top of page

ಕನಸು ಕಾಣುವ ರಂಗವಲ್ಲಿಗೆ ಧೈರ್‍ಯ ತುಂಬಿ

ಪುಸ್ತಕ - ಅಂಜುಬುರುಕಿಯ ರಂಗವಲ್ಲಿ ಕವಿ - ಮಂಜುನಾಥ ನಾಯ್ಕ ಯಲ್ವಡಿಕವೂರ ಬೆಲೆ - ೧೦೦/- ಪ್ರಕಾಶನ - ಅದಿತಿ ಪ್ರಕಾಶನ ಶಿರೂರು ಕನಸು ಮಾರುವ ಹುಡುಗ ಮುಂದೆ ಮುಂದೆ ಕನಸು ಕಾಣುವ ನಾನವನ ಹಿಂದೆ ಹಿಂದೆ ಎನ್ನುತ್ತಲೇ ಕಾವ್ಯ ಲೋಕದೊಳಗೆ ಪಾದಾರ್ಪಣ ಮಾಡಿರುವ ಕವಿ ಮಂಜುನಾಥ ನಾಯ್ಕ ಯಲ್ವಡಿಕವೂರು ಪೋಲೀಸರೆಂದರೆ ಅಚ್ಚರಿಯಾಗುತ್ತದೆ. ದರ್ಪದ, ಸಿಡುಕಿನ ಖಾಕಿಯೊಳಗೂ ಕನಸು ಕಾಣುವ ಒಂದು ಹೃದಯವಿದೆ ಎಂಬುದೇ ಈ ಅಚ್ಚರಿಗೆ ಕಾರಣ. ಆದರೆ ಪೋಲೀಸ್ ಇಲಾಖೆಯಲ್ಲಿದ್ದೂ ಮನುಟ್ಟುವಂತೆ ಬರೆಯುವ ಗೆಳತಿ ರೇಣುಕಾ  ಹೆಳವರ್ ಈ ಮಾತನ್ನು ಸುಳ್ಳಾಗಿಸಿದ್ದನ್ನು ಕಂಡಿದ್ದೇನೆ. ತನ್ನ ಪ್ರೀತಿಯಿಂದಲೇ ಈ ಅಕ್ಕನನ್ನು ಕಟ್ಟಿ ಹಾಕುವ ಸೋಮು ರೆಡ್ಡಿಯ ಕಾದಂಬರಿಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ಒಳಗೊಳ್ಳುವುದನ್ನು ಗಮನಿಸಿದ್ದೇನೆ. ಧಾರವಾಡದ ಲೋಕಾಯುಕ್ತ ಎಸ್ ಪಿ ಶ್ರೀ ಶಿವಕುಮಾರ ದಂಡಿನ ಕೂಡ ಉತ್ತಮ ಕಾವ್ಯ ರಚಿಸಿ ಪೋಲೀಸರೊಳಗಿರುವ ಭಾವನೆಗಳ ಮೆರವಣಿಗೆಯನ್ನು ಪರಿಚಯಿಸಿದ್ದಾರೆ. ಹಿಂದೆಲ್ಲ ವಿಜಯ ಸಾಸನೂರರಿಂದ ಹಿಡಿದು ಅನೇಕ ಪೋಲೀಸ್ ಅಧಿಕಾರಿಗಳು ಸಾಹಿತ್ಯ ಕ್ಷೇತ್ರದಲ್ಲೂ ಹೆಸರು ಮಾಡಿರುವುದು ಗೊತ್ತು. ನಮ್ಮ ಜಿಲ್ಲೆಯ ಪೋಲೀಸರೇಕೆ ಬರೆಯುತ್ತಿಲ್ಲ ಎನ್ನುವ ಕೊರತೆ ಹಾಗೂ ಪ್ರಶ್ನೆಗೆ ಉತ್ತರವಾಗಿ ಮಂಜುನಾಥ ನಾಯ್ಕ ನಾನಿದ್ದೇನೆ ಎಂದು ಮುಂದೆ ಬಂದಿದ್ದಾರೆ. ಹಾಗೆಂದು ಖಾಕಿಯೊಳಗಿನ ಕವಿ ಹೃದಯವನ್ನು ಪ್ರತ್ಯೇಕವಾಗಿ ನೋಡಬೇಕಾಗಿಲ್ಲ. ಸಮಾಜದ ಉಳಿದ ಕವಿಗಳಿಗಿಂತ ಅವರೂ ಭಿನ್ನವೇನಲ್ಲ ಎನ್ನುವ ನಂಬಿಕೆ ನಮಗಿದ್ದರೆ ಸಾಕು. ಯಾಕೆಂದರೆ ಮೇಲೆ ನಾನು ಹೆಸರಿಸಿದ ಹಾಗೂ ನಾನು ಹೆಸರಿದೇ ಇರುವ ಅನೇಕ ಫೋಲೀಸ್ ಇಲಾಖೆಯಲ್ಲಿರುವ ಕವಿತೆಗಳಲ್ಲಿರುವ ಮಾನವೀಯತೆಯ ತುಡಿತ ನನ್ನನ್ನು ತಾಗಿದೆ. ಶಿವಕುಮಾರ ದಂಡಿನರವರು ತಮ್ಮ ಇಲಾಖೆಯಲ್ಲಿರುವ ಕವಯತ್ರಿಯರ ಕವನಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಅದನ್ನು ಓದಿದಾಗ ಉದ್ಯೋಗದ ನಿಮಿತ್ತವಾಗಿ ಅನಿವಾರ್‍ಯವಾಗಿ ಗಂಟು ಮುಖ ಹಾಕಿಕೊಂಡು, ಒರಟು ಮಾತನಾಡುವ ಪೋಲೀಸರ ಹೃದಯದ ಭಾವನೆಗಳು ಸಾಮಾನ್ಯರಿಗಿಂತ ಭಿನ್ನವೇನಲ್ಲ ಎಂಬುದು ಅರಿವಾಗುತ್ತದೆ. ಬೆಟ್ಟ ಹತ್ತುವುದೆಂದರೆ ಸಾಲದು ಕಾಲುಗಳೆರಡಿದ್ದರೆ ನಿಲುವಿರಬೇಕು ಅಚಲವಾದದ್ದೊಂದು ಎನ್ನುವ ಸಾಲುಗಳು ನಮಗೆ ಕವಿ ತಾನು ಕವಿಯಾಗಲು ಹೊರಟ ದಿನಗಳ ನೋವನ್ನು ತಿಳಿಸಿಕೊಡುತ್ತದೆ. ನಾವು ಏನನ್ನಾದರೂ ಸಾಧಿಸಬಹುದು ಎಂದು ಬರಿ ಬಾಯಿ ಮಾತಿನಲ್ಲಿ ಹೇಳಿಕೊಂಡರೆ ಸಾಲದು, ಅದಕ್ಕೆ ದೃಢವಾದ ಮನಸ್ಸಿರಬೇಕು. ಈಗೊಂದು ಕ್ಷಣ ಮಾಡುವ ಕೆಲಸ ಎಷ್ಟೇ ಕಷ್ಟದಿದ್ದರೂ ಮಾಡಿ ಮುಗಿಸುವ ಛಲ ನಮ್ಮನ್ನು ಬೆಳೆಸುತ್ತದೆ ಎಂದು ಕವಿ ಇಲ್ಲಿ ಮಾರ್ಮಿಕವಾಗಿ ಹೇಳುತ್ತಾರೆ. ಒಡಲ ಬೆಂಕಿಯ ಮುಂದೆ ಚಳಿ ಕಾಯಿಸುವವರೆ ಎಲ್ಲ ನಾವು ಅದೆಷ್ಟು ಸೂಕ್ಷ್ಮ ಎಂದರೆ ನಮ್ಮ ಒಡಲ ಬೆಂಕಿಯಲ್ಲೇ ಎಲ್ಲವನೂ ಮಾಡಿ ಮುಗಿಸಬಲ್ಲ ಛಾತಿಯಿದ್ದರೂ ಬೆನ್ನ ತಟ್ಟುವುದಕ್ಕೆ ಇನ್ನೊಬ್ಬರು ಇರಲಿ ಎಂದು ಬಯಸುತ್ತೇವೆ. ಅವರಿಗೂ ಅವರದ್ದೇ ಆದ ಮನೆ ಮತ್ತು ಹಾಗೂ ಸಂಸಾರವಿದೆ ಎಂದು ಯೋಚಿಸುವುದಿಲ್ಲ. ಇಲ್ಲಿ ಕವಿ ತಮ್ಮ ಒಡಲಲ್ಲೇ ಬೆಂಕಿ ಇಟ್ಟುಕೊಂಡು ಕವಿ ಅಭದ್ರತೆಯಿಂದ ತೊಳಲಬೇಕಾಗಬಹುದು ಎಂಬ ಶಂಕೆ ಕಾಡುತ್ತದೆ. ನಮ್ಮ ಒಡಲಿಗೆ ಬೆಂಕಿ ಹಚ್ಚಿ ಮೆರೆಯುವವರ ಕುರಿತು ಜಾಗೃತವಾಗಿರಲು ಕವಿ ಹೇಳುತ್ತಾರೆ. ಕತ್ತಲಿಗೆ ಎಷ್ಟು ಬಾಹುಗಳಿವೆ ಎಷ್ಟು ಆಳಗಳಿವೆ ಕುಳಿಗಳಿವೆ ಸೆಳವೆಷ್ಟಿದೆ ಬಲವೆಷ್ಟಿದೆ ಅಜ್ಜಯ್ಯನ ಅಮವಾಸ್ಯೆ ಕವನದ ಈ ಸಾಲುಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಅಜ್ಜಯ್ಯ ಅಮವಾಸ್ಯೆಯನ್ನು ಇಷ್ಟ ಪಡುವವನು. ಕವಿಯೋ ಅವರೇ ಹೇಳಿಕೊಂಡಂತೆ ಕತ್ತಲನ್ನು ಬಯಸದ ಹುಣ್ಣಿಮೆಯಂತಹ ಹುಡುಗ.ಜ್ಜಯ್ಯ ಅಮವಾಸ್ಯೆಯ ಕತ್ತಲಲ್ಲೇ ನಿಂತು ದಿಗ್ವಿಜಯ ಸಾಧಿಸಿಯಾಗಿದೆ. ಕತ್ತಲು ಚಾಚಿಕೊಂಡಿರುವ ಅಸಂಖ್ಯಾತ ಬಾಹುಗಳ ಅರಿವಿದೆ ಅವರಿಗೆ. ಆಳವಾದ ಕತ್ತಲನೆಯಲ್ಲಿ ಓಡಾಡಿ ಅಭ್ಯಾಸವಾಗಿದೆ. ಕತ್ತಲ ಹಾದಿಯಲ್ಲಿ ಧುತ್ತೆಂದು ಎದುರಾಗುವ ಕುಳಿಗಳ ಲೆಕ್ಕವಿಡಲು ಸಾಧ್ಯವಾಗುತ್ತಿಲ್ಲ. ಕತ್ತಲ ಸೆಳೆತ ಹೇಗಿರುತ್ತದೆ ಎಂಬುದರ ಅಂದಾಜೂ ಸಿಕ್ಕಿಲ್ಲ. ಕತ್ತಲಿನ ಬಲದ ಕುರಿತು ನಿಖರವಾಗಿ ಹೇಳಲು ಯಾರೂ ಮುಂದೆ ಬರುವುದಿಲ್ಲ. ತಳವೇ ಇರದ ಕತ್ತಲ ಬಾವಿಯೊಳಗಿನ ಜಲದ ಸೆಲೆಯನ್ನು ಹುಡುಕಿ ಯಾರೂ ಹೋಗಲಾರರು. ಇಂತಹ ಕತ್ತಲನ್ನು ಆತುಕೊಂಡು ಜಯಿಸುವ ಅಜ್ಜಯ್ಯನ ಕುರಿತು ಕವಿಗೆ ಅಪಾರವಾದ ಕುತೂಹಲವಿದೆ. ಕತ್ತಲಿಗೆ ಸೆಡ್ಡು ಹೊಡೆದು ಕತ್ತಲೆಯ ಬೆತ್ತಲೆ ದೇಹಕ್ಕೆ ಬೆಳಕಿನ ಉಡುಗೆಯನ್ನು ತೊಡಿಸುವ ಅಜ್ಜಯ್ಯನೆದುರು ಕವಿ ತಮ್ಮ ಹುಣ್ಣಿಮೆಯನ್ನು ಪುಟಿದೇಳಿಸುತ್ತ ತಮ್ಮತನ ತೋರುತ್ತಿದ್ದಾರೆ. ಇಲ್ಲಿ ತಲೆಮಾರುಗಳ ನಡುವಣ ಹೊಯ್ದಾಟದ ರೂಪಕ ತುಂಬ ಪ್ರಬುದ್ಧವಾಗಿ ಮೂಡಿಬಂದಿದೆ. ಅಜ್ಜ ಮತ್ತು ಮೊಮ್ಮಗನ ನಡುವಣ ಮನಸ್ಥಿತಿ ಹಾಗೂ ಆಲೋಚನಾ ಕ್ರಮಗಳು ಹೇಗೆ ವಿಭಿನ್ನವಾಗಿದೆ ಎಂಬುದನ್ನು ಕವಿ ಕತ್ತಲು ಬೆಳಕಿನೊಂದಿಗೆ, ಅಮವಾಸ್ಯೆ, ಹುಣ್ಣಿಮೆಯೊಂದಿಗೆ ತಾಳೆಹಾಕಿ ನೋಡುತ್ತ ವಿವರಿಸಿದ್ದಾರೆ. ಹೀಗಾಗಿ ಇಲ್ಲ ಕವಿತೆ ರೂಪಕದ ದೃಷ್ಟಿಯಿಂದ ಗೆಲ್ಲುತ್ತದೆ. ಬಂಧಿಖಾನೆಯೊಳಗೆ ಭಗವಂತ ಹನಿಹನಿ ಬಿಕ್ಕುತ ಸರಳುಗಳೆಣಿಸುತ ರಕ್ಕಸರ ವಜ್ರ ಮುಷ್ಟಿಯಲಿ ಸಾಮಾನ್ಯವಾಗಿ ನಾವು ಮಾಡುವ ಉದ್ಯೋಗ ನಮ್ಮ ಬರವಣಿಗೆಯ ಮೇಲೆ ಅಚ್ಚುಳಿಯುವಂತಹ ಪ್ರಭಾವ ಬೀರುತ್ತದೆ. ಯಾಕೆಂದರೆ ನಾವು ನಮ್ಮ ಬರವಣಿಗೆಯಲ್ಲೂ ಅದದೇ ರೂಪಕಗಳನ್ನು ಬಳಸುತ್ತೇವೆ.  ಗ್ರಹಿಣಿಯಾದವಳು ಅಡುಗೆ ಮನೆಯ ಪರಿಕರಗಳನ್ನು, ಅಡುಗೆ ಮನೆಯ ಒದ್ದಾಟವನ್ನು ರೂಪಕವಾಗಿ ಬಳಸಿಕೊಂಡರೆ, ಒಬ್ಬ ಬಡಗಿಗೆ ಅವನದ್ದೇ ಆದ ಹತ್ಯಾರುಗಳ ಲೋಕ ರೂಪಕಕ್ಕಾಗಿ ಕಾಯುತ್ತಿರುತ್ತದೆ. ಗರಗಸ, ಚಾಕು ಮುಂತಾದವು ಆತನ ರೂಪಕದಲ್ಲಿ ಬಳಸಲ್ಪಡುತ್ತದೆ. ಕೃಷಿಕನಿಗೆ ಉಳುಮೆ, ಬಿತ್ತನೆ ಮಳೆ ನೀರು ಮುಂತಾದವು ರೂಪಕವಾಗಿರುತ್ತದೆ. ಮಕ್ಕಳು ಶಿಕ್ಷಕ ಕವಿಗಳಿಗೆ ರೂಪಕವಾಗುತ್ತಾರೆ.  