top of page

ಕಬೀರ ಕಂಡಂತೆ... ೮೫

ಮನ ಮುಟ್ಟದ ಮಾತು ಬರಿ ವ್ಯರ್ಥ..‌ ಚತುರಾಯಿ ಕ್ಯಾ ಕೀಜಿಯೆ, ಜೊ ನಹಿ ಶಬ್ದ ಸಮಾಯ | ಕೋಟಿಕ ಗುನ ಸುವಾ ಪಡೈ, ಅಂತ ಬಲಾಯಿ ಖಾಯ || ಕಾಲಕಾಲಕ್ಕೆ ಸಾಧು, ಸತ್ಪುರುಷರು ಹಿರಿಯರು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ. ಜೀವನದ ಮಹತ್ವ ಮತ್ತು ಬದುಕಿನ ರೀತಿ, ನೀತಿಗಳ ಬಗ್ಗೆ ಅನೇಕ ಗಣ್ಯರು ಸ್ಪಷ್ಟ ರೂಪದಲ್ಲಿ ವಿವರಿಸಿ -ದ್ದಾರೆ. ಆದರೆ ಒಳ್ಳೆಯ ಗ್ರಂಥಗಳನ್ನು ಓದಿ ಅಥವಾ ಸದ್ಗುರುಗಳ ಬೋಧನೆಯನ್ನು ಕೇಳಿದ ನಂತರ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ -ಕೊಳ್ಳುವದು ಬಹಳ ಮುಖ್ಯ. ಪ್ರವಚನಕಾರರು ತಮ್ಮ ಜ್ಞಾನ, ಅನುಭವಗಳನ್ನೆಲ್ಲ ಧಾರೆಯೆರೆದು ಸಾರ್ವಜನಿಕರಿಗೆ ಬೋಧನೆ ಮಾಡುತ್ತಾರೆ. ಇದನ್ನು ಕೇಳುವಾಗ ಹೃದಯಪೂರ್ವಕ ಅನಂದಿಸಿದರೂ ಮನೆಗೆ ಹೋಗುವಷ್ಟರಲ್ಲಿ ಅವುಗಳನ್ನು ಮರೆತರೆ ಏನು ಪ್ರಯೋಜನ? ಬೋಧಪ್ರದ ಮಾತುಗಳನ್ನು ಮನಸ್ಸಿನಲ್ಲಿ ಹಿಡಿದಿಟ್ಟುಕೊಳ್ಳದೇ ಅವುಗಳನ್ನು ಮರೆತು ಮತ್ತೆ ಮೊದಲಿನಂತೆ ಬೇಜವಾಬ್ದಾರಿಯಿಂದ ವರ್ತಿಸುವದೇ ಎಲ್ಲ ಸಮಸ್ಯೆಗಳಿಗೂ ಕಾರಣ. ಸದಾ ಅನುಭವದ ನುಡಿಗಳ ಹಿಂದಿರುವ ಮೌಲ್ಯಯುತ ಭಾವನೆ ಮತ್ತು ತತ್ವಗಳನ್ನು ಅರ್ಥಮಾಡಿಕೊಂಡು ಭ್ರಮಾ ಜೀವನದಿಂದ ಹೊರಬರುವ ಅಗತ್ಯವಿದೆ. ಸಂತ ಕಬೀರರು, ಹೃದಯ ತಟ್ಟದಿರೆ, ಒಳ್ಳೆಯ ನುಡಿ ಪ್ರಯೋಜನವಿಲ್ಲ| ಸವಿನುಡಿಯ ಆಡುವ ಗಿಳಿಯನೆ, ಬೆಕ್ಕು ತಿನ್ನುವದಲ್ಲ|| ಎಂದು ವ್ಯಂಗ್ಯವಾಡಿದ್ದಾರೆ. ಸದ್ಗುರುಗಳ, ಹಿರಿಯರ ಚಿಂತನೆಗಳು ಹೃದಯವನ್ನು ತಟ್ಟದೇ ಹೋದರೆ ಅಂಥ ಮಾತುಗಳಿಂದ ಏನು ಪ್ರಯೋಜನ? ಗಿಳಿಯೊಂದು ಒಳ್ಳೆಯ ನುಡಿ ಕಲಿತರೂ ಯಾವುದೆ ಕ್ಷಣ ಅದನ್ನು ಕಳ್ಳ ಬೆಕ್ಕು ಹೊಂಚಿಹಾಕಿ ತಿನ್ನುವದಲ್ಲ! ಎಂದು ಉದ್ಗರಿಸಿದ್ದಾರೆ. ಕೆಟ್ಟ ವಿಚಾರ ಮತ್ತು ಚಂಚಲ ಮನಸ್ಸನ್ನು ಕಳ್ಳ ಬೆಕ್ಕಿಗೆ ಹೋಲಿಸಿರುವ ಕಬೀರರು, ಅದರಿಂದ ವ್ಯಕ್ತಿಯ ಮನೋದಾಢ್ಯ ಕುಂಠಿತವಾಗುವದನ್ನು ಮಾರ್ಮಿಕವಾಗಿ ಹೇಳಿದ್ದಾರೆ. ಅಲ್ಲದೆ ಒಳ್ಳೆಯ ಮಾತುಗಳನ್ನು ಮನನ ಮಾಡದ ಅಜ್ಞಾನಿಗಳು ಗಿಳಿಯಂತೆ ಸಾಯುತ್ತಾರೆ ಎನ್ನುವದು ಅವರ ಅಭಿಪ್ರಾಯ. ಇದೇ ರೀತಿ ಇಂದಿನ ಕಾಲದಲ್ಲಿ ಗಿಳಿಪಾಠಕ್ಕೆ ಮೊರೆ ಹೋಗುವ ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಢ -ರಲ್ಲದ ಕಾರಣದಿಂದ ತಮ್ಮ ಮನಸ್ಸಿಗೆ ವಿರುದ್ಧವಾಗಿ ಏನಾದರೂ ಘಟನೆ ನಡೆದರೆ ಅದರಿಂದ ನಿರಾಶರಾಗಿ ಕುಗ್ಗಬಹುದು. ಕೆಲವು ಸಲ ಆತ್ಮಹತ್ಯೆಗೂ ಪ್ರಯತ್ನ ನಡೆಸಬಹುದು. ಹಾಗಾದರೆ ಇಂಥ ಶಿಕ್ಷಣದಿಂದ ಏನು ಪ್ರಯೋಜನ? ಗುರು-ಹಿರಿಯರ ಮಾರ್ಗದರ್ಶಿ ನುಡಿ -ಗಳನ್ನು ಹೃದಯ ತಲುಪುವಂತೆ ಮಾಡಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಮಾತಾಡಿ ಕೆಡುವದಕ್ಕಿಂತ ಮಾಡಿ ಕೆಡುವದು ಲೇಸು ಮತಿ, ಅನುಭವ ಜೊತೆಗಿರೆ ಚಿಗುರೀತು ಕನಸು | ಮಾತು ಮನ ಮುಟ್ಟದಿರೆ ಆದೀತು ಬರಿ ವ್ಯರ್ಥ ಮಾತು ಮುತ್ತಾಗಲಿ - ಶ್ರೀವೆಂಕಟ || ಶ್ರೀರಂಗ ಕಟ್ಟಿ ಯಲ್ಲಾಪುರ.

ಕಬೀರ ಕಂಡಂತೆ... ೮೫
bottom of page