ್ರದಿಂದಲೋ ಅಡುಗೆ ಮನೆ ಕಿಟಕಿಯಿಂದ ಹೋಗಿರ್ತದೆ ‘ ಅಂದರು. ಹೊರಖೋಲಿಯಲ್ಲೇ ಉಂಡು ಕಟಾಂಜನದ ಚೌಕದಲ್ಲೇ ತೂರಿಸಿ ಕೈತೊಳೆದೆವು. ಹಾಸಿದ ಹಾಸಿಗೆಯಲ್ಲಿ ಎಲ್ಲಿ ತಂಪು ಹತ್ತಿದರೂ ಹಾವೆ ಎಂಬಷ್ಟು ಭಯವಾಗುತ್ತಿತ್ತು, ಅಂದ ನನ್ನ ಕನಸಿನಲ್ಲೂ ಕೆರೆಹಾವಿನ ಮೈಯ ಚಿಕ್ಕಿಗಳೇ ಬಂದು ಹೆದರಿಸಿದವು. ಇಡೀ ರಾತ್ರೆ ಸುರಿದ ಮಳೆ ಬೆಳಗಿನ ಜಾವ ನಿಂತಿತ್ತು. ತೊಳೆದಿಟ್ಟ ಪಾತ್ರೆಯಂತೆ ನೆಲ ಫಳ ಫಳ ಹೊಳೆಯುತ್ತಿತ್ತು. ಮೊದಲದಿನ ಅಜ್ಜಿ ಕಟ್ಟಿ ನಿಲ್ಲಿಸಿದ ಬಸಲೆಯ ಚಪ್ಪರ ಸಬಂಧ ಭೂಮಿಗೆ ಮಲಗಿತ್ತು, ಅಮ್ಮ ಹಸನು ಮಾಡಿದ ಬೆಂಡೆ ಹೀರೆ ಹಾಗಲದ ಓಳಿಗಳಲ್ಲಿ ಬೀಜ ಮೊಳಕೆಯೊಡೆದಿತ್ತು. ಇವೆಲ್ಲ ನಿರುಕಿಸುತ್ತ ಮೆಲ್ಲಗೆ ಹೊರಕಟ್ಟೆಗೆ ಬಂದು ನಿಂತು ಮನೆಯೆದಿರು ಬೇಲಿಯಲ್ಲರಳಿದ ಹಳದಿ ಹೂಗಳನ್ನು ನೋಡುತ್ತಿದ್ದ ನನಗೆ ಕೆರೆಹಾವೊಂದು ಬೇಲಿ ಅಂಚಿನಿಂದ ಸರಸರನೆ ಹರಿದುಹೋಗಿದ್ದು ಕಣ್ಣಿಗೆ ಬಿದ್ದು ಎದೆ ದಸ್ಸಕ್ಕೆಂದಿತು. ಬೆಳಕು ಹರಿದಾಗ ಅಮ್ಮ ಅಡುಗೆ ಮನೆಯ ಬಾಗಿಲು ತೆರೆದು ಕೆರೆ ಹಾವು ಹೊರಹೋದ ಸುದ್ದಿ ಕೊಟ್ಟಳು. ಪ್ರಸಾರ ಮುಗಿದು ರಾತ್ರಿಯಿಡೀ ಗೊರಗೊರ ಸ್ವರ ಹೊರಡಿಸಿದ ರೆಡಿಯೋ ಸೆಲ್ ಡೌನ್ ಆಗಿ ಅಲ್ಲೇ ಬಂದಾಗಿತ್ತು. -ಸುನಂದಾ ಕಡಮೆ ತಮ್ಮದೇ ಆದ ವಿಶಿಷ್ಠ ಕಥಾಕುಸುರಿಯ ಮೂಲಕ ಗಮನ ಸೆಳೆದಿರುವ ಹೊಸತಲೆಮಾರಿನ ಕಥೆಗಾರ್ತಿಯರ ಪೈಕಿ ಸುನಂದಾ ಕಡಮೆ ಮುನ್ನೆಲೆಯಲ್ಲಿ ನಿಲ್ಲುತ್ತಾರೆ.ಮೂಲತಃ ಅಂಕೋಲಾದ ಅಲಗೇರಿಯವರಾದ ಇವರು ಸಣ್ಣಕತೆ, ಕವಿತೆ, ಕಾದಂಬರಿ, ನುಡಿಚಿತ್ರಗಳ ಸಂಕಲನ ಹೀಗೆ ಸಾಹಿತ್ಯದ ವಿವಿಧ ಆಯಾಮಗಳಲ್ಲಿ ಕೃಷಿ ನಡೆಸಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವುಗಳ್ಲಲಿ ಛಂದ ಪುಸ್ತಕ ಪ್ರಶಸ್ತಿ, ಎಂ.