ಕಾದಿರುವ ಶಬರಿ
ನೊಂದುಕೊಳ್ಳಳು ಎಂದೂ... ಕಾದಿರುವೀ ಶಬರಿ ಅಂದು ಕೊಳ್ಳಳು ಎಂದೂ... ಕಾದಿದ್ದೇ ಆಯಿತೇ, ಶss! ಬರಿ! ಕಾದು - ಕಾದು ಅನು - ಭವವೇ ಸುಕ್ಕುಗಟ್ಟಿದರೂ ದಣಿಯದ ತನುವು ; ದಾರಿಯನೇ ಕಾದಲನಂತೆ ಕಂಡು ತಣಿಯದ ಮನವು ಬಂದು ಸವಿವವಗೆ ಸವಿಯಷ್ಟೇ ಇರಲೆಂದು ಸವಿ ನೋಡಿ - ನೋಡೇ ಬೊಚ್ಚು - ಬಾಯೊಳಗೆ ಗಾಯಗೊಳದೆ ಹೊರಳ್ವ ಸವಿವಣ್ಣು ; ಗಾಳಿ ಗಿರಕ್ ಎಂದರೂ... ಎವೆಯಿಕ್ಕಲೂ ಮರೆತ ಕುಳಿಗಣ್ಣು ! ಮೋಡಗಳ ತಡೆದು ಕಾದ ನೆಲವ ತೊಳೆವ ಮಳೆಕಾಡು ; ಚಿಗುರೆಲೆಯ ಕೊರಳೊಳಗೆ ಋತು - ಋತುವೂ ಉಲಿವ ಹೊಸ ಹಾಡು ಅಂದುಕೊಳುವಳು ಶಬರಿ ; ಕಾಯುವಲ್ಲೇ ಅಡಗಿಹುದೆ ಈ ಪ್ರಕೃತಿಯ ಬೀಜ - ವೃಕ್ಷಗಳ ನ್ಯಾಯ ? ಯಾವುದರಿಂದ ಯಾವುದು ಹೊರಹೊಮ್ಮಿದರೂ ಇಲ್ಲ , ಯಾರಿಗೂ ಅನ್ಯಾಯ ! ಅದಕೆಂದೇ ಕಾದಿರುವಳು ಶಬರಿ ... ಕಾದು - ಕಾದೇ ಕಾಲವೂ ಕರಗುವುದೆಂದು... ಇಲ್ಲಿ , ಇರುವುದಷ್ಟೇ ಕಾಯುವುದೆಂದು... ಕಾದಿರುವುದಷ್ಟೇ ಇರುವುದೆಂದು... - ನಾಗರಾಜ ಹೆಗಡೆ , ಅಪಗಾಲ ನಾಗರಾಜ ಹೆಗಡೆ ಅಪಗಾಲ ಅವರು ನಮ್ಮ ನಡುವಿನ ಜೀವನ ಪ್ರೀತಿ ಮತ್ತು ಲವಲವಿಕೆಯ ಬರಹಗಾರ ಮತ್ತು ಸಾಹಿತ್ಯ ಪ್ರೇಮಿ ಮತ್ತು ಸಂಘಟಕ. ಹೊನ್ನಾವರ ಎಸ್.ಡಿ.ಎಂ.ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ಮತ್ತು ವಿಭಾಗ ಮುಖ್ಯಸ್ಥರಾಗಿರುವ ಅವರು ಪ್ರಸ್ತುತ ಹೊನ್ನಾವರ ತಾಲೂಕ ಕ.ಸಾ.ಪ.ದ ಅಧ್ಯಕ್ಷ,ವಿ.ಕೃ.ಗೋಕಾಕ ಟ್ರಸ್ಟನ ಸದಸ್ಯ ಮತ್ತು ಅಭಿನವ ಬೆಂಗಳೂರು ಬಳಗದ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೀಪವಿಲ್ಲದ ಇರುಳಲ್ಲಿ,ಕಣ್ಣಂಚಿನ ಕಡಲು ಅವರ ಪ್ರಕಟಿತ ಕವನ ಸಂಕಲನಗಳು. ರಾಗ ಅನುರಾಗ,ಸಹಸ್ರ ಶೀರ್ಷ,ಅಭಿಮಾನ,ದಾಂಪತ್ಯ ದೀವಿಗೆ,ಸಮಾಜ ಸಂಸ್ಕೃತಿ ಸಮಕಾಲೀನ ಸ್ಪಂದನೆ ಅವರ ಸಂಪಾದಿಸಿದ ಕೃತಿಗಳಾಗಿವೆ. ಸಂಪಾದಕ.