ಕಬೀರ ಕಂಡಂತೆ...೭೪
ಸಂವೇದನೆಯಿಲ್ಲದವ ಇದ್ದೂ ಸತ್ತಂತೆ..! ಜಾ ಘಟ ಪ್ರೇಮ ನ ಸಂಚರೆ, ಸೊ ಘಟ ಜಾನು ಮಸಾನ| ಜೈ ಸೆ ಖಾಲ ಲುಹಾರ ಕಿ, ಸಾಂಸ ಲೇತ ಬಿನ್ ಪ್ರಾಣ|| ಭಗವಂತ ಸೃಷ್ಟಿಸಿರುವ ಎಲ್ಲಾ ಜೀವಿಗಳಲ್ಲಿ ಮನುಷ್ಯ ಶ್ರೇಷ್ಠ ಎಂಬ ಮಾತಿದೆ. ಹೀಗೆ ಹೇಳಲು ಕಾರಣವೆರನೆಂದರೆ, ಪಶು, ಪಕ್ಷಿ, ಕ್ರಿಮಿ, ಕೀಟಗಳಿಗಿಂತ ಮನುಷ್ಯ ಭಾವನಾ ಜೀವಿ ಹಾಗೂ ಬುದ್ಧಿ ಜೀವಿ ಎಂಬ ವಿಶೇಷತೆ. ಮನುಷ್ಯ ತನ್ನ ಮೇಲಿನ ಪ್ರೀತಿಯ ಜೊತೆಗೆ ಇತರ ಜನರ ಜೊತೆಗೂ ಭಾವನಾತ್ಮಕ ಸಂಬಂಧ ಹೊಂದಿರುತ್ತಾನೆ. ಇತರರ ಸುಖದಲ್ಲಿ ಭಾಗಿಯಾಗಿ ಸಂಭ್ರಮಿಸುವ ಮತ್ತು ಅವರ ದುಃಖದಲ್ಲಿ ಸಂಕಟಪಡುವ ಮನೋಭಾವ ಹೊಂದಿರುವದು ವಿಶೇಷ. ಈ ರೀತಿಯ ಸ್ಪಂದನೆ ಮನುಷ್ಯ ಮಾತ್ರರಿಗೆ ಇರಬೇಕಾದುದು ಅತ್ಯಗತ್ಯ. ಇಲ್ಲದಿದ್ದರೆ ಕಲ್ಲು ಹೃದಯಿ, ಕಠಿಣ ಹೃದಯಿ ಎಂದು ಅನ್ನಿಸಿಕೊಳ್ಳುವ ಪ್ರಸಂಗ ಎದುರಾದೀತು. ಸಂವೇದನಾಶೀಲ ಗುಣಗಳು ಮನುಷ್ಯನಿಗೆ ನಿಸರ್ಗದತ್ತವಾಗಿ ಬಂದ ಬಳುವಳಿ. ಅನೇಕ ಸಲ ಪ್ರಾಣಿಗಳ ದುಃಖ ಕಂಡೂ ಸಹ ಮನುಷ್ಯ ಮರುಗುತ್ತಲೇ ಅವುಗಳಿಗೆ ಅಗತ್ಯ ಸಹಾಯ ನೀಡಲು ಮುಂದಾಗುತ್ತಾನೆ. ಆದರೆ ಸಂವೇದನೆಗಳೇ ಇಲ್ಲದ ಮನುಷ್ಯ ಇದ್ದೂ ಸತ್ತಂತೆ. ಕೇವಲ ಉಸಿರಾಡಿಕೊಂಡಿದ್ದು ಸುತ್ತಲಿನ ಜನರಿಗೆ ಸ್ಪಂದನೆ ಇಲ್ಲದ ವ್ಯಕ್ತಿಯನ್ನು ಸಮಾಜ ವಿಚಿತ್ರ ದೃಷ್ಟಿಯಿಂದ ನೋಡುತ್ತದೆ. ಈ ಹಿನ್ನೆಲೆಯಲ್ಲಿ ಕಬೀರರು, ಪ್ರೇಮಭಾವ ಇಲ್ಲದ ದೇಹ, ಮಸಣಕ್ಕೆ ಸಮವದು| ಕಮ್ಮಾರನ ತಿದಿಯಂತೆ, ಪ್ರಾಣವಿಲ್ಲದೆ ಶ್ವಾಸ ತೆಗೆವುದು|| ಎಂದು ಕಟುವಾಗಿ ಹೇಳಿದ್ದಾರೆ. ಬೆಂಕಿಯಲ್ಲಿ ಕಬ್ಬಿಣವನ್ನು ಕರಗಿಸಲು ಕಮ್ಮಾರನ ತಿದಿ ಗಾಳಿಯನ್ನು ಒಳಗೆ ಎಳೆಯುವ ಮತ್ತು ಹೊರಹಾಕುವ ಕ್ರಿಯೆಯಲ್ಲಿ ತೊಡಗಿರುತ್ತದೆ. ಅದಕ್ಕೆ ಜೀವ ಇರುವದಿಲ್ಲ. ಹಾಗಾಗಿ ಕಬೀರರು, ಭಾವನಾರಹಿತ ವ್ಯಕ್ತಿಯನ್ನು ಕಮ್ಮಾರನ ತಿದಿಗೆ ಹೋಲಿಸಿ ಕೇವಲ ಶ್ವಾಸೋಚ್ವಾಸ ಮಾಡುವವ ಇದ್ದೂ ಸತ್ತಂತೆ ಎಂದು ಅತ್ಯಂತ ಮಾರ್ಮಿಕವಾಗಿ ಹೇಳಿದ್ದಾರೆ. ಇಂದಿನ ಯಾಂತ್ರಿಕ ಯುಗದಲ್ಲಿ ಮನೆಗಳು ಒಡೆದು ಸಂಬಂಧಗಳು ಶಿಥಿಲವಾಗುತ್ತಿವೆ. ಇತರರಿಗೆ ಪ್ರೇಮ ಹಂಚದೆ ನಮಗೆ ಪ್ರೇಮ ದೊರಕುವದಾದರೂ ಹೇಗೆ? ಆ ನಂತರ ಪ್ರೇಮದ ಅಮೃತ ಸಿಂಚನವಿಲ್ಲದೆ ಬದುಕುವದಾದರೂ ಹೇಗೆ? ಹಾಗಾಗಿ ಪ್ರೀತಿ, ಪ್ರೇಮದ ಭಾವನೆಗಳನ್ನು ಆದಷ್ಟು ಎದೆಯ ಗೂಡಿನೊಳಗೆ ಕಾಪಿಟ್ಟುಕೊಂಡು, ಸಂವೇದನಾ -ಶೀಲರಾಗಿ ಬದುಕು ನಡೆಸುವದೇ ಜೀವನದ ಪರಮ ಗುರಿಯಾಗಬೇಕಿದೆ. ಆಂತರ್ಯ ನೋಡುವ ಕಣ್ಞು ಕುರುಡಾದರೆ ಅಂತರ್ದನಿ ಆಲಿಸುವ ಕಿವಿಗಳೆ ಕಿವುಡಾದರೆ| ಅಂತರಂಗದ ನಿನಾದ ಮನ ಕವಾಟ ತಟ್ಟದಿರೆ ಆತ್ಮವದು ಸತ್ತಂತೆ - ಶ್ರೀವೆಂಕಟ|| ಶ್ರೀರಂಗ ಕಟ್ಟಿ ಯಲ್ಲಾಪುರ.