ಕಲಾನೈಪುಣ್ಯದ ಚಿತ್ರಣಕ್ಕೆ ಬಾಂಧವ್ಯದ ಬೆಸುಗೆ
ಪ್ರಸ್ತುತ ಗ್ರಂಥಕರ್ತ ಎಲ್.ಎಸ್.ಶಾಸ್ತ್ರಿಯವರು ಯಕ್ಷಗಾನ ರಂಗಭೂಮಿಯ ಗಾಢ ಸಂಪರ‍್ಕವುಳ್ಳವರೆಂಬುದರಲ್ಲಿ ಅನುಮಾನವಿಲ್ಲ. ಯಕ್ಷಗಾನದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಪ್ರಶಸ್ತಿ ಪುರಸ್ಕೃತರಾದ ಕೆರೆಮನೆ ಶಿವರಾಮ ಹೆಗಡೆಯವರ ಹಿರಿಯ ಸಹೋದರಿಯ ಮಗ ಅವರು. ಡಾ.ಮಹಾಬಲ ಹೆಗಡೆ, ಶಂಭುಹೆಗಡೆ, ಗಜಾನನ ಹೆಗಡೆ,ಮುಂತಾದವರ ಬಾಲ್ಯದ ಒಡನಾಡಿಗಳು. ಯಕ್ಷಗಾನ ಕಲಾವಿದರ ತೊಡೆಯ ಮೇಲೆಯೇ ಶೈಶವವನ್ನು ಸುಖಿಸಿದವರು. ಅಂದಿನ ಪ್ರರ್ದನಗಳಲ್ಲಿ ಕಾಣಿಸಿಕೊಳ್ಳುವ ಬಾಲಪಾತ್ರಗಳೂ ಅವರ ಬಾಲ್ಯದ ಸಖರೆಂಬುದು ಅಕ್ಷರಶಃ ಸತ್ಯ. ಮನಸ್ಸು ಮಾಡಿದ್ದರೆ ಯಕ್ಷಗಾನದ ಯಾವುದಾದರೊಂದು ಅಂಗದಲ್ಲಿ ಪರಿಣಿತಿ ಸಾಧಿಸಿ ಪ್ರಸಿದ್ಧಿ,ಪ್ರಾಪ್ತಿ ಎರಡನ್ನೂ ಪಡೆಯಬಲ್ಲವರಾಗಿದ್ದರು. ಅವರಿಗೆ ಯಕ್ಷಗಾನ ಗೊತ್ತಿಲ್ಲದಿದ್ದರೂ ಯಕ್ಷಗಾನದ ಬಗ್ಗೆ ಚೆನ್ನಾಗಿ ಗೊತ್ತು. ಅಂಥವರು ಯಕ್ಷಗಾನ ಕಲಾವಿದರ ಕುರಿತಾದ ತಮ್ಮ ಅನುಭವಗಳನ್ನು ಸಹೃದಯಿಗಳೊಡನೆ ಹಂಚಿಕೊಂಡುದಕ್ಕೆ ಸಾಂಸ್ಕೃತಿಕವಾದ ಮೌಲ್ಯಗಳಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಗ್ರಂಥವನ್ನು ‘ಯಕ್ಷನಕ್ಷತ್ರಗಳು’ ಎನ್ನುವ ಅರ್ಥಪೂರ್ಣವಾದ ಹೆಸರಿನಿಂದ ಕರೆದಿದ್ದಾರೆ. ಯಕ್ಷಗಾನಕ್ಷೇತ್ರವನ್ನು ವಿಶಾಲವಾದ ಆಕಾಶವೆಂದು ಪರಿಭಾವಿಸಿಕೊಂಡರೆ ಅಲ್ಲಿ ಅಸಂಖ್ಯಾತ ನಕ್ಷತ್ರಗಳು ಮಿಂಚಿ ಮರೆಯಾಗಿವೆ. ಆದರೆ ಅಭಿನಯವೆನ್ನುವುದು ಕಾಲಸ್ಥ ಕಲೆ. ಕಣ್ಣಿಗೆ ಕಾಣುತ್ತಿದ್ದ ಹಾಗೆ ಕರಗಿಹೋಗುವಂತಹದು. ಉಳಿದ ಕಲಾಮಾಧ್ಯಮದ ಹಾಗೆ ಭೌತಿಕ ವಸ್ತುವಿನಲ್ಲಿ ಸಾಕ್ಷಾತ್ಕಾರವಾಗುವುದಿಲ್ಲ. ಈಗೀಗ ಮಾತ್ರ ಯಕ್ಷಗಾನ ಪ್ರದರ್ಶನಗಳು ಚಲನಚಿತ್ರದ ಹಾಗೆ ದಾಖಲೆಯಲ್ಲಿಯೇ ಉದ್ಭವವಾಗುತ್ತವೆ. ಮೊದಮೊದಲು ಹಾಗಿರಲೇ ಇಲ್ಲವಲ್ಲ! ಈ ಕಾರಣಕ್ಕಾಗಿ ಅತ್ಯಂತ ಮಹತ್ವದ ಕಲಾವಿದರಾಗಿ ವಿಶೇಷ ಸಾಧನೆ ಮಾಡಿದವರೂ ಕಾಲಾಂತರದಲ್ಲಿ ಅಸ್ತಿತ್ವದಿಂದಲೇ ಮರೆಯಾಗಿ ಹೋಗುತ್ತಾರೆ. ಪ್ರಾಯದ ಉರಾವರಿಯಲ್ಲಿ ರಂಗಸ್ಥಳದಲ್ಲಿ ಧೂಳೆಬ್ಬಿಸಿ ಸಾವಿರ ಸಾವಿರ ನೋಡುಗರನ್ನು ಹುಚ್ಚೆಬ್ಬಿಸಿದ್ದರೂ ಮುಪ್ಪು ಆವರಿಸಿದಾಗ ನೆನಪಿನಿಂದ ಮರೆಯಾಗಿಬಿಡುತ್ತಾರೆ. ಈ ಗ್ರಂಥದಲ್ಲಿ ಉಲ್ಲೇಖಗೊಂಡ ಎಲ್ಲ ನಟರ ಉಚ್ಛ್ರಾಯ ಕಾಲದಲ್ಲಿ ಯಕ್ಷಗಾನ ರಂಗನಟರ ಅಕ್ಷರದಾಖಲೆ ಕೂಡ ಅಷ್ಟಾಗಿ ಇರಲಿಲ್ಲ. ಶಾಸ್ತ್ರಿಯವರಂಥವರ ನೆನಪಿನಲ್ಲಿ ಹುದುಗಿಹೋಗಬಹುದಾದ ಇಂಥ ಕಲಾವಿದರ ಸಾಧನೆಗಳು ಈ ರಂಗಭೂಮಿಯ ಚರಿತ್ರೆಯಲ್ಲಿ ತುಂಬ ಮಹತ್ವದ್ದಾಗುತ್ತವೆ. ಆದ್ದರಿಂದ ಅವಕ್ಕೆ ಚಾರಿತ್ರಿಕವಾದ ಮಹತ್ವವಿದೆ. ಗ್ರಂಥರೂಪದಲ್ಲಿ ಅವು ಪ್ರಕಟಗೊಳ್ಳುತ್ತಿರುವುದು ಸಂತೋಷದ ಸಂಗತಿ. ಆದರೆ ಯಕ್ಷಗಾನ ರಂಗನಟರ ಕಲಾನೈಪುಣ್ಯಗಳನ್ನು ಅಕ್ಷರದಲ್ಲಿ ಹಿಡಿದಿಡುವಾಗ ಕೆಲವು ಸಮಸ್ಯೆಗಳು, ಸವಾಲುಗಳು ಸಹಜವಾಗಿಯೇ ಎದುರಾಗುತ್ತವೆ. ಕಾಲಸ್ಥವೆನ್ನುವುದು ಒಂದು ಕಷ್ಟವಾದರೆ ಯಕ್ಷಗಾನದ ರಂಗನಿರ್ವಹಣೆ ಬಹುಮಟ್ಟಿಗೆ ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕಗಳೆನ್ನುವ ನಾಲ್ಕುಬಗೆಯ ಅಂಗೋಪಾಂಗಗಳಿಂದ ಸಮೃದ್ಧವಾದುದು. ಪ್ರಾದೇಶಿಕವಾಗಿ ಅಂಗೋಪಾಂಗಗಳಲ್ಲಿ ಅಸಮತೋಲನವಿದ್ದರೂ ಉತ್ತರ ಕನ್ನಡದ ಬಡಗುತಿಟ್ಟಿನ ಯಕ್ಷಗಾನ ರಂಗನಟರು ಬಹುಮಟ್ಟಿಗೆ ಅಭಿನಯದ ಅಂಗೋಪಾಂಗಗಳಲ್ಲಿ ಸಮತೋಲನವನ್ನು ಸಂರಕ್ಷಿಸಿಕೊಂಡವರು. ‘ಯಕ್ಷಗಾನವು ಒಂದು ಪರಿಪೂರ್ಣ ರಂಗಭೂಮಿ’ ಎಂಬ ಮಾತಿಗೆ ಸಶಕ್ತ ದೃಷ್ಟಾಂತ ಉತ್ತರಕನ್ನಡದ ಪದ್ಧತಿ.’ ಎನ್ನುವ ಡಾ.ಪ್ರಭಾಕರ ಜೋಶಿಯವರ ಮಾತು ಗಮನಯೋಗ್ಯ. ಆಗ ಪಾತ್ರನಿರ್ವಣೆಯನ್ನು ನೋಡಿ ಆಸ್ವಾದಿಸುವುದಕ್ಕೇ ಎರಡು ಕಣ್ಣುಗಳು ಸಾಲುವುದಿಲ್ಲ. ಈ ಗ್ರಂಥದಲ್ಲಿ ಪ್ರಸ್ತಾಪವಾಗುವ ರಂಗನಟರು ಅಭಿನಯದ ಅಂಗೋಪಾಂಗಗಳಲ್ಲಿ ಸಾಧ್ಯವಾದಷ್ಟೂ ಸಮತೋಲನ ಸಾಧಿಸಿದವರು. ಇಂಥ ಕಲಾವಿದರರನ್ನು ಪರಿಚಯಿಸಿಕೊಡುವ ಲೇಖಕನಿಗೆ ಈ ಎಚ್ಚರ ಇರಬೇಕಾಗುತ್ತದೆ. ಶಾಸ್ತ್ರಿಯವರು ಬರವಣಿಗೆಯ ಉದ್ದಕ್ಕೂ ಈ ಎಚ್ಚರವನ್ನೂ ಕಾಪಾಡಿಕೊಂಡಿದ್ದಾರೆನ್ನುವುದು ಗಮನಿಸಬೇಕಾದ ಸಂಗತಿ. ಏನಿದ್ದರೂ ರಂಗಸ್ಥಳದಲ್ಲಿ ವಿಜೃಂಭಿಸಿ ನೋಡುಗನಿಗೆ ಅಪ್ಯಾಯಮಾನವೆನಿಸುವ ಪಾತ್ರನಿರ್ವಹಣೆ ಮತ್ತು ಪ್ರದರ್ಶನದ ಬಗ್ಗೆ ಅಕ್ಷರದಾಖಲೆ ಮಾಡತೊಡಗಿದಾಗ ಬರಹಗಾರ ಕಕ್ಕಾಬಿಕ್ಕಿಯಾಗಿಬಿಡುತ್ತಾನೆ. ಪ್ರದರ್ಶನದ ಸಕಲ ವೈಭವಗಳನ್ನೂ ಭಾಷೆಯಲ್ಲಿ ಹಿಡಿದಿಡಲು ಸಾಧ್ಯವಾಗದೆ ಪೇಚಾಡಿಕೊಳ್ಳಬೇಕಾಗುತ್ತದೆ. ಶಬ್ದಸಂಪತ್ತು, ಭಾಷಾವೈಖರಿ, ವರ್ಣನಾಶಕ್ತಿ ಸಾಕಾಗದೆ ಬರವಣಿಗೆ ಪೇಲವವಾಗಿಬಿಡುತ್ತದೆ. ‘ಅದ್ಭುತ ನಟ’. ‘ಅಮೋಘ’ ‘ನಭೂತೋ ನಭವಿಷ್ಯತಿ’ಮುಂತಾದ ವಿಶೇಷಣಗಳೆಲ್ಲ ಅರ್ಥಹೀನವಾಗಿಬಿಡುತ್ತವೆ. ಆಡಂಬರದ ಅತಿಶಯೋಕ್ತಿ, ವೈಭವೀಕರಣಗಳೆಲ್ಲ ಹಾಸ್ಯಾಸ್ಪದವಾಗಿಬಿಡುತ್ತವೆ. ಪ್ರದರ್ಶನ ನೋಡುತ್ತಿದ್ದಾಗ ಆಗುವ ರೋಮಾಂಚಕಾರೀ ಅನುಭವ ಅಕ್ಷರಚಿತ್ರವನ್ನು ಆಸ್ವಾದಿಸುವಾಗ ಉಂಟಾಗುವುದಿಲ್ಲ ಅನ್ನಿಸಿಬಿಡುತ್ತದೆ. ‘ನೀವೇನೋ ಇವರು ಭಾರೀ ದೊಡ್ಡ ಕಲಾವಿದರು ಎನ್ನುತ್ತೀರಿ! ನಿಮ್ಮ ಬರವಣಿಗೆಯಲ್ಲಿ ಹಾಗೆ ಕಾಣುವುದಿಲ್ಲ’ ಎಂದುಬಿಡುತ್ತಾರೆ. ಈ ಅಪಾಯಗಳನ್ನೆಲ್ಲ ಶಾಸ್ತ್ರಿಯವರು ತಮ್ಮ ಈ ಬರವಣಿಗೆಯಲ್ಲಿ ಉಪಾಯದಿಂದ ಸಾಧ್ಯವಾದಷ್ಟೂ ಗೆದ್ದಿದ್ದಾರೆ. ಪ್ರತಿಯೊಬ್ಬರ ಕಲಾನೈಪುಣ್ಯವನ್ನೂ ಸಹಜವಾದ ಭಾಷೆಯಲ್ಲಿ ಆತ್ಮೀಯತೆಯಿಂದ ಚಿತ್ರಿಸಿದ್ದಾರೆ. ರಂಗನಟನ ಪರಿಚಯಾತ್ಮಕವಾದ ಇಂಥ ಬರವಣಿಗೆಗಳು ವರ್ತಮಾನದಲ್ಲಿ ಪಾತ್ರಾಭಿನಯವನ್ನು ನೋಡಿ ಅನುಭವಿಸಿದ ಪ್ರೇಕ್ಷಕನಿಗೂ ಸಲ್ಲಬೇಕು.