top of page

ಆಲೋಚನೀಯ-೧೭

ಮಳೆಯು ನಾಡ ತೊಯ್ಯುತಿರೆ ಮಿಂಚಿಗಿರುಳು ಬೆದರುತಿರೆ ಗೂಡ ಮುದ್ದು ಗೊಲ್ಲನಡೆಯೊಳೊಂದು ಹಣತೆ ಮಿನುಗುತಿಹುದು ಬಗೆಯ ಕಣ್ಣ ತೆರೆವುದು.    ಪು.ತಿ.‍ನ. ಮಳೆಯ ಆರ್ಭಟಕ್ಕೆ ಬಡ ಬಗ್ಗರ ಬದುಕು ಮೂರಾ ಬಟ್ಟೆಯಾಗಿ ಹೋಗಿದೆ. ಮಳೆ ಮಳೆ ಬಿಡದೆ ಸುರಿವ ಮಳೆ.ತುಂಬಿ ಹರಿವ ಹೊಳೆ.ಭೀಮಾ,ಕೃಷ್ಣಾ ನದಿಗಳು ಪಾತ್ರವನ್ನು ಮೀರಿ ಹರಿಯುತ್ತಿವೆ‌. ಹೈದ್ರಾಬಾದದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಕಲಬುರ್ಗಿ,ವಿಜಾಪರದ ಕೆಲವು ತಾಲೂಕುಗಳಲ್ಲಿ ಅತಿವೃಷ್ಠಿಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಮನೆ ಮಾರು ಜಾನುವಾರು ಇದ್ದ ಬಿದ್ದ ಚೂರು ಪಾರು ಕಾಸುಗಳನ್ನು ಕಳೆದುಕೊಂಡ ಜನರು ಅಕ್ರಶ: ತಬ್ಬಲಿಗಳಾಗಿದ್ದಾರೆ.ನೆರೆ ನಿರಾಶ್ರೀತರಿಗಾಗಿ ತೆರೆದ ಗಂಜೀ ಕೇಂದ್ರಗಳಲ್ಲಿ ಬಾಣಂತಿಯರು,ಕೂಸು ಕಂದಮ್ಮಗಳು  ಸ್ನಾನಕ್ಕೆ,ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಇಲ್ಲದೆ ಚಳಿಯಲ್ಲಿ ಸಾವು ಬದುಕಿನ ನಡುವೆ  ಹೋರಾಟ ನಡೆಸುತ್ತಿವೆ.ತಮ್ಮ ಮನೆ ಮಕ್ಕಳು ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಜನ ಹರ ಸಾಹಸ ಮಾಡುತ್ತಿದ್ದಾರೆ.   ಮಳೆಗಾಲ ಮುಗಿದು ಹೋಗಿದೆ,ಆದರೆ ನಿಸರ್ಗದ ವಾತಾವರಣದಿಂದ ಪ್ರತಿದಿನ ಮಳೆ ಸುರಿದು ನಗರವಾಸಿಗಳ ಬದುಕು ಶೋಚನೀಯವಾಗಿದೆ. ಚಿಕ್ಕ ಮಕ್ಕಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.ಮಳೆಯ ಹೊಡೆತದಿಂದ ಮರ ಮಟ್ಟುಗಳಿಗೆ ಕೊಳೆರೋಗ ಬಂದು ಸಾಯ ತೊಡಗಿವೆ.ನೆರೆ ಹಾವಳಿಯಿಂದ ಮರಗಳು, ತರಕಾರಿ,ಗಿಡಗಳು ಕೊಳೆತು ಹೋಗುತ್ತಿವೆ.ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಭಾರತದ ಕೃಷಿ ಮುಂಗಾರು ಮಳೆಯೊಂದಿಗೆ ಜೂಜಾಡುತ್ತಿದೆ ಎಂಬ ಅರ್ಥ ಶಾಸ್ತ್ರಜ್ಞರ ಮಾತು ನೆನಪಾಗುತ್ತಿದೆ.      