ಕಾವ್ಯವಾಗಿ ಕರಗುತ್ತೇನೆ
ನಾನರಿಯಲಾಗದ ಶೂಲೆಗಳೇ ಆಪ್ತವಾಗಿ ನನ್ನನ್ನು ಬಿಗಿದಪ್ಪಿಕೊಂಡಾಗ ಬದುಕು ಬರಡಾಗಿ ಬೆಂಬಿಡದೆ ಕಾಡಿದಾಗ ನನಗನಿಸುತ್ತದೆ, ನಾನೊಮ್ಮೆ ಜ್ವಾಲಾಮುಖಿಯಂತೆ ಭುಗಿಲೇಳಬೇಕು! ಕಳೆದುಕೊಂಡ ಮಧುರವಾದ ಪ್ರೇಮ ನೆನಪಿನಾಳದಲಿ ಪುಟಿದೆದ್ದು ಕೂತಾಗ ನನ್ನ ನಿಟ್ಟುಸಿರಿನಲೂ ಮಿಣುಕು ಹುಳುವಂತೆ ಮಿನುಗ ತೊಡಗಿದಾಗ ನನಗನಿಸುತ್ತದೆ, ನಾನೊಮ್ಮೆ ಅಗ್ನಿ ಪರ್ವತದಂತೆ ಧಗಧಗಿಸಿ ಉರಿಯಬೇಕು! ಕಗ್ಗತ್ತಲ ವೇಳೆಯಲಿ ನಿಶ್ಯಬ್ದ ನೂರಾರು ಬಯಕೆಗಳ ಹೊತ್ತ ದೂರ ದೂರ ನೇರ ಹಾದಿಗಳಲಿ ನೀರವತೆಯೇ ಮುಗುಳ್ನಕ್ಕಾಗ ನನಗನಿಸುತ್ತದೆ, ನಾನೊಮ್ಮೆ ಶಿವನಂತೆ ರುದ್ರವಾಗಿ ನರ್ತಿಸಬೇಕು! ಏಕಾಂತದಲಿ ಮರೀಚಿಕೆಯಂತ ಕನಸುಗಳು ಎಡಬಿಡದೆ ತಿವಿದಾಗ ಹಿಂದಿನ ಕಹಿ ನೆನಪೇ ತುಡಿದಾಗ ಕಂಬನಿಯೇ ಬೇರುರಿದಾಗ ನನ್ನೆದೆಯ ಶರಧಿಯಲಿ ಮತ್ತೆ ಮತ್ತೆ ಪ್ರವಾಹ ಬಂದೆರಗಿದಾಗ ನನಗನಿಸುತ್ತದೆ, ನಾನು ಹೀಗೆಯೆ ಕಾವ್ಯವಾಗಿ ಮಂಜುಗಡ್ಡೆಯಂತೆ ಕರಗಿಬಿಡಬೇಕು!. - ಪೂಜಾ ನಾರಾಯಣ ನಾಯಕ (BSc ದ್ವಿತೀಯ ವರ್ಷ) ಪೂಜಾ ನಾರಾಯಣ ನಾಯಕ ಕುಮಟಾ ತಾಲೂಕಿನ ಮಾಸ್ಕೇರಿಯವರು.ವಿಜ್ಞಾನ ವಿಷಯದ ವಿದ್ಯಾರ್ಥಿಯಾಗಿರುವ ಅವರು ಕವಿತೆ, ಕತೆಗಳ ಬರವಣಿಗೆ ಮತ್ತು ಸಾಹಿತ್ಯದ ಓದಿನಲ್ಲಿ ಆಸಕ್ತರು ಅವರ ಕವಿತೆ ನಿಮ್ಮ ಓದಿಗಾಗಿ. ಸಂಪಾದಕರು.