top of page

ಕಲ್ಲಿನೊಂದಿಗೆ...

ಅದು ಬಹು ಎತ್ತರವಾದ ಕಲ್ಲು. ಕಲ್ಲು ಎತ್ತರವಾಗಿದೆಯೋ ಅಥವಾ ಎತ್ತರವಾದ ಗುಡ್ಡದಮೇಲಿರುವುದರಿಂದ ಹಾಗೆನಿಸುತ್ತದೆಯೋ ಎಂದೆಲ್ಲಾಆಲೋಚಿಸುತ್ತೇನೆ. ನಾನು ಬಹಳಸಾರಿ ಆ ಕಲ್ಲಿನ ಬುಡಕ್ಕೆ ಬಂದಿದ್ದೇನೆ. ಇಲ್ಲೇ ಇರುವ ದಾರಿಗುಂಟ ಓಡಾಡಿದ್ದೇನೆ. ಆದರೆ ಆಗೆಲ್ಲ ನನಗೆ ಕಲ್ಲು ಅಷ್ಟು ಎತ್ತರವಾಗಿರುವಂತೆ ಅನಿಸಲೇ ಇಲ್ಲ. ಯಾಕೆಂದರೆ ಅದು ದೊಡ್ಡ ದೊಡ್ಡ ಮನೆಗಳ ಗಾತ್ರದ ಕಲ್ಲುಗಳ ರಾಶಿ. ನಾನೀಗ ಕಲ್ಲಿನ ಬುಡದಲ್ಲಿದ್ದೇನೆ. ಅಂದರೆ ಅದರ ಪೂರ್ವಕ್ಕಿರುವ ಮಾವಿನ ಮರದಡಿ ಕುಳಿತಿದ್ದೇನೆ. ಹೌದು, ಮಾವಿನ ಮರದಡಿ ಬಿದ್ದಿದ್ದ ಎಂಟ್ಹತ್ತು ನಿಂಬೆ ಗಾತ್ರದ ಹಣ್ಣುಗಳನ್ನು ರಾಶಿಹಾಕಿಕೊಂಡು ಕಲ್ಲನ್ನು, ಕಲ್ಲಿನ ಆಚೆಯ ಆಕಾಶವನ್ನು, ಕಲ್ಲಿನ ಅಡಿಯ ಪ್ರಪಾತದಲ್ಲಿರುವ ಊರನ್ನು ಎಲ್ಲ ಒಟ್ಟಾಗಿ ನೋಡಲು ಪ್ರಯತ್ನಿಸುತ್ತಿದ್ದೆ.ಆದರೆ ಅದೆಲ್ಲಾ ಹೇಗೆ ಸಾಧ್ಯ? ಪುಟ್ಟ ಮಾವಿನಹಣ್ಣನ್ನು ಹಿಚುಕಿ ಅದಕ್ಕೆ ಸಣ್ಣ ತೂತು ಮಾಡಿ ಬಾಯನ್ನು ಚೂಪು ಗೊಳಿಸಿ ಅದರ ರಸ ಹೀರುತ್ತ ಕುಳಿತಾಗ ಮೇಲಿನಿಂದ ಪಟಪಟನೆ ಉದುರಿದ ಮಾವಿನ ಎಲೆಗಳು ಹೆದರಿಸಿದಂತೆ ಆಯಿತು. ಈಗ ನನ್ನ ಮುಂದಿರುವ ಕಲ್ಲಿನ ಬುಡಭಾಗದಲ್ಲಿರುವ ಆ ಎರಡು ದೊಡ್ಡ ಕಲ್ಲುಗಳ ಸಂದಿಯಲ್ಲಿರುವ ಕತ್ತಲಿನ ದಾರಿಯಲ್ಲಿ ಹೋದರೆ ಏನೆಲ್ಲಾ ಇರಬಹುದು ಎಂಬೆಲ್ಲಾ ಆಲೋಚನೆ ಬಂತು. ಕತ್ತಲಿನ ದಾರಿಯಲ್ಲಿ ಮುಂದೆ ಹೋದರೆ ಒಮ್ಮೆಲೇ ಬೆಳಕು ಕಾಣಬಹುದು. ಅಲ್ಲಿ ಅಜ್ಜಿ ಕಥೆಗಳಲ್ಲಿ ಬರುವ ವಿಶಾಲವಾದ ಅರಮನೆಯಂತಹ ಮನೆ ತೆರೆದುಕೊಳ್ಳಬಹುದು. ಅಜ್ಜಿ ಎಂದೊಡನೇ ನೆನಪಾಯಿತು. ಹೌದು ನನ್ನ ಪ್ರೀತಿಯ ಅಜ್ಜಿ ಅಲ್ಲಿರುತ್ತಾಳೆ. ಅವಳು ಅಲ್ಲಿಯ ಬಣ್ಣದ ಬೆಳಕಿನಲ್ಲಿ ತನ್ನ ಬಂಗಾರದ ಬಣ್ಣದಿಂದ ಹೊಳೆಯುವ ಕೂದಲನ್ನು ಚನ್ನಾಗಿ ಬಾಚಿ ಗಂಟು ಹಾಕಿಕೊಂಡಿರುತ್ತಾಳೆ. ಪುಟ್ಟ ಚಂದ್ರನಂತಹ ಕುಂಕುಮ ಬೊಟ್ಟು ಹಣೆಯಲ್ಲಿ ಇರುತ್ತದೆ. ಒಂದೂ ಹಲ್ಲಿಲ್ಲದ ಬಾಯನ್ನು ಅಗಲಿಸುತ್ತ ಮುಂದೆ ಬಂದು ನನಗಾಗಿ ಅವಳು ತಯಾರಿಸಿದ ಉಂಡೆಯನ್ನು ಮುಂದೆ ನೀಡುತ್ತಾಳೆ. ಆಗ ನಾನು ಅದನ್ನು ಎತ್ತಿ ಕಚ್ಚಿ ತಿನ್ನುತ್ತ ಸುತ್ತಲೂ ನೋಡುತ್ತೇನೆ. “ಅಜ್ಜಿ, ನಿನ್ನ ಕಥೆ ಕೇಳಲು ಯಾರೂ ಬಂದಿಲ್ಲವಾ?” ಎಂದು ಅವಳೊಂದಿಗೆ ಮಾತಾಡುತ್ತೇನೆ. ಅಲ್ಲಿ ಆಡಲು ಗೆಳೆಯರು ಯಾರಾದರೂ ಇದ್ದಾರಾ... ಅನ್ನುತ್ತ ಅಲ್ಲಿ ಇಲ್ಲಿ ಹುಡುಕಲು ತೊಡಗುತ್ತೇನೆ. ಆಗ ಒಮ್ಮೆಲೇ ಕತ್ತಲಾಗಿಬಿಡುತ್ತದೆ. ಹಾಂ, ಈಗ ಅದೇ ಅಜ್ಜಿ ಕಥೆಗಳಲ್ಲಿ ಹೇಳುತ್ತಿದ್ದ ಹದಿನಾರು ಅಡಿ ಉದ್ದದ ಪಟ್ಟೆ ಹುಲಿ ಸುಮ್ಮನೆ ನಮ್ಮ ಮನೆಯ ಬೆಕ್ಕು ಬಾಲ ಮಡಚಿಕೊಂಡು ತಲೆಯನ್ನು ಕಾಲಮೇಲೆ ಹಾಕಿ ಕಣ್ಣು ಮುಚ್ಚಿ ಮಲಗುವಂತೆ ಮಲಗಿದ್ದು ನನ್ನ ಸದ್ದಿಗೆ ಎದ್ದು ಯಾರು ಬಂದಿದ್ದಾರೆ ಎಂದು ಕಣ್ಣುಬಿಡುತ್ತದೆ. ಅದು ಕಣ್ಣು ಬಿಟ್ಟಾಗ ಮಂಜುಬಿದ್ದ ರಾತ್ರಿಯಲ್ಲಿ ವಾಹನವೊಂದು ದೂರದಲ್ಲಿ ಬರುವಾಗ ಕಾಣುವ ಎರಡು ಬೆಳಕಿನಂತೆ ಅದರ ಕಣ್ಣು ಕಾಣುತ್ತದೆ. ಅದು ಬಾಯಿ ತೆರೆದಾಗ ಹಲ್ಲು ಫಳ ಫಳ ಹೊಳೆದು ಭಯದಲ್ಲೂ ಒಂದುರೀತಿ ಖುಷಿ ಉಂಟಾಗುತ್ತದೆ. ಹೀಗೆ ಏನೇನೋ ಯೋಚಿಸುತ್ತಿರುವಾಗ ಟಪ್ ಟಪ್ ಎಂದು ಎರಡು ಮೂರು ಮಾವಿನ ಹಣ್ಣು ಬಿದ್ದ ಸದ್ದು ಕೇಳಿ... ಹೆರಕಿ ಇಟ್ಟಿದ್ದ ಮಾವಿನ ಹಣ್ಣು ಆಗಲೇ ಖಾಲಿಯಾಗಿದೆ ಎಂದು ನೆನಪಾಗಿ ಮೇಲೆ ನೋಡುತ್ತ ಹಣ್ಣು ಹೆರಕಲು ಹೊರಟೆ. ಮಂಗ ಮತ್ತು ಕೆಂಪು ಅಳಿಲು ಮಾವಿನ ಮರದಲ್ಲಿ ಮಾವಿನ ಹಣ್ಣಿಗಾಗಿ ಹುಡುಕುತ್ತಿರುವಾಗ ಕೊಂಬೆ ಅಲುಗಿ ಉದುರಿದ್ದು ಎಂದು ಗೊತ್ತಾಗಿ ಮತ್ತೆ ಬೀಳುತ್ತದೆಯೇ ಎಂದು ಮೇಲೆ ನೋಡಿದೆ. ಕೆಂಪು ಅಳಿಲು ಮಾವಿನ ಮರದ ಕೊಂಬೆಯ ತುದಿ ಅಂದರೆ ತುದಿಗೆ ಬಂದು ಪೂರ್ತಿ ತಲೆಕೆಳಗಾಗಿ ಕೊಂಬೆಯ ಮೇಲೆ ಮಲಗಿತ್ತು. ಹಾಗೆ ಮಲಗಿದ್ದರೂ ತನ್ನ ಹಿಂದಿನ ಎರಡೂ ಕಾಲುಗಳಿಂದ ಅದು ಕೊಂಬೆಯನ್ನು ಬಲು ಗಟ್ಟಿಯಾಗಿ ಹಿಡಿದುಕೊಂಡಿತ್ತು. ಹಾಗಾಗಿಯೇ ಯಾವ ಭಯವೂ ಇಲ್ಲದೆ ಮುಂದಿನ ಎರಡೂ ಕೈಗಳನ್ನು ಚಾಚಿ ಹಣ್ಣು ಕಿತ್ತು ಕಚ್ಚಲು ತೊಡಗಿತ್ತು. ಅದನ್ನು ನೋಡುತ್ತ ನನಗೆಷ್ಟು ಖುಷಿಯಾಗಬೇಡ. ಆದರೆ ಆ ಮಂಗನದೇ ಬೇರೆ ರೀತಿ. ಅದು ಎರಡುಮೂರು ಟಿಸಿಲು ಒಡೆದ ಪುಟ್ಟ ಕೊಂಬೆಗಳ ಮಧ್ಯೆ ಕಾಲು ಇಳಿಸಿ ಬಾಲವನ್ನು ನಿಡಿದಾಗಿ ನೇತಾಡಲು ಬಿಟ್ಟಿತ್ತು. ಒಂದು ಕೈಯಿಂದ ಮಾವಿನ ಹಣ್ಣು ಇರುವ ಕೊಂಬೆಯನ್ನು ಬಗ್ಗಿಸಿ ಹಣ್ಣನ್ನು ಕಿತ್ತು ಈಗ ಎರಡೂ ಕೈಯಿಂದ ಹಣ್ಣನ್ನು ಹಿಡಿದು ಬಾಯಿಂದ ಕಚ್ಚಿ ತಿನ್ನುತ್ತಿರುವಾಗ ಅದರ ಕಪ್ಪು ಮುಖದ ಹಿನ್ನೆಲೆಯಲ್ಲಿ ಬಿಳಿಯ ಹಲ್ಲು ಫಳ ಫಳನೆ ಹೊಳೆಯುತ್ತಿತ್ತು. ಮಾವಿನ ಹಣ್ಣು ತಿಂದು ಮುಗಿಸಿ ಹೀಗೆ ಮೇಲೆ ಹತ್ತಿ ಹಳೆ ಅಂಗಿ ಕಳಚಿ ಹೊಸ ಅಂಗಿ ಹಾಕುವ ಹಾಗೆ ತನ್ನ ಹಳೆಯ ತೊಗಟೆಯನ್ನು ಕಳಚಿಹಾಕಿ ಬೆಳ್ಳಗೆ ಕಾಣುತ್ತಿದ್ದ ನಂದಿಮರದ ಬುಡಕ್ಕೆ ಬಂದೆ. ಅಲ್ಲೇ ಆಚೆ ಮುರುಗಲ ಹಣ್ಣಿನ ಮರ. ಮುರುಗಲ ಮರದಲ್ಲಿ ಬಹಳಷ್ಟು ಹಣ್ಣಿತ್ತಾದರೂ ಮಾವಿನ ಹಣ್ಣು ಬಹಳ ಇದ್ದಿದ್ದರಿಂದ ಮಂಗ ಈ ಮರಕ್ಕೆ ಬಂದಿಲ್ಲ ಎಂದುಕೊಂಡೆ. ನನಗೂ ಆ ಹಣ್ಣು ಬೇಡವೆನಿಸಿ ಕೆಳಕ್ಕೆ ಇಳಿದೆ. ಈಗ ಕೆಳಬದಿಯಿಂದ ಕಲ್ಲನ್ನು ನೋಡಿದರೆ ಕಲ್ಲಿನ ಕೆಲವು ಭಾಗವಷ್ಟೇ ಕಾಣುತ್ತಿತ್ತೇ ಹೊರತು ಅದರ ತುದಿ ಕಾಣುತ್ತಿರಲಿಲ್ಲ. ಈ ಕಲ್ಲಿನ ತುದಿ ಒಮ್ಮೆ ಹತ್ತಬೇಕಲ್ಲ ಅನಿಸಿದರೂ ನನ್ನಿಂದ ಆಗದ ಕೆಲಸ ಎಂದುಕೊಂಡೆ. ಆದರೆ ಇದೇ ಕಲ್ಲಿನ ತುದಿಯಲ್ಲಿ ನಾಲ್ಕೈದು ಹೆಜ್ಜೇನು ಬರುತ್ತದೆ. ಸಿದ್ದಿ ನಾಗಪ್ಪ ಹತ್ತಿ ಜೇನು ಬಿಡಿಸಿ ಜೇನುತುಪ್ಪ ತರುತ್ತಾನೆ ಎನ್ನುವುದು ನನ್ನಂತಹ ಮಕ್ಕಳಿಗೆಲ್ಲ ನಂಬಲಾಗದ ಸಂಗತಿಯಾಗಿತ್ತು. ಅವನು ಕಲ್ಲು ಹತ್ತುವುದನ್ನು ನೋಡೋಣವೆಂದರೆ ಅಮವಾಸ್ಯೆ ಸಮೀಪಿಸುವಾಗ ಕಪ್ಪು ರಾತ್ರಿಯಲ್ಲಿಯೇ ಮಾಡುವ ಕೆಲಸ. ತೆಂಗಿನ ಸಿಪ್ಪೆ ಜಜ್ಜಿ ನಾರು ತೆಗೆದು ಆ ನಾರಿನಿಂದ ದಪ್ಪನೆಯ ಕಟ್ಟು ತಯಾರಿಸುತ್ತಿದ್ದ. ಈ ಕಟ್ಟಿಗೆ ಬೆಂಕಿ ಹೊತ್ತಿಸಿಕೊಂಡು ಜೇನು ರಟ್ಟಿನಿಂದ ಜೇನು ನೊಣಗಳನ್ನು ದೂಡಿ ಜೇನು ತೆಗೆಯುತ್ತಾನೆಂದು ಹೇಳುತ್ತಾರೆ. ನಾನು ರಾತ್ರಿ ಈ ರೀತಿ ಜೇನು ತೆಗೆಯುತ್ತ ಆ ಕತ್ತದ ಕಟ್ಟಿಗೆ ಬೆಂಕಿ ಹೊತ್ತಿಸಿ ಹೊಡೆಯುವಾಗ ಉದುರುವ ಕೆಂಪನೆಯ ಕಿಡಿಗಳನ್ನು