ಕಾಲುದಾರಿ
ಹೈವೇ ರಸ್ತೆಗಳಲ್ಲಿ ಸಂಚರಿಸುವಾಗ ತಲೆಯಲ್ಲಿ ನಿನ್ನದೆ ಮುಖ ನಿನ್ನ ನಗು ನಿನ್ನ ನಡೆ ನುಡಿ ನಿನಗೆ ಒಪ್ಪುತ್ತಾ ಪದೇ ಪದೆ ಕೊಳ್ಳುತ್ತಾ ನಿನಗೊಂದು ಅನಿರ್ವಚನೀಯ ನಿಲುವು ಕೊಟ್ಟ ನಿನ್ನ ಉಡುಪುಗಳು ಮೈಸೂರಿನ ರಸ್ತೆಗಳಲ್ಲಿ ನಡೆದು ಬರುವಾಗ ದೂರದಿಂದಲೇ ಎಸೆಯುವ ನಗು ಯುಗಾಧಿಯ ಸಂತೆಯೊಂದು ನಿನ್ನನ್ನೇ ಹಿಂಬಾಲಿಸುತ್ತದೆ ನೋಡು ಇರುವ ಸಂಕಟಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ಆ ಸಂಕಟಗಳನ್ನು ಕೇಳಿ ಎದೆಗೆ ಮುಖ ಸೆಳೆದುಕೊಂಡು ಆದದ್ದಾಯ್ತುಎನ್ನುವ ಧನಿ ಕಷ್ಟದಲ್ಲಿ ನೆನೆದಾಗ ದೇವರ ಬದಲು ಪಕ್ಕನೆ ಎದುರುಗೊಳ್ಳುವ ಮುಖ ಇನ್ನೂ ಹೀಗೆ ಇದ್ದೀಯ, ನಡಿ ನಡಿ ರೆಡಿಯಾಗು ದೇವಸ್ಥಾನಕ್ಕೆ ಹೋಗೋಣ& ಮುಖ ಯಾಕೆ ಇತ್ತೀಚೆಗೆ ಕಳೆಯೇ ಇಲ್ಲ ಏನು ಚಿಂತಿಸಬೇಡ ಕಣೆ ನಾನಿದ್ದೇನೆ ಅನ್ನೋದನ್ನು ಮರೆತುಬಿಟ್ಟೆಯಾ? ಇದಲ್ಲದರ ನಡುವೆ ನಾನು ನೀನು ಒಂದು ಸಂಬಂಧವನ್ನು ಸೃಷ್ಟಿಸಿಕೊಂಡಿದ್ದೇವೆ ಆ ಸಂಬಂಧಕ್ಕೆ ಇವರ ಯಾವ ನಾಮ ಪದವೂ ಸರಿಹೊಂದಲಿಲ್ಲ ಎಲ್ಲವೂ ಆಗಬಲ್ಲ ಸಂಬಂಧಕ್ಕೆ ಏನು ಹೆಸರು ಖಾತೆಗಳಿಲ್ಲದ ಸಂಬಂಧಕ್ಕೆ ಯಾವ ಕೊನೆ ಯಾವ ಪರೀಕ್ಷೆ ನೆನ್ನೆ ನಾವು ಅಲೆದಾಡಿದ ನೀಲಗಿರಿ ಕಾಡಿನ ಕಾಲುದಾರಿ ನಮ್ಮ ಮನೆಯಲ್ಲಿ ನಮ್ಮ ಎದುರಿನಲ್ಲೇ ಹುಟ್ಟಿ ನಲಿಯುತ್ತಿರುವ ಕರು ಪಟ ಮಾಡಿ ಹುಟ್ಟಿಸಿದ ಕೊತ್ತಂಬರಿಯ ಗಿಡಗಳಿಗೆ ನಾವು ಅಸಮಾಧಾನಗಳನ್ನು ಹೇಳಿಕೊಂಡವರು ಸಮಾಧಾನ ಕಂಡುಕೊಂಡವರು ಎಲ್ಲ ಕಲಿತು ಕಣ್ಣಿಗೆ ಅವಸರದ ಕಪ್ಪು ಬಟ್ಟೆ ಕಟ್ಟುವುದೇಕೆ? ಕಣ್ಣು ಬಿಟ್ಟರೆ ಸಾಕು ಜಗತ್ತು ನಮಗಾಗಿ ಹಗಲು ರಾತ್ರಿ ಗಾಳಿ ನೀರು ಕಾನೂನುಗಳನ್ನು ಕೊಟ್ಟಿರುವಾಗ ಮುಂಜಾನೆ ಮುಸ್ಸಂಜೆಗಳೆನ್ನದೆ ನನ್ನ ಎದೆಯೊಳಗುಳಿದು ಉಸಿರಾಡುವ ನಿನ್ನ ಈ ಕ್ಷಣದ ಸ್ಥಿತಿ ಅರ್ಥವಾಗುತ್ತದೆ ತಲ್ಲಣಗಳ ತೇವ ಕೈಗಂಟುತ್ತದೆ ಕಣ್ಣೀರಿಗೆ ತನು ಅಮ್ಮಾ ಅನ್ನುತ್ತದೆ ನಮ್ಮ ದಿನಚರಿಯ ಮುಂದಿನ ಪುಟಗಳಿಗೆ ಹಿಂದಿನ ಪುಟಗಳ ಕೆಲ ಸಾಲುಗಳನ್ನು ನಕಲಿಸಬೇಕಿದೆ ಉದಾಹರಣೆಗೆ ಮಿಂಚಿನಂತಾ ನಿನ್ನ ವೇಗ ಕಡಲಿನಂತಾ ನಗು ಏನೆಲ್ಲ ಆಗಿಬಿಡುತ್ತದೆ ನೋಡು ಹೊಸ ದಿನಗಳು ಹೊದ್ದುಕೊಂಡು ಬರುವ ಅನಿರೀಕ್ಷಿತ ಕಂಬಳಿಯೊಳಗೆ ಸೇರಿಕೊಂಡು ಬೆಚ್ಚಗಿರೋಣ ಅನ್ನುವುದು ಸುಲಭದ ಮಾತಲ್ಲ ಆದರೂ ಬಂದದ್ದನ್ನೆಲ್ಲ ಹೊದ್ದುಕೊಳ್ಳುತ್ತಾ ಹೊಂದಿಕೊಳ್ಳುತ್ತಾ ಬದಲಾಗುತ್ತಾ ಬದುಕುತ್ತಾ ಸಾಗುತ್ತಿರೋಣ ಈ ಸೂರುಕಟ್ಟಿನಲ್ಲೇ ಬಾಚಣಿಗೆಗೆ ಬಂದ ನಿನ್ನ ಕೂದಲಿನ ಗಂಟು ತೂರಿಕೊಳ್ಳಲಿ ನಿನ್ನ ಸೋಕಿದ ಗಾಳಿ ಇಲ್ಲೆ ಸುಳಿದಾಡಲಿ ಕಣ್ಣಿಗೆ ಕಾಣುವಷ್ಟು ದೂರದಲ್ಲಾದರೂ ನೀ ನಗುತ್ತಾ ಇರಲಿ ಚಂದ್ರು ಎಂ ಹುಣಸೂರು