ಆಯಾ ವೃತ್ತಿಯವರು ತಾವು ಬಳಸುವ ಪರಿಕರಗಳಲ್ಲೇ ರೂಪಕಗಳನ್ನು ಬಳಸುತ್ತಾರೆ. ಕವಿ ಪೋಲಿಸ್ ಆಗಿರುವುದರಿಂದ ಸಹಜವಾಗಿಯೇ ಬಂದಿಖಾನೆ, ಸರಳುಗಳು, ಜೈಲು ರೂಪಕವಾಗಿದೆ. ಹೀಗಾಗಿ ಖಾಕಿ ಬಣ್ಣ ರೂಪಕವಾಗುವುದನ್ನು ಗಮನಿಸಬೇಕು ಈ ಶಹರದ ಸಂತೆಯಲ್ಲಿ ಬಿಕರಿಗಿಟ್ಟ ಕೆಂಗುಲಾಬಿ ಘಮಲುಗಳೆದುರು ಹಸಿಬಿಸಿಯುಸಿರಿನ  ಚೌಕಾಸಿಗೆ ನಿಡುಸುಯ್ಯುವ ಅಗುಳಿನ ಕನಸು ಇದನ್ನು ನಾನು ಸೂಕ್ಷ್ಮ ಗ್ರಹಿಕೆ ಎನ್ನುತ್ತೇನೆ. ಇತ್ತೀಚಿನ ದಿನಗಳಲ್ಲಿ ಬರೆಯುತ್ತಿರುವ ಬಹುತೇಕರು ತಮ್ಮ ಕಥೆ ಕವನ ಕಾದಂಬರಿಗಳಲ್ಲಿ ವೇಶ್ಯೆ ಹೆಣ್ಣಿನ ಕುರಿತಾಗಿ ಸ್ವಾಭಿಮಾನ ಪ್ರದರ್ಶಿಸುವ ಮಾತನಾಡುತ್ತಿದ್ದಾರೆ. ದೇವದಾಸಿಯರ ಪುನರ್ವಸತಿಯ ಬಗ್ಗೆ ಮತ್ತೆ ಮತ್ತೆ ಮಾತನಾಡುತ್ತ ತಾನು ಬಡವರ ಪರ, ಸಮಾಜದ ಪರ ಎಂದು ಬಿಂಬಿಸಿಕೊಳ್ಳುತ್ತಾರೆ. ಹೆಚ್ಚಿನವರಿಗೆ ಅದೊಂದು ರೂಢಿ. ಆದರೆ ನಮ್ಮ ಮಾತವೀಯತೆ ಇರಬೇಕಾದ್ದು ಅವರು ಅಂತಹ ಮೈ ಮಾರಿಕೊಳ್ಳುವ ವೃತ್ತಿಯನ್ನು ಆಯ್ದುಕೊಂಡಿದ್ದೇಕೆ ಎಂಬುದನ್ನು ನೋಡಬೇಕು. ಬಹುತೇಕ ಸಂದರ್ಭಗಳಲ್ಲಿ ಖಾಲಿ ಹೊಟ್ಟೆಯ ಸಂಕಟ ಇಂತಹ ಕೆಲಸವನ್ನು ಮಾಡಿಸಿಬಿಡುತ್ತದೆ. ಹೀಗಾಗಿ ಕೆಂಗುಲಾಬಿಯನ್ನು ಮೈಲಿಗೆಯೆಂದು ಪಕ್ಕಕ್ಕೆ ತಳ್ಳುವಂತಹ ಮನಸ್ಥಿತಿ ಯಾರಿಗಾದರೂ ಇದ್ದೇ ಇರುತ್ತದೆ. ಆದರೆ ಹಾಗೆ ತೋರಿಕೆಗಾಗಿ ದೇವದಾಸಿಯರನ್ನು ರಕ್ಷಿಸುವ, ಬೀದಿ ಬೀದಿ ಸುತ್ತಿ ನಾವೂ ಕೂಡ ಅವರೊಂದಿಗಿದ್ದೇವೆ ಎಂಬ ಭಾವ ಹುಟ್ಟಿಸುತ್ತಿರುವುದೂ ಸಾಧ್ಯವಿಲ್ಲವೆಂಬಂತಾಗಿದೆ. ಆದರೆ ಕವಿ ಇಲ್ಲಿ ತಮ್ಮ ನಿರ್ದಿಷ್ಟತೆಯಿಂದ ಗೆಲ್ಲುತ್ತಾರೆ. ಶಹರದ ರಸ್ತೆಗಳೀಗ ಮೈ ತುಂಬ ಬಣ್ಣ ಹೊತ್ತುಕೊಂಡಿದೆ ಎನ್ನುತ್ತಲೇ ಗಿಡುಗದ ಹಸಿ ತೃಷೆಯನ್ನು ಎದುರಿಗಿಟ್ಟು ಓದುಗನನ್ನು  ಸಮ್ಮೋಹನ ಗೊಳಿಸುತ್ತಾರೆ.               ನಾನು ಈ ಮೇಲೆ ಹೇಳಿದಂತೆ ಇಲ್ಲಿನ ಬಹುತೇಕ ಕವಿತೆಗಳು ರೂಪಕದ ದೃಷ್ಟಿಯಿಂದ ಗೆಲ್ಲುತ್ತವೆ. ಕವಿಗೆ ರೂಪಕದ ಉಪಯೋಗ ಗೊತ್ತಿದೆ. ಅದನ್ನು ಬಳಸುವುದರಿಂದ ಕವಿತೆ ಸಶಕ್ತವಾಗುತ್ತದೆ ಎಂಬ ಮಾಹಿತಿ ಇದೆ. ಆದರೆ ರೂಪಕವಾಗಿ ಗೆಲ್ಲುವ ಕವಿತೆ ಕವಿತೆಯಾಗಿಯೂ ಗೆಲ್ಲುವ ನಿಟ್ಟಿನಲ್ಲಿ ಗಮನ ವಹಿಸಬೇಕಾಗಿದೆ. ಮೊದಲೇ ಪ್ರಸ್ತಾಪಿಸಿದಂತೆ ಅಜ್ಜಯ್ಯನ ಅಮವಾಸ್ಯೆ ಸಶಕ್ತ ರೂಪಕವನ್ನು ಹೊಂದಿದ್ದಾಗಿಯೂ ಕವನದ ಓಘದಲ್ಲಿ ತಡೆಯುಂಟಾಗಿ ಎಡವುತ್ತದೆ. ಕವಿತೆಯನ್ನು ಓದುವಾಗ ಯಾವುದೋ ಎಳೆ ಕಡಿದುಹೋದಂತೆ ಭಾಸವಾಗುತ್ತದೆ. ಯಕ್ಷಗಾನದಲ್ಲಿ ರಸಮಯ ಸನ್ನಿವೇಶದಲ್ಲಿ ಅಥವಾ ಬಲು ಗಂಭೀರ ಸಂದರ್ಭದಲ್ಲಿ ಹಠಾತ್ ಆಗಿ ನುಗ್ಗಿ ಗಾಂಭೀರ್‍ಯವನ್ನು ಹಾಳು ಮಾಡುವ ವಿದೂಷಕನಂತೆ  ಸಾಲುಗಳ ನಡುವೆ ಗೊಜಲನ್ನುಂಟು ಮಾಡುತ್ತದೆ. ಒಮ್ಮೆ ಕವಿತೆಯ ಓಘ ತಪ್ಪಿ ಹೋದರೆ ಸಾಕು ಮತ್ತೆ ಏನೇ ಮಾಡಿದರೂ ಅಲ್ಲಿಗೆ ಕವಿತೆ ತನ್ನ ನವಿರತೆಯನ್ನು ಕಳೆದುಕೊಂಡು ಅಭಾಸವಾಗಿ ಬಿಡುತ್ತದೆ. ಹೀಗಾಗಿ ಆ ನಿಟ್ಟಿನತ್ತ ಕವಿ ಗಮನ ಹರಿಸಬೇಕಾದ್ದು ಅತೀ ಅವಶ್ಯಕ.         