top of page

ಕಿತ್ತೂರು ಕರ್ನಾಟಕ

ಸಂಪನ್ನ ಸಂಸ್ಕೃತಿಯ ಸುಂದರ ಸೀಮೆ ಕಿತ್ತೂರು ಕರ್ನಾಟಕ ಒಂದು ಅಪೂರ್ವ ಸಂಗ್ರಾಹ್ಯ ಸಂಚಿಕೆ ನಾಡುನುಡಿ , ಸಂಸ್ಕೃತಿಗಳಿಗೆ ಅಪೂರ್ವ ಸೇವೆ ಸಲ್ಲಿಸುತ್ತ ಬಂದಿರುವ ರಾಷ್ಟ್ರೀಯ ವಿಚಾರಧಾರೆಯ. " ವಿಕ್ರಮ" ವಾರಪತ್ರಿಕೆಗೆ ಈಗ ೭೫ ವರ್ಷ. ಅಂದರೆ ಅಮೃತ ವರ್ಷ. ಈ ಅಮೃತ ವರ್ಷದ ಸವಿ ನೆನಪಿಗಾಗಿ ಪತ್ರಿಕೆ ಕೆಲವು ತನ್ನದೇ ಆದ ವಿಶೇಷ ಕಾರ್ಯಯೋಜನೆ ರೂಪಿಸಿಕೊಂಡಿದ್ದು ಅವುಗಳಲ್ಲಿ ನಾಡಿನ ವಿವಿಧ ಪ್ರದೇಶಗಳಿಗೆ ಸಂಬಂಧಿಸಿದಂತೆ " ಕಾಫಿ ಟೇಬಲ್ ಬುಕ್" ( ವಿಶೇಷಾಂಕ) ಹೊರತರುವುದೂ ಒಂದು. ಈಗಾಗಲೇ ಅಂತಹ ಕೆಲವು ವಿಶೇಷ ಸಂಚಿಕೆಗಳು ಹೊರಬಂದಿದ್ದು ಇದೀಗ " ಕಿತ್ತೂರು ಕರ್ನಾಟಕ ಭಾಗಕ್ಕೆ (ಅಂದರೆ ಇಲ್ಲಿಯ ಏಳು ಜಿಲ್ಲೆಗಳನ್ನೊಳಗೊಂಡಂತೆ) ಸಂಬಂಧಿಸಿದ " ಸಂಪನ್ನ ಸಂಸ್ಕೃತಿಯ ಸುಂದರ ಸೀಮೆ - ಕಿತ್ತೂರು ಕರ್ನಾಟಕ " ಎಂಬ ಹೆಸರಿನ ಕಾಫಿ ಟೇಬಲ್ ಬುಕ್ ಓದುಗರ ಕೈ ಸೇರಿದೆ. ೧/೪ ಡೆಮಿ ಆಕಾರದ ೧೬೦ ಪುಟಗಳ ಈ ವರ್ಣರಂಜಿತ ಸಂಪುಟ ಅತ್ಯಂತ ಆಕರ್ಷಕವಾಗಿ‌ ಮತ್ತು ಅಷ್ಟೇ ಉಪಯುಕ್ತ ರೀತಿಯಲ್ಲಿ ಹೊರಬಂದಿದ್ದು ಇದೊಂದು ಓದಿ ಸಂಗ್ರಹಿಸಿಡಲೇಬೇಕಾದ ಅಮೂಲ್ಯ ಕೃತಿ. ಕಿತ್ತೂರು ಕರ್ನಾಟಕವನ್ನು ಸಮಗ್ರವಾಗಿ ಅರಿಯಲು ನಮಗಿದೊಂದು ರೆಫರೆನ್ಸ್ ಪುಸ್ತಕ. ವಿಕ್ರಮದ ಸಂಪಾದಕೀಯ ಮಂಡಳಿಯವರ ಶ್ರಮಕ್ಕೆ ಸಾಕ್ಷಿ. ಪ್ರತಿಯೊಂದು ಕ್ಷೇತ್ರದ ಕುರಿತು ಲೇಖನ ಬರೆಸುವಾಗಲೂ ಆ ಕುರಿತು ಅರಿತ ನುರಿತ ಬರೆಹಗಾರರನ್ನೇ ಆಯ್ಕೆ ಮಾಡಿಕೊಳ್ಳಲಾಗಿರುವುದರಿಂದ ವಿಷಯಕ್ಕೆ ನ್ಯಾಯ ದೊರಕುವಂತಾಗಿದೆ. ದಿವಾಕರ ಹೆಗಡೆಯವರ " ಪ್ರಾಚೀನವ ತಿಕ್ಕಿ ತೊಳೆ, ವರ್ತಮಾನಜೀವಕಳೆ" ಎಂಬ ಮೊದಲ ಲೇಖನ ಮುಂದಿನ ಎಲ್ಲ ಲೇಖನಗಳಿಗೆ ಸೂಕ್ತ ಹಿನ್ನೆಲೆ ಒದಗಿಸುತ್ತದೆ. ಶಂಕರಾನಂದರ ( ಭಾರತೀಯ ಶಿಕ್ಷಣ ಮಂಡಲಿ) ಲೇಖನ ರಾಷ್ಟ್ರರಕ್ಷಣೆಯ ಯಜ್ಞ ದಲ್ಲಿ ಆಹುತಿಯಾದ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮೊದಲಾದವರಿಂದ ಅಂಕೋಲಾದ ಕಣಿ ಬೊಮ್ಮಕ್ಕ, ಕುಂದಾಪುರದ ಉಮಾಬಾಯಿಯವರತನಕದ ವೀರಯೋಧರ ನೆನಪು ಮಾಡಿಕೊಡುತ್ತದೆ. ಇತಿಹಾಸಕಾರರಾದ ಲಕ್ಷ್ಮೀಶ ಸೋಂದಾ " ಅನೂಹ್ಯ ಪ್ರಕೃತಿಯ ಅಪೂರ್ವ ಸಂಸ್ಕೃತಿಯನ್ನು " ಪರಿಚಯಿಸಿದರೆ, ಡಾ. ಸಂಧ್ಯಾ ಅವರು ಕಿತ್ತೂರು ಕರ್ನಾಟಕದ ವೀರ ವನಿತೆಯರ ( ವೀರ ರಾಣಿಯರ) ಕತೆ ಹೇಳಿದ್ದಾರೆ. ಡಾ. ನೀತಾರಾವ್ ಅವರು ಸ್ವಾತಂತ್ರ್ಯ ಹೋರಾಟದ ಅಜ್ಞಾತ ಕಥನವನ್ನು ನಮ್ಮೆದುರಿಟ್ಟರೆ, ರವಿ ಕೋರಿಶೆಟ್ಟರ್ ಅವರು ಕಿತ್ತೂರು ನಾಡಿನ ನಾಗರಿಕತೆಯ ಪೂರ್ವದ ಶಿಲಾಯುಗದ ನೆಲೆಗಳ ಬಗ್ಗೆ ಅಧ್ಯಯನ ಪೂರ್ಣ ಲೇಖನ ಬರೆದಿದ್ದಾರೆ. ಡಾ. ದತ್ತಪ್ರಸನ್ನ ಪಾಟೀಲ ಅವರು ಶಿಲ್ಪಕಲಾ ವೈಭವದ ಬಗ್ಗೆ, ಡಾ. ಆರ್. ಶೇಜೇಶ್ವರ ಅವರು ಅರಸರಾಳ್ವಿಕೆ ಅನನ್ಯ ಕಥನದ ಕುರಿತು, ಬೆಳಗಾವಿಯ ಪ್ರಕಾಶ ಗಿರಿಮಲ್ಲನವರ ಅವರು ಇಲ್ಲಿಯ ಧರ್ಮಪೀಠಗಳ ಧೀಶಕ್ತಿಯ ಸಾಮಾಜಿಕ ಸಾಂಸ್ಕೃತಿಕ ಉನ್ನತಿಯ ಬಗ್ಗೆ , ಬಂಡು ಕಟ್ಟಿಯವರು ವಚನ ಚಳುವಳಿಯ ಹಿನ್ನೆಲೆಯಲ್ಲಿ ಅರಳಿದ ವಾಙ್ಮಯಕಾರರ ಕುರಿತು, ನಾರಾಯಣ ಬಾಬಾನಗರ ಅವರು ಹರಿದಾಸ ಪಂಥದ ಬಗ್ಗೆ, ಡಾ. ಸ್ಮಿತಾ ಸುರೇಬಾನಕರ ಅವರು ಜೈನ ತತ್ವದ ಅನನ್ಯ ಸತ್ವದ ಬಗ್ಗೆ ಬರೆದ ಲೇಖನಗಳಿವೆ. ಕಿತ್ತೂರು ಕರ್ನಾಟಕದ ಸಂಗೀತ ಸಾಧಕರ ಬಗ್ಗೆ ಡಾ. ಸಿದ್ಧರಾಮಯ್ಯ‌ ಮಠಪತಿ , ಅಗಡಿ ಆನಂದವನದ ಬಗ್ಗೆ ವಿಶ್ವನಾಥ ಚಕ್ರವರ್ತಿ, ಕೃಷಿಯ ಕುರಿತು ಅಜಿತ ಘೋರ್ಪಡೆ, ಪ್ರಾಚೀನ ಸಾಹಿತ್ಯದ ಮೇರು ಕವಿಗಳ ಬಗ್ಗೆ ನವೀನ ಗಂಗೋತ್ರಿ, ಶಿಕ್ಷಣ ಸಂಸ್ಥೆಗಳ ಬಗ್ಗೆ ಡಾ. ಶ್ರೀನಿವಾಸ ಪಾಟೀಲ್, ಸಾಧಕರ ಬಗ್ಗೆ ಶ್ರೀವಿಭಾವನ, ಜಾನಪದ ಕ್ಷೇತ್ರದ ಬಗ್ಗೆ ಡಾ. ರಾಮಕೃಷ್ಣ ಮರಾಠೆ, ಪುಣ್ಯಕ್ಷೇತ್ರಗಳ ಬಗ್ಗೆ ರಾಹುಲ್ ಹಜಾರೆ, ಉದ್ಯಮ ಕ್ಷೇತ್ರದ ಬಗ್ಗೆ ನಿತೀಶ್ ಡಂಬಳ, ಸಾಂಸ್ಕೃತಿಕ ಧಾರವಾಡದ ಬಗ್ಗೆ ಹ. ವೆಂ ಕಾಖಂಡಿಕಿ, ಹಬ್ಬಗಳ ಕುರಿತು ಪ್ರೊ. ಶಕುಂತಲಾ, ಭಾಷೆಗಳ ಬಗ್ಗೆ ಪಾರ್ವತಿ ಪಿಟಗಿ, ಪತ್ರಿಕಾ ರಂಗದ ಬಗ್ಗೆ ಎಲ್. ಎಸ್. ಶಾಸ್ತ್ರಿ, ಖಾದ್ಯಗಳ ಬಗ್ಗೆ ಮೃಣಾಲ್ ಜೋಶಿ ಪರಿಚಯಾತ್ಮಕ ಲೇಖನಗಳನ್ನು ಬರೆದಿದ್ದಾರೆ. ಇನ್ನೂ ಕೆಲವು ವಿಷಯಗಳಿಗೆ ಸಂಬಂಧಿಸಿದ ಲೇಖನಗಳಿವೆ. ಅತ್ಯಂತ ಆಕರ್ಷಕ ಸಚಿತ್ರ ವರ್ಣ ಮುದ್ರಣ, ಉತ್ತಮ ಕಾಗದದ ಬಳಕೆ ಸಂಚಿಕೆಯ ಅಂದವನ್ನು ಹೆಚ್ಚಿಸಿವೆ. ಇಲ್ಲಿಯ ಎಲ್ಲ ಬರೆಹಗಳೂ ಸತ್ವಯುತವಾಗಿದ್ದು, ಕಿತ್ತೂರು ಕರ್ನಾಟಕ ಪ್ರದೇಶದ ಸಮಗ್ರ ಚಿತ್ರಣವನ್ನು ನೀಡುವ ಮೂಲಕ ನಾವು ಈತನಕ ಅರಿತಿರುವುದಕ್ಕಿಂತ ವ್ಯಾಪಕವಾಗಿ ನಾವು ಈ ನೆಲವನ್ನು ಅರಿತುಕೊಳ್ಳಲು ಸಹಾಯಕವಾಗಿವೆ. ಆದ್ದರಿಂದಲೇ ಇದು ಒಂದು ಸಂಗ್ರಾಹ್ಯ ಸಂಪುಟ. ಕಿತ್ತೂರು ಕರ್ನಾಟಕಕ್ಕಷ್ಟೇ ಅಲ್ಲ, ಸಮಗ್ರ ಕರ್ನಾಟಕಕ್ಕೇ ಇದೊಂದು ಅಪೂರ್ವ ಕೊಡುಗೆ. ಇದಕ್ಕಾಗಿ ವಿಕ್ರಮ ಬಳಗದವರಿಗೆ ಕನ್ನಡ ಜನ ಕೃತಜ್ಞತೆ ಅರ್ಪಿಸಬೇಕಾಗಿದೆ. ನಮ್ಮ ಕಾಫಿ ಟೇಬಲ್ ಮೇಲೆ ಸದಾ ಇರಬೇಕಾದ ಪುಸ್ತಕ . - ಎಲ್. ಎಸ್. ಶಾಸ್ತ್ರಿ ಬೆಳಗಾವಿ

ಕಿತ್ತೂರು ಕರ್ನಾಟಕ
bottom of page