ಮಳೆ ನೀರಿನ ನಿರ್ವಹಣೆಗೆ ನಾವು ಈ ವರೆಗೂ ವೈಜ್ಞನಿಕ ವಿಧಾನವನ್ನು ಅಳವಡಿಸಿಕೊಂಡಿಲ್ಲ.ಕೃಷಿ ಮತ್ತು ವಿದ್ಯುತ್ ಉತ್ಪಾದನೆಗಾಗಿ ಕಟ್ಟಿದ ಆಣೆಕಟ್ಟಿಗಳು ಅತಿವೃಷ್ಠಿಯಿಂದ ತುಂಬಿ ಹರಿವಾಗ ಅದರ ಅಪಾಯವನ್ನು ಎದುರುಗೊಳ್ಳುವವರು ನದಿ ತೀರದಲ್ಲಿ ವಾಸಿಸುವ,ಜೋಪಡಿಗಳಲ್ಲಿ ಬದುಕುವ ಬಡಬಗ್ಗರೆ ಆಗಿರುತ್ತಾರೆ.ಮಳೆಯಿಲ್ಲದೆ ಮನೆಯೊಳಗೆ ನೀರು ನುಗ್ಗಿ ಬದುಕು ಮೂರಾಬಟ್ಟೆಯಾಗುವ ದುರಂತವನ್ನು ಕಲಬುರ್ಗಿ,ವಿಜಾಪುರ ಜಿಲ್ಲೆಯ ನೆರೆ ಪೀಡಿತರು ಅನುಭವಿಸುತ್ತಿದ್ದಾರೆ. ಮಕ್ಕಳ ಮಾರ್ಯಾರ ಮಳಿರಾಜ ಎಂಬ ಸೊಲ್ಲಿನೊಂದಿಗೆ ಆರಂಭವಾಗುವ ಮಳೆಯ ಕುರಿತ ಜನಪದ ಹಾಡು ಅನಾವೃಷ್ಟಿ ಮತ್ತು ಅತಿವೃಷ್ಟಿಯ ಅನಾಹುತವನ್ನು ಸಾದರ ಪಡಿಸುತ್ತದೆ. ' ಸ್ವಾತಿ ಮಳೆ ಬಂದು ಹೊಳೆ ಹಳ್ಳ ತುಂಬಿ ಹೆಣ ಹರಿದಾಡ್ಯಾವೊ ಈಗ್ಯಾಕ ಬಂದಿ ಮಳಿ ರಾಜಾ' ಎಂದು ಕೇಳುವಲ್ಲಿ ಅವರ ನೋವು ಮಡುಗಟ್ಟಿದೆ.       ಪಂಚವಾರ್ಷಿಕ ಯೋಜನೆಗಳು ನೀರಾವರಿ, ಆಣೆಕಟ್ಟುಗಳ ಬಗ್ಗೆ ಗಮನ ಹರಿಸಿದೆ. ವಿಪತ್ತು ನಿರ್ವಹಣೆ ಸಮಿತಿಯೇನೊ ಇದೆ.ಆದರೆ ಅದರ ಕಾರ್ಯದಕ್ಷತೆ ಸಂತ್ರಸ್ತರಿಗೆ ತಲುಪುವ ಮೊದಲೆ ಅವರು ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿದ್ದಾರೆ.   ಮಳೆ ಭೂಮಿಗೆ ಹಿತವಾಗಿ ಬಿದ್ದರೆ ಅದು ಹರನ ಪರಮಾನಂದ ರಸವು ಇಳೆಗೆ ಇಳಿದು ಬಂದಂತೆ.ಆದರೆ ಅದು ಘೋರಾಕಾರವಾಗಿ ಸುರಿದರೆ  ಜನ ಜೀವನ ಅಸ್ತವ್ಯಸ್ತವಾಗುತ್ತದೆ.    ಪರಿಸರದ ಮೇಲೆ ಮನುಷ್ಯ ಅವ್ಯಾಹತವಾಗಿ ನಡೆಸಿದ ಅನಾಚಾರದಿಂದ ಮಹಾಪೂರ, ಕೋವಿಡ್-19 ಎಲ್ಲವೂ ಒಕ್ಕರಿಸಿದೆ.ಇದನ್ನೆಲ್ಲಾ ತಾಳ್ಮೆಯಿಂದ ತಾಳಿಕೊಂಡು ಬದುಕನ್ನು ಕಟ್ಟಿಕೊಳ್ಳ ಬೇಕಾಗಿದೆ.ನಮ್ಮ ಶಾಸಕಾಂಗ,ಕಾರ್ಯಾಂಗ ಮತ್ತು ನ್ಯಾಯಾಂಗಗಳು ಈ ದಿಶೆಯಲ್ಲಿ ಗಂಭೀರವಾಗಿ ತೊಡಗಿಕೊಂಡು ಭಾರತ ದೇಶದ ಬಲ ವರ್ಧನೆಯನ್ನು ಮಾಡ ಬೇಕಾಗಿದೆ.ನಮ್ಮ ಬಗೆಯ ಕಣ್ಣು  ತೆರೆಯ ಬೇಕಾಗಿದೆ. -ಡಾ.ಶ್ರೀಪಾದ ಶೆಟ್ಟಿ.

ಆಲೋಚನೀಯ-೧೭
bottom of page