top of page

ಆಲೋಚನೀಯ-೩೦

ಹೊಳೆದದ್ದು ತಾರೆ ಉಳಿದದ್ದು ಆಕಾಶ- ಕೆ.ಎಸ್.ನ ತಾರೆಗಳು ಮೀನುಗುವುದು ಆಗಸದಲ್ಲಿ.ಆಕಾಶವೆ ಅವಕಾಶವಾಗಿ ನಕ್ಷತ್ರಗಳು ಹೊಳೆಯುವ ಪರಿ ಕಂಗಳಿಗೆ ಆ ಮೂಲಕ ಮನಕ್ಕೆ ಮುದ ನೀಡುವ ಸಂಗತಿ.ಈ ಕವನ ಬರೆದವರು ಮೈಸೂರು ಮಲ್ಲಿಗೆಯ ಹೆಸರಾಂತ ಕವಿ ಕೆ.ಎಸ್.ನರಸಿಂಹ ಸ್ವಾಮಿ. ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ೬೨ ನೆ ಸಾಹಿತ್ಯ ಸಮ್ಮೇಳನದಲ್ಲಿ ನಿಕಟಪೂರ್ವ ಅಧ್ಯಕ್ಷರಾಗಿದ್ದ ಅವರ ಜೊತೆ ಕುಳಿತು ಊಟ ಮಾಡಿದ ಕ್ಷಣಗಳು ಮನದ ಮುಂದಿವೆ.ಸರಳತೆಯ ಸಾಕಾರವೆ ಆಗಿದ್ದ ಅವರು ತಮ್ಮ ಪತ್ನಿಯ ಜೊತೆಗೆ ಊಟಕ್ಕೆ ಬಂದಿದ್ದರು.ಹೆಸರಾಂತ ಕವಿಯೊಬ್ಬರು ಇಷ್ಟು ಸರಳವಾಗಿರಲು ಸಾಧ್ಯವೆ ಎಂಬ ಉದ್ಗಾರವಾಚಕ ಚಿಹ್ನೆಯೊಂದು ಮನದಲ್ಲಿ ಮೂಡಿತ್ತು.ಅವರು ಆಗ ಮಾಗಿದ್ದರು ಹಣ್ಣಾಗಿದ್ದರು. ಪ್ರಸಿದ್ಧಿ ಪ್ರಚಾರ,ಗುಂಪುಗಳಿಂದ ದೂರ ನಿಂತಿದ್ದರು. ಅಂಥ ಮನೋಭಾವದಿಂದಲೆ ಅವರ ಕವಿತೆಗಳು ಲೋಕ ಪ್ರಸಿದ್ಧಿ ಪಡೆದಿವೆ.ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು ಎಂಬ ಅವರ ಕವನ ತನ್ನ ಸರಳತೆಯಲ್ಲಿಯೆ ಗಹನತೆಯ ಕಡೆಗೆ ತುಡಿವ ಪರಿ ಅಚ್ಚರಿಯೆ ಆಗಿ ಇಂದಿಗೂ ಉಳಿದುಕೊಂಡಿದೆ. ಈ ಸಂಪಾದಕೀಯ ಬರೆಯಲು ತಡವಾಯಿತು. ನನಗೆ ಇದೆಲ್ಲ ಮರೆತೆ ಹೋಗಿತ್ತು.ಆರೋಗ್ಯದ ಕಾರಣದಿಂದ ವಿಸ್ಮೃತಿಯೊಂದು ಮುಸುಕಿಕೊಂಡಿತ್ತು ಆರೋಗ್ಯ ಒಂದು ಅಮೂಲ್ಯವಾದ ಸಂಪತ್ತು. ಅದನ್ನು ಗಳಿಸಿ ಉಳಿಸಿಕೊಳ್ಳಲು ಬಹಳ ಶ್ರಮ ಪಡಬೇಕಾಗುತ್ತದೆ.ಆರೋಗ್ಯ ಎಂಬುದು ಬಹಳ ಬೆಲೆಬಾಳುವಂತಹದ್ದು. ಗಾಂಧೀಜೀಯವರ ಕ್ಷಮೆಕೋರಿ " If health is lost everything is lost" ಎಂಬ ಸಂದರ್ಭದಲ್ಲಿ ನಾವು ಇದ್ದೇವೆ. ಆರೋಗ್ಯವಿಲ್ಲದ ಸಂಪತ್ತು,ಅಧಿಕಾರ, ಪದವಿ, ಪ್ರಶಸ್ತಿಗಳೆಲ್ಲ ಗೌಣ. ನಿರೋಗಿಯಾಗಿರುವವನೆ ಪುಣ್ಯವಂತ. ಮೃಖಂಡು ಋಷಿಯ ಮಗನಾದ ಮಾರ್ಕಾಂಡೇಯನು ಶಿವನನ್ನು ಕುರಿತು ತಪವನ್ನು ಗೈದು ಹದಿನಾರನೆ ವರ್ಷದಲ್ಲಿ ಬಂದ ಮೃತ್ಯುವನ್ನು ಗೆದ್ದು ಬಂದನು.ಆಯುಷ್ಯ ಆರೋಗ್ಯ ಮತ್ತು ಐಶ್ವರ್ಯವನ್ನು ನೀಡು ಎಂದು ಆತನನ್ನು ಪ್ರಾರ್ಥಿಸುವ ಶ್ಲೋಕವೊಂದು ಇದೆ. "ಮಾರ್ಕಾಂಡೇಯ ಮಹಾಭಾಗ ಸಪ್ತ ಕಲ್ಪಾಂತ ಜೀವಿನ ಆಯುರಾರೋಗ್ಯಮೈಶ್ವರ್ಯಂ ದೇಹಿ ಮೆ ಪುನಿಪುಂಗವ " ಎಂದು ಆ ಮುನಿಯನ್ನು ಸ್ತುತಿಸುತ್ತಾರೆ. ಮೊದಲು ಬದುಕಲು ಆಯುಷ್ಯ ಬೇಕು. ಅದರೊಂದಿಗೆ ಆರೋಗ್ಯವು ಚೆನ್ನಾಗಿರ ಬೇಕು. ಇದನ್ನೆಲ್ಲಾ ಭೋಗಿಸಲು ಐಶ್ವರ್ಯವನ್ನು ಕೊಡು ಎಂದು ಆಶ್ಲೋಕದಲ್ಲಿದೆ.ನಮ್ಮ ಬಹುಪಾಲು ಸ್ತೋತ್ರ,ಶ್ಲೋಕಗಳು ನಮ್ಮ ಸ್ವಾರ್ಥದ ಈಡೇರಿಕೆಗಾಗಿಯೆ ರಚನೆಗೊಂಡಂತಿವೆ.ಇದನ್ನು ಅರಿತ ಅಲ್ಲಮ ಪ್ರಭು ತನ್ನ ವಚನದಲ್ಲಿ " ಗುಹೇಶ್ವರ ನಿನಗಾಗಿ ಸತ್ತವರನಾರನು ಕಾಣೆ " ಎಂದು ಉದ್ಗರಿಸುತ್ತಾನೆ.ಹೆಣ್ಣು ಹೊನ್ನು ಮಣ್ಣಿಗಾಗಿ ಕೋಟಿಗಟ್ಟಲೆ ಸಂಖ್ಯೆಯಲಿ ಜನ ಸತ್ತಿದ್ದನ್ನು ಅಲ್ಲಮ ಕಂಡಿದ್ದಾನೆ.ಇದನ್ನೆ ಆದಿಗುರು ಶಂಕರಾಚಾರ್ಯರು " ಪರಬ್ರಹ್ಮಣೆ ಕೋಪಿ ನ ಸಕ್ತ:" ಎಂದು ಹೇಳಿದರು. ಕೋವಿಡ್ ನ ರಕ್ಕಸದವಡೆಯಿಂದ ತಪ್ಪಿಸಿಕೊಂಡು ಬಂದವನಿಗೆ ಮೂರು ತಿಂಗಳ ಬಳಿಕ ಮತ್ತೆ ಎಸಿಡಿಟಿ ಎದೆನೋವು,ಒತ್ತಡ ಎಲ್ಲವೂ ಒಟ್ಟಾಗಿ ಆತಂಕದಿಂದ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿ ಅಲ್ಲಿಯ ತಜ್ಞವೈದ್ಯರ ಪಡೆಯಿಂದ ಎಂಜಿಯೊಗ್ರಾಂ ಮಾಡಿಸಿಕೊಂಡೆನು.ಏನು ತೊಂದರೆ ಇಲ್ಲ ಎಂದು ವೈದ್ಯರುಗಳು ಅಂದಾಗ ಕಪ್ಪಿಟ್ಟ ಮೋಡ ಕರಗಿ ಹೋಗಿತ್ತು.ಮನಸ್ಸು ಹಗುರವಾಯಿತು. ಈ ಕಾರಣದಿಂದ ಆಲೋಚನೆಯತ್ತ ಗಮನವು ಕ್ಷೀಣವಾಗಿತ್ತು. ಈಗ ಮತ್ತೆ ಆಲೋಚನೆಯನ್ನು ಕಟ್ಟಿ ನಿಲ್ಲಿಸುವ ಹುರುಪು ಬಂದಿದೆ. ನಮ್ಮ ಬಳಗದ ಎಲ್ಲ ಬರಹಗಾರರು ತಮ್ಮ ಬರವಣಿಗೆಯ ಮೂಲಕ ಆಲೋಚನೆಯ ಗಿಡವು ಹೆಮ್ಮರವಾಗುವಲ್ಲಿ ಪರಿಶ್ರಮಿಸ ಬೇಕು.ಇದು ನನ್ನ ಮನದಾಳದ ಆಸೆ ಮತ್ತು ಆಶಯ.ನೀವು ಲೇಖನ ಬರೆದು ನನಗೊಂದು ಮೆಸೆಜ ಅಥವಾ ಒಂದು ಕರೆ ಮಾಡಿರಿ.ನಮ್ಮ ಪತ್ರಿಕೆಯ ಹಕ್ಕುದಾರರು ನೀವು. ನಮ್ಮ ಪತ್ರಿಕೆಯ ವಸ್ತು ವಿನ್ಯಾಸವನ್ನು ರೂಪಿಸುವಲ್ಲಿ ನಿಮ್ಮ ಸಲಹೆ,ಸೂಚನೆಗಳಿಗೆ ಸದಾ ಸ್ವಾಗತ. ಡಾ.ಶ್ರೀಪಾದ ಶೆಟ್ಟಿ.

ಆಲೋಚನೀಯ-೩೦
bottom of page