ಕೆ.ಇಂದಿರಾ ದತ್ತಿ ಪ್ರಶಸ್ತಿ,ತ್ರಿವೇಣಿ ಕಥಾ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಬಿ.ಎಂ.ಶ್ರೀ ಕಥಾ ಪ್ರಶಸ್ತಿ , ಬಾಲ ಸಾಹಿತ್ಯಕ್ಕೆ ಕರ್ನಾಟಕ ಬಾಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿಮುಂತಾದವುಗಳು ಪ್ರಮುಖವಾಗಿವೆ. ಇವಲ್ಲದೆ ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳ ಕಥಾ ಸ್ಪರ್ಧೆಗಳಲ್ಲಿ ಇವರಿಗೆ ಬಹುಮಾನಗಳು ದೊರಕಿವೆ. ಇವರ ಕೃತಿಗಳಲ್ಲಿ ಕಥಾಸಂಕಲನಗಳಾದ ‘ಪುಟ್ಟಪಾದದ ಗುರುತು’’, ಗಾಂಧಿಚಿತ್ರದ ನೋಟು’, ‘ಕಂಬಗಳ ಮರೆಯಲ್ಲಿ’, ಕಾದಂಬರಿಗಳಾದ ‘ಬರೀ ಎರಡು ರೆಕ್ಕೆ’, ‘ದೋಣಿ ನಡೆಸ ಹುಟ್ಟು’, ‘ಕಾದು ಕೂತಿದೆ ತೀರ’, ಕವಿತೆ ಸಂಕಲನ ‘ಸೀಳು ದಾರಿ’ ಹಾಗೂ ನುಡಿ ಸಂಕಲನ‘ಪಿಸುಗುಟ್ಟುವ ಬೆಟ್ಟಸಾಲು’ ಮುಂತಾದವು ಪ್ರಮುಖವಾಗಿವೆ. ಇವರ ಕಾದಂಬರಿ ‘ಬರೀ ಎರಡು ರೆಕ್ಕೆ’ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದ್ದು ಅದು ಮುಂಬೈ ವಿಶ್ವವಿದ್ಯಾಲಯದ ಎಮ್.ಎ. ತರಗತಿಗೆ ಪಠ್ಯವಾಗಿದೆ. ಮನೆವಾರ್ತೆಯ ಜೊತೆಗೆ ಬರವಣಿಗೆಯನ್ನು ಅಷ್ಟೇ ಸಮಚಿತ್ತದಿಂದ ನಿಭಾಯಿಸುವ ಶ್ರೀಮತಿ ಸುನಂದಾಕಡಮೆಯವರು ತಮ್ಮಅನುಭವದ ಅಡುಗೆಯನ್ನುತಮ್ಮ ಸಾಹಿತ್ಯದ ಮೂಲಕ ಓದುಗರಿಗೆ ಉಣಬಡಿಸುತ್ತಾ ಸರಳ ಮತ್ತು ಸಜ್ಜನಿಕೆಯ ಸಾಕಾರವಾಗಿ ನಮ್ಮೊಂದಿಗೆ ಇದ್ದಾರೆ.- ಸಂಪಾದಕ.

ಕೆರೆಹಾವು ಮತ್ತು ಇಂಗ್ಲೀಷ ವಾರ್ತೆ
bottom of page