top of page

ಐಂದ್ರಜಾಲಿಕನ ಮಾಯಾಜಾಲ.

ವಸಂತೋಕ್ತಿ – 3 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ದೇಶವೊಂದರ ರಾಜಕೀಯ ಪಕ್ಷಗಳು ಇಡೀ ದೇಶದ ಪ್ರಜೆಗಳಿಗೆ ಅನ್ವಯವಾಗುವ ಅನುಕೂಲವಾಗುವ ಮೂಲಸೌಕರ್ಯಗಳನ್ನು ಹೆಚ್ಚಿಸುವತ್ತ ಮತ್ತು ಒಳ್ಳೆಯ ಆಡಳಿತ ನೀಡುವತ್ತ ಗಮನವನ್ನು ಕೇಂದ್ರೀಕರಿಸಿ ತಮ್ಮ ಘೋಷಣೆಗಳನ್ನು ಹೊರಡಿಸಬೇಕೇ ಹೊರತು ಅಂದಂದಿನ ಹೊಟ್ಟೆ ಹೊರೆಯುವ ಹಾಗೂ ಖಜಾನೆ ಬರಿದುಮಾಡುವ ದಾನ ಕಾರ್ಯಕ್ರಮಗಳನ್ನು ಘೋಷಿಸಿ ಅದನ್ನು ಆಗುಮಾಡುವುದರಲ್ಲೇ ಸಮಯ ವ್ಯರ್ಥ ಮಾಡುವುದಲ್ಲ. ಹಾಗೆ ಮಾಡಿದರೆ ಜನ ಉಂಡು, ಹಾಸಿ ಹೊದ್ದು ಮಲಗಿ ಸೋಂಬೇರಿಗಳಾಗಿ ದೇಶ ದಿವಾಳಿಯಾಗುವುದರಲ್ಲಿ ಸಂಶಯವಿಲ್ಲ. ಮನೆ ಅಥವಾ ದೇಶ ಅಭಿವೃದ್ಧಿಗೊಳ್ಳಬೇಕಾದರೆ ಎಲ್ಲರೂ ಅವರವರ ಕಾಯಕ ಮಾಡಬೇಕು. ದುಡಿಯದೆ ಯಾರಿಗಾದರೂ ಹಣ ಸಂಪಾದನೆ ಮಾಡಲು ಸಾಧ್ಯವೇ? ದುಡಿಯಲು ಬೇಕಾದ ಪೂರಕ ಯೋಜನೆಗಳನ್ನು ರೂಪಿಸಬೇಕು. ಆಗ ಎಲ್ಲರ ಕೈಯಲ್ಲೂ ಹಣ ಓಡಾಡುತ್ತದೆ ಮತ್ತು ಪರಾವಲಂಬಿಯಾಗದೆ ಜೀವನ ಮಾಡಲು ಸಾಧ್ಯವಾಗುತ್ತದೆ. ವ್ಯಕ್ತಿಯ ಮತ್ತು ದೇಶದ ಆರ್ಥಿಕಮಟ್ಟ ಸುಧಾರಿಸುತ್ತದೆ. ಹಾಗೆಂದು ದಾನ ಮಾಡಬಾರದೆಂದಿಲ್ಲ. ದುಡಿಯಲು ಸಾಧ್ಯವಿಲ್ಲದ ಅಂಗವಿಕಲರಿಗೆ, ಅನಾಥರಿಗೆ, ಆಶ್ರಯವಿಲ್ಲದ ವೃದ್ಧರಿಗೆ, ಅಶಕ್ತರಿಗೆ ದಾನ ಮಾಡಬಹುದು ಮತ್ತು ಅದೊಂದು ಕರ್ತವ್ಯವೂ ಹೌದು. ಆದರೆ ಅದೊಂದು ದೊಡ್ಡ ಸಾಧನೆಯಲ್ಲ, ಪ್ರಚಾರದ ವಿಷಯವೂ ಅಲ್ಲ ಮತ್ತು ಆ ದಾನವು ನಮ್ಮ ಒಟ್ಟು ಸಂಪಾದನೆಯ ಶೇ. 7 ಅಥವಾ 8 ಭಾಗದಷ್ಟು ಇರಬಹುದು. ಉಳಿಕೆ ಶೇ. 92 ಸಂಪನ್ಮೂಲ ಕುರಿತಾದ ನಿಮ್ಮ ಕಾರ್ಯಯೋಜನೆ ಏನು? ಕೃಷಿ, ಕೈಗಾರಿಕೆ, ವ್ಯಾಪಾರ – ವಾಣಿಜ್ಯ, ಶಿಕ್ಷಣ, ಆರೋಗ್ಯ, ವಸತಿ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿ ಪಕ್ಷಗಳು ತಮ್ಮ ಯೋಜನೆ ಮತ್ತು ಪ್ರಯತ್ನಶೀಲತೆಯನ್ನು ಜನರಿಗೆ ಹೇಳಬೇಕಾದದ್ದು ಬಹಳ ಮುಖ್ಯ. ಐಂದ್ರಜಾಲಿಕ ತನ್ನ ಕೈಯನ್ನು ಒಂದು ಸುತ್ತು ತಿರುಗಿಸಿ ಹ್ರಾಂ ಹ್ರೀಂ ಹ್ರೂಂ ಎಂದು ಮಾಯಾಜಾಲ ಹರಡಿದಂತೆ ಮುಖ್ಯ ಕೆಲಸ ಬಿಟ್ಟು ಅಮುಖ್ಯ ಕೆಲಸದ ಕಡೆಗೆ ಗಮನ ಹರಿಸಿದರೆ ದೇಶ ಅಭಿವೃದ್ಧಿಯಾಗುವುದು ಬಿಟ್ಟು ಅವನತಿಯ ಕಡೆಗೆ ಸಾಗುವುದರಲ್ಲಿ ಅನುಮಾನವಿಲ್ಲ. ಈಗಿನ ಸ್ಥಿತಿ ನೋಡಿದರೆ ಒಟ್ಟು ಸಂಪನ್ಮೂಲದ ಶೇ. 50 ನ್ನು ದಾನಗಳಿಗಾಗಿ ವ್ಯಯಿಸುವಂತೆ ತೋರುತ್ತಿದೆ. ಅನುತ್ಪಾದಕ ಕ್ಷೇತ್ರಗಳಿಗೆ ಈ ರೀತಿ ದಾನ ಮಾಡಿ ಬೊಕ್ಕಸ ಬರಿದು ಮಾಡಿದರೆ ಸರಕಾರವೆಂಬುದು ಬೇಕಾಬಿಟ್ಟಿ ದಾಸಯ್ಯನ ಹಟ್ಟಿಯಾಗುವುದರಲ್ಲಿ ಸಂಶಯವಿಲ್ಲ. ಜನರು ಶಿಕ್ಷಣವಂತರಾಗಲು, ಉದ್ಯಮಶೀಲರಾಗಲು ಅಗತ್ಯವಿರುವ ಚಟುವಟಿಕೆಗಳ ಕಡೆಗೆ ಲಕ್ಷ್ಯ ಹರಿಸಬೇಕು. ಕೃಷಿ, ಕೈಗಾರಿಕೆ, ವಾಣಿಜ್ಯ ಮುಂತಾದ ಕ್ಷೇತ್ರಗಳ ಬೆಳವಣಿಗೆ ಆಗಬೇಕು. ಆಗ ಆರ್ಥಿಕ ಚಟುವಟಿಕೆ ಹೆಚ್ಚಾಗುತ್ತದೆ ಮತ್ತು ಯುವಕರಿಗೆ ಹೆಚ್ಚು ಉದ್ಯೋಗ ಲಭ್ಯವಾಗುತ್ತದೆ. ರಸ್ತೆ, ವಿದ್ಯುಚ್ಛಕ್ತಿ, ನೀರಾವರಿ ಮುಂತಾದ ಸೌಕರ್ಯಗಳನ್ನು ವೃದ್ಧಿಪಡಿಸುವ ಕಡೆಗೆ ಗಮನ ನೆಟ್ಟಾಗ ಚಟುವಟಿಕೆಗಳು ಹೆಚ್ಚಾಗಿ ನಿಧಾನವಾಗಿ ಬಡತನ ಕಡಿಮೆಯಾಗುತ್ತದೆ. ದಾನ ಧರ್ಮ ಮಾಡಿ ನಾಳೆಯೇ ಬಡತನ ನಿರ್ಮೂಲ ಮಾಡಲು ಸಾಧ್ಯವಿಲ್ಲ. ನಾವು ಜನರಿಗೆ ಮೀನು ಹಿಡಿಯುವ ವಿದ್ಯೆ ಹೇಳಿಕೊಡಬೇಕಲ್ಲದೆ ಕುಳಿತಲ್ಲಿಗೆ ಮೀನು ಕೊಡುವುದಲ್ಲ! ಎಷ್ಟು ದಿನ ಮೀನು ಕೊಡುತ್ತೀರಿ? ಕೊನೆಗೆ ಆತ ಪರಾವಲಂಬಿಯಾಗುತ್ತಾನೆ! ಶೇ. 92 ಭಾಗದ ಕೆಲಸಗಳನ್ನು ಅಧಿಕಾರಿಗಳ (ಕಾರ್ಯಾಂಗದ) ಜವಾಬ್ದಾರಿಗೆ ಬಿಟ್ಟು ಶೇ. 