top of page

ಕಳೆಗುಂದದಿರಲಿ ಸಿರಿಗನ್ನಡ

ಹಬ್ಬ ಉತ್ಸವಗಳ ಆಚರಣೆಗಳಿಗೆ ನಮ್ಮಲ್ಲಿ ಕೊರತೆಯಿಲ್ಲ. ಇದೀಗ ಕನ್ನಡ ರಾಜ್ಯೋತ್ಸವ ಕರೋನಾ ನಡುವೆಯೂ ಸಡಗರದಿಂದ ಆಗಮಿಸುತ್ತಿದೆ. 'ಕನ್ನಡ ಉಳಿಸಿ-ಬೆಳೆಸಿ' ಕೂಗು ತಿಂಗಳ ತುದಿ ವರೆಗೂ ಹರಿದಾಡಿ ಮತ್ತೆ ಮರೆಯಾಗುತ್ತದೆ. ಆದರೆ ನಮ್ಮ ಚಂದದ ಕನ್ನಡದ ಓದು ಬರಹಗಳಲ್ಲಿ ಹೆಚ್ಚುತ್ತಿರುವ ವಿಪರ್ಯಾಸಗಳು ಬೇಸರದ ಸಂಗತಿ. ನಮ್ಮ ಸಿರಿಗನ್ನಡದ ಸೊಗಸಿರುವುದೇ ಸ್ಪಷ್ಟ ಉಚ್ಚಾರ ಮತ್ತು ಶುದ್ಧ ಬರಹದಲ್ಲಿ ಎಂಬುದರಲ್ಲಿ ಎರಡು ಮಾತಿಲ್ಲ. ಇಂದು ನಮ್ಮಲ್ಲಿ ಅನೇಕ ಪದಗಳ ಉಚ್ಚಾರ ಮತ್ತು ಬರಹದ ದೋಷಗಳು ಆಭಾಸವನ್ನು ಉಂಟುಮಾಡುತ್ತಿವೆ. ಅರ್ಥಕ್ಕೆ ಅನರ್ಥ, ಅಪಾರ್ಥ, ವಿರುದ್ಧಾರ್ಥಗಳು ಉದ್ಭವಿಸಿ ನಿಜಾರ್ಥ ಕಳೆದುಕೊಳ್ಳುತ್ತಿರುವುದು ಶೋಚನೀಯ. ಇದು ಅನೇಕರಿಗೆ ಗೊತ್ತಿರುವ ವಿಷಯವೇ ಆಗಿದ್ದರೂ ಪದೇ ಪದೇ ಕಂಡುಬರುವ ಕೆಲವೇ ಕೆಲವು ಉದಾಹರಣೆಗಳ ಸಾಂದರ್ಭಿಕ ಪ್ರಸ್ತುತಿ ನನ್ನದು. ಇತ್ತೀಚೆಗೆ ಎಲ್ಲ ಹಬ್ಬ, ಹುಟ್ಟುಹಬ್ಬ, ಹೊಸ ವರ್ಷ, ಪ್ರಶಸ್ತಿ - ಪುರಸ್ಕಾರ ಸಂದರ್ಭಗಳಲ್ಲಿ ಶುಭಾಶಯಗಳ ವಿನಿಮಯ ಮಾಮೂಲಾಗಿದೆ. ಪತ್ರಿಕೆಗಳು, ವಾಟ್ಸಪ್, ಫೇಸ್ಬುಕ್, ಟಿವಿ ಮುಂತಾದ ಸಮೂಹ ಮಾಧ್ಯಮಗಳಲ್ಲಿ ಇದು ನಿತ್ಯದ ಪ್ರಕ್ರಿಯೆ. ಬಗೆ ಬಗೆಯ ಚಂದ ಚಂದದ ಚಿತ್ರಗಳು, ಅರ್ಥಪೂರ್ಣ ಹಾರೈಕೆಗಳು, ಎಲ್ಲೆಡೆ ಹರಿದಾಡುತ್ತವೆ. ಆದರೆ ಕೆಲವೆಡೆ ಇಣುಕುವ ತಪ್ಪುಬರಹ, ತಪ್ಪಾದ ಉಚ್ಚಾರಗಳು ಖುಷಿ ಸವಿಯುವ ಬದಲು ಕಸಿವಿಸಿ ಉಂಟುಮಾಡುತ್ತವೆ. ನಾನು ಗಮನಿಸಿದಂತೆ ಹಾರ್ದಿಕ ಪದಕ್ಕೆ ಹಾರ್ಧಿಕ, ಶುಭಾಶಯಕ್ಕೆ ಶುಭಾಷಯ, ಶುಭೋದಯಕ್ಕೆ ಶುಬೋಧಯ ಮತ್ತು ಶುಭೋಧಯ, ಸುಭಾಷಿತಕ್ಕೆ ಶುಭಾಷಿತ ಎಂದು ಬರೆದಿರುತ್ತದೆ. ಹ್ರಸ್ವ - ದೀರ್ಘ, ಅಲ್ಪಪ್ರಾಣ -ಮಹಾಪ್ರಾಣ, ಮತ್ತು ಮೂರು ಶ ಷ ಸ ಕಾರಗಳಿಗೆ ಪ್ರತ್ಯೇಕ ಉಚ್ಚಾರ ಪ್ರತ್ಯೇಕ ಅರ್ಥವಿದೆ. ಒಂದಕ್ಕೊಂದು ಬಳಸಿದಾಗ ಅಬದ್ಧವಾಗುತ್ತದೆ. ಪ್ರಶಸ್ತಿ ಪ್ರದಾನವೆಂಬುದು ಪ್ರಶಸ್ತಿ ಪ್ರಧಾನ ವಾಗುತ್ತಿದೆ. ನಮ್ಮ ಹೆಮ್ಮೆಯ ರಾಜ್ಯೋತ್ಸವ ಅನೇಕರ ಬಾಯಲ್ಲಿ ಎಮ್ಮೆಯ ರಾಜ್ಯೋತ್ಸವವಾಗುತ್ತಿದೆ. ಇಂಥ ದೋಷಗಳನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಆದರೆ ಸರಿ ಎಂದು ಒಪ್ಪಿಕೊಳ್ಳಬಹುದೇ? ತಪ್ಪು ಎಂದು ಅರಿವಾದಾಗ ಸಾಧ್ಯವಾದಷ್ಟೂ ತಡೆಯುವ, ತಿದ್ದುವ ಪ್ರಯತ್ನದತ್ತ ಮನಸು ಮಾಡೋಣವೇ? ನಮಗೇಕೆ ಎಂದು ಸುಮ್ಮನಿರದೆ ಸ್ವಲ್ಪ ಮಟ್ಟಿಗಾದರೂ ಕನ್ನಡ ಪದಗಳ ಸೌಂದರ್ಯ, ಘನತೆಗಳನ್ನು ಕಾಪಾಡುವ ಅಳಿಲು ಸೇವೆಗೆ ಮುಂದಾಗಬಹುದಲ್ಲವೇ? ಇನ್ನು ಕೆಲವರ ಕನ್ನಡದಲ್ಲಿ ಮುಖ್ಯವಾಗಿ ಅ ಕಾರ ಮತ್ತು ಹ ಕಾರ ಉಚ್ಚರಿಸುವಲ್ಲಿ ಸಾಮೂಹಿಕ ದೋಷವಿದೆ. ಅ ಕಾರಗಳಿಗೆ ಹ ಕಾರ ಮತ್ತು ಹ ಕಾರಗಳಿಗೆ ಅ ಕಾರ ಬಳಕೆ ರೂಢಿಯಲ್ಲಿದೆ. ದೂರದರ್ಶನ, ವಾರ್ತೆ, ಸಂದರ್ಶನ, ಧಾರಾವಾಹಿಗಳಲ್ಲಿ ನಾವಿದನ್ನು ಯಥೇಚ್ಫವಾಗಿ ಕಾಣಬಹುದು. ಉದಾಹರಣೆಗೆ ಅಕ್ಕಿಗೆ ಹಕ್ಕಿ, ಹಕ್ಕಿಗೆ ಅಕ್ಕಿ, ಅರಿವು - ಹರಿವು, ಹಲಸು - ಅಲಸು, ಉಸಿರು- ಹುಸಿರು, ಹೋರಾಟ - ಓರಾಟ, ಹೊಟ್ಟೆ - ಒಟ್ಟೆ, ಅಲ್ವಾ ಪದವನ್ನು ಹಲ್ವಾ ಮಾಡಿ ಚಪ್ಪರಿಸಿ ಬಿಡುತ್ತಾರೆ. ಸಭೆ ಸಮಾರಂಭಗಳಲ್ಲಿ ಸ್ವಾಗತ ಮಾಡುವ ಕೆಲವರು ಆದರದ ಸ್ವಾಗತಕ್ಕೆ ಹಾ ಉಚ್ಚರಿಸಿ ನೆರೆದವರನ್ನು ಮುಜುಗರಕ್ಕೆ ಗುರಿ ಮಾಡುತ್ತಾರೆ. ಇವರೆಲ್ಲಾ ಖಂಡಿತ ಅನಕ್ಷರಸ್ಥರಲ್ಲ. ತಪ್ಪನ್ನೇ ರೂಢಿ ಮಾಡಿ ಕೊಂಡಿರುವ ಸುಶಿಕ್ಷಿತರು! ಭಾಷೆ ಬರಹಗಳ ಬಗ್ಗೆ ಕಟ್ಟು ನಿಟ್ಟು ನನ್ನಿಷ್ಟ ವಲ್ಲ. ಆದರೆ ಅದು ಅರ್ಥಕ್ಕೆ ಅನರ್ಥ ಅಪಾರ್ಥ ವಾಗುವ ಆಭಾಸವನ್ನು ಅರಿತಂಥ ಕನ್ನಡಾಭಿಮಾನಿಗಳು ಅಕ್ಕರೆಯಿಂದ ಸರಿಸರಿಪಡಿಸುವ ನಿಟ್ಟಿನಲ್ಲಿ ತಪ್ಪಿದವರ ಗಮನಕ್ಕೆ ತರುವ ಪ್ರಯತ್ನ ಮಾಡುವುದು ಒಳಿತೆಂಬ ದೃಷ್ಟಿಯಿಂದ ನನ್ನೀ ಲೇಖನ. ಮುಖ್ಯವಾಗಿ ನಮ್ಮ ಶಿಕ್ಷಕವೃಂದ, ಕವಿ- ಸಾಹಿತಿಗಳು, ಲೇಖಕರು, ಇಂತಹ ತಪ್ಪುಗಳನ್ನು ಕಡೆಗಣಿಸಬಾರದು. ಕೈ ತಪ್ಪು, ಬಾಯ್ತಪ್ಪು,ಮುದ್ರಣ ದೋಷಗಳು ಬೇರೆ, ಆದರೆ ನಾನು ಉದಾಹರಿಸಿರುವುದೆಲ್ಲ ಗೊತ್ತಿದ್ದೂ ಮಾಡುವ ತಪ್ಪು ರೂಢಿ ಅಥವಾ ನಿರ್ಲಕ್ಷ್ಯದ ಮನೋಭಾವ. ಇಂಥ ದೋಷಗಳಿಗೆ ಶಿಷ್ಟ ಭಾಷೆ ಬಲಿಯಾಗ ಬಾರದು. ಸ್ಥಿತಿಯನ್ನರಿತು, ತಪ್ಪನ್ನು ಸದುದ್ದೇಶದಿಂದ ತಿದ್ದುವ, ಮತ್ತು ಮುಕ್ತವಾಗಿ ಸ್ವೀಕರಿಸಿ, ಸ್ವಯಂ ತಿದ್ದಿಕೊಳ್ಳುವ ಸಹೃದಯತೆಯ ಅಗತ್ಯವಿದೆ. ಈ ದಿಶೆಯಲ್ಲಿ ಕನ್ನಡಾಭಿಮಾನಿಗಳು ಯೋಚಿಸುವಂತಾದರೆ ಒಳಿತು. ಆಡು ಮಾತಿನ ಸೊಗಸು ಬೇರೆ, ನಮ್ಮಲ್ಲಿ ಲೆಕ್ಕವಿಲ್ಲದಷ್ಟು ಪ್ರಾದೇಶಿಕ, ಜಾತಿ- ಸಮುದಾಯಗಳಿಗೆ ಸಂಬಂಧಿಸಿದ ಭಾಷಾ ವೈವಿಧ್ಯವಿದೆ. ಅವುಗಳ ಸಂದರ್ಭ ಬೇರೆ, ಬಳಕೆಯ ವೇದಿಕೆ ಬೇರೆ. ನನ್ನ ಅಂಬೋಣ ಕನ್ನಡ ಶಿಷ್ಟ ಭಾಷೆಯ ಕುರಿತು. ಶಿಷ್ಟ ಭಾಷೆ ಬಳಸ ಬೇಕಾದ ಶಾಲೆ- ಕಾಲೇಜು ಸಭೆ-ಸಮಾರಂಭಗಳಲ್ಲಿ, ಸಂದರ್ಶನ ವಾರ್ತೆ ಮುಂತಾದ ಸಮೂಹ ಮಾಧ್ಯಮಗಳಲ್ಲಿ, ಇದು ಕೂಡದು. ಇಲ್ಲೆಲ್ಲ ಶುದ್ಧ ಬರಹ, ಸ್ಪಷ್ಟ ಉಚ್ಚಾರ ಅಪೇಕ್ಷಣಿಯ. ಕನ್ನಡದಲ್ಲಿ ನಾಮಫಲಕಕ್ಕೆ ಹೋರಾಟ ಮಾಡುತ್ತೇವೆ. ಬರಹವೂ ಸರಿ ಇರ ಬೇಡವೇ? ಅರ್ಥವಾದರೆ ಸಾಕೇ? ಅರ್ಥ ಕೆಡದಂತಿರಬೇಡವೇ? ಒಂದೇ ಒಂದು ಹೆಚ್ಚು ಚಾಲ್ತಿಯಲ್ಲಿರುವ ಉದಾಹರಣೆ - ಉಪಾಹಾರವನ್ನು ಉಪಹಾರ, ಮಾಂಸಹಾರ, ಸಸ್ಯಹಾರ...ಇತ್ಯಾದಿ. ಸುಶಿಕ್ಷಿತ ಬಳಗ ಇತ್ತ ಗಮನ ಹರಿಸಬಹುದಲ್ಲವೇ? ಇಂಥ ಹಲವಾರು ತಪ್ಪುಗಳನ್ನು ನಾವೆಲ್ಲರೂ ಕಂಡೂ ಕಾಣದಂತಿರುತ್ತೇವೆ. ನಾನಿಲ್ಲಿ ಉದಾಹರಿಸಿರುವುದು ಕಣ್ಣು ಕುಕ್ಕುವ ಕಿಂಚಿತ್ ಅಷ್ಟೇ. ಹಿಂದೆಲ್ಲ ಪ್ರಾಥಮಿಕ ಶಾಲೆಗಳಲ್ಲಿ ಶುದ್ಧ ಬರಹ ಸ್ಪಷ್ಟ ಗಟ್ಟಿ ಓದಿಗೆ ಕನ್ನಡ ಕಲಿಕೆಯಲ್ಲಿದ್ದ ಮಹತ್ವವನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು. ಇಂದು ನಾವು ವ್ಯಾಕರಣದಂತೆ ಓದು ಬರಹಗಳಿಗೂ ಲಕ್ಷ್ಯ ಕೊಡದಿರುವುದು ವಿಷಾದನೀಯ. ಭಾಷೆಯ ಅರ್ಥಪೂರ್ಣ ಭವಿಷ್ಯಕ್ಕೆ ಇದು ಮಾರಕವೇ ಸರಿ. ಇತ್ತೀಚೆಗೊಂದು ಕನ್ನಡ ಧಾರಾವಾಹಿ 'ಕನ್ನಡತಿ' ಪ್ರಸಾರವಾಗುತ್ತಿದೆ. ಕಂತಿನ ಅಂತ್ಯದಲ್ಲಿ ಬರುವ 'ಸರಿಗನ್ನಡಂ ಗೆಲ್ಗೆ' ಸೊಲ್ಲಿನಡಿಯಲ್ಲಿ ವಿವಿಧ ಕನ್ನಡ ಪದಗಳ ಓದು-ಬರಹಗಳ ಸರಿ ರೂಪ, ರೂಢಿಯಾಗಿರುವ ರೂಪ, ಅರ್ಥ, ಅನರ್ಥ ಸಮಾನ ಅರ್ಥ, ವಿವಿಧ ಅರ್ಥ, ಧ್ವನ್ಯಾರ್ಥ, ಪದವ್ಯುತ್ಪತ್ತಿ, ಬೇರೆ ಬೇರೆ ಭಾಷೆಗಳಲಿ ಹುಟ್ಟಿ ಬೆಳೆದು ಬಂದಬಗೆ, ಸಂದರ್ಭೋಚಿತ ಬಳಕೆಗಳ ಕುರಿತು, ನಾಯಕಿ ಪಾತ್ರಧಾರಿ ಅತ್ಯಂತ ಸೂಕ್ತ ವಿವರಣೆ ನೀಡುತ್ತಿದ್ದಾರೆ. ಅವರು ಹೇಳುವ - "ತಪ್ಪು ಮಾಡುವುದು ದೊಡ್ಡ ವಿಚಾರವೂ ಅಲ್ಲ, ತಿದ್ದಿಕೊಳ್ಳುವುದು ಸಣ್ಣ ವಿಚಾರವೂ ಅಲ್ಲ. ಸರಿಗನ್ನಡಂ ಗೆಲ್ಗೆ".ಎಂಬ ನುಡಿ ತುಂಬ ಅರ್ಥಪೂರ್ಣ, ಅನುಕರಣೀಯ. ಇದನ್ನರಿತು ಜವಾಬ್ದಾರಿಯುತ ಪ್ರಾಜ್ಞರು, ಕನ್ನಡ ಭಾಷಾಭಿಮಾನಿಗಳು, ಕನ್ನಡದ ಹೂಮನಸುಗಳು, ಪ್ರೀತಿ ಕಾಳಜಿ ಆಸಕ್ತಿಯಿಂದ ನಮ್ಮ ಸವಿಗನ್ನಡದ, ದೋಷ ಪೂರ್ಣ ಬಳಕೆ ದೂರಮಾಡಲಿ. ಸರಿಗನ್ನಡ ಸಿರಿ ಉಕ್ಕಲಿ, ಸಿರಿಗನ್ನಡ ಬಾಳಲಿ, ಗೆಲ್ಲಲಿ ಎಂಬ ಸದಾಶಯದೊಂದಿಗೆ ಸಮಸ್ತ ಕನ್ನಡಿಗರಿಗೆ ನನ್ನ ಹಾರ್ದಿಕ ಶುಭಾಶಯಗಳು ಜೈ ಕರ್ನಾಟಕ ಮಾತೆ. ✍ಹೊನ್ನಮ್ಮ ನಾಯಕ, ಅಂಕೋಲಾ.

ಕಳೆಗುಂದದಿರಲಿ ಸಿರಿಗನ್ನಡ
bottom of page