top of page

ಕಾಲ ಗತಿಯನ್ನು ತೀವ್ರವಾಗಿಸಿದ ಕೊರೊನಾ

ಮೇಲ್ನೋಟಕ್ಕೆ ಮಾರ್ಚ್ 25 ರಿಂದ ನಾಲ್ಕು ತಿಂಗಳ ಈಚೆಗೆ ಕಾಲ ನಿಂತಲ್ಲೇ ನಿಂತಿದೆಯೇನೋ ಎನ್ನಿಸುತ್ತದೆ. ಮೊದಲ ಎರಡು ತಿಂಗಳು ಮನೆಗಳ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದು ಜನ-ಜಾನುವಾರುಗಳಷ್ಟೇ ಅಲ್ಲ. ಈ ದೇಶದ ಆರ್ಥಿಕತೆಯೂ ಮನೆಯ ಅಂಗಳದಲ್ಲೇ ಬಂಧಿಯಾಗಿ ಬಿಟ್ಟಿತ್ತು. ಇಂಥ ಪರಿಸ್ಥಿತಿಯನ್ನು ಕಂಡು ಕೇಳರಿಯದ ಜನ ತಬ್ಬಿಬ್ಬಾದರು. ಬದುಕನ್ನು ಎದುರಿಸುವ ಬಗೆಯನ್ನು ಕಾಣದೇ ಕಂಗಾಲಾದರು.ಈ ಹಂತದಲ್ಲಿ ಕಾಲ ಹಿಮ್ಮುಖವಾಗಿ ನಡೆದಿದೆಯೇನೋ ಎಂಬ ಅನುಮಾನ ಹಾಗೂ ಭಯ ಕಾಡಿದ್ದಂತೂ ನಿಜ. ಇದಕ್ಕೆ ಇಂಬು ಕೊಡುವಂತೆ ' ಅದಕ್ಕೆ ನಮ್ಮ ಹಿರಿಯರು ಮಡಿ- ಮೈಲಿಗೆ ಮಾಡಿದ್ದು' ಎಂಬ ಮಾತುಗಳನ್ನು ಸಾರ್ವತ್ರಿಕವಾಗಿ ಕೇಳಿದಾಗಲಂತೂ ಇದನ್ನೇ ನೆಪವಾಗಿಟ್ಟುಕೊಂಡು ನಾವೆಲ್ಲಿ  19ನೇ ಶತಮಾನಕ್ಕೆ ಹೋಗಿಬಿಡುತ್ತೇವೋ ಎಂಬ ಗಾಬರಿಯಾಯಿತು. ಏಪ್ರಿಲ್ ಮೂರನೇ ವಾರದ ಹೊತ್ತಿಗೆ ಇಂಥ ಭಾವ ತೀವ್ರತೆಗಳೆಲ್ಲ ಕಡಿಮೆಯಾಗಿ ಕೋವಿಡ್-19 ರೋಗದ ಸ್ಪಷ್ಟ ಚಿತ್ರಣ ದೊರೆತದ್ದಷ್ಟೇ ಅಲ್ಲ; ಒಂದರ್ಥದಲ್ಲಿ ಅದು ಜಗದ ಕಣ್ಣನ್ನೇ ತೆರೆಸಿತು. ‌‌ಈ ಹಂತದಲ್ಲಿ ಸಮ ಸಮಾಜದ ಕಿರಣವೊಂದು ಕ್ಷಿತಿಜದ ಅಂಚಿನಲ್ಲಿ ಕಂಡೂ ಕಾಣದಂತೆ ಹೊಳೆಯಿತು. 20ನೇ ಶತಮಾನದ ಅಂತ್ಯದಲ್ಲೇ ಆಧುನಿಕ ಮಾಧ್ಯಮಗಳ ಬಳಕೆಯ ಕ್ರಾಂತಿ ಆರಂಭವಾದರೂ ಅದರ ಹೆಚ್ಚಿನ ಹಾಗೂ ನಿಖರ ಉಪಯೋಗ ಈಗ ಆಯಿತು ಎನ್ನಬಹುದು. ನೇರ ಹಣ ಚಲಾವಣೆಗೆ ಹೆದರಿದ ಜನ ಅದಕ್ಕೆ ತಂತ್ರಜ್ಞಾನ ಬಳಸಿದರು.ಚಿಕ್ಕ-ಪುಟ್ಟ ಅಂಗಡಿಗಳೂ ಕೂಡ ವಹಿವಾಟನ್ನು ಆಕರ್ಷಿಸಲು ಪೇಟಿಎಮ್, ಗೂಗಲ್ ಪೇ, ಫೋನ್ ಪೇ ಮೊದಲಾದ ಆನ್ ಲೈನ್ ಹಣ ವರ್ಗಾವಣೆಗೆ ಅಣಿ ಮಾಡಿಕೊಂಡವು. ನೇರ ಹಣ ಚಲಾವಣೆ ಬಹುತೇಕ ನಿಂತಿತೇನೋ ಅನ್ನುವಷ್ಟು ಕಡಿಮೆಯಾಯಿತು. ಈ  ಶೀಘ್ರ ಬೆಳವಣಿಗೆ ಮೊದಲ ಒಂದು ತಿಂಗಳ ಒಳಗೇ ನಡೆದು ಹೋಯಿತು.  ಕಳೆದ 5 ವರ್ಷಗಳಿಂದ ಈಚೆಗೆ ವಿ. ಸಿ.- ವಿಡಿಯೋ ಕಾನ್ಫರೆನ್ಸ್ ಗಳು ಬಹು ಹೆಚ್ಚಾಗಿವೆ. ರಾಜ್ಯ ಸರ್ಕಾರ , ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ಪ್ರತಿದಿನ ಒಂದಿಲ್ಲೊಂದು ವಿ.ಸಿ.ಗಳು ನಡೆಯುತ್ತಲೇ ಇರುತ್ತವೆ. ದಿನದ ಬಹುಪಾಲು ಸಮಯವನ್ನು ಹಾಗೂ ಅಮೂಲ್ಯ ವೇಳೆಯನ್ನು ಕಛೇರಿಗಳ ಮೀಟಿಂಗುಗಳು ನುಂಗಿ ಹಾಕುವುದು ಹೊಸ ವಿಷಯವೇನಲ್ಲ. ಆದರೆ ಈಗ ಅಂಥದ್ದಕ್ಕೆ ಕಡಿವಾಣ ಬಿದ್ದಿತು ಎನ್ನಬಹುದು. ವೆಬಿನಾರ್ - ಅಂತರ್ಜಾಲದ ಮೂಲಕವೇ ಚರ್ಚೆ, ಸೆಮಿನಾರುಗಳನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸುವ ಹೊಸ ಪರಿಪಾಠಕ್ಕೆ ಇದು ನಾಂದಿಯಾಗಿದೆ. ನೂರಾರು ಜನರ ಸಮಯವನ್ನು ಪೋಲು ಮಾಡದೆ, ಅನಗತ್ಯ ಕಾಫಿ-ತಿಂಡಿ ಸಮಾರಾಧನೆಗಳ ದುಂದು ವೆಚ್ಚವೂ ಇಲ್ಲದೇ ತಮ್ಮ ಸ್ಥಳಗಳಿಂದಲೇ ಸುಮಾರು ಒಂದು- ಒಂದೂವರೆ ತಾಸು ಬಿಡುವು ಮಾಡಿಕೊಂಡು ಇದರಲ್ಲಿ ಭಾಗವಹಿಸುವುದು ಯಾರಿಗೂ ಹೊರೆಯಾಗದ ಹೊಸ, ಒಳ್ಳೆಯ ಬೆಳವಣಿಗೆ. ಅಂಗೈಯಲ್ಲಿ ವಿಶ್ವವನ್ನೇ ತೆರೆದಿಡಬಲ್ಲ ಸ್ಮಾರ್ಟ್ ಫೋನ್ ಗಳು ಬಹುತೇಕ ಎಲ್ಲ ನೌಕರ ವರ್ಗದವರ ಬಳಿ ಇರುವುದು ಈಗ ಸಾಮಾನ್ಯ. ಇದರ ಸದುಪಯೋಗ ಹೀಗಾದರೂ ಆಗಲಿ ಅಲ್ಲವೇ? ಬಹುತೇಕ ಸಾಫ್ಟವೇರ್ ಕಂಪನಿಗಳಿಗೆ ಸೀಮಿತವಾಗಿದ್ದ ' ವರ್ಕ್ ಫ್ರಮ್ ಹೋಂ' ಅನ್ನು ಸಾಧ್ಯವಾದ ಅನೇಕ ಇತರ ಕಂಪನಿಗಳು ಈ ಸಂದರ್ಭದಲ್ಲಿ ಅಳವಡಿಸಿಕೊಂಡವು. ಭಾರತದ ಮಹಾ ನಗರಗಳಾದ ದೆಹಲಿ, ಮುಂಬೈಗಳಲ್ಲಿ ಕಳೆದ ಒಂದು ದಶಕದಿಂದಲೇ ಅನೇಕ ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಈ ' ವರ್ಕ್ ಫ್ರಮ್ ಹೋಂ' ಅವಕಾಶವನ್ನು ಕಲ್ಪಿಸಿ ಕೊಟ್ಟಿವೆ. ಬೆಂಗಳೂರಲ್ಲಿ ಸಾಫ್ಟವೇರ್ ಕಂಪನಿಗಳಲ್ಲಿ ಮಾತ್ರ ಈ ಅವಕಾಶವಿದೆ.  ಶಹರಗಳ ಜನದಟ್ಟಣೆಯಲ್ಲಿ ಈ ವರ್ಕ್ ಫ್ರಮ್ ಹೋಂ ಒಂದು ವರದಾನವಾಗಬಹುದು. ಸಂಚಾರದಲ್ಲಿ ಸವೆದು ಹೋಗುವ ಬಹುಮೂಲ್ಯ ಸಮಯವನ್ನು ಹೀಗೆ ಉಳಿಸಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಪ್ರಯೋಗಗಳು ಶಹರಗಳಲ್ಲಿ   ಯಶಸ್ವಿಯಾಗಿವೆ. ಅಲ್ಲದೇ ಕಂಪನಿಗಳು ನೌಕರರಿಗೆ ನೀಡಬೇಕಾದ ಸಾರಿಗೆ ಭತ್ಯೆಯನ್ನೂ ಉಳಿಸುತ್ತವೆ. ಈ ಹಿನ್ನೆಲೆಯಲ್ಲಿ ಕೊರೊನಾ ನಂತರದ ಭಾರತ ಔದ್ಯೋಗಿಕವಾಗಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವ, ಹೆಚ್ಚು ಹೆಚ್ಚು ತಂತ್ರಜ್ಞಾನ ಆಧಾರಿತ, ಆಧುನಿಕ ಮಾಧ್ಯಮಗಳ ಆಧಾರಿತವಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.ಇನ್ನು ಲೇಖನದ ಆರಂಭದಲ್ಲಿ ಹಿಮ್ಮುಖ ಚಲನೆಯ ಪ್ರಸ್ತಾಪವೂ ಇತ್ತಲ್ಲ! ಸಧ್ಯಕ್ಕೆ ಅದಕ್ಕೆ ನಿಲುಗಡೆಯಾದಂತಿದೆ. ದ್ರಶ್ಯ ಮಾಧ್ಯಮಗಳೆಲ್ಲ ಭವಿಷ್ಯವಾಣಿ ಕಾರ್ಯಕ್ರಮವನ್ನು ಗಂಟುಮೂಟೆ ಕಟ್ಟಿ ಕೊರೊನಾ ಸೇವಾರ್ಥ ಕಳಿಸಿರಬಹುದೇನೊ. ಯಾವ ಭವಿಷ್ಯವಾಣಿಯೂ ಇಲ್ಲದೇ  ಜನಜೀವನ  ಸಾಗಿದೆಯಲ್ಲ!  ಅಂದ ಹಾಗೆ ಈ ದುರಿತ ಕಾಲದಲ್ಲಿ ದಾರುಣ ಭಾರತದ ಅನಾವರಣವಾಯಿತಲ್ಲ! ಆಗ  ಅನೇಕ ಕಛೇರಿಗಳು ಹಗಲು- ರಾತ್ರಿ ದುಡಿಯುತ್ತಿದ್ದವು. ಆದರೂ ದಾರುಣ ಭಾರತದ ಕಷ್ಟ-ನಷ್ಟಗಳಿಗೆ ಸಿಗಬೇಕಾದ ಸ್ಪಂದನೆ, ಸಮಯೋಚಿತವಾಗಿ ಸಿಗಲಿಲ್ಲ. ಒಂದೆಡೆ ತಂತ್ರಜ್ಞಾನವನ್ನು ಚೆನ್ನಾಗಿ ದುಡಿಸಿಕೊಂಡ ಭಾರತ, ಇನ್ನೊಂದೆಡೆ ಸೋತಿದ್ದೇಕೆ? ಇದೇ ' ಇಂಡಿಯಾ ದಟ್ ಈಸ್ ಭಾರತ್' - ದ್ವಂದ್ವ ಭಾರತ. - ನೂತನ ದೋಶೆಟ್ಟಿ. ನೂತನ ದೋಶೆಟ್ಟಿಯವರು ಮೂಲತಃ ಉತ್ತರ ಕನ್ನಡದ ಸಿದ್ದಾಪುರದವರು. ಸಮೂಹ ಸಂವಹನಹಾಗೂ ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಮೂರು ಕವನ ಸಂಕಲನ, ಒಂದು ಕಥಾಸಂಕಲನ ಹಾಗೂ ಬಿಡಿ ಬರಹಗಳ ಸಂಕಲನವನ್ನು ಹೊರತಂದಿದ್ದಾರೆ. ಇವರ ಕಥಾ ಸಂಕಲನ ಕುವೆಂಪು ವಿಶ್ವವಿದ್ಯಾಲಯದ ಪದವಿ ವಿಧ್ಯಾರ್ಥಿಗಳಿಗೆ 2010 ರಲ್ಲಿ ಪಠ್ಯವಾಗಿತ್ತು. ಅದೇ ರೀತಿ ಇವರ ಕವನ ಸಂಕಲನವು ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗೆಪಠ್ಯವಾಗಿತ್ತು. ರಾಷ್ಟ್ರ ಮತ್ತು ರಾಜ್ಯ ಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ಇವರಿಗೆ ಬಹುಮಾನಗಳು ದೊರಕಿವೆ. ಒಬ್ಬ ಭರವಸೆಯ ಬರಹಗಾರ್ತಿಯಾಗಿ ನೂತನ ದೊಸೆಟ್ಟಿ ಯವರು ಪರಿಚಿತರಾಗಿದ್ದಾರೆ -ಸಂಪಾದಕ

ಕಾಲ ಗತಿಯನ್ನು ತೀವ್ರವಾಗಿಸಿದ ಕೊರೊನಾ
bottom of page