top of page

ಆಲೋಚನೀಯ-೨೭

ಆಲೋಚನೀಯದ ನಡೆ ನಿದಾನವಾಗಿದೆ. ಕಾರಣವ ಹೇಳಲು ತಿಳಿಯದಾಗಿದೆ.ನಮ್ಮ ನಡುವೆ ಓಡಾಡಿಕೊಂಡಿದ್ದವರು ಈ ಪ್ರಪಂಚವನ್ನೆ ಬಿಟ್ಟು ಹಠಾತ್ತನೆ ಹೊರಟು ಬಿಟ್ಟಿದ್ದಾರೆ.ಎಲ್ಲಿ ಹೋದರು? ಯಾಕೆ ಇಷ್ಟು ಬೇಗ ನಡೆದರು? ಇದಕ್ಕೆಲ್ಲಾ ಉತ್ತರ ಸಿಗುತ್ತಿಲ್ಲ.ಅವರ ನಡೆ ನುಡಿಗಳು ಮಾಸದ ನೆನಪಾಗಿ ಉಳಿದುಕೊಂಡಿವೆ.ಕಾಲ ಎಲ್ಲವನ್ನು ಮರೆಸುತ್ತದೆ. ಇಲ್ಲಿ ಉಳಿದವರು ಇರುವಷ್ಟು ದಿನ ತಮ್ಮ ಬದುಕನ್ನು ಹೊಂದಿಸಿಕೊಂಡು ಬದುಕ ಬೇಕಾದ ಅನಿವಾರ್ಯತೆ ಇದೆ. ಸಾವಿನ ಕುರಿತ ಅನುಭವ ವಾಣಿಯೊಂದು ಇದೆ " ಸಾವಿಗೆ ನಾವು ಹೆದರಬೇಕಾಗಿಲ್ಲ. ಯಾಕೆಂದರೆ ನಾವು ಇದ್ದಾಗ ಸಾವು ಬರುವುದಿಲ್ಲ.ಸಾವು ಬಂದಾಗ ನಾವು ಇರುವುದೆ ಇಲ್ಲ" ಮಹಾಭಾರತದ ಯುದ್ಧದಲ್ಲಿ ಕುರುಕುಲ ಪಿತಾಮಹ ಭೀಷ್ಮರಿಗೆ ವೀರ ಪಟ್ಟವನ್ನು ಕಟ್ಟಿದಾಗ ಮಹಾರಥಿ ಕರ್ಣ ಅವರನ್ನು ಮೂದಲಿಸುತ್ತಾನೆ.ಆಗ ಭೀಷ್ಮರು " ಕಲಿತನದುರ್ಕು ಜವ್ವನದ ಸೊರ್ಕು ನಿಜೇಶನ ನೆಚ್ಚು ನಿನಗುಳ್ಳನಿತೆನಗುಂಟೆ ಕಲಿಕರ್ಣ ಕಲಹಮಮ್ ಇದಿರ್ಚುವವಂ ಹರಿಗನಪ್ಪೊಡೆ ಸೂಳ್ಪೊಡೆಯಲಪ್ಪುದು ಕಾಣಾ ಮಹಾಜಿರಂಗದೊಳ್" ಎಂದು ಹೇಳುತ್ತಾರೆ.ನಿನಗೆ ಇರುವಷ್ಟು ವಿಶೇಷಣಗಳು ನನಗೆ ಇಲ್ಲ.ಆದರೆ ಈ ಯುದ್ಧದಲ್ಲಿ ಸಾಯುವವರ ಸರತಿ ಸಾಲಿನಲ್ಲಿ ನೀನು ಒಬ್ಬನಾಗುವೆ ಎಂಬ ಪಂಪ ಭಾರತದ ಭೀಷ್ಮರ ಮಾತು ಎಲ್ಲರಿಗು ಅನ್ವಯಿಸುತ್ತದೆ. ಈ ಸಂಸಾರ ಪರ್ವದ ಮಹಾ ಆಜಿರಂಗದಲ್ಲಿ ನಾವೆಲ್ಲರೂ ಸರತಿಯ ಸಾಲಿನಲ್ಲಿ ಸಾವಿನೆಡೆಗೆ ಸಾಗುತ್ತಲೆ ಇದ್ದೇವೆ.ನಿನ್ನೆಯಿಂದ ಇಂದು,ಇಂದಿನಿಂದ ನಾಳೆ ಹೀಗೆ ನಾವು ಸಾಯಲು ಒಂದೊಂದು ದಿನ ಕಡಿಮೆಯಾಗುತ್ತಾ ಹೋಗುತ್ತದೆ. ಗಂಡ, ಹೆಂಡತಿ,ಮಕ್ಕಳು,ಒಡವೆ,ಆಸ್ತಿ,ಮನೆ,ಹಣ,ಪದವಿ, ಅಧಿಕಾರ ಯಾವುದು ನಮ್ಮ ಜೊತೆ ಬರುವುದಿಲ್ಲ. ಇರುವಷ್ಟು ದಿನ ಗಾಢವಾಗಿ ಬದುಕಲು ಕೆಲವರಿಗೆ ಪುರಸೊತ್ತಿಲ್ಲ.ಅವರದೆ ತಾಪತ್ರಯ, ಒತ್ತಡ, ಆತಂಕ, ತಲ್ಲಣ ಇದನ್ನೆಲ್ಲ ಮರೆಯಲು ಮೋಜು ಮೇಜವಾನಿ. ಇವುಗಳ ಎದುರು ಎಲ್ಲವೂ ಗೌಣವಾಗಿ ಅದೆ ನಿಜವಾಗಿ ಮನೆ ಮಾರು ಗುರು ಹಿರಿಯರು ತಂದೆ ತಾಯಿ ಬಂಧು ಬಳಗ ಎಲ್ಲವು ಮರೆತು ಉಮರ್ ಖಯ್ಯಾಮನ ಮಾತಿನಂತೆ,"ನಿನ್ನೆ ಸತ್ತು ಹೋಗಿದೆ,ನಾಳೆ ಇನ್ನು ಹುಟ್ಟಿಲ್ಲ.ಈಗ ನಿನ್ನ ಕೈಯಲ್ಲಿ ಮಧುವಿನ ಬಟ್ಟಲು ಇದೆ.ಅದನ್ನು ಭೋಗಿಸಲು ಯಾಕೆ ಹಿಂಜರಿಕೆ" ಎಂಬ ಮಾತು ನಿಜ ಎನಿಸಿ ಬಿಡುತ್ತದೆ.ಎಲ್ಲರೂ ಅವರಿಗೆ ನಿಜವೆನಿಸಿದಂತೆ ಬದುಕುವುದೆ ಸರಿ.ಸ್ವರ್ಗ,ನರಕ,ಪಾಪ,ಪುಣ್ಯ ಇದೆಲ್ಲಾ ಯಾರೊ ಕಟ್ಟಿದ ಕಟ್ಟುಕತೆಗಳು. ಒಮ್ಮೆ ಅಂಕೋಲೆಯ ಜಿ.ಸಿ.ಕಾಲೇಜಿಗೆ ಅತಿಥಿಯಾಗಿ ಬಂದ ಲೇಖಕ ಶ್ರೀಕೃಷ್ಣ ಆಲನಹಳ್ಳಿ ಅವರು ' ನಾನು ನನ್ನ ಅಪ್ಪ ಅಮ್ಮನಿಗೆ ಅರ್ಜಿ ಹಾಕಿಕೊಂಡು ಹುಟ್ಟಲಿಲ್ಲ.ಅವರಿಗೆ ನಿದ್ದೆ ಬರದ ತೆವಲಿಗೆ ಹುಟ್ಟಿದವ ನಾನು' ಎಂದು ಕಾಲೇಜಿನ ಧರ್ಮಭೀರು ಪ್ರಾಧ್ಯಾಪಕರುಗಳು ಬೆವತು ಹೋಗುವಂತೆ ಮಾತನಾಡಿದರು ಎಂದು ಕೇಳಿರುವೆ. ನಿಜ ಯಾವುದು.ಹುಟ್ಟು ನಿಜವೆ?ಸಾವು ನಿಜವೆ?ಅಥವಾ ಈಗ ನಮ್ಮ ಕಣ್ಣೆದುರಿನ ಭೋಗ ನಿಜವೆ? ಈ ಬಗ್ಗೆ ಚಿಂತಿಸಿದರೆ ಏನು ಫಲ.' ಇದ್ದವರು ಇದ್ದಾಗ ಇದ್ಹಾಂಗ ಅನಿಸಲೆ ಇಲ್ಲ' ಎಂದು ಕವಿ ಬೇಂದ್ರೆ ಅಂದಂತೆ ಯಾರಿಗೂ ತೊಂದರೆಯಾಗದಂತೆ, ಕಿರಿಕಿರಿಯಾಗದಂತೆ ಸುಮ್ಮನೆ ಹೊರಟು ಹೋಗುವ ಸುಖ ಅನುಪಮ ಮತ್ತು ಅದ್ಭುತ.ಅಂತಹ ಸುಖ ಪಡೆಯಲು ಪಡೆದು ಬರಬೇಕು. ನಿಂದಂತು ನೀತಿ ನಿಪುಣಾ ಯದಿ ವಾ ಸ್ತುವಂತು ಲಕ್ಷ್ಮೀ ಸಮವಿಶತು ವಾ ಗಚ್ಚತು ಅದ್ಯೈವ ಮರಣಮಸ್ತು ಯುಗಾಂತರೆ ವಾ ನ ನ್ಯಾಯಾತ್ಪಥ: ಪ್ರವಿಚಲಂತಿ ಪದಂ ನ ಧೀರಾ. ( ನೀತಿ ನಿಪುಣರಾದವರು ನಿಂದಿಸಲಿ ಅಥವಾ ಹೊಗಳಲಿ.ಸಂಪತ್ತು ಬರಲಿ ಅಥವಾ ಬರದೆ ಹೋಗಲಿ.ಈಗಲೆ ಮರಣ ಬರಲಿ ಅಥವಾ ಒಂದು ಯುಗವನ್ನು ಬಿಟ್ಟು ಬರಲಿ. ಧೀರರಾದವರು ನಿರ್ದಿಷ್ಟವಾದ ಗುರಿಯಿಂದ ವಿಚಲಿತರಾಗುವುದಿಲ್ಲ.) ಎಂಬ ಭರ್ತೃಹರಿಯ ನೀತಿ ಶತಕದ ಮಾತು ಮತ್ತೆ ನೆನಪಾಗುತ್ತಿದೆ.ದೀನರಾಗದೆ ಧೀರರಾಗಿ ಬದುಕುವಲ್ಲಿ ಬಾಳಿನ ಸಾರ್ಥಕತೆಯಿದೆ. ‌‌ ‌ ‌‌ ‌ ಡಾ.ಶ್ರೀಪಾದ ಶೆಟ್ಟಿ.

ಆಲೋಚನೀಯ-೨೭
bottom of page