ಇಲ್ಲಿನ ಕವಿತೆಗಳು ಗದ್ಯ ಕವಿತೆಗಳು. ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚಿನ ಕವಿಗಳು ಈ ತರಹದ ಗಪದ್ಯ ಪ್ರಕಾರಕ್ಕೆ ಮಾರು ಹೋಗಿದ್ದಾರೆ. ಕವಿತೆಯನ್ನು ಹೇಗೆ ಬೇಕಾದರೂ ಬರೆದುಬಿಡಬಹುದು ಎನ್ನುವ ವಾದವೊಂದು ಗದ್ಯ ಲೇಖಕರಲ್ಲಿದೆ. ಒಂದಿಷ್ಟು ಗದ್ಯ ಬರೆದು ಅದನ್ನು ಮಧ್ಯೆ ಮಧ್ಯೆ ತುಂಡರಿಸಿ ಒಂದರ ಕೆಳಗೊಂದರಂತೆ ಸುವ್ಯವಸ್ಥಿತವಾಗಿ ಇಟ್ಟುಬಿಟ್ಟರೆ ಅದೊಂದು ಕವಿತೆಯಾಗುತ್ತದೆ ಎಂದು ವಾದಿಸುವ ಈ ಸೋಕಾಲ್ಡ್ ಗದ್ಯ ಲೇಖಕರನ್ನು ನಾವು ಸುತ್ತ ಕಾಣುತ್ತಿರುತ್ತೇವೆ. ಹೀಗಾಗಿ ಕವಿತೆ ತೀರಾ ಗದ್ಯದ ಪರಿಭಾಷೆಯಲ್ಲಿ ಇರದಂತೆ ನೋಡಿಕೊಳ್ಳಬೇಕಾದುದು ಬರೆಹಗಾರರ ಕರ್ತವ್ಯ. ಒಂದು ವೇಳೆ ಗಪದ್ಯ ರೂಪದಲ್ಲೇ ಬರೆದರೂ ಅದಕ್ಕೂ ಒಂದು ನೀತಿಯಿದೆ. ಆ ಮಿತಿಯನ್ನು ಅರಿತುಕೊಂಡರೆ ಸಾಕು ಕವಿಗೆ ಗಪದ್ಯದ ಮಿತಿಗಳೇನು ಎಂಬುದನ್ನು ತಿಳಿದುಕೊಂಡರೆ ಸಾಕು. ಪ್ರಸ್ತುತ ಕವಿ ಈ ನಿಟ್ಟಿನಲ್ಲಿ ಒಂದಿಷ್ಟು ಗಮನವಹಿಸಬೇಕು. ಇನ್ನು ಮುಂದೆ ಸಾಧಿಸಬೇಕಾದ ಹಾದಿ ಇನ್ನೂ ದೊಡ್ಡದಿದೆ. ಕವಿ ಅದನ್ನು ಸಾಧಿಸಲಿ ಎಂದು ಹಾರೈಸುವುದು ಖುಷಿಯ ವಿಷಯ. - ಶ್ರೀದೇವಿ ಕೆರೆಮನೆ

ಕನಸು ಕಾಣುವ ರಂಗವಲ್ಲಿಗೆ ಧೈರ್‍ಯ ತುಂಬಿ
bottom of page