top of page

ಆಲೋಚನೀಯ-೩೧

ಗಾಂಧಿ ಮಹಾತ್ಮನ ಭಕ್ತರು ನಾವು ಚದುರಿಸದೆಮ್ಮನು ಲಾಠಿಯ ನೋವು! ನುಂಗದು ದಬ್ಬಾಳಿಕೆಯ ಹಾವು! ಸ್ವರಾಜ್ಯ ತಾಯಿ ಭಾರತ ಭೂ ವೀರ ಒಕ್ಕಲಿಗರು ರಚನೆ- ದಿನಕರ ದೇಸಾಯಿ. ೧೯೩೧ ರಲ್ಲಿ ಬ್ರಿಟಿಷ ಆಕ್ರಮಿತ ಗುಜರಾತವನ್ನು ಬಿಟ್ಟು ಬಾರ್ಡೋಲಿಯ ಸತ್ಯಾಗ್ರಹ ಸಮರದಲ್ಲಿ ಬಡೋದಾ ಸಂಸ್ಥಾನವನ್ನು ಸೇರಿದ ವೀರ ಒಕ್ಕಲಿಗರ ಹಾಡು ಇದು ಎಂಬುದು ಕವಿಯ ಕಲ್ಪನೆ. ರೈತರು ಮನೆ ಗದ್ದೆ ಹೊಲಗಳನ್ನು ಬಿಟ್ಟು ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ರೈತರ ಉದ್ದಾರಕ್ಕೆಂದು ಸರಕಾರ ಮಾಡಿದ ರೈತರ ಪರವಾದ ಕಾನೂನನ್ನು ಹಿಂದಕ್ಕೆ ಪಡೆಯಿರಿ ಎಂಬುದು ರೈತರ ಒತ್ತಾಯ.ಸರಕಾರ ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ.ರೈತರಿಗೆ ಬೇಡವಾದ ಈ ಕಾನೂನು ಯಾರ ಹಿತಾಸಕ್ತಿಗಾಗಿ ಇನ್ನೂ ಉಳಿದುಕೊಂಡಿದೆ. ಮತ್ತೊಂದು ಚುನಾವಣೆ ಬರುವ ವರೆಗೂ ರೈತರ ಹೋರಾಟ ನಡೆಯಲಿ ಎಂಬ ಭಾವನೆ ಸರಕಾರ ನಡೆಸುವವರಲ್ಲಿ ಇದೆಯಾ ಹೇಗೆ? ಆ ನಂತರವೂ ತಮ್ಮದೆ ಸರ್ಕಾರ ಎಂಬ ಆತ್ಮವಿಶ್ವಾಸ ಈ ಅಸಡ್ಢೆಗೆ ಕಾರಣವೇನು! ಕಳೆದ ಶತಮಾನದ ೪೦ರ ದಶಕದಲ್ಲಿ ಕರ್ನಾಟಕದಲ್ಲಿ ರೈತ ಹೋರಾಟಗಳು ನಡೆದವು.ಅಂಕೋಲೆಯ ದಿನಕರ ದೇಸಾಯಿ ನೇತ್ರತ್ವದ ರೈತ ಕೂಟದ ಹೋರಾಟ,ಸಾಗರದಲ್ಲಿ ಶಾಂತವೇರಿ ಗೋಪಾಲ ಗೌಢರ ಹಿರಿತನದಲ್ಲಿ ನಡೆದ ಕಾಗೋಡು ಸತ್ಯಾಗ್ರಹ ಇವೆಲ್ಲವು ಚರಿತ್ರಾರ್ಹವಾದ ದಾಖಲೆಗಳು.ಆಗ ಬ್ರಿಟಿಷರ ಆಡಳಿತವಿತ್ತು. ಈಗ ದೆಹಲಿಯ ರೈತ ಹೋರಾಟದಲ್ಲಿ ನಮ್ಮವರೆ ಆದ ಬ್ರಿಟಿಷರು ಆ ಬಿಳಿಯರಿಗಿಂತ ಮಿಗಿಲಾದ ತಂತ್ರ ಮತ್ತು ವ್ಯೂಹವನ್ನು ರಚಿಸಿದ್ದಾರೆ. ಹೋರಾಡುವ ರೈತರಿಗೆ ನೀರು ಆಹಾರ ಸಿಗದಂತೆ ಕಂದಕ ತೋಡುವ , ಮೊಳೆಯನ್ನು ಹೊಡೆಯುವ ಕೆಲಸ ಮಾಡಿದ್ದು ಗುಟ್ಟಾಗಿ ಉಳಿದಿಲ್ಲ.ಇಂಥ ಹೇಯ ಕೃತ್ಯಗಳಿಗೆ ದಟ್ಟ ನೌಕರಶಾಹಿ( ಡಾರ್ಕ ಬ್ಯುರೊಕ್ರೇಟ್ಸ) ಶಾಮೀಲಾಗುತ್ತಿದ್ದಾರೆ.ಈ ಬಗೆಯ ಪರಿಸ್ಥಿತಿ ಅಭಿವೃದ್ಧಿಪರ ಭಾರತಕ್ಕೆ ಒಂದು ಕಪ್ಪು ಕಲೆ ಎಂಬುದನ್ನು ಮರೆಯಲಾಗದು.ನವ ಭಾರತದ ಪ್ರಜೆಗಳು ಹೊಗಳುವ ಇಲ್ಲದಿರೆ ತೆಗಳುವ ಕೆಲಸದಲ್ಲಿ ನಿರತರಾಗಿದ್ದಾರೆ.ನಮ್ಮ ಜನಶಕ್ತಿಗೆ ಮಂಜು ಕವಿದಿದೆ.ಸೂರ್ಯನ ಬೆಳಕು ಎಂದು ಬರುವುದೊ. ಪ್ರೊ..ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳೆಯುವ ಮೂಲಕ ಕಾನೂನನ್ನು ಓದಿದ ಮೀರಾ ರಾಘವೇಂದ್ರ ಎಂಬವಳು ಸುದ್ದಿ ಮಾಡಿದ್ದಾಳೆ. ಪ್ರಚಾರದ ತೆವಲು ಅದು.ಭಗವಾನ್ ಅವರು ಬರೆದ ಪುಸ್ತಕಗಳನ್ನು ಓದಿಕೊಂಡು,ಅವರೊಂದಿಗೆ ಚರ್ಚಿಸಿ ವಿಷಯವನ್ನು ತಿಳಿದುಕೊಂಡು ಸಕಾರಾತ್ಮಕವಾದ ಪ್ರತಿಭಟನೆ ಮಾಡದೆ ಮಸಿ ಬಳಿಯುವ ಮೂಲಕ ಆಕೆ ತಾನೆ ಮಸಿಕೆಂಡ ಅಂದರೆ ಇದ್ದಿಲು ಆಗಿ ಹೋದಳು. ಈ ಬಗೆಯ ಎಡವಟ್ಟುಗಳಿಂದ ಬಿಡುಗಡೆ ಎಂದು.ಮಂತ್ರಿಗಳ ಶಾಸಕರ ಅಧಿಕಾರ ಶಾಹಿಗಳ ವೇತನ ಮತ್ತು ಸೌಲಭ್ಯ ಅಬಾಧಿತವಾಗಿದೆ. ಇಂತಹ ಸಂದರ್ಭದಲ್ಲಿ ತುಕ್ಕು ಹಿಡಿದು ಸ್ಥಗಿತಗೊಂಡಿರುವ ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಓವರ ಆಯ್ಲಿಂಗ ಮಾಡಿ ಚಾಲನೆಯನ್ನು ನೀಡುವ ಕೆಲಸ ಎಂದು ಆರಂಭವಾಗುತ್ತದೆ‌.ಕಾದು ನೋಡೋಣ.ನಮ್ಮ ನೆಲೆಯಲ್ಲಿತೊಡಗಿಕೊಳ್ಳೋಣ.ಜಾಗ್ರತ ಭಾರತದ ಕನಸು ಸಾಕಾರವಾಗಲಿ. - ಡಾ.ಶ್ರೀಪಾದ ಶೆಟ್ಟಿ.

ಆಲೋಚನೀಯ-೩೧
bottom of page