top of page

ಕಿರಣ_ಚಿಂತನ

ಬೇಕು ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ !! 🏥 || ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು ನಡು ಮಧ್ಯದಲಿ ಅಡಿಕೆ ತೆಂಗುಗಳ ಮಡಿಲು ಸಿರಿಗನ್ನಡದ ಚಪ್ಪರವೇ ನಮ್ಮ ಜಿಲ್ಲೆ ಇಲ್ಲಿಯೇ ಹುಟ್ಟುವೆನು ಇನ್ನೊಮ್ಮೆ ನಲ್ಲೆ || ಉತ್ತರ ಕನ್ನಡದ ಹೆಮ್ಮೆಯ ಕವಿ, ಸಮಾಜ ಸೇವಕ, ಚುಟುಕುಬ್ರಹ್ಮ ಡಾ. ದಿನಕರ ದೇಸಾಯಿಯವರು, ಜಿಲ್ಲೆಯ ನಿಸರ್ಗ ಸೌಂದರ್ಯವನ್ನು ವರ್ಣಿಸುತ್ತ ಬರೆದ ಚುಟುಕು. ಖಂಡಿತ ನೈಸರ್ಗಿಕವಾಗಿ ಶ್ರೀಮಂತ ಜಿಲ್ಲೆ ಉತ್ತರ ಕನ್ನಡ. ಆದರೆ ಬದುಕಿಗೆ ಸಂಕಟ ಬಂದಾಗ... ಯಾವುದೇ ವ್ಯಕ್ತಿ ಕಾಯಿಲೆ ಬಿದ್ದು ತಕ್ಷಣ ಹೆಚ್ಚಿನ ಚಿಕಿತ್ಸೆ ಬೇಕಾದಾಗ.... ಅಲ್ಲಿಗೆ ಅರ್ಧ ಆಯಸ್ಸು ಕಳೆದ ಅನುಭವ. ಮೊದಲ ಪ್ರಶ್ನೆ, ರೋಗಿಯನ್ನು ಎಲ್ಲಿ ಕರೆದುಕೊಂಡು ಹೋಗುವುದು? ಗೋವೆಯ ಪಣಜಿಗೋ ಅಥವಾ ದೂರದ ಮಣಿಪಾಲಕ್ಕೋ ? ಈ ಪ್ರಶ್ನೆ ಉದ್ಭವವಾಗುತ್ತಿತ್ತು ೩ - ೪ ದಶಕಗಳ ಹಿಂದೆ. ನಾಚಿಕೆಯ ವಿಷಯ. ಇಂದೂ ಕೂಡ ಅದೇ ಪರಿಸ್ಥಿತಿ. 😡😡 ನಮ್ಮ ಜಿಲ್ಲೆಯವರು ಶಾಂತಪ್ರಿಯರೋ ಅಥವಾ ಆಲಸಿಗಳೊ... ತೀರ್ಮಾನ ಮಾಡುವುದು ಅವರವರಿಗೆ ಬಿಟ್ಟಿದ್ದು . ಏಕೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಕಲ ಸೌಕರ್ಯ ಆಸ್ಪತ್ರೆಯ ಅವಶ್ಯಕತೆ ಬಗ್ಗೆ ಕೆಲ ವರ್ಷಗಳ ಹಿಂದಿನವರೆಗೆ ಹೋರಾಟ ನಡೆದ ಯಾವುದೇ ಸಂಗತಿ ನೆನಪಿಲ್ಲ. ನೌಕಾ ನೆಲೆ ಮತ್ತು ಕೈಗಾ ಅಣುಸ್ಥಾವರದ ವಿರೋಧದ ಬಗ್ಗೆ ಮಾತ್ರ ಒಂದು ಮಟ್ಟಿನ ಹೋರಾಟ, ಪ್ರತಿಭಟನೆ ನಡೆದಿತ್ತು . ಆದರೆ ಅತೀ ಅವಶ್ಯಕರ ಸುಸಜ್ಜಿತ ಆಸ್ಪತ್ರೆ ಬೇಕೆಂಬ ಕೂಗು ಇದ್ದರೂ ಯಾರಿಗೂ ಕೇಳುತ್ತಿರಲಿಲ್ಲ . ಜಿಲ್ಲೆಯ ಜನ, ಇದುವೇ ಬದುಕು ಎಂದು ಮಣಿಪಾಲದ ದಾರಿಯಲ್ಲಿ ಮಣ್ಣು ಪಾಲಾದದ್ದು ಬಹಳ. 😒😞 ಈಗೀಗ ಕಳೆದ ಕೆಲ ವರ್ಷಗಳಿಂದ ಜನಜಾಗೃತಿ ಉಂಟಾಗಿದೆ. ಜನಪ್ರತಿನಿಧಿಗಳ ಮೇಲೆ ಒತ್ತಡ ಬೀಳುತ್ತಿದೆ. ಬೆದರಿದ ಪ್ರತಿನಿಧಿಗಳು ದಾರಿ ತೋಚದಂತೆ ಕಂಗಾಲಾಗಿ ಹೇಳಿಕೆ ಕೊಡಲಾರಂಭಿಸಿದ್ದಾರೆ, ಸರಕಾರದ ಗಮನ ಸೆಳೆಯುವ ಪ್ರಯತ್ನವೂ ನಡೆದಿದೆ. ಸದ್ಯದ ವರದಿ ಪ್ರಕಾರ ಈ ಬೇಡಿಕೆಗೆ ಆರ್ಥಿಕ ವಿಭಾಗದ ಮಂಜೂರಿ ಸಿಗಲಿಲ್ಲವಂತೆ ( ಸುದ್ದಿ ಓದಿದ್ದಷ್ಟೇ , ತಪ್ಪಿದ್ದರೆ ಕ್ಷಮಿಸಿ). ಅಂದರೆ ಈ ಬೇಡಿಕೆ ಈಡೇರುವುದಕ್ಕೆ ಸರಿಯಾದ ಮಾಹಿತಿ ಒದಗಿಸಲು ವಿಫಲವಾದವರು ಯಾರು ? ಯಾರು ಇದಕ್ಕೆ ಹೊಣೆ? 🤔🤔 ಯಾರದೋ ಮನೆಗೆ ಈ.ಡಿ ಯವರು ಹಣ ಹುಡುಕಲು ಹೊರಟಾಗ ರಸ್ತೆಗಿಳಿದು ಧರಣಿ ನಡೆಸುವ ಧುರೀಣರು, ಕನ್ನಡ ನಾಡಿನ ಮಕ್ಕಳ ಜೀವ ಸಂಕಟದಲ್ಲಿದ್ದಾಗ ಏಕೆ ಕೈ ಕೈ ಹಿಡಿದು ಪ್ರದರ್ಶಿಸುವುದಿಲ್ಲ ? 😡😡 ಇಡೀ ಸದನ ರಾಜಕೀಯ ಬಿಟ್ಟು ಒಂದಾಗಿ ಸರಕಾರದ ಮೇಲೆ ಒತ್ತಡ ತರಬೇಕಾಗಿತ್ತು . ಮಾನವೀಯತೆ ಪ್ರದರ್ಶನ ತಮ್ಮ ತಮ್ಮ ಕ್ಷೇತ್ರದ, ಪಕ್ಷದ, ಜಾತಿ, ಮತಕ್ಕಷ್ಟೇ ಸೀಮಿತವಾದಂತೆ ಅನಿಸಿತು. ಈ ಜಿಲ್ಲೆಯ ಈಗಿನ ಈ ಪರಿಸ್ಥಿತಿಗೆ, ಪಕ್ಷ ಬೇಧ ಬಿಟ್ಟು, ಹಿಂದೆ ಆಗಿ ಹೋದ ಎಲ್ಲ ಜನಪ್ರತಿನಿಧಿಗಳು, ಧುರೀಣರು ಕಾರಣರು. 😡 ಈ ಸರ್ವ ಸಜ್ಜಿತ ಆಸ್ಪತ್ರೆ ಜಿಲ್ಲೆಯಲ್ಲಿ ಯಾವಾಗ ಆದೀತೋ ಗೊತ್ತಿಲ್ಲ. ಆದರೆ ಜಿಲ್ಲೆಯ ಜನತೆಗೆ ನನ್ನದೊಂದು ಸಲಹೆ. ಯಾವುದೇ ರೀತಿಯ ಕಾಯಿಲೆ ಉಲ್ಬಣ ಗೊಂಡಾಗ ಅಥವಾ ಅಪಘಾತವಾದಾಗ ವೈದ್ಯರಿಗೆ ರೋಗಿಯ ಆರೋಗ್ಯದ ಪ್ರಥಮ ಮಾಹಿತಿ ಬೇಕಾಗುತ್ತದೆ. ಅತಿ ತುರ್ತು ಪರಿಸ್ಥಿಯಲ್ಲಿ ಆಸ್ಪತ್ರೆಗೆ ದಾಖಲಾದಾಗ ಈ ಪ್ರಾಥಮಿಕ ಪರೀಕ್ಷೆ ಮಾಡುವುದರಲ್ಲಿ ಸಮಯ ಕಳೆದು ಹೋಗುತ್ತದೆ. ಹಾಗಾಗಿ ಪ್ರತಿ ನಾಗರಿಕ ತನ್ನ ಸಂಪೂರ್ಣ ಪ್ರಾಥಮಿಕ ಆರೋಗ್ಯದ ಮಾಹಿತಿಯ ಚೀಟಿ ಹೊಂದಿರಬೇಕು ಮತ್ತು ಕಾಲ ಕಾಲಕ್ಕೆ ತಪಾಸಣೆ ಮಾಡಿಕೊಳ್ಳುತ್ತಿರಬೇಕು. ಎಲ್ಲರಿಗೂ ಈ ರೀತಿ ಮಾಹಿತಿ ಹೊಂದುವುದು ಕಷ್ಟವಾಗಬಹುದು. ಆಗ ಸ್ಥಳೀಯ ಉಳ್ಳವರು, ಸ್ವಯಂ ಸೇವಾ ಸಂಸ್ಥೆಗಳು ಈ ಉಚಿತ ಪ್ರಾಥಮಿಕ ಆರೋಗ್ಯ ಶಿಬಿರ ನಡೆಸಿ, ಜನತೆಗೆ ಅವರ ರಕ್ತದ ಗುಂಪು, ರಕ್ತದೊತ್ತಡ, ಮಧುಮೇಹ ಇತ್ಯಾದಿಗಳ ಬಗ್ಗೆ ಮಾಹಿತಿ ದೊರಕಿಸಿಕೊಡಬಹುದು. ನನಗನಿಸಿದಂತೆ ಬಹಳಷ್ಟು ಜನರಲ್ಲಿ ಈ ಮಾಹಿತಿ ಇರುವುದೇ ಇಲ್ಲ .. ಒಂದೆಡೆ ಸುಸಜ್ಜಿತ ಆಸ್ಪತ್ರೆಗಾಗಿ ಹಾರೈಸುತ್ತ, ಜೊತೆ ಜೊತೆಗೆ ಜನರ ಆರೋಗ್ಯ ಮಾಹಿತಿ ಕೊಡುವಲ್ಲಿ ಕೈಲಾದಷ್ಟು ಪ್ರಯತ್ನಿಸೋಣ. ಅಲ್ಲವೇ ? 🙏ನಮಸ್ಕಾರ 🙏 ಕಿರಣ

ಕಿರಣ_ಚಿಂತನ
bottom of page