top of page

ಕಬೀರ ಕಂಡಂತೆ.. ೮೨

ಹದಗೊಂಡ ಮನಸ್ಸು ಮುಕ್ತಿಗೆ ಸಹಕಾರಿ... ಸಾಂಸ ಸಾಂಸ ಪರ ನಾಮ ಲೆ, ವೃಥಾ ಸಾಂಸ ಮತಿ ಖೋಯ| ನ ಜಾನೆ ಇಸ ಸಾಂಸಕಾ, ಆವನ ಹೋಯ ನಹೋಯ|| ಜೀವನ ಎಂಬುದು ಅನಿಶ್ಚಿತತೆಯ ಆಗರ. ಅದು ಯಾವಾಗ, ಎಲ್ಲಿ ಮುಕ್ತಾಯವಾದೀತು ಬಲ್ಲವರಾರು!? ವ್ಯಕ್ತಿಯೊಬ್ಬನ ಸಾವಿಗೆ ಕಾರಣವನ್ನು ಮೊದಲೇ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ‌ ಆದರೆ ಜಗತ್ತು ಅನಿಶ್ಚಿತ ಎಂದ ಮಾತ್ರಕ್ಕೆ ನಿರಾಸೆಗೊಂಡು ಸುಮ್ಮನೆ ಕಾಲ ಕಳೆಯಬೇಕು ಎಂದು ಅರ್ಥವಲ್ಲ. ಜೀವಂತ ಇರಬೇಕಾದರೆ, ಮಾಡಬೇಕಾದ ಸತ್ಕಾರ್ಯ -ಗಳನ್ನು ಬೇಗಬೇಗನೆ ಪೂರೈಸಲೇಬೇಕು.‌ ಅಲ್ಲದೇ ವೇಳೆಗೆ ಸರಿಯಾಗಿ ಕೆಲಸ ಮಾಡುವ ಸಾಮರ್ಥ್ಯ -ವನ್ನು ಸಹ ಮೈಗೂಡಿಸಿಕೊಳ್ಳಬೇಕು. ಈ ಕಾರ್ಯವನ್ನು ಅತ್ಯಂತ ವಿವೇಚನೆ, ಶೃದ್ಧೆ, ಬದ್ಧತೆ -ಗಳಿಂದ ಮಾಡಬೇಕಾದುದು ಅಷ್ಟೇ ಮಹತ್ವದ್ದು.‌ ಭಗವದ್ ಭಕ್ತಿ, ಸಾಧನೆ ಮುಂತಾದವುಗಳು ಇತರೆ ಎಲ್ಲ ಕೆಲಸಗಳಿಗಿಂತ ತೀರ ಮುಖ್ಯವಾದವುಗಳು. ಜೀವನ ಕಾಲದ ಪ್ರತಿಯೊಂದು ಕ್ಷಣ, ಪ್ರತಿಯೊಂದು ಗಳಿಗೆಯೂ ಮಹತ್ವವಾಗಿರುವದರಿಂದ ಸಮಯ -ವನ್ನು ಸುಮ್ಮನೆ ವ್ಯರ್ಥಗೊಳಿಸದೆ ಸದಾ ಕರ್ಮದಲ್ಲಿ ತೊಡಗಿರಬೇಕಾದುದು ಬಹಳ ಮುಖ್ಯ. "ಕಳೆದು ಹೋದ ಸಮಯ ಮತ್ತೆ ಮರಳಿ ಬಾರದು" ಎಂಬ ಸತ್ಯವನ್ನು ಸದಾ ಕಾಲ ಅರಿತು ನಡೆಯುತ್ತಿರಬೇಕು. ಈ ಹಿನ್ನೆಲೆಯಲ್ಲಿ ಸಂತ ಕಬೀರರು, ಕ್ಷಣಿಕವಾದ ಬದುಕಿನಲ್ಲಿ ಸಮಯದ ಮಹತ್ವವನ್ನು ವಿವರಿಸಿದ್ದಾರೆ. ಉಸಿರು ಉಸಿರಿಗೂ ನಾಮಸ್ಮರಣೆ -ಯಿರಲಿ, ಶ್ವಾಸ ವ್ಯರ್ಥಮಾಡದಿರು| ಶ್ವಾಸೋಚ್ಛಾಸದ ಬಗ್ಗೆ ತಿಳಿದವರಾರು, ಮತ್ತೆ ಬಂದೀತೆಂದು ಹೇಳದಿರು || ಎಂದು ಹೇಳುವದರ ಮೂಲಕ ಸಮಯದ ಸದುಪಯೋಗ ಮಾಡುವ ವಿಚಾರದ ಮೇಲೆ ಬೆಳಕು ಚೆಲ್ಲಿದ್ದಾರೆ. ಪ್ರತಿಯೊಂದು ಕ್ಷಣ ಭಗವಂತನ ನಾಮ ಸ್ಮರಣೆಯಿಂದ ತುಂಬಿರಲಿ, ಸಚ್ಚಿಂತನೆಗಳು ಸದಾ ಮನಸ್ಅನ್ನು ಆವರಿಸಲಿ ಎಂಬುದೇ ಈ ದೋಹೆಯ ಹಿಂದಿರುವ ಆಶಯ. ನಮ್ಮ ಪಾಲಿನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡುವದೂ ಸಹ ದೈವ ಭಕ್ತಿಗೆ ಸಮನಾದೀತು! ಕೇವಲ ಬಾಯಲ್ಲಿ ಮಂತ್ರ ಹೇಳುವದು ಭಕ್ತಿ ಎನಿಸಲಾರದು. ಮನಸ್ಸಿನಲ್ಲಿ ದೈವ ಭಕ್ತಿಯನ್ನು ತುಂಬಿಕೊಂಡು, ಸತ್ಜರ್ಮಗಳ ಬಗ್ಗೆ ಚಿಂತಿಸುವದೇ ಮನುಷ್ಯನ ಮುಖ್ಯ ಗುರಿಯಾಗಿರಬೇಕು.‌ತಂದೆ,, ತಾಯಿ, ಗುರು, ಹಿರಿಯರು, ಬಂಧು-ಮಿತ್ರರು ಮೊದಲಾದವರ ಋಣ ತೀರಿಸುವದು ಸಹ ಬದುಕಿನ ಒಂದು ಮಹತ್ವದ ಭಾಗವೇ ಆಗಿದೆ. ಬದುಕಿರುವಷ್ಟು ಹೊತ್ತು ಇತರರಿಗೆ ಕೃತಜ್ಞತೆ ಸಲ್ಲಿಸುವ, ಸಾಧ್ಯವಾದ ಮಟ್ಟಿಗೆ ಪ್ರೀತಿ ಹಂಚುವ ಕಾರ್ಯ ಮಾಡುತ್ತ, ಸದಾ ಎಲ್ಲರೊಂದಿಗೆ ಸವಿ ಮಾತಗಳನ್ನಾಡುತ್ತ, ನಗುನಗುತ್ತ ಈ ಲೋಕದಿಂದ ತೆರಳುವದರಲ್ಲಿಯೇ ಬಾಳ ಸಾರ್ಥಕ್ಯ ಅಡಗಿದೆ. ಹದಗೊಳ್ಳದ ಬದುಕು ಮಡಕೆ ಎಂತಾದೀತು? ಹದವಾದ ಭೂಮಿಯಲಿ ಬೀಜ ಮೊಳೆತೀತು| ಹದಗೊಂಡ ಮನವದುವೆ ಮುಕ್ತಿಗೆ ಸಹಕಾರಿ ಕದವ ತೆರೆ ಭಕ್ತಿಗೆ - ಶ್ರೀವೆಂಕಟ || ಶ್ರೀರಂಗ ಕಟ್ಟಿ ಯಲ್ಲಾಪುರ. #################

ಕಬೀರ ಕಂಡಂತೆ.. ೮೨
bottom of page