ಕಾಲಾಂತರದಲ್ಲಿ ಬರವಣಿಗೆಯನ್ನು ಓದಿ ನಟನ ನಟನಾಶಕ್ತಿಯನ್ನು ಗ್ರಹಿಸುವ ಓದುಗನಿಗೂ ಸಲ್ಲಬೇಕು. ಯಕ್ಷಗಾನೇತರ ಓದುಗನೂ ಸ್ವೀಕರಿಸಬೇಕು. ಈ ಎಲ್ಲದರ ಸಮತೋಲನ ನಿಜಕ್ಕೂ ಸಮಸ್ಯೆಯೇ! ಪ್ರಸ್ತುತ ಕಥನದಲ್ಲಿ ಸಾಧ್ಯವಾದಷ್ಟೂ ಸಮತೋಲನ ಸಾಧಿಸಲು ಪ್ರಯತ್ನಿಸಿರುವುದು ಸ್ಪಷ್ಟ. ಶಾಸ್ತ್ರಿಯವರು ಈ ಕಥನಕ್ಕಾಗಿ ತಾವು ಬಳಸಿಕೊಂಡ ಎಲ್ಲ ಮಾಹಿತಿಗಳ ಮೂಲವನ್ನು ನಿಸ್ಪ್ರಹತೆಯಿಂದ ನೆನೆದುಕೊಂಡಿದ್ದಾರೆ. ಎಲ್ಲವನ್ನೂ ಮುಚ್ಚಿಟ್ಟು ಆಕರಗಳ್ಳರಾಗುವುದಿಲ್ಲ. ವಿಷಯಾಪಹರಣದ ಆರೋಪದಿಂದ ಮುಕ್ತರಾಗುತ್ತಾರೆ. ಇದು ಪ್ರಾಮಾಣಿಕ ಲೇಖಕನೊಬ್ಬನ ಪ್ರಾಥಮಿಕ ಲಕ್ಷಣ. ಬಾಹ್ಯ ಆಕರಗಳ ಜತೆಜತೆಗೆ ತಮ್ಮ ಬದುಕಿನ ಒಡನಾಟ ಮತ್ತು ಆಪ್ತ ಅನುಭವಗಳನ್ನೇ ಬಹುಮಟ್ಟಿಗೆ ಧಾರಾಳವಾಗಿ ನೆಚ್ಚಿಕೊಂಡಿದ್ದಾರೆ. ಪುಸ್ತಕವನ್ನು ಓದುವಾಗ ಇಲ್ಲಿನ ಮಾಹಿತಿಗಳನ್ನು ಇನ್ನೆಲ್ಲೋ ಓದಿದ್ದೇನೆನ್ನುವ ಅನುಭವ ಯಕ್ಷಗಾನದ ಮಾಮೂಲಿ ಓದುಗರಿಗೆ ಉಂಟಾದರೆ ಆಶ್ಚರ‍್ಯ ಖಂಡಿತ ಇಲ್ಲ. ಯಾವ ಸಂಗತಿಗಳೂ ಹೊಸದಲ್ಲವೇ ಅಲ್ಲ ಅನ್ನಿಸಿಬಿಡಲೂ ಬಹುದು. ಸ್ವಂತ ಅನುಭವಕ್ಕೆ ಅಧ್ಯಯನವನ್ನು ಸೇರಿಸಿ ಕಥನವನ್ನು ನಿರೂಪಿಸಿದ್ದಾರೆ. ಆದಾಗ್ಯೂ ಕ್ವಚಿತ್ತಾಗಿ ಹೊಸವಿಷಯಗಳು ಅಲ್ಲಲ್ಲಿ ಮಿಂಚಿವೆ. ಇದು ಯಕ್ಷಗಾನ ಕ್ಷೇತ್ರದ ಒಂಬತ್ತು ಕಲಾವಿದರ ಕಲಾಸಾಮರ್ಥ್ಯದ ವಸ್ತುನಿಷ್ಠ ವಿಶ್ಲೇಷಣೆಯಾಗಲೀ ನಿಷ್ಠುರ ವಿಮರ್ಶೆಯಾಗಲೀ ಅಲ್ಲ. ಬದಲಿಗೆ ಬದುಕಿನ ವಿವಿಧ ಹಂತಗಳಲ್ಲಿ ಶಾಸ್ತ್ರಿಯವರ ಅಂತರಂಗವನ್ನು ತಟ್ಟಿದ ವ್ಯಕ್ತಿನಿಷ್ಠ ಅನುಭವಗಳ ಚಿತ್ರಣ ಎಂದು ಭಾವಿಸಿಕೊಂಡರೆ ಈ ಬರವಣಿಗೆಯ ರುಚಿ ಇಮ್ಮಡಿಸುತ್ತದೆ. ಶಂಭುಹೆಗಡೆ,ಗಜಾನನ ಹೆಗಡೆ ಕುರಿತಾದ ನಿರೂಪಣೆಯಿಂದ ಇದು ಹೆಚ್ಚು ಸ್ಪಷ್ಟ. ಗಜಾನನ ಹೆಗಡೆ ಇವರ ಬಾಲ್ಯದ ಒಡನಾಡಿ ಮತ್ತು ಸಹಪಾಠಿ. ಅವರ ಪೂರ‍್ವವಯಸ್ಸಿನ ಸಾವು