top of page

ಇತಿಹಾಸದ ಮಂದಹಾಸ.

ಎಂದೋ..ಯಾರೋ..ಮುಚ್ಚಳ ಹಾಕಿ       ಬೀಗ ಝಡಿದ ಹಳೆಯ ಮರದ       ಪೆಟ್ಟಿಗೆಯೊಂದು ಮನೆಯೊಳಗಣ       ಕತ್ತಲ ಮೂಲೆಯಲ್ಲಿ ಅವಿತು ಕುಳಿತು       ಬಿಟ್ಟೇನೆಂದರೂ ಬಿಡದೇ ನನ್ನ       ಕಾಡತೊಡಗಿದಾಗ ತೆರೆದು ನೋಡುವ       ಚಫಲ ಅದುಮಿಟ್ಟುಕೊಳ್ಳಲಾಗದೇ       ಕಾಣದ(ಬೀಗ)ದ ಕೈ ಹುಡುಕಾಡಿ       ಕೊನೆಗೊಮ್ಮೆ ಸಿಕ್ಕಾಗ ಎಲ್ಲಿಲ್ಲದ ಖುಷಿ       ಭೂಗರ್ಭದಲ್ಲಿ ಯಾರೋ ಹುಗಿದಿಟ್ಟ       ನಿಧಿಯೊಂದು ಅನೀರೀಕಿ಼ತ ಸಿಕ್ಕಂತೆ,       ನಿಗೂಢ ಭೂಭಾಗವೊಂದನ್ನು ಶೋಧಿಸಿದ       ಕೋಲಂಬಸ್ ನಾನಾದಂತೆ,ಬೀಗುತ್ತಾ       ತುಕ್ಕುಹಿಡಿದ ಚಾವಿಬಳಸಿ ಮುಚ್ಚಳ       ತೆರೆದರೆ..........ಒಳಗಡೆ..       ಗತಿಸಿದ ಅಜ್ಜಿಯ ಮಡಿಸಿಟ್ಟ ಮಡಿಸೀರೆ,       ಅಜ್ಜ ಬಳಸಿದ ತುಕ್ಕುಹಿಡಿದ ಅಡಕತ್ತರಿ,       ಅಪ್ಪ ಜತನದಿಂದ ಕಾದಿಟ್ಟ ಹರಿದ       ಮಂತ್ರದ ಪುಸ್ತಕ,ದಸ್ತಾವೇಜು ಹಳೆಯ       ಲೆಕ್ಕದ ಪುಸ್ತಕ,ಅಮ್ಮ ಅಪ್ಪನಿಗೆ       ಗೊತ್ತಾಗದ ಹಾಗೆ ಆತನ ಜೇಬಿನಿಂದ       ಎಗರಿಸಿಟ್ಟ ಆಪದ್ಧನ ಚಲಾವಣೆಯಲ್ಲಿಲ್ಲದ       ತಾಮ್ರದ ಚಿಲ್ಲರೆ ನಾಣ್ಯಗಳ ಡಬ್ಬಿ,       ಯಾರೋ ಮಕ್ಕಳು ಮುರಿದು ಬೀಸಾಕಿದ       ಆಟಿಗೆಯ ತುಣುಕುಗಳು,       ಈ..ಎಲ್ಲ ಅಸಂಬದ್ಧಗಳೊಟ್ಟಿಗೆ       ಧೂಳುಹಿಡಿದ ದೇವರ ಪೊಟೋ ಕೂಡ..       ಗೊಂದಲಗಳ ಗೂಡ..ಈ ಪೆಟ್ಟಿಗೆ       ತೆರೆದಾಗ ಕಂಡಿದ್ದು,"ಅಬ್ಬಾ"..ಒಂದೇ       ಎರಡೇ..ನಾ ದಿಗ್ಮೂಢ ಸುಸ್ತಾದಂತಾಗಿ       ಕುಳಿತು ಸ್ವಲ್ಪಸಮಯ ನಿಧಾನ       ಚೇತರಿಸಿಕೊಂಡು,ಅವನ್ನೆಲ್ಲಾ ಒಂದೊಂದಾಗಿ       ತೆಗೆದಿಟ್ಟು ಹೊರಗೆ ಧೂಳೊರೆಸಿ       ಒಪ್ಪವಾಗಿ ಒಂದೆಡೆ ಜೋಡಿಸಿಟ್ಟು       ತೊಳೆದ ಕೈ ಒರೆಸಿ ಪೆಟ್ಟಿಗೆಯ ಖಾಲಿಯಲ್ಲಿ       ಕೈಗೆ ಸಿಕ್ಕ ಒಳ್ಳೊಳ್ಳೆಯ ವರ್ತಮಾನ       ಗಳನ್ನು ಹಿಡಿದಷ್ಟು ತುಂಬಿ,ಯತಾಸ್ತಿತಿ       ಮುಚ್ಚಳಹಾಕಿ,ಬೀಗಝಡಿದು       ಭದ್ರವಾಗಿಸಿದ ನನ್ನೆದುರು ಮಂದಹಾಸ       ಬೀರುತ್ತಾ ನಿಂತಿತ್ತು ಇತಿಹಾಸ.       ನಾನೂ ನನಗರಿವಿಲ್ಲದಂತೇ..........                              ಮುಗುಳ್ನಕ್ಕಿರಬೇಕು.     --ಅಬ್ಳಿ,ಹೆಗಡೆ.

ಇತಿಹಾಸದ ಮಂದಹಾಸ.
bottom of page