top of page

ಕಬೀರ ಕಂಡಂತೆ..೧

ಅಭೇದದ ದೇವರಲ್ಲಿ ಭೇದವೇತಕೆ..!? ಕಾಬಾ ಫಿರ ಕಾಸಿ ಭಯಾ, ರಾಮ ಭಯಾ ರಹೀಮ/ ಮೋಟ ಚೂನ ಮೈದಾ ಭಯಾ, ಬೈಠಿ ಕಬೀರಾ ಜಿಮ// ಧರ್ಮವೆಂಬುದು ಮೋಕ್ಷಕ್ಕೆ ಸಾಧನವಾಗಿದ್ದು, ಇದಕ್ಕಾಗಿ ಅನೇಕ ಮಾರ್ಗಗಳು ತೆರೆಯಲ್ಪಟ್ಟಿವೆ. ಎಲ್ಲ ಧರ್ಮಗಳ ಮೂಲ ಆಶಯ ಶಾಂತಿ, ಪ್ರೇಮ, ಸಹಬಾಳ್ವೆಯೇ ಹೊರತು ಹಿಂಸೆಯನ್ನು ಬೋಧಿಸುವ ಯಾವುದೇ ಪ್ರಕ್ರಿಯೆ ಅಧರ್ಮ ಎನಿಸುತ್ತದೆ. ಧರ್ಮದ ಆಚಾರ ಸಂಹಿತೆಗಳು ಮೇಲ್ನೋಟಕ್ಕೆ ಬೇರೆ ಬೇರೆಯಾಗಿದ್ದರೂ ಅವುಗಳ ಉದ್ದೇಶ ಮಾತ್ರ ಒಂದೇ; ಅದುವೆ ಮಾನವ ಕಲ್ಯಾಣ. ಸಾರ್ಥಕ ಬದುಕು ನಡೆಸಲು ಮತ್ತು ಅಂತಿಮ ವಾಗಿ ಮೋಕ್ಷ ಪ್ರಾಪ್ತಿಯ ಉದ್ದೇಶಕ್ಕಾಗಿ ವಿವಿಧ ಆಚರಣೆಗಳು ರೂಢಿಯಲ್ಲಿವೆ. ಆದರೆ ಜನರು ಇವುಗಳ ಮೂಲ ಉದ್ದೇಶವನ್ನೇ ಮರೆತು, 'ತಮ್ಮ ಧರ್ಮ ಮಾತ್ರ ಶ್ರೇಷ್ಠ' ಎಂಬ ಅಹಂಕಾರ ಮತ್ತು ಭ್ರಮೆಯಲ್ಲಿ ಮುಳುಗಿದ್ದು ಧರ್ಮದ ಹೆಸರಿನಲ್ಲಿ ಸಂಘರ್ಷ, ಹಿಂಸೆ, ಅಧರ್ಮ ತಲೆಯೆತ್ತುತ್ತಲಿವೆ. ಚಿಕ್ಕವರಿರುವಾಗ ಕೈಕೈ ಹಿಡಿದು ನಲಿದಾಡಿದವರೇ ಇಂದು ಧರ್ಮದ ಹೆಸರಿನಲ್ಲಿ ಕೈಕೈ ಮಿಲಾಯಿಸುತ ತ್ತಿರುವದು ವಿಪರ್ಯಾಸದ ಸಂಗತಿ. ಈ ಹಿನ್ನೆಲೆಯಲ್ಲಿ, ಸಂತ ಕಬೀರನ, 'ಮನದಲ್ಲಿನ ಸಂಕುಚಿತ ಭಾವನೆಗಳನ್ನು ತೊಡೆದು ಹಾಕಿದರೆ ಕಾಶಿ-ಕಾಬಾ, ರಾಮ-ರಹೀಮರ ಮಧ್ಯೆ ಯಾವುದೇ ಭೇದಭಾವ ಮೂಡಲು ಸಾಧ್ಯವಿಲ್ಲ' ಎಂಬ ನುಡಿಗಳು ಪ್ರಸ್ತುತವಾಗಿವೆ. ಮೇಲ್ನೋಟಕ್ಕೆ ನುಚ್ಚು ಮತ್ತು ಹಿಟ್ಟು ಬೇರೆ ಬೇರೆಯಾಗಿ ಕಂಡರೂ ಇವೆರಡರ ಮೂಲವಸ್ತು ಒಂದೇ ಎಂಬುದನ್ನು ಮರೆಯಬಾರದು ಎಂದಿದ್ದಾನೆ. ವಾಸ್ತವವಾಗಿ ಮಕ್ಕಾ ಮತ್ತು ಕಾಶಿಗಳಲ್ಲಿ ಭೇದವೇಯಿಲ್ಲ. ರಾಮ ಮತ್ತು ರಹೀಮ ಎರಡೂ ಒಂದೇ ತತ್ವಗಳು ಎಂದಿರುವ ಕಬೀರ, ಎಲ್ಲವೂ ಬ್ರಹ್ಮ ತತ್ವವೇ ಆಗಿರುವಾಗ ನಿಮಗೇಕೆ ಈ ಭೇದದ ಪರಿ? ಎಂದು ಪ್ರಶ್ನಿಸುತ್ತಾನೆ. " ದೇವರು ಮೂಲಸ್ಥಾನದಲ್ಲಿ ಏಕಾಕಾರಗೊಂಡು ಅಭೇದವಾಗುತ್ತ ಒಂದಾಗು ವಾಗ, ನೀನು ಈ ಅಭೇದದ ಹಿಟ್ಟಿನ ಸುಗ್ರಾಸ ಭೋಜನ ಮಾಡು" ಎಂಬ ಕಬೀರನ ಮಾತುಗಳು ಅತ್ಯಂತ ಮಾರ್ಮಿಕ. ನೀರು ಮತ್ತು ನೀರಿನಲ್ಲಿ ತೇಲುವ ಮಂಜುಗಡ್ಡೆ ನೋಡಲು ಬೇರೆಬೇರೆ ಯಾಗಿ ಕಂಡರೂ ಮಂಜುಗಡ್ಡೆಯ ಮೂಲ ನೀರೆ ಆಗಿರುವದಲ್ಲದೇ ಅಂತಿಮವಾಗಿ ಅದು ಕರಗಿ ನೀರಾಗುವಂತೆ ದೇವರಲ್ಲಿ ಭೇದ ಬೇಡ ಎಂಬ ಕಬೀರನ ತತ್ವ ಪ್ರಸ್ತುತ ಸನ್ನಿವೇಶದಲ್ಲಿ ಹೆಚ್ಚು ಚಿಂತನಾರ್ಹವಾಗಿದೆ. ಸಂತ ಕಬೀರ ಎಲ್ಲ ಧರ್ಮಗಳ ಆಂತರ್ಯವನ್ನು ತಿಳಿದವನಾದ್ದರಿಂದ ಅವನಿಗೆ ಧರ್ಮಗಳ ಮಧ್ಯೆ, ದೇವರ ಮಧ್ಯೆ ಭೇದವೇ ಗೋಚರಿಸಲಿಲ್ಲ. ತಾನು ನಂಬಿದ ಈ ತತ್ವವನ್ನು ಬೋಧಿಸಿ ಜನಜಾಗೃತಿ ಮಾಡಲು ಆತ ತನ್ನ ಆಯುಷ್ಯವನ್ನೇ ಮುಡಿಪಾಗಿಟ್ಟಿದ್ದ. "ಆಕಾಶಾತ್ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ, ಸರ್ವದೇವ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ" ಎನ್ನುವಂತೆ ಆಕಾಶದಿಂದ ಬೀಳುವ ಪ್ರತಿ ಹನಿಯೂ ಕೊನೆಯಲ್ಲಿ ಸಾಗರವನ್ನೇ ಸೇರುವಂತೆ ದೇವರು, ಧರ್ಮ ಎಂಬ ವಿಷಯಗಳಲ್ಲಿ ಅನಗತ್ಯ ಗೊಂದಲ ಸೃಷ್ಟಿಸದೇ ಧರ್ಮದ ನಿಜಾರ್ಥವನ್ನು ತಿಳಿದು ನಡೆಯುವದರಲ್ಲಿ ಮಾನವ ಜನ್ಮದ ಶ್ರೇಯಸ್ಸು ಅಡಗಿದೆ. ಧರ್ಮಮಾರ್ಗ ಬದುಕ ಯಶಕೆ ಕಾರಣ ಮರ್ಮದಿ ನಡೆದರೆ ಶಾಂತಿಯ ಹೂರಣ/ ಕರ್ಮಕ್ಕೆ ತಪ್ಪಿದೊಡೆ ಜೀವಂತ ಮರಣ ಧರ್ಮಾಧರ್ಮ ವಿವೇಚಿಸು- ಶ್ರೀವೆಂಕಟ// -ಶ್ರೀರಂಗ ಕಟ್ಟಿ ಯಲ್ಲಾಪುರ. ಉತ್ಸಾಹ ಮತ್ತು ಕ್ರಿಯಾಶೀಲತೆಗೆ ಇನ್ನೊಂದು ಹೆಸರು ಎನ್ನವ ಹಾಗೆ ನಿವೃತ್ತಿಯ ದಿನಗಳಲ್ಲು ಪೃರ್ವತ್ತರಾಗಿರುವವರು ಶ್ರೀರಂಗ ಕಟ್ಟಿಯವರು.೩೮ ವರ್ಷಗಳ ಕಾಲ ಯಲ್ಲಾಪುರದ ವೈಟಿಎಸ್ಎಸ್  ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕ ಮತ್ತು ಪ್ರಾಚಾರ್ಯರಾಗಿ ಸೇವೆಸಲ್ಲಿಸಿ  ಸಾವಿರಾರು ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿರುವ  ಶ್ರೀರಂಗ ವೆಂಕಟರಾವ್ ಕಟ್ಟಿಯವರು ನಿವೃತ್ತರಾದರೂ ತಮ್ಮ ಕರ್ತತ್ವಶಕ್ತಿಯ ಬಲದಿಂದ ಸಮಾಜದ ಏಳ್ಗೆಗಾಗಿ ಸದಾ ತುಡಿಯುವ, ದುಡಿಯುವ ಹಂಬಲ ಹೊಂದಿದವರು‌. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಇವರು ಪತ್ರಿಕೋದ್ಯಮದಲ್ಲಿ ತಮ್ಮ ಸಮಾಜಮುಖಿ ಬರಹಗಳಿಂದ ಎರಡು ಬಾರಿ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದವರು. ಕಳೆದ ಹಲವಾರು ವರ್ಷಗಳಿಂದ ವಿವಿಧ ಪತ್ರಿಕೆಗಳ ಅಂಕಣಕಾರ ರಾಗಿ ಇವರ ಚಿಂತನ ಬರಹಗಳು ಪ್ರಕಟಗೊಂಡು ಜನ ಮೆಚ್ಚುಗೆ ಗಳಿಸಿವೆ.ಇದೀಗ ಶ್ರೀರಂಗ ಕಟ್ಟಿಯವರು, ಸದ್ವಿಚಾರ, ಸತ್ ಚಿಂತನೆ ಮತ್ತು ಬದುಕಿಗೆ ಅಗತ್ಯವಾದ ಅನುಭವದ ನುಡಿಗಳನ್ನು ನಾಡಿನ ಜನತೆಗೆ ತಲುಪಿಸಲು, ಯೂಟ್ಯೂಬ್ ಚಾನೆಲ್  ತೆರೆದಿದ್ದು ಅದರಲ್ಲಿ ಪಾಕ್ಷಿಕವಾಗಿ "ಬದುಕು ಜಟಕಾಬಂಡಿ" ಚಿಂತನ ಮಾಲಿಕೆಯ ವಿಡೀಯೊಗಳು  ಪ್ರಸಾರವಾಗುತ್ತಿವೆ.ಅವರ ಚಿಂತನಗಳು ನಿಮ್ಮ ಓದಿಗಾಗಿ.  ಸಂಪಾದಕರು

ಕಬೀರ ಕಂಡಂತೆ..೧
bottom of page