ಶಾಸ್ತ್ರಿಯವರ ಅಂತರಂಗವನ್ನು ಬಲವಾಗಿ ಅಲುಗಾಡಿಸಿದೆ ಎಂಬುದು ಕಥನದಲ್ಲಿ ಧ್ವನಿಸಿದೆ. ಗಮನವಿಟ್ಟು ನೋಡಿದರೆ ಯಕ್ಷಗಾನದ ಬಟ್ಟಬಯಲಿನಲ್ಲಿ ವಿಷಯಾಪಹರಣದ ತರಹೇವಾರಿ ಮಾದರಿಗಳು ಹೇರಳವಾಗಿವೆ. ಪ್ರಸಂಗರಚನೆಯ ಸಂದರ್ಭದಲ್ಲಿ ಪದ್ಯಪಾದದ ಒಂದು ಶಬ್ದದ ಬದಲು ಇನ್ನೊಂದು ಶಬ್ದ ಇಟ್ಟು ಪಾದಪೂರಣ ಮಾಡಿದ ಉದಾಹರಣೆಗಳಿವೆ. ಯಕ್ಷಗಾನ ಸಂಗೀತದ ಹಾಡುಗಾರಿಕೆಯಲ್ಲಿ ಚಾಕ್ಷುಷ ಛಂದೋನಿಯಮಕ್ಕಿಂತ ಹಾಡಿನ ಧಾಟಿಯ ‘ಎಂಬಂತೆ’ ಪದ್ಧತಿ ಬಳಕೆಯಲ್ಲಿರುವುದರಿಂದ ಈ ‘ಚೌರ‍್ಯ’ ಸಾರ್ವತ್ರಿಕವಾಗಿ ಸಹ್ಯ ಮತ್ತು ಸಮ್ಮತ. ಇದೇ ಪ್ರವೃತ್ತಿ ಶೈಕ್ಷಣಿಕ ಬರವಣಿಗೆಯಲ್ಲಿಯೂ ಕಂಡುಬಂದುದು ಚೋದ್ಯ. ವಾಕ್ಯವೊಂದರಲ್ಲಿರುವ ನಾಮಪದವನ್ನು ಜಾಣ್ಮೆಯಿಂದ ಕಳಚಿ ತಮಗೆ ಬೇಕಾದ ಇನ್ನೊಂದು ನಾಮಪದವನ್ನು ನಾಜೂಕಾಗಿ ಇಟ್ಟು ಉದ್ದೇಶ ಸಾಧಿಸಿಕೊಂಡ ಮಹಾನುಭಾವರಿದ್ದಾರೆ. ಇಂತಹದೇ ವಾಕ್ಯದ ಮೂಲಕ ಇಡೀ ಪಿಹೆಚ್.ಡಿ. ಪ್ರಬಂಧವನ್ನೇ ಸಿದ್ಧಗೊಳಿಸಿ ಸಾದರಪಡಿಸಿ ಪದವಿ ಪಡೆದವರಿದ್ದಾರೆ. ಒಂದು ಪ್ರಕಾಶನ ಸಂಸ್ಥೆಯಿಂದ ಪ್ರಕಟವಾದ ಇಡೀ ಪುಸ್ತಕದ ವಾಕ್ಯವೃಂದಗಳನ್ನೂ ವ್ಯವಸ್ಥಿತವಾಗಿ ಸ್ಥಾನಾಂತರಗೊಳಿಸಿ ಗ್ರಂಥಶೀರ್ಷಿಕೆಯನ್ನು ಮಾತ್ರ ಬದಲಾಯಿಸಿ ಬೇರೆ ಬೇರೆ ಪುಸ್ತಕವೆಂಬ ಭ್ರಮೆ ಹುಟ್ಟಿಸಿ ಒಂದೆರಡು ವರ್ಷಗಳಲ್ಲಿಯೇ ಇನ್ನೊಂದು ಪ್ರಕಾಶನ ಸಂಸ್ಥೆಗೆ ನೀಡಿ ಪ್ರಕಟಮಾಡಿ ಸನ್ಮಾನವನ್ನೂ ಸ್ವೀಕರಿಸಿ ಸಗಟುಖರೀದಿಗೆ ಒದಗಿಸಿದವರಿದ್ದಾರೆ. ಇಂತಹದ್ದೇ ನಕಲನ್ನು ಮೂರನೆಯವರೂ ಬಳಸಿಕೊಂಡು, ಅದೇ ಪರಂಪರೆಯಾದುದೂ ಇದೆ. ಎಲ್.ಎಸ್.ಶಾಸ್ತ್ರಿಯವರಿಗೆ ಅಂಥ ತಾರಾತಿಗಡಿ ಮಾಡುವ ಅಗತ್ಯ ಉಂಟಾಗಲಿಲ್ಲ. ಕಲಾವಿದರ ಜೀವನಕಥನದಲ್ಲಿ ಹುಟ್ಟಿದ ಊರು,ತಂದೆ ತಾಯಿಯ ಹೆಸರು,ಹುಟ್ಟಿದ ವರ್ಷ ಮುಂತಾದ ಕೆಲವೊಂದು ಸಂಗತಿಗಳು ಸಮಾನವಾಗಿರುವುದು ಅನಿವಾರ್ಯ. ಹಾಗೆ ನೋಡಿದರೆ ಶಾಸ್ತ್ರಿಯವರು ಈ ಒಂಬತ್ತು ಕಲಾವಿದರದ್ದು ಮಾತ್ರವಲ್ಲ ಸಮಗ್ರ ಯಕ್ಷಗಾನ ರಂಗಭೂಮಿಯ ದಾಖಲೀಕರಣದ ಹಕ್ಕು ಮತ್ತು ಬಾಧ್ಯತೆಯನ್ನು ನ್ಯಾಯವಾಗಿಯೇ ಪಡೆದವರಾಗಿದ್ದರು. ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿಯೇ ಯಕ್ಷಗಾನಕ್ಕಾಗಿ ವಿಶೇಷ ಮೀಸಲಿರಿಸಿದ ‘ಶೃಂಗಾರ’ ತ್ರೈಮಾಸಿಕದ ಸಂಪಾದಕರಾದವರು.ರಂಗಭೂಮಿಯ ಸಮಸ್ತ ಮಾಹಿತಿಗಳೂ ಅವರ ಕೈಅಳತೆಯಲ್ಲಿದ್ದುವು. ಆದರೆ ಕುಟುಂಬದವರ, ಬಂಧುಬಾಂಧವರ, ಯಕ್ಷಗಾನ ಪರಿಸರದ ನಂಟಿನಿಂದ ದೂರವಾಗಿ ಬೆಳಗಾವಿಯಲ್ಲಿ ನೆಲೆಸಿ ತಮ್ಮ ಬರವಣಿಗೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದರಿಂದ ಈ ರಂಗಭೂಮಿಗೆ ಅನ್ಯಾಯವೇ ಆಗಿತ್ತು. ಈಗಲಾದರೂ ಇಷ್ಟರ ಮಟ್ಟಿಗೆ ಸಾಧ್ಯವಾದುದು ರಂಗಭೂಮಿಯ ಸುದೈವ. ಕಲಾನೈಪುಣ್ಯದ ಚಿತ್ರಣದ ಜತೆಜತೆಗೇ ಬಾಂಧವ್ಯದ ಎಳೆಎಳೆಗಳೂ ಈ ಬರಹದಲ್ಲಿ ಧ್ವನಿಸಿವೆ. ಆ ಆಪ್ತತೆಯೇ ಇದರ ಹೂರಣ. ಪ್ರೀತಿ, ವಿಶ್ವಾಸ ,ಸಾಹಚರ‍್ಯದ ಮೆಚ್ಚುಗೆಯೇ ಮಾನದಂಡ. ಈ ಒಂಬತ್ತು ಕಲಾವಿದರಲ್ಲದೆ ಜಲವಳ ಕರ್ಕಿ ಗಣಪಯ್ಯ ಸೆಟ್ಟಿ, ಮೃದಂಗವಾದಕ ಕನ್ನಯ್ಯ ಭಂಡಾರಿ, ಜಲವಳ್ಳಿ ವೆಂಕಟೇಶ ರಾವ್, ನೆಬ್ಬೂರು ನಾರಾಯಣ ಭಾಗವತರು ಇವರೆಲ್ಲ ಈ ಚಿತ್ರಣದಲ್ಲಿ ಒಳಗೊಳ್ಳುವುದಿಲ್ಲ. ಕರ್ಕಿಮೇಳದ ಕಲಾವಿದರು ಅಥವಾ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಯಾವುದೇ ಕಲಾವಿದರ ಕುರಿತಾಗಿ ಶಾಸ್ತ್ರಿಯವರು ಖಂಡಿತ ಬರೆಯಬಲ್ಲವರಾಗಿದ್ದರು. ಆದರೆ ಆತ್ಮೀಯ ಒಡನಾಟ, ಹತ್ತಾರು ಪಾತ್ರಗಳನ್ನು ನೋಡಿದ ಅನುಭವ ಉಳ್ಳ ಕಲಾವಿದರ ಬಗ್ಗೆ ಮಾತ್ರ ಬರೆಯಬೇಕೆಂದು ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳುತ್ತಾರೆ. ಕಲಾವಿದರ ಸಾಧನೆಗಳ ಬಗ್ಗೆ ಮಾತ್ರ ಅಲ್ಲ, ಅವರ ವೇದನೆಯ ಅರಿವೂ ಇರಬೇಕೆನ್ನುವ ಶಾಸ್ತ್ರಿಯವರ ನಿಲುವು ಅವರ ಬರವಣಿಗೆಗೆ ಗಟ್ಟಿಮುಟ್ಟಾದ ತಳಹದಿಯನ್ನು ನಿರ್ಮಿಸುತ್ತದೆ. ಗದಾಪರ್ವದ ಕೌರವ,ಮಾಗಧ ವಧೆಯ ಮಾಗಧ, ಸತ್ಯಹರಿಶ್ಚಂದ್ರ ಮುಂತಾದ ಪಾತ್ರಗಳ ಮೂಲಕ ಮನೆಮಾತಾಗಿ ಯಕ್ಷಗಾನದ ವೃತ್ತಿಮೇಳವನ್ನೂ ನಡೆಸಿ ಹಲವು ಪ್ರಥಮಗಳಿಗೆ ಕಾರಣರಾದ ಕೆರೆಮನೆ ಶಿವರಾಮ ಹೆಗಡೆಯವರು ಶಾಸ್ತ್ರಿಯವರಲ್ಲಿ ಸೋದರಮಾವನೆನ್ನುವ ಸಲುಗೆ. ಮಂಡಳಿಯ ಪ್ರಧಾನ ಭಾಗವತರಾಗಿ ಮೇಳವನ್ನೂ ರಂಗಸ್ಥಳದಲ್ಲಿ ಪಾತ್ರಗಳನ್ನೂ ನಿಯಂತ್ರಿಸಬಲ್ಲ ವೆಂಕಟರಮಣ ಯಾಜಿ ಭಾಗವತರು ಶಾಸ್ತ್ರಿಯವರನ್ನು ಶೈಶವದಿಂದಲೇ ಎತ್ತಿಆಡಿಸಿದ ಬಂಧು. ದುಷ್ಟಬುದ್ಧಿ, ಕಂಸ, ಗದಾಪರ್ವದ ಭೀಮ ಮುಂತಾದ ಪಾತ್ರಗಳಲ್ಲಿ ಇನ್ನಿಲ್ಲದ ಹೆಸರು ಮಾಡಿ ಮಾಧ್ಯಮದಲ್ಲಿ ಊನವಾದರೂ ಪರಿಣಾಮದಲ್ಲಿ ಗೆದ್ದ ಮೂರೂರು ದೇವರು ಹೆಗಡೆ ತಮ್ಮ ಸೋದರ ಮಾವನ ಮಂಡಳಿಯಲ್ಲಿ ಕಲಾವಿದರು. ವಾಲಿಯಂಥ ಹಲವು ಬಗೆಯ ಪಾತ್ರಗಳಲ್ಲಿ ಹೆಸರು ಮಾಡಿದ ಕೊಂಡದಕುಳಿ ಸಹೋದರರೂ ಸೋದರ ಮಾವನ ಹಾಗೆಯೇ ಬಂಧುಗಳು. ಕೆರೆಮನೆ ಮಹಾಬಲ ಹೆಗಡೆ ಗುರು ಸಮಾನರು. ಶಂಭುಹೆಗಡೆ,ಗಜಾನನ ಹೆಗಡೆ ಸಮಾನ ಮನಸ್ಕರು ಮತ್ತು ಆತ್ಮೀಯ ಸಖರು. ಒಟ್ಟಿನಲ್ಲಿ ಈ ಒಂಬತ್ತೂ ಕಲಾವಿದರು ಒಂದಲ್ಲ ಒಂದುರೀತಿಯಲ್ಲಿ ಆತ್ಮೀಯರೇ. ಇದೇ ಆತ್ಮೀಯತೆಯೇ ಇಲ್ಲಿನ ಬರವಣಿಗೆಯ ಒಳಸೂತ್ರವಾಗಿ ಚಿತ್ರಣವನ್ನು ಪರಸ್ಪರ ಹೆಣೆದಿವೆ. ಈ ನಟನಕ್ಷತ್ರಗಳು ಇಂದು ನಮ್ಮೊಂದಿಗಿಲ್ಲ. ಎಲ್ಲರೂ ಧ್ರುವನಕ್ಷತ್ರಗಳೇ!ಇವರನ್ನು ಹಾಡಿ ಹೊಗಳುವುದರಿಂದ ಲೇಖಕರಿಗಂತೂ ಯಾವ ಪ್ರಯೋಜನವೂ ಇಲ್ಲ. ಇಂಥವರಿಗೆ ಪ್ರಚಾರ ಕೊಡುವುದರಿಂದಾಗಲೀ ಮೆಚ್ಚಿಸಲಿಕ್ಕಾಗಲೀ ಟೀಕಿಸಲಿಕ್ಕಾಗಲೀ ಬರೆದು ಭೌತಿಕವಾದ ಯಾವ ಪ್ರತಿಫಲವನ್ನೂ ಪಡೆಯುವ ಬಯಕೆ ಇರಲಾರದು. ಆತ್ಮಸಂತೋಷವೊಂದೇ ಅಂತಿಮ ಗುರಿ. ಗತಿಸಿಹೋದವರ ಬಗ್ಗೆ ಸುಮ್ಮನೆ ಮತ್ತೆ ಮತ್ತೆ ಬರೆದು ಪ್ರಯೋಜನವೇನು ಎಂದು ಈಗಿನವರು ಕೇಳಲೂಬಹುದು. ಒಂದು ವಿಷಯವನ್ನು ಮನವರಿಕೆ ಮಾಡಿಕೊಳ್ಳಬಹುದು. ಈ ಒಂಬತ್ತೂ ನಟನಕ್ಷತ್ರಗಳ ಒಟ್ಟೂ ಜೀವಿತಾವಧಿ ಸುಮಾರು ಒಂದು ನೂರು ವರ್ಷ. ಈ ಅವಧಿ ಯಕ್ಷಗಾನ ರಂಗಚರಿತ್ರೆಯ ಸುವರ್ಣ ಯುಗ. ಇದೇ ಅವಧಿಯಲ್ಲಿ ಹಲವು ಬೆಳವಣಿಗೆಗಳು ಬದಲಾವಣೆಗಳೂ ಸಂಭವಿಸಿದವು. ಅನಿವಾರ್ಯವಾದ ವ್ಯವಸಾಯೀ ಸಂಘಟನೆಗಳೂ ಹುಟ್ಟಿಕೊಂಡವು. ಮೇಳದ ಮುಖ್ಯಕಲಾವಿದನೇ ಮಂಡಳಿಯ ಯಜಮಾನನೂ ಆಗುವ ಸಾಂಪ್ರದಾಯಿಕ ಪದ್ಧತಿ ದುರ್ಭರವಾಗಿ ಆ ಸ್ಥಾನದಲ್ಲಿ ಹಣ ತೊಡಗಿಸಿ ಹಣ ದುಡಿಯಬಲ್ಲ ಯಜಮಾನ ಕಾಣಿಸಿಕೊಂಡ. ಕಲಾವಿದಪರ ಸಂಘಟನೆಗಳು ಮರೆಯಾಗಿ ಯಜಮಾನಪರ ಸಂಘಟನೆಗಳು ಜಾರಿಗೆಬಂದವು. ಸಾಮಗ್ರಿಕೇಂದ್ರಿತ ವ್ಯವಸ್ಥೆಗಳು ಬಾರೀ ಬಂಡವಾಳವನ್ನು ನಿರೀಕ್ಷಿಸಿದವು. ಗಲ್ಲಾಪೆಟ್ಟಿಗೆಯ ಭರ‍್ತಿಗಾಗಿ ಅಯಕ್ಷಗಾನೀಯ ಆಕರ್ಷಣೆಗಳೂ ಅಗತ್ಯವಾದವು. ಅಭಿನಯದ ಅಂಗೋಪಾಂಗಗಳೂ ಅಸಮತೋಲನಗೊಂಡು ವಾಚಿಕಾಂಗ ವಿಜೃಂಭಿಸತೊಡಗಿತು. ಕಾಲಾಂತರದಲ್ಲಿ ಜರುಗಿದ ಹಲವುಬಗೆಯ ವಿಘಟನೆಗಳು ಶಾಸ್ತ್ರಿಯವರಿಗೂ ನೋವುಂಟುಮಾಡಿವೆ. ಯಕ್ಷಗಾನ )ರಂಗಮಾಧ್ಯಮದ ಶಕ್ತಿ ಸಾಮರ್ಥ್ಯಗಳನ್ನೂ ಅರ್ಥವಂತಿಕೆಯನ್ನೂ ವಿಸ್ತರಿಸಿದ ಇಂಥ ನಟನೇತಾರರ ನೆನಪು ಮತ್ತೆ ಅನುರಣನಗೊಂಡರೆ ಮಾತ್ರ ಈ ರಂಗಭೂಮಿಯ ಆರೋಗ್ಯಕ್ಕೆ ಪೋಷಕಾಂಶಗಳ ಮರುಪೂರಣ ಸಾಧ್ಯವಾಗಬಹುದು. ಆಗ ವಿಘಟನೆಗಳ ಹಳಹಳಿಕೆಗೆ ಔಚಿತ್ಯ ಒದಗಬಹುದು. ಶಾಸ್ತ್ರಿಯವರ ನೆನಪಿನ ಗಣಿಯಲ್ಲಿ ಮರೆಯಾಗಿಹೋದ ಕಲಾಕೋವಿದರು ಮರುಹುಟ್ಟು ಪಡೆದು ವರ್ತಮಾನ ಸಾರ್ಥಕವಾಗಬಹುದು. ಆಗ ಇಂಥ ಚಿತ್ರಣಗಳಿಗೆ ಮಾನಗೌರವಗಳು ಪ್ರಾಪ್ತಿಯಾಗಿ ಫಲಪ್ರದವಾಗುತ್ತವೆ. - ಜಿಎಸ್ ಭಟ್ಟ,ಸಾಗರ. ಡಾ.ಜಿ.ಎಸ್.ಭಟ್ಟ,ಅಕ್ಷರ,ವಿನೋಬನಗರ ಮುಖ್ಯ ರಸ್ತೆ,ಸಾಗರ.೫೭೭೪೦೧.ದೂರವಾಣಿ:೯೪೮೦೦೧೨೪೮೮.