8 ಭಾಗದ ಕೆಲಸದ ಕಡೆಗೆ ಸರಕಾರ ಲಕ್ಷ್ಯ ವಹಿಸಿದರೆ ಅಂತಹ ವ್ಯವಸ್ಥೆ ಎಷ್ಟು ದಿನ ನಡೆದೀತು? ಈ ಅಸಮತೋಲದ ಅಪ್ರಬುದ್ಧತೆಯ ಕೆಲಸವನ್ನು ಯಾವುದೇ ಮುತ್ಸದ್ದಿಗಳು ಮಾಡಬಾರದು. ಅತಿಮುಖ್ಯ ಭಾಗವಾದ ಶೇ. 92 ಕೆಲಸಗಳನ್ನು ಅಧಿಕಾರಿಗಳಿಗೆ ವಹಿಸಿದರೆ ಅವರು ಪಾಪ, ಏನು ಮಾದಿಯಾರು? ಮುನ್ನಡೆಸುವ ನಾಯಕರಿಲ್ಲದೆ, ಸಂಪನ್ಮೂಲದ ಬಲವಿಲ್ಲದೆ ಅವರು ಗಾಡಿಯನ್ನು ಓಡಿಸಲು ಸಾಧ್ಯವಿಲ್ಲ. ಮುಗ್ಗರಿಸಿದ ವ್ಯವಸ್ಥೆಯಿಂದಾಗಿ ಕೊನೆಗೆ ದೇಶ ಹೀನಾಯ ಸ್ಥಿತಿಯತ್ತ ಸಾಗುತ್ತದೆ. ಕುಳಿತುಂಬುವಗೆ ಕುಡಿಕೆ ಹಣ ಸಾಲದು. ಕೈಯಲ್ಲಿರುವ ಹಣವನ್ನು ದಾನಮಾಡಿ ಅನಂತರ ಸಾಲ ಮಾಡುವವನು ಶೂರನೂ ಅಲ್ಲ ಧೀರನೂ ಅಲ್ಲ. ಹೊಟ್ಟೆಗೆ ಹಿಟ್ಟಿಲ್ಲದವನಿಗೆ ಜುಟ್ಟಿಗೆ ಮಲ್ಲಿಗೆ ಹೂ ಯಾಕೆ ಬೇಕು? ಕಷ್ಟಪಟ್ಟು ದುಡಿಯಬೇಕು, ಸಂಪನ್ಮೂಲ ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ವೈಯಕ್ತಿಕ ಉದ್ಧಾರ ಮತ್ತು ದೇಶದ ಉದ್ಧಾರ. ಸಾಲ ಮಾಡಿ ತುಪ್ಪ ತಿನ್ನುವ ಪ್ರವೃತ್ತಿ ಎಷ್ಟು ದಿನ ನಡೆದೀತು? ಮುನ್ನೋಟ ಇರುವ, ಮುತ್ಸದ್ದಿಗಳಾದ ಚಿಂತಕರು ಪಕ್ಷಗಳ (ಅಥವಾ ಸರಕಾರದ) ಮುಖ್ಯಸ್ಥಾನಗಳಲ್ಲಿದ್ದರೆ ಮಾತ್ರ ದೇಶ ಪ್ರಗತಿ ಕಾಣುತ್ತದೆ. ಇಡೀ ದೇಶವನ್ನು ಒಂದು ಘಟಕವಾಗಿ ಕಾಣುವ ಎತ್ತರದ ವ್ಯಕ್ತಿತ್ವ ಇರಬೇಕು. ತುಂಡು ತುಂಡು ನೋಟಗಳು ಅಸಮತೋಲನವನ್ನು ಉಂಟುಮಾಡುತ್ತದೆ ಮತ್ತು ದೀರ್ಘಾವಧಿಯಲ್ಲಿ ಹಾನಿಯನ್ನೇ ತರುತ್ತದೆ. ತೀರಾ ಸನಿಹ ದೃಷ್ಟಿಯ, ಸ್ವಾರ್ಥ ಮನೋಭಾವದ ಜನರಿಂದ ದೇಶ ಅಭಿವೃದ್ಧಿ ಕಾಣುವುದು ಕಷ್ಟ. ನಮ್ಮ ಇಡೀ ಚುನಾವಣಾ ವ್ಯವಸ್ಥೆಯ ಮರು ಅವಲೋಕನ ಈ ದಿನಗಳಲ್ಲಿ ಅವಶ್ಯ ಅನ್ನಿಸುತ್ತದೆ. ಡಾ.ವಸಂತಕುಮಾರ ಪೆರ್ಲ

ಐಂದ್ರಜಾಲಿಕನ ಮಾಯಾಜಾಲ.
bottom of page