ಕುಮಾರವ್ಯಾಸನು ಹಾಡಿದನೆಂದರೆ
ಸಾವಿರ ವರುಷಗಳ ಕನ್ನಡ ಕಾವ್ಯಗಳ ಭವ್ಯ ಪರಂಪರೆಯಲ್ಲಿ " ಕುಮಾರವ್ಯಾಸ ಮಹಾಕವಿಯ " ಕರ್ಣಾಟ ಭಾರತ ಕಥಾಮಂಜರಿ" ಗೆ ವಿಶಿಷ್ಟ ಸ್ಥಾನವಿದೆ. ಈ ಕವಿಯ ಬಗ್ಗೆ , ಕಾವ್ಯದ ಬಗ್ಗೆ ಸಾಕಷ್ಟು ಸಾಹಿತ್ಯರಚನೆ ಆಗಿದೆ. ಕನ್ನಡದ ಹಿರಿಯರೆಲ್ಲರೂ ಬರೆದಿದ್ದಾರೆ. ಆದ್ದರಿಂದ ನಾನು ಹೊಸದಾಗಿ ಹೇಳುವಂತಹದೇನಿಲ್ಲ. ಹಾಗೆ ಹೇಳುವ ಯೋಗ್ಯತೆಯೂ ನನ್ನದಲ್ಲ. ಒಬ್ಬ ಕಾವ್ಯಾಭ್ಯಾಸಿಯಾಗಿ, ಒಬ್ಬ ಗಮಕಿಯಾಗಿ ನಾನು ಅದನ್ನು ಓದಿದ್ದೇನೆ. ನನ್ನ ಸಾಮರ್ಥ್ಯಕ್ಕೆ ತಕ್ಕಷ್ಟು ತಿಳಿದುಕೊಂಡಿದ್ದೇನೆ. ಸಮುದ್ರದಲ್ಲಿ ನಮ್ಮ ಕೈಗಳನ್ನು ಹಾಕಿದರೆ ನಮ್ಮ ಬೊಗಸೆಯಲ್ಲಿ ಎಷ್ಟು ನೀರು ಹಿಡಿಯಲು ಸಾಧ್ಯವೋ ಅಷ್ಟನ್ನು ಹಿಡಿದಂತೆ ಇದು. ಇದೂ ಒಂದು ಕಾವ್ಯಸಾಗರ. ಇದನ್ನು ಪಂಡಿತೋತ್ತಮರೆಲ್ಲ ಬಗೆಬಗೆಯಲ್ಲಿ ಬಣ್ಣಿಸಿದ್ದಾರೆ. ಅಂತಹ ಒಬ್ಬ ನಮ್ಮ ಹಿರಿಯರು ಕಡೆಂಗೋಡ್ಲು ಶಂಕರ ಭಟ್ಟರು ನಾರಣಪ್ಪನ ಪ್ರತಿಭೆ ಕುರಿತು ಹೇಳುತ್ತಾರೆ - " ಕವಿ ನಾರಣಪ್ಪನು ನನಗೇನೂ ವಕಾಲತ್ತು ಕೊಡಲಿಲ್ಲ. ಕೊಡುವಂತೆಯೂ ಇಲ್ಲ. ಅವನು ಅಸಹಾಯಶೂರನು. ಇಂಥವನು ನಮ್ಮ ಮುಂದೆ ಬಂದರೆ ತನ್ನ ಒಂದೊಂದೆ ಗುಣವನ್ನು ಕಮ್ಮೈಸಿ ಕೀರ್ತನೆಯನ್ನು ಹೊಸೆದು ಪದ ಕಟ್ಟಿ ಹಾಡುವ. " ರಸಜ್ಞ" ರನ್ನೂ ಚಟುವಟಿಕೆಯ ಬಾಣಗಳನ್ನೆಸೆಯುವ ಟೀಕಾಕರ್ತರನ್ನೂ ಒಂದೇ ಒಂದು ಭುಜಾಸ್ಫಾಲನದಿಂದ ಓಡಿಸಿಬಿಡುತ್ತಿದ್ದನು. ಆತನ ಪೌರುಷವೆ ಅಂತಹದು. " ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ" ಯುಳ್ಳ ಆ ಕವಿ ನಮ್ಮಂತಹ ಬಣಗುಗಳನ್ನು ನೋಡಿ ನಗುತ್ತಿದ್ದನಲ್ಲವೆ? ಅವನ ಕೀರ್ತಿಯು ಚಿರಸ್ಥಾಯಿ. ಕನ್ನಡ ನುಡಿಯಿರುವವರೆಗೆ , ರಸಾಸ್ವಾದನೆಯನ್ನು ಮಾಡುವ ಸಹೃದಯರು ಇರುವವರೆಗೆ, ಸ್ವಯಂ ಸ್ಫುರಿತವಾಗಿ ಸ್ರೋತೋವಾಹಿನಿಯಾಗಿರುವ ಕವಿತಾಶಕ್ತಿಗೆ ಮನ್ನಣೆಯಿರುವವರೆಗೆ ಆತನನ್ನು ಮರೆವವರಿಲ್ಲ. ಸಮುದ್ರವು ಗಜರಬಹುದು. ಗರ್ಜಿಸಬಹುದು. ತೀರದಲ್ಲಿ ಕುಳಿತ ಮಕ್ಕಳು ನಾಲ್ಕಾರು ಮುತ್ತಿನ ಸಿಪ್ಪುಗಳನ್ನಾದರೂ ಆಯ್ದು ಬೆಡಗಿನಿಂದ ಸಮುದ್ರದ ಹೃದಯವ್ಯಾಪಿ ಸೌಂದರ್ಯವನ್ನು ಅಳೆಯುವದಕ್ಕೆ ಯತ್ನಿಸುತ್ತವೆ. ಅದರಂತೆ ಕುಮಾರವ್ಯಾಸನ ಅಥವಾ ನಮ್ಮ ನಾರಣಪ್ಪನ ಕವಿತಾಗುಣವು ಅಗಾಧವಾಗಿದ್ದರೂ , ಆದುದರಿಂದಲೇ ದುರವಗಾಹವಾಗಿದ್ದರೂ ನಾವು ಬಲ್ಲವರಂತೆ ಹೇಳುತ್ತೇವೆ, ಬರೆಯುತ್ತೇವೆ" ಕುಮಾರವ್ಯಾಸನ ಅದ್ಭುತ ಪ್ರತಿಭೆಗೆ ಅವರು ಒಂದು ಪದ್ಯ ಉದಾಹರಿಸುತ್ತಾರೆ. ಅದನ್ನು ಗಮನಿಸೋಣ- ನಳಿನಮಿತ್ರನು ಪಶ್ಚಿಮಾಂಬುಧಿ ಗಿಳಿಯೆ ನಾನಾ ಪಕ್ಷಿ ಜಾತಿಗ ಳುಲಿವುತೈತೊಂದೊಂದು ವೃಕ್ಷವನೇರಿ ರಾತ್ರಿಯನು| ಕಳಿದು ನನಾ ದೆಸೆಗೆ ಹರಿವವೊ ಲಿಳೆಯ ಭೋಗದ ದೃಷ್ಟಿ ತೀರಿದ ಬಳಿಕ ಲೋಕಾಂತರವನೆಯ್ದುವರೆಂದನಾ ಮುನಿಪ|| ಸನತ್ಸುಜಾತನು ಧೃತರಾಷ್ಟ್ರನಿಗೆ ಹೇಳಿದ ತತ್ವಬೋಧದಲ್ಲಿ ಕವಿ ಮಾನವ ಜೀವನವನ್ನು ಹೃದಯಂಗಮವಾಗುವಂತೆ ಬಣ್ಣಿಸಿದ್ದಾನೆ. ಪ್ರಪಂಚವೆಂದರೆ ದೊಡ್ಡದೊಂದು ವೃಕ್ಷ. ಇದರಲ್ಲಿ ಒಂದು ರಾತ್ರಿಯನ್ನು ಕಳೆಯಬೇಕೆಂದು