ದೂರದಿಂದ ನೋಡಿದ್ದೇನೆ. ಆ ಕಿಡಿಗಳು ಬಾನಿನ ಕತ್ತಲಲ್ಲಿ ಪಟಾಕಿ ಸಿಡಿಸಿದಂತೆ ಕಾಣುತ್ತಿತ್ತು. ನಾನು ಕೆಳಗೆ ಇಳಿಯುತ್ತ ಹೋದಂತೆ ಕಲ್ಲು ಹೆಚ್ಚು ಹೆಚ್ಚು ಕಾಣುತ್ತಿತ್ತು. ಆ ಕಲ್ಲಿನ ಅಡಿಯಲ್ಲಿಯೇ ನಮ್ಮ ಊರು. ಕಲ್ಲು ಯಾವಾಗಲೂ ನಮ್ಮ ಊರಕಡೆಗೇ ಬಾಗಿದಂತೆ ಕಾಣುತ್ತಿತ್ತು. ಕಲ್ಲು, ಕಲ್ಲಿನಲ್ಲಿರುವ ಜೇನು, ಅಲ್ಲಿರುವ ಮಾವಿನ ಮರ, ಮುರಗಲ ಹಣ್ಣು, ಕಲ್ಲಿನ ಮೇಲೇ ಬೆಳೆದಿರುವ ‘ಕಲ್ಲು ಬಾಳೆಯ ಗಿಡ’ ಎಲ್ಲ ನನಗೆ ಪ್ರೀತಿಯ ಸಂಗತಿಯಾಗಿ ಕಲ್ಲುಕೂಡಾ ಪ್ರೀತಿಯ ಗೆಳೆಯನಂತಾಗಿತ್ತು. ಆದರೆ ಒಮ್ಮೊಮ್ಮೆ ಆ ಬಾಗಿರುವ ಕಲ್ಲು ಉರುಳಿ ನಮ್ಮ ಊರಿಗೆ ಬಂದರೆ...ಎನಿಸುತ್ತಿತ್ತು. ತಕ್ಷಣವೇ ಹಾಗೆಲ್ಲ ಆಗುವುದೇಇಲ್ಲ... ಸೂರ್ಯ ಹೇಗೆ ದಿನಾಲೂ ಆಚೆಯ ಗುಡ್ಡದ ಕಡೆಯಿಂಲೇ ಮೂಡಿಬರುತ್ತನೋ ಹಾಗೆಯೇ ಈ ಕಲ್ಲು ಊರಕಡೆ ಪ್ರೀತಿಯಿಂದ ಬಾಗಿದೆಯೇ ಹೊರತು ಉರುಳುವುದಿಲ್ಲ ಅಂದುಕೊಳ್ಳುತ್ತೇನೆ. -ತಮ್ಮಣ್ಣ ಬೀಗಾರ ಮಕ್ಕಳ ಸಾಹಿತ್ಯ ಕ್ಷೇತ್ರವನ್ನು ತಮ್ಮ ಕವಿತೆ,ಕತೆ,ಕಾದಂಬರಿ, ಲಲಿತ ಪ್ರಬಂಧಗಳ ಚಿತ್ರ ಕಲೆಯ ಮೂಲಕ ಶ್ರೀಮಂತ ಗೊಳಿಸಿದ ತಮ್ಮಣ್ಣ ಬೀಗಾರ  ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರದವರು. ಸ್ನಾತಕೋತ್ತರ ಪದವೀಧರರಾದ ಇವರು. ಶಿಕ್ಷಕರಾಗಿ ಮೂವತ್ತೇಳು ವರ್ಷ ಸೇವೆಸಲ್ಲಿಸಿ ಈಗ ನಿವೃತ್ತರಾಗಿರುತ್ತಾರೆ. ಸಿದ್ದಾಪುರದಲ್ಲಿ ವಾಸಿಸಿರುವ ಇವರು ಸಾಹಿತ್ಯ ರಚನೆ, ಚಿತ್ರ ಹಾಗೂ ವ್ಯಂಗ್ಯ ಚಿತ್ರ ರಚನೆ ಮುಂತಾದವುಗಳಲ್ಲಿ ನಿರತರು. ‘ಗುಬ್ಬಚ್ಚಿ ಗೂಡು’, ‘ಚಿಂವ್ ಚಿಂವ್’, ‘ಜೀಕ್ ಜೀಕ್’, ‘ಪುಟಾಣಿ ಪುಡಿಕೆ’, ‘ಸೊನ್ನೆ ರಾಸಿ ಸೊನ್ನೆ’, ‘ತೆರೆಯಿರಿ ಕಣ್ಣು’, ‘ಖುಷಿಯ ಬೀಜ’ ಹಾಗೂ ‘ಹಾಡಿನ ಹಕ್ಕಿ’ ಎನ್ನುವ ಮಕ್ಕಳ ಕವನ ಸಂಕಲನಗಳನ್ನು, ‘ಮಿಂಚಿನ ಮರಿ’ ಎನ್ನುವ ಶಿಶುಪ್ರಾಸ ಹೊತ್ತಿಗೆಯನ್ನು, ‘ಕಪ್ಪೆಯ ಪಯಣ’, ‘ಜಿಂಕೆಮರಿ’, ‘ಹಸಿರೂರಿನ ಹುಡುಗ’, ‘ಮಲ್ನಾಡೇ ಮಾತಾಡು’, ‘ಅಮ್ಮನ ಚಿತ್ರ’, ‘ಪುಟ್ಟನ ಕೋಳಿ’, ‘ಉಲ್ಟಾ ಅಂಗಿ’ ಎಂಬ ಮಕ್ಕಳ ಕಥಾ ಸಂಕಲನಗಳನ್ನೂ ‘ಮಾತಾಟ ಮಾತೂಟ’, ‘ಮರ ಬಿದ್ದಾಗ’ ಎನ್ನುವ ಮಕ್ಕಳಿಗಾಗಿ ಲಲಿತ ಬರಹಗಳನ್ನು, ‘ಬಾವಲಿ ಗುಹೆ’, ಮಕ್ಕಳ ಕಾದಂಬರಿಯನ್ನು ‘ಮಣ್ಣ ಕಣ್ಣಿನ ಹಾಡು’ ಎನ್ನುವ ಕವನ ಸಂಕಲನವನ್ನು ‘ಬಾ ಮರಿ ಚಿತ್ರ ಬರಿ’ ಚಿತ್ರಪುಸ್ತಕವನ್ನ್ನು ಪ್ರಕಟಿಸಿದ್ದಾರೆ.ಇವರ ಹಸಿರೂರಿನ ಹುಡುಗ ಪುಸ್ತಕಕ್ಕೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಲ್ನಾಡೇ ಮಾತಾಡು ಕೃತಿಗೆ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಹಾಗೂ ಮರಬಿದ್ದಾಗ ಕೃತಿಗೆ ಬಾಲವಿಕಾಸ ಅಕಾಡೆಮಿ ಕೊಡುವ ಮಕ್ಕಳ ಚಂದ್ರ ಪ್ರಶಸ್ತಿ ಬಂದಿವೆ. ಇದಲ್ಲದೆ ರಾಜ್ಯ ಶಿಕ್ಷಕರ ಪ್ರಶಸ್ತಿ, ರಾಷ್ಟ್ರ ಶಿಕ್ಷಕರ ಪ್ರಶಸ್ತಿ, ವ್ಯಂಗ್ಯ ಚಿತ್ರ ರಚನೆಗಾಗಿ ರಾಜ್ಯಮಟ್ಟದ ಬಹುಮಾನ, ಪ್ರಜಾವಾಣಿ ಶಿಶುಕಾವ್ಯ ಸ್ಪರ್ಧಾ ಬಹುಮಾನ ಮುಂತಾದವು ದೊರೆತಿವೆ. - ಸಂಪಾದಕ.

ಕಲ್ಲಿನೊಂದಿಗೆ...
bottom of page