top of page

ಕಬೀರ ಕಂಡಂತೆ..೧೬

ಕಬಆಲಸ್ಯ ಬಿಟ್ಟು ನಡೆಯುವದೇ ಬದುಕು..!


ಮಾರ್ಗ ಚಲತೆ ಜೋ ಗಿರೆ, ತಾಕೊ ನಹೀ ದೋಷ/
ಯಹ ಕಬೀರ ಬೈಠಾ ರಹೇ, ತೋ ಸಿರ ಕರಡೆ ಕೋಶ//
ನಡೆವಾಗ ಬಿದ್ದೊಡೆ, ನಡೆದವನಿಗಿಲ್ಲ ದೋಷ/
ಜಡವಾಗಿ ಕುಳಿತವನ ತಲೆ ಬರಿ ಕಸದ ಕೋಶ//


"Idle mind is devil's workshop." "ಆಲಸಿಯ ತಲೆ ಸೈತಾನನ ಒಲೆ" ಎಂಬ ಮಾತು ಆಲಸ್ಯದಿಂದ ನಿಷ್ಕ್ರಿಯರಾಗಿ ಕುಳಿತರೆ ಬದುಕು ವ್ಯರ್ಥ ಎಂಬ ಸಂದೇಶ ನೀಡುತ್ತದೆ. ಬದುಕು ಇರುವದೇ ಸಾಧನೆಯ ಪಥದಲ್ಲಿ ನಡೆಯಲು ಎಂಬುದನ್ನು ಅರಿತು ನಡೆದವ ತನ್ನ ಮಾರ್ಗದಲ್ಲಿ ಎದುರಾಗುವ ಅಡೆ ತಡೆಗಳನ್ನು ಸಮರ್ಥವಾಗಿ ಎದುರಿಸುತ್ತಾನೆ. ಎಲ್ಲವನ್ನೂ ಎದುರಿಸಿ ಗಮ್ಯದತ್ತ ಮುನ್ನಡೆಯುವ ಮನುಷ್ಯ ಮಾತ್ರ ಸಾಧಕನಾಗಿ ಹೊರಹೊಮ್ಮುತ್ತಾನೆ. ಪ್ರಯತ್ನ ಮಾಡುವಾಗ ಸೋತರೆ ಏನು ಗತಿ? ಎಂಬ ಅಳುಕಿನಲ್ಲಿ ನಡೆಯದೇ ಹಾಗೆಯೇ ಇರುವ ನಿಷ್ಕ್ರಿಯತೆ ಖಂಡಿತ ಸಲ್ಲ. "ನಡೆದವರೆಡಹದೆ ಕುಳಿತವರೆಡಹುವರೆ?" ಎಂಬ ಪ್ರಾಜ್ಞರ ಮಾತಿನಂತೆ ಕುಳಿತು ಕಾಲಹರಣ ಮಾಡುವವರಿಗಿಂತ ನಡೆದು ಎಡವಿ ಮತ್ತೆ ಮುಂದೆ ನಡೆಯುವವರು ಸಾವಿರ ಪಾಲು ಉತ್ತಮರು.


ಪಾಲಕರ ಪ್ರೋತ್ಸಾಹದಿಂದ ನಡೆಯಲು ಆರಂಭಿಸುವ ಮಗು ಬೀಳುತ್ತ ಏಳುತ್ತ ನಡೆಯಲು ಕಲಿಯುತ್ತದೆ. ಆದರೆ ಮಗುವಿಗೆ ಪೆಟ್ಟಾಗುತ್ತದೆ ಎಂದು ಕುಳಿತರೆ ಮಗು ನಡೆಯುವದಾದರೂ ಹೇಗೆ? ನಾವೆ ಸಮುದ್ರಯಾನ ಮಾಡಿದರೆ ಮುಳುಗೀತು ಎಂಬ ಭಯ ಬೇಡ. ಯಾಕೆಂದರೆ ನಾವೆ ಜನ್ಮ ತಾಳಿದ್ದೇ ನೀರಿನಲ್ಲಿ ಯಾನ ಮಾಡುವ ಉದ್ದೇಶದಿಂದ. ಹಾಗಾಗಿ ಸಂಕಷ್ಟಗಳಿಗೆ ಹೆದರಿ ನಾವೆಯನ್ನು ದಡದಲ್ಲಿಯೇ ಕಟ್ಟಿ ಹಾಕಿದರೆ ಅದು ಕಸವಲ್ಲದೇ ಮತ್ತೇನು?ಹಾಗೆಯೇ ನಡೆಯುವವರ ಬಗ್ಗೆ ಟೀಕೆ ಮಾಡುತ್ತ ಕೂಡ್ರದೇ ಸ್ವತಃ ನಡೆಯಲು ಆರಂಭಿಸುವವ ಖಂಡಿತ ಯಶಸ್ಸು ಕಾಣುತ್ತಾನೆ. " ಕುಳಿತು ಆಕಳಿಸುವವನಿಗಿಲ್ಲ, ಇಳಿದು ಈಜುವ ವನಿಗೆ ತೆರೆದಿದೆ ಬದುಕು" ಎಂಬ ನುಡಿಗಳು ಕರ್ಮ ಮಾರ್ಗದತ್ತ ಪ್ರೇರೇಪಿಸುತ್ತವೆ.


"Rolling stone gathers no mass" 'ಉರುಳುವ ಕಲ್ಲಿಗೆ ಹಾವಸೆ ಹಿಡಿಯದು' ಎಂಬ ಅನುಭವದ ನುಡಿಯಂತೆ .ಮನುಷ್ಯ ನಿರಂತರ ಪ್ರಯತ್ನಶೀಲನಾಗಿದ್ದರೆ, ಇಲ್ಲಸಲ್ಲದ ವಿಚಾರಗಳು ಅವನ ಬಳಿ ಸುಳಿಯಲಾರವು. ಈ ಹಿನ್ನೆಲೆಯಲ್ಲಿ ಸಂತ ಕಬೀರರು, ನಿಷ್ಕ್ರಿಯರಾಗಿ ಕುಳಿತರೆ ತಲೆ ಕಸದ ಕೋಶವಾದೀತು! ಎಂದು ಎಚ್ಚರಿಸಿದ್ದಾರೆ. ನಡೆಯುವಾಗ ತಪ್ಪಾದೀತು ಎಂಬ ಭಯದಿಂದ ನಡೆಯದೇ ಹೋದರೆ ಅದಕ್ಕಿಂತ ದೊಡ್ಡ ತಪ್ಪು ಬೇರೊಂದಿಲ್ಲ. ತಪ್ಪುಗಳನ್ನು ಸರಿಪಡಿಸುತ್ತ ಪರಿಪೂರ್ಣತೆಯ ಕಡೆಗೆ ಸಾಗುವದೇ ಬದುಕು.


ನಡೆ, ನಡೆದಷ್ಟು ದಾರಿಯಿದೆ..
ಮನದಲ್ಲಿ ಮನೆ ಮಾಡಲಿ ತೀರದ ದಾಹ,
ನಡೆದರೆ ಗುರಿ ಬರುವದು ನಿನ್ನೆಡೆಗೆ
ನಡೆಯದಿರೆ ಗುರಿ ನಿನ್ನಿಂದ ಹೊರಟೀತು ದೂರ..
ಎದೆ ತುಂಬಲಿ ಗುರಿ ಸೇರುವ ತವಕ
ಮನದ ಹಕ್ಕಿಗೆ ರೆಕ್ಕೆ ಮೂಡಲಿ
ಗುರಿ ಸೇರುವ ತನಕ..!


ಬಳಸದ ಲೋಹಕ್ಕೆ ತುಕ್ಕು ಹಿಡಿಯುವದು
ಜಲ ಹರಿಯದಿರೆ ದುರ್ನಾತ ಬೀರುವದು/
ಆಲಸ್ಯ, ಅನುದ್ಯೋಗ ಕ್ಷೋಭೆ ತಂದೀತು
ಇಳಿದು ಈಜುವದೆ ಬದುಕು - ಶ್ರೀವೆಂಕಟ//


ಶ್ರೀರಂಗ ಕಟ್ಟಿ ಯಲ್ಲಾಪುರ.

ಕಬೀರ ಕಂಡಂತೆ..೧೬
bottom of page