ಜೀವಿಗಳು ಬಂದು ನೆಲಸುತ್ತವೆ. ಮತ್ತೆ ಹಾರಿ ಹೋಗುತ್ತವೆ. ಆದರೇನು, ಹಾರಿ ಬರುವ ಎಷ್ಟೋ ಜೀವಿಗಳಲ್ಲಿ ಹೆಚ್ಚಿನವು ಬಂದುವು ಹೋದವೆಂದು ಗೊತ್ತಾಗುವದಿಲ್ಲ. ರಾತ್ರಿಯಲ್ಲೆ ಬರುವವು; ಮೂಕವಾಗಿ ಕುಳಿತಿದ್ದು ರಾತ್ರಿ ಮುಗಿವ ಮೊದಲೆ ಹೋಗುವವು. ಅವುಗಳ ಆಗಮನ ನಿರ್ಗಮನಗಳಿಗೆ ಯಾವ ಸಾಕ್ಷಿಯೂ ಇರುವದಿಲ್ಲ. ಆದರೆ ನಮ್ಮ ಕವಿ ನಾರಣಪ್ಪನೆಂಬ ಈ ಪಂಚವರ್ಣದ ಗಿಳಿ ಕಳೆದ ಒಂದು ರಾತ್ರಿಯಲ್ಲಿ ಎಂತಹ ಇಂಪು ಮಾತುಗಳನ್ನಾಡಿತು! ಇವುಗಳನ್ನು ಪ್ರಪಂಚವೃಕ್ಷವು ಮರೆಯುವದೇ? ಸಾಧ್ಯವಿಲ್ಲ. ಅದರ ರೆಂಬೆಗಳಲ್ಲಿ, ಎಲೆಗಳಲ್ಲಿ, ಚಿಗುರುಗಳಲ್ಲಿ ತೊಂಡುಗೆಡೆದ ಆ ಗಿಳಿಯ ಮೆದು ಮಾತು ಈಗಲೂ ಪ್ರತಿಧ್ವನಿತವಾಗುತ್ತಿದೆ. ವರ್ಷಗಳ ಮೇಲೆ ವರ್ಷಗಳು ಕಳೆದುಹೋದಂತೆ ಅದರ ಪಡಿಮಾತು ವರ್ಧಿಸುತ್ತದೆ. ಇನಿದಾಗುತ್ತದೆ. ಈ ಶತಮಾನದಲ್ಲಿ ನಿಂತು ಹಿಂದೆ ನೋಡುವಾಗ " ಆಹಾ! ಆ ಅರಗಿಳಿ ಹೋಯಿತಲ್ಲಾ ಎಂದು ವ್ಯಸನವಾಗುತ್ತದೆ..........ಆತನ ಪದಗುಂಫನ ಕ್ರಮ, ಆತನ ರಸಪ್ರಕಾಶನ ಪದ್ಧತಿ, ಆತನ ಸಹೃದಯತೆ, ಆತನ ಓಜಸ್ವಿತೆ...ಇವುಗಳೆಲ್ಲಾ ದಿವ್ಯವಾದ ಕಾಂತಿಯಿಂದ ಬೆಳಗುತ್ತವೆ. ಇನ್ನೊಂದೆಡೆಯಲ್ಲಿ, ಇನ್ನೊಬ್ಬ ಕವಿಯಲ್ಲಿ ಹುಡುಕಿದರೂ ಈ ಗುಣಗಳು ದೊರೆಯುವದಿಲ್ಲ. ಇದೇ ಆತನ ಮಹತ್ವ. ಇದೇ ಆತನಲ್ಲಿದ್ದ ವಿಶಿಷ್ಟ ಪ್ರತಿಭೆ!" ಈ ಮಾತುಗಳಲ್ಲಿ ಅತಿಶಯೋಕ್ತಿಯೇನೂ ಇಲ್ಲ. ಅದು ಆ ಕಾವ್ಯದ ಆಳ ಅಧ್ಯಯನ ಮಾಡಿದವರಿಗೆಲ್ಲ ಗೊತ್ತು. ( ಸಶೇಷ) - ಎಲ್. ಎಸ್. ಶಾಸ್